ಕೊರೊನಾ ಸಂದರ್ಭದಲ್ಲಿ ರಾಜಕೀಯ ಅಸ್ಥಿರತೆ ಸರಿಯಲ್ಲ; ಮೋದಿಗೆ ಕರೆ ಮಾಡಿದ ಠಾಕ್ರೆ

ಮಹಾರಾಷ್ಟ್ರದ ಮುಖ್ಯಮಂತ್ರಿ ಉದ್ದವ್ ಠಾಕ್ರೆ ಪ್ರಧಾನಿ ಮೋದಿಯವರಿಗೆ ಕರೆ ಮಾಡಿ, “ಕೊರೊನಾ ಬಿಕ್ಕಟ್ಟನ್ನು ಎದುರಿಸುತ್ತಿರುವಾಗ ಮಹಾರಾಷ್ಟ್ರದಂತಹ ಬೃಹತ್ ರಾಜ್ಯದಲ್ಲಿ ರಾಜಕೀಯ ಅಸ್ಥಿರತೆ ಸರಿಯಲ್ಲ” ಎಂದು ಹೇಳಿದ್ದಾರೆ.

ಉದ್ಧವ್ ಠಾಕ್ರೆ ಪ್ರಧಾನ ಮಂತ್ರಿಗೆ ಇದನ್ನು ಪರಿಶೀಲಿಸುವಂತೆ ಒತ್ತಾಯಿಸಿದ್ದಾಗಿ ಎನ್‌ಡಿಟಿವಿ ವರದಿ ಮಾಡಿದೆ.

ತಮ್ಮ ಮುಖ್ಯಮಂತ್ರಿ ಸ್ಥಾನವನ್ನು ಉಳಿಸಲು ರಾಜ್ಯಪಾಲರನ್ನು ಅವಲಂಬಿಸಿರುವ ಅವರು, ಇಂದು ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ದೂರವಾಣಿಯಲ್ಲಿ ಮಾತನಾಡಿ, ಕೊರೊನಾ ವೈರಸ್ ಬಿಕ್ಕಟ್ಟಿನ ಮಧ್ಯದಲ್ಲಿ ರಾಜ್ಯದಲ್ಲಿ ರಾಜಕೀಯ ಅಸ್ಥಿರತೆಯನ್ನು ಸೃಷ್ಟಿಸುವ ಪ್ರಯತ್ನ ನಡೆಯುತ್ತಿದೆ ಎಂದು ಆರೋಪಿಸಿದ್ದಾರೆ.

ಠಾಕ್ರೆ ಮುಖ್ಯಮಂತ್ರಿಯಾಗಿ ಉಳಿಯಲು ಅವರನ್ನು ರಾಜ್ಯಪಾಲ ಭಗತ್ ಸಿಂಗ್ ಕೊಶ್ಯರಿ ಮಹಾರಾಷ್ಟ್ರ ವಿಧಾನ ಪರಿಷತ್ತಿನ ಸದಸ್ಯರಾಗಿ ನಾಮನಿರ್ದೆಶನ ಮಾಡಬೇಕಾಗಿದೆ. ಆದರೆ ಈ ಸಮಯದಲ್ಲಿ ಬಿಜೆಪಿ ಅದನ್ನು ಅಸ್ಥಿರಗೊಳಿಸುವ ಯೋಜನೆಯನ್ನು ರೂಪಿಸಿದೆ ಎಂದು ಶಿವಸೇನೆ ಹೇಳಿದೆ.

ಉದ್ಧವ್ ಠಾಕ್ರೆ ಅವರನ್ನು ರಾಜ್ಯ ವಿಧಾನ ಪರಿಷತ್ತಿಗೆ ನಾಮನಿರ್ದೇಶನ ಮಾಡುವ ಮಹಾರಾಷ್ಟ್ರ ಸರ್ಕಾರ ಮಾಡಿದ್ದ ಶಿಫಾರಸಿಗೆ ರಾಜ್ಯಪಾಲ ಕೋಶ್ಯರಿ ಇನ್ನೂ ಪ್ರತಿಕ್ರಿಯಿಸಿಲ್ಲ. ಸೋಮವಾರ ಮಹಾರಾಷ್ಟ್ರ ಸಚಿವ ಸಂಪುಟ ಜ್ಞಾಪನೆ ಕಳುಹಿಸಿ, ಆಡಳಿತ ಪಕ್ಷವಾದ ಶಿವಸೇನೆ-ಎನ್‌ಸಿಪಿ-ಕಾಂಗ್ರೆಸ್ ಒಕ್ಕೂಟದ ಮುಖಂಡರು ರಾಜ್ಯಪಾಲರನ್ನು ಭೇಟಿಯಾಗಿದ್ದಾರೆ.

ನವೆಂಬರ್ 28 ರಂದು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದ ಉದ್ದವ್ ಠಾಕ್ರೆ  ಮಹಾರಾಷ್ಟ್ರ ವಿಧಾನ ಸಭಾ ಚುನಾವಣೆಗೆ ಸ್ಪರ್ಧಿಸಿರಲಿಲ್ಲ. ನಿಯಮದಂತೆ ಆರು ತಿಂಗಳೊಳಗೆ ರಾಜ್ಯ ವಿಧಾನಸಭೆ /ವಿಧಾನ ಪರಿಷತ್ತಿನಲ್ಲಿ ಸದಸ್ಯರಾದರೆ ಅವರು ಮುಖ್ಯಮಂತ್ರಿಯಾಗಿ ಮುಂದುವರೆಯಬಹುದಾಗಿದೆ. ಈ ಗಡುವು ಮೇ 28 ಕ್ಕೆ ಕೊನೆಗೊಳ್ಳುತ್ತದೆ.

ಕೊರೊನಾ ವೈರಸ್‌ನಿಂದಾಗಿ ವಿಧಾನ ಪರಿಷತ್‌ ಚುನಾವಣೆ ಮುಂದೂಡಲ್ಪಟ್ಟಿರುವುದರಿಂದ ಅವರು ವಿಧಾನ ಪರಿಷತ್ತಿಗೆ ಆಯ್ಕೆಯಾಗಲು ಸಾಧ್ಯವಾಗಲಿಲ್ಲ. ಹಾಗಾಗಿ ಅವರನ್ನು ವಿಧಾನ ಪರಿಷತ್ತಿಗೆ ರಾಜ್ಯಪಾಲರು ನಾಮನಿರ್ದೇಶನ ಮಾಡಬೇಕೆಂದು ಆಡಳಿತ ಪಕ್ಷ ಮನವಿ ಮಾಡಿದೆ.

ಉಪಮುಖ್ಯಮಂತ್ರಿ ಅಜಿತ್ ಪವಾರ್ ನೇತೃತ್ವದ ರಾಜ್ಯ ಸರ್ಕಾರದ ನಿಯೋಗವು ರಾಜ್ಯಪಾಲರಿಗೆ ಶೀಘ್ರದಲ್ಲಿ ನಿರ್ಧಾರ ತೆಗೆದುಕೊಳ್ಳುವಂತೆ ವಿನಂತಿಸಿದೆ. ರಾಜ್ಯ ಸಚಿವ ಸಂಪುಟದ ನಿರ್ಧಾರವು ರಾಜ್ಯಪಾಲರಿಗೆ ಬದ್ಧವಾಗಿದೆ ಎಂದಿರುವ ಮೂಲಗಳು, ರಾಜ್ಯಪಾಲರು ತಮ್ಮ ನಿರ್ಧಾರವನ್ನು ಒಂದು ವಾರದೊಳಗೆ ಪ್ರಕಟಿಸುವುದಾಗಿ ಹೇಳಿದ್ದಾರೆ ಎಂದು ವರದಿಯಾಗಿದೆ.

ಈ ಬಿಕ್ಕಟ್ಟಿಗೆ ಮಾಜಿ ಮಿತ್ರ ಪಕ್ಷವಾದ ಬಿಜೆಪಿ ಕಾರಣವೆಂದು ಶಿವಸೇನೆ ನಾಯಕರು ದೂಷಿಸಿದ್ದಾರೆ. ಕೇಂದ್ರ ಸರ್ಕಾರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಪಕ್ಷವು, ತಾನು ಅಧಿಕಾರದಲ್ಲಿಲ್ಲದ ರಾಜ್ಯಗಳ ಮೇಲೆ ಒತ್ತಡ ಹೇರಲು ರಾಜ್ಯಪಾಲರನ್ನು ಬಳಸುತ್ತಿದೆ ಎಂದು ಆರೋಪಿಸಿದೆ. ಬಿಜೆಪಿ ಜೊತೆ ಅಧಿಕಾರ ಹಂಚಿಕೆ ಕುರಿತು ಮಹಾರಾಷ್ಟ್ರದ ಚುನಾವಣೆಯ ನಂತರ ದೀರ್ಘಕಾಲದ ತಮ್ಮ ಸ್ನೇಹವನ್ನು ಮುರಿದುಕೊಂಡು ಶೀವಸೇನೆ ತನ್ನ ಪ್ರತಿಸ್ಫರ್ದಿಗಳಾದ ಎನ್ಸಿಪಿ, ಕಾಂಗ್ರೆಸ್ ಜೊತೆ ಒಪ್ಪಂದ ಮಾಡಿ ಅಧಿಕಾರ ಹಿಡಿದಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights