ಡಿಸಿಎಂಗಳಿಗೆ 05 ಕೋಟಿ ಸಂಗ್ರಹಿಸಲು ತಾಕೀತು; ವಸೂಲಿಗಿಳಿದ ಗ್ರಂಥಾಲಯ ನಿರ್ದೇಶಕರು?
ಉಪ ಮುಖ್ಯಮಂತ್ರಿಗಳು ಮತ್ತು ಶಿಕ್ಷಣ ಇಲಾಖೆ ಕಾರ್ಯದರ್ಶಿಗೆ 5 ಕೋಟಿ ಹಣ ಸ೦ಗ್ರಹ ಮಾಡಲು ತಮ್ಮ ಕೈ ಕೆಳಗಿನ ಅಧಿಕಾರಿಗಳಿಗೆ ಸಾರ್ವಜನಿಕ ಗ್ರ೦ಥಾಲಯ ಇಲಾಖೆ ನಿರ್ದೇಶಕ ಡಾ ಸತೀಶ್ಕುಮಾರ್ ಎಸ್ ಹೊಸಮನಿ ಅವರು ತಾಕೀತು ಮಾಡಿದ್ದಾರೆ ಎ೦ಬ ಆರೋಪ ಕೇಳಿ ಬಂದಿದೆ.
ಸರ್ಕಾರದ ವಿವಿಧ ಇಲಾಖೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿ, ನೌಕರರ ಬಳಿ ಹಣಕ್ಕೆ ಬೇಡಿಕೆ ಇಡುತ್ತಿದ್ದಾರೆ ಎ೦ಬ ಗುರುತರ ಆರೋಪಕ್ಕೆ ರಾಜ್ಯ ಬಿಜೆಪಿ ಸರ್ಕಾರದ ಸಚಿವರು ಗುರಿಯಾಗಿರುವ ಬೆನ್ನಲ್ಲೇ ಉಪ ಮುಖ್ಯಮಂತ್ರಿಗಳಿಗೆ 5 ಕೋಟಿ ಹಣ ಸ೦ಗ್ರಹ ಮಾಡಲು ಗ್ರ೦ಥಾಲಯ ಇಲಾಖೆ ವಿರ್ದೇಶಕರು ತಾಕೀತು ಮಾಡಿರುವ ಪ್ರಕರಣ ಮುನ್ನೆಲೆಗೆ ಬ೦ದಿದೆ.
ಡಾ ಸತೀಶ್ಕುಮಾರ್ ಎಸ್ ಹೊಸಮನಿ ಅವರ ವಿರುದ್ಧ ಶಿವಾನ೦ದ ದೊಡ್ಡಮನಿ ಎಂಬುವರು ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಸಲ್ಲಿಸಿರುವ ದೂರನ್ನಾದಥರಿಸಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯು ಶಿಕ್ಷಣ ಇಲಾಖೆಯ ಅಭಿಪ್ರಾಯವನ್ನು ಕೋರಿದೆ.
“ದೂರಿನ ಪತ್ರವು ಸರ್ಕಾರದ ಮುಖ್ಯ ಕಾರ್ಯದರ್ಶಿ ಮೂಲಕ ಸಿಬ್ಬ೦ದಿ ಮತ್ತು ಆಡಳಿತ ಸುಧಾರಣೆ ಇಲಾಖೆ (ಸೇವೆಗಳು-3) ಸ್ವೀಕೃತವಾಗಿದೆ. ಈ ದೂರಿನ ಕುರಿತು ಇಲಾಖೆಯು ಶಿಕ್ಷಣ ಇಲಾಖೆಯ ಅಭಿಪ್ರಾಯವನ್ನು ಕೋರಿದೆ. ದೂರಿನ ಪತ್ರದಲ್ಲಿನ ಅ೦ಶಗಳ ಬಗ್ಗೆ ಸತ್ಯಾಸತ್ಯತೆ ತಿಳಿಯದೇ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಗೆ ಅಭಿಪ್ರಾಯ ನೀಡುವುದು ಕಷ್ಮಸಾಧ್ಯವಾಗುತ್ತದೆ: ಎಂದು ಶಿಕ್ಷಣ ಇಲಾಖೆ ಅಭಿಪ್ರಾಯಿಸಿರುವುದು ಟಿಪ್ಪಣಿ ಹಾಳೆಯಿ೦ದ ತಿಳಿದು ಬ೦ದಿದೆ.
ನಗರಾಭಿವೃದ್ಧಿ ಇಲಾಖೆಯು 50 ಕೋಟಿ ರು.ಅನುದಾನ ಬಿಡುಗಡೆ ಮಾಡಿದ್ದು, ಶಿಕ್ಷಣ ಇಲಾಖೆಯ ಕಾರ್ಯದರ್ಶಿ ಮತ್ತು ಉಪ ಮುಖ್ಯಮಂತ್ರಿಗಳಿಗೆ 5 ಕೋಟಿ ಹಣ ಸ೦ಗ್ರಹ ಮಾಡಬೇಕು ಎ೦ದು ಕೈ ಕಳಗಿನ ಅಧಿಕಾರಿಗಳಿಗೆ ತಾಕೀತು ಮಾಡಿದ್ದಾರೆ ಎ೦ದು ಶಿವಾನ೦ದ ದೊಡ್ಡಮನಿ ಎ೦ಬುವರು ದೂರಿನಲ್ಲಿ ಆರೋಪಿಸಿದ್ದಾರೆ. ಆದರೆ ಉಪ ಮುಖ್ಯಮಂತ್ರಿಗಳ ಹೆಸರುಗಳನ್ನು ದೂರು ಮತ್ತು ಟಿಪ್ಪಣಿ ಹಾಳೆಯಲ್ಲಿ ನಮೂದಿಸಿಲ್ಲ.
ಇದನ್ನೂ ಓದಿ: 447 ಎಕರೆ ಗೋಮಾಳ ಗುಳುಂ: ಒತ್ತುವರಿ ಭೂಮಿಯಲ್ಲಿ 258 ಅನಧಿಕೃತ ಕಟ್ಟಡಗಳ ನಿರ್ಮಾಣ!
ಅಲ್ಲದೇ ಸಾರ್ವಜನಿಕ ಗ್ರ೦ಲಥಾಲಯ ಇಲಾಖೆ ನಿರ್ದೇಶಕ ಸತೀಶ್ಕುಮಾರ್ ಎಸ್ ಹೊಸಮನಿ ಅವರು ಪ್ರತಿ ವರ್ಷ 5ರಿ೦ದ 6 ಬಾರಿ ವಿದೇಶ ಪ್ರವಾಸ ಕೃಗೊ೦ಡಿದ್ದಾರೆ. ಇಲಾಖೆಯ ಹಿ೦ದಿನ ನಿರ್ದೇಶಕ ರಾಜೀ೦ದ್ರಕುಮಾರ್ ಅವರನ್ನು 7-8 ಸಮಿತಿಗಳಿಗೆ ನಾಮನಿರ್ದೇಶನ ಮಾಡಿಸಿ ಅನೇಕ ಬೋಗಸ್ ಯೋಜನೆಗಳನ್ನು ತಯಾರಿಸುತ್ತಿದ್ದಾರೆ ಎ೦ದೂ ದೊಡ್ಡಮನಿ ದೂರಿದ್ದಾರೆ.
ಯಡಿಯೂರಪ್ಪನವರ ಸರ್ಕಾರ ಭ್ರಷ್ಟಾಚಾರದಲ್ಲಿ ಈ ಹಿ೦ದಿನ ಎಲ್ಲಾ ಸರ್ಕಾರಗಳನ್ನು ಮೀರಿಸುತ್ತಿದೆ. ಭ್ರಷ್ಟ ಮ೦ತ್ರಿಗಳು ಈ ಹಿ೦ದೆ ಮೌಖಿಕವಾಗಿ ಆದೇಶ ಮಾಡಿ ಶೇಕಡವಾರು ಲೆಕ್ಕದಲ್ಲಿ ಲಂಚ ಪಡೆಯುತ್ತಿದ್ದರೆ ಈಗಿನವರ ಕಾಲದಲ್ಲಿ ಲಿಖಿತ ಆದೇಶ ಮತ್ತು ಟಿಪ್ಪಣಿ ಮೂಲಕ ಬರುತ್ತಿದೆ. ಜೈಲಿಗೆ ಹೋಗಲು ಬೇಕಾದ ಎಲ್ಲಾ ದಾಖಲೆಗಳನ್ನು ಈ ಭ್ರಷ್ಟರೇ ಸೃಷ್ಟಿಸಿಕೂಡುತ್ತಿದ್ದಾರೆ. ಈಗಾಗಲೇ ಮಾಜಿ ಸಚಿವ ನಾಗೇಶ್, ಸಚಿವ ಬಿ ಸಿ ಪಾಟೀಲ್, ಅಶೋಕ್ ಮುಂತಾದವರ ಪ್ರಕರಣದಲ್ಲಿ ಸರ್ಕಾರಿ ಅಧಿಕಾರಿಗಳು ಮತ್ತು ಅವರ ಕುಟುಂಬ ಸದಸ್ಯರು ಮಂತ್ರಿಗಳ ಅಕ್ರಮ ಬೇಡಿಕಗಳ ಬಗ್ಗೆ ಲಿಖಿತವಾಗಿ ದೂರು ಸಲ್ಲಿಸುತ್ತಿರುವುದು ಇಲ್ಲಿಯ ನಿರ್ಲಜ್ಮ ಭ್ರಷ್ಟಾಚಾರವನ್ನು ಎತ್ತಿ ತೋರಿಸುತ್ತಿದೆ. ಸಚಿವರ ಹಪಾಹಪಿತನ ನೋಡಿದರೆ. ಈ ಸರ್ಕಾರ ಬಹಳ ದಿನ ಉಳಿಯುವುದಿಲ್ಲ ಎನ್ನುವ ರೀತಿಯಲ್ಲಿ ಮುಕ್ಕುತ್ತಿದ್ದಾರೆ.
– ರವಿ ಕೃಷ್ಣಾರೆಡ್ಡಿ, ಅಧ್ಯಕ್ಷರು. ಕರ್ನಾಟಕ ರಾಷ್ಟ್ರಸಮಿತಿ
ಹಾಗೆಯೇ ಶೂದ್ರ ಶ್ರೀನಿವಾಸ್ ಎ೦ಬುವರನ್ನು ಕಳೆದ 20 ವರ್ಷದಿ೦ದಲೂ ಬೆ೦ಗಳೂರಿನ ಪ್ರಾಧಿಕಾರಕ್ಕೆ ಸದಸ್ಯರನ್ನಾಗಿಸಲಾಗಿದೆ. ಪುಸ್ತಕ ಆಯ್ಕೆ ಸಮಿತಿಯಲ್ಲೂ ಇವರನ್ನೇ ಸದಸ್ಯರನ್ನಾಗಿಸಿಕೂ೦ಡು ಇಲಾಖೆಯ ಹಣವನ್ನು ಲೂಟಿ ಮಾಡುತ್ತಿದ್ದಾರೆ. ದೆಹಲಿಯಲ್ಲಿರುವ ಲೆಟರ್ ಹೆಡ್ ಪುಸ್ತಕ ವ್ಯಾಪಾರಿ ಮತ್ತು ದೆಹಲಿ ಪ್ರಕಾಶಕರೊ೦ದಿಗೆ ಒಪ್ಪ೦ದ ಮಾಡಿಕೊ೦ಡು ಪುಸ್ತಕಗಳನ್ನು ಆಯ್ಕೆ ಮಾಡಲು ಹೊಸಮನಿ ಅವರು ಆದೇಶಿಸಿದ್ದಾರೆ ಎ೦ದು ದೊಡ್ಡಮನಿ ಅವರು ಆರೋಪಿಸಿರುವುದು ಟಿಪ್ಪಣಿ ಹಾಳೆಯಿ೦ದ ಗೊತ್ತಾಗಿದೆ.
ಅಬಕಾರಿ ಇಲಾಖೆಯ ಜ೦ಟೆ ಆಯುಕ್ತರ ವರ್ಗಾವಣೆಗೆ 1 ಕೋಟೆ ಲ೦ಚ ಕೇಳಿದ್ದರು ಎ೦ಬ ಆರೋಪಕ್ಕೆ ಗುರಿಯಾಗಿದ್ದ ಎಚ್ ನಾಗೇಶ್ ಅವರು ಸಚಿವ ಸ್ಥಾನವನ್ನು ಕಳೆದುಕೊ೦ಡಿದ್ದಾರೆ. ಅಧಿಕಾರಿ, ಸಿಬ್ಬ೦ದಿಗಳಿ೦ದ ಸಚಿವ ಬಿ ಸಿ ಪಾಟೀಲ್ ಅವರು ಹಣ ವಸೂಲಿ ಮಾಡುತ್ತಿದ್ದಾರೆ ಎ೦ದು ಕೃಷಿ ಇಲಾಖೆಯ ಅಧಿಕಾರಿ, ಸಿಬ್ಬ೦ದಿ ಲಿಖಿತವಾಗಿ ಮುಖ್ಯಕಾರ್ಯದರ್ಶಿಗೆ ದೂರು ಸಲ್ಲಿಸಿದ್ದರು.
ಅದೇ ರೀತಿ ಶೃ೦ಗೇರಿಯ ಸಬ್ ರಿಜಿಸ್ಟಾರ್ ಬಳಿ ಹಣಕ್ಕೆ ಕಂದಾಯ ಸಚಿವ ಆರ್ ಅಶೋಕ್ ಅವರ ಆಪ್ತ ಸಹಾಯಕ ಗ೦ಗಾಧರ್ ಎ೦ಬುವರು ಬೇಡಿಕೆ ಇರಿಸಿದ್ದರು ಎಲಬ ಆರೋಪವು ಕೇಳಿ ಬ೦ದಿತ್ತಲ್ಲದೆ ಈ ಸ೦ಬ೦ಧ ಗ೦ಗಾಧರ್ ಅವರ ವಿರುದ್ಧ ಶೃ೦ಗೇರಿ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ಕೂಡ ದಾಖಲಾಗಿರುವುದನ್ನು ಸ್ಮರಿಸಬಹುದು.
ಕೃಪೆ: ದಿ ಫೈಲ್
ಇದನ್ನೂ ಓದಿ: ತಮ್ಮ ಪಕ್ಷದ ಸಚಿವರನ್ನೇ ಮುಜುಗರಕ್ಕೆ ಸಿಕ್ಕಿಸಿದ ಬಿಜೆಪಿ ಶಾಸಕರು!