ಕೊರೊನಾ ಸಂಕಷ್ಟದ ನಡುವೆ ವರುಣನ ಅರ್ಭಟ : ಕಟಾವಿಗೆ ಬಂದ ಭತ್ತ ಸಂಪೂರ್ಣ ನಾಶ!
ಕೊರೊನಾ ಸಂಕಷ್ಟದ ನಡುವೆಯೂ ಜನರಿಗೆ ವರುಣ ಮುನಿಸು ತೋರಿದ್ದಾನೆ. ಬಿಸಿಲುನಾಡಿಗೆ ಕೊರೊನಾದ ಜೊತೆಗೆ ಇಂದು ಅಕಾಲಿಕ ಮಳೆಯ ಪೆಟ್ಟು ಬಿದ್ದಿದೆ.
ಹೌದು.. ರಾಯಚೂರಿನ ಕೆಲ ಭಾಗಗಳಲ್ಲಿ ಆಕಾಲಿಕ ಮಳೆಯಿಂದಾಗಿ ಕಟಾವಿಗೆ ಬಂದಿದ್ದ ನೂರಾರು ಎಕರೆ ಭತ್ತ ನೆಲಕ್ಕಚ್ಚಿದೆ. ಆಲೆಕಲ್ಲು ಸಹಿತ ಸುರಿದ ಮಳೆಗೆ ಬೆಳೆ ನಾಶವಾಗಿದ್ದು ರೈತ ಕಂಗಾಲಾಗಿದ್ದಾನೆ. ಲಿಂಗಸುಗೂರು ಹಾಗೂ ಮಸ್ಕಿಯಲ್ಲಿ ಆಲೆಕಲ್ಲು ಸಹಿತ ಸುರಿದ ಮಳೆಗೆ ರೈತರು ಕಂಗಾಲಾಗಿದ್ದಾರೆ. ಮಸ್ಕಿ ತಾಲೂಕಿನ ಮಾರಲದಿನ್ನಿ, ಕಾಟಗಲ್, ಉಸ್ಕಿಹಾಳ, ಬೆಲ್ಲದಮರಡಿ ಸೇರಿ ಸುತ್ತಮುತ್ತ ಆಲೆಕಲ್ಲು ಸಹಿತ ಮಳೆಯಾಗಿದೆ. ರಾತ್ರಿ ಸುರಿದ ಅಕಾಲಿಕ ಆಲೆಕಲ್ಲು ಮಳೆಗೆ ಅಪಾರ ಪ್ರಮಾಣದ ಬೆಳೆ ಹಾನಿಯಾಗಿದೆ.
ಮಳೆಯಿಂದಾಗಿ ಮಸ್ಕಿ ಅಚ್ಚುಕಟ್ಟು ಪ್ರದೇಶಗಳಲ್ಲಿ ರೈತರಿಗೆ ನಷ್ಟವಾಗಿದೆ. ಲಕ್ಷಾಂತರ ರೂಪಾಯಿ ಬೆಲೆ ಬಾಳುವ ಭತ್ತ ನೆಲಕಚ್ಚಿದರಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ.ಸೋಮವಾರ ರಾತ್ರಿ ಸುರಿದ ಮಳೆಗೆ ಜಿಲ್ಲೆಯ ಹಲವೆಡೆ ಬೆಳೆ ಹಾನಿಯಾಗಿದ್ದರೆ, ಲಿಂಗಸುಗೂರಿನ ಹಟ್ಟಿ ಸುತ್ತಮುತ್ತ ಮಧ್ಯಾಹ್ನವೇ ಜೋರು ಮಳೆ ಸುರಿದಿದೆ. ಸದ್ಯ ಜಿಲ್ಲೆಯಾದ್ಯಂತ ಮೋಡಕವಿದ ವಾತಾವರಣ ಮುಂದುವರೆದಿದೆ.
ಕೇವಲ ರಾಯಚೂರಿನಲ್ಲಿ ಮಾತ್ರವಲ್ಲದೇ ರಾಜ್ಯದಲ್ಲಿ ರೈತರು ಆರ್ಥಿಕ ಸಂಕಷ್ಟಕ್ಕೆ ಗುರಿಯಾಗಿದ್ದು ಮಾರುಕಟ್ಟೆಗೆ ಬರಬೇಕಾದ ಹಣ್ಣುಗಳು, ತರಕಾರಿಗಳು ಕೊಳೆಯುತ್ತಿವೆ. ಹೀಗಾಗಿ ಸರ್ಕಾರ ರೈತರ ಸಂಕಷ್ಟಕ್ಕೆ ನೆರವಾಗಬೇಕಾಗಿದ್ದು ಪ್ರಮುಖವಾಗಿದೆ. ಇಲ್ಲವಾದರೆ ದೇಶದ ಬೆನ್ನುಲುಬು ಎಂದು ಕರೆಯಲ್ಪಡುವ ರೈತರ ಸ್ಥಿತಿ ಅದ್ದೂಗತಿಗೆ ತಲುಪುವುದರಲ್ಲಿ ಸಂಶಯವಿಲ್ಲ. ಈ ಬಗ್ಗೆ ಸರ್ಕಾರ ಎಚ್ಚೆತ್ತುಕೊಳ್ಳಬೇಕಾಗಿದೆ.

