ಕರ್ನಾಟಕ ಎಂಪಿ ಉಪಚುನಾವಣೆಗೆ ಸಜ್ಜಾಗುತ್ತಿದೆ ಬಿಜೆಪಿ: ಸುರೇಶ ಅಂಗಡಿ ಪುತ್ರಿಗೆ ಟಿಕೆಟ್?
ಬೆಳಗಾವಿ ಲೋಕಸಭಾ ಕ್ಷೇತ್ರವನ್ನು ಪ್ರತಿನಿಧಿಸಿ, ರೈಲ್ವೆ ಖಾತೆ ರಾಜ್ಯ ಸಚಿವರಾಗಿದ್ದ ಸುರೇಶ ಅಂಗಡಿ ಅವರು ನಿಧನದ ನಂತರ ತೆರವಾಗಿರುವ ಸ್ಥಾನಕ್ಕೆ ಉಪಚುನಾವಣೆ ನಡೆಯಲಿದೆ. ಆ ಕ್ಷೇತ್ರವನ್ನು ಮತ್ತೆ ಗೆದ್ದುಕೊಳ್ಳಬೇಕು ಎಂದು ನಿರ್ಧಾರಿಸಿರುವ ಬಿಜೆಪಿ ಸದ್ದಿಲ್ಲದೆ ತಯಾರಿ ನಡೆಸುತ್ತಿದೆ. ಈ ಹಿನ್ನೆಲೆಯಲ್ಲಿ ಸುರೇಶ್ ಅಂಗಡಿ ಅವರ ಪುತ್ರಿ ಮತ್ತು ಕೈಗಾರಿಕಾ ಸಚಿವ ಜಗದೀಶ ಶೆಟ್ಟರ್ ಅವರ ಸೊಸೆ ಶ್ರದ್ಧಾ ಅವರಿಗೆ ಟಿಕೆಟ್ ನೀಡುವ ಸಾಧ್ಯತೆಯಿದ್ದು, ಅವರನ್ನು ಬೆಳಗಾವಿಯಲ್ಲಿ ಮುನ್ನಲೆಗೆ ತರುವ ಕಸರತ್ತು ನಡೆಯುತ್ತಿದೆ.
ಇದೇ ಮೊದಲ ಭಾರಿಗೆ ರಾಜಕೀಯ ಕಾರ್ಯಕ್ರಮ ಒಂದರಲ್ಲಿ ಶ್ರದ್ದಾ ಅವರು ಕಾಣಿಸಿಕೊಂಡಿದ್ದು, ಅವರಿಗೇ ಬಿಜೆಪಿ ಟಿಕೆಟ್ ನೀಡುವ ಸಾಧ್ಯತೆ ಹೆಚ್ಚಾಗಿದೆ ಎನ್ನುವ ಸಂದೇಹವನ್ನು ಹೆಚ್ಚಿಸಿದೆ.
ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಜನ್ಮ ದಿನಾಚರಣೆ ಮತ್ತು ಕೃಷಿ ಸಮ್ಮಾನ್ ಕಾರ್ಯಕ್ರಮದಲ್ಲಿ ಶ್ರದ್ದಾ ಅವರು ಭಾಗವಹಿಸಿದ್ದರು.
ಬಿಜೆಪಿ ಆಯೋಜಿಸಿದ್ದ ರೈತರ ಸನ್ಮಾನ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಕ್ಕೆ ಖುಷಿಯಾಗಿದೆ. ಕಾರ್ಯಕರ್ತರು ಮತ್ತು ಮುಖಂಡರು ಮನೆಗೂ ಆಗಾಗ ಭೇಟಿ ನೀಡುತ್ತಿರುತ್ತಾರೆ. ಆ ಸಂಪರ್ಕವನ್ನು ಇನ್ನೂ ಬೆಳೆಸಿಕೊಳ್ಳುತ್ತಾ ಹೋಗುತ್ತೇವೆ’ ಎಂದು ಶ್ರದ್ಧಾ ಹೇಳಿದ್ದಾರೆ.
ಇದನ್ನೂ ಓದಿ: ಮಿತ್ರ ಪಕ್ಷಕ್ಕೇ ಆಪರೇಷನ್ ಮಾಡಿದ ಬಿಜೆಪಿ: JDU ಪಕ್ಷದ 06 ಶಾಸಕರು BJPಗೆ ಸೇರ್ಪಡೆ!
ಈಗಾಗಲೇ ಉಪಚುನಾವಣೆಗೆ ಬಿಜೆಪಿಯಿಂದ ಟಿಕೆಟ್ ಆಕಾಂಕ್ಷಿಗಳ ಪಟ್ಟಿ ಬೆಳೆಯುತ್ತಿದೆ. ವೈದ್ಯ ಗಿರೀಶ್ ಸೊನ್ವಾಲ್ಕರ್, ವಕೀಲ ಎಂ ಬಿ ಜಿರ್ಲಿ, ನವದೆಹಲಿಯ ರಾಜ್ಯ ಸರ್ಕಾರದ ಪ್ರತಿನಿಧಿ ಶಂಕರ್‌ಗೌಡ ಪಾಟೀಲ್ ಪ್ರಮುಖ ಆಕಾಂಕ್ಷಿಗಳಾಗಿದ್ದಾರೆ. ಇವರ ನಡುವೆ ಜಗದೀಶ್ ಶೆಟ್ಟರ್ ತಮ್ಮ ಸೊಸೆಗೆ ಟಿಕೆಟ್ ಕೊಡಿಸುವ ಉತ್ಸಾಹದಲ್ಲಿದ್ದಾರೆ ಎಂದು ಹೇಳಲಾಗಿದೆ.
ಡಾ. ಗಿರೀಶ್ ಸೋನಾವಾಲ್ಕರ್ ಅವರನ್ನು ಕಣಕ್ಕಿಳಿಸಬೇಕು ಎಂದು ಹಲವು ಬಿಜೆಪಿ ನಾಯಕರು ಅಭಿಪ್ರಾಯ ಪಟ್ಟಿದ್ದಾರೆ. ರಮೇಶ್ ಜಾರಕೀಹೊಳಿ ಕೂಡ ಗಿರೀಶ್ ಅವರಿಗೆ ಟಿಕೆಟ್ ನೀಡಿದರೆ ಉತ್ತಮ ಎಂದು ಹೇಳಿದ್ದಾರೆ ಎನ್ನಲಾಗಿದೆ. ಒಟ್ಟಿನಲ್ಲಿ ಬೆಳಗಾವಿ ಉಪಚುನಾವಣೆಗೆ ಲಿಂಗಾಯತ ಸಮುದಾಯದವರಿಗೆ ಟಿಕೆಟ್ ನೀಡಬೇಕು ಎಂಬ ಚರ್ಚೆ ಬಿಜೆಪಿಯಲ್ಲಿ ನಡೆಯುತ್ತಿದೆ. ಹಾಗಾಗಿ ಡಾ. ಗಿರೀಶ್ ಅಥವಾ ಶ್ರದ್ಧಾ ಅವರಲ್ಲಿ ಟಿಕೆಟ್‌ಗಾಗಿ ಹೆಚ್ಚಿನ ಪೈಪೋಟಿ ನಡೆಯಲಿದೆ ಎಂದು ಹೇಳಲಾಗುತ್ತಿದೆ. ಆದರೆ, ಯಾರಿಗೆ ಟಿಕೆಟ್ ನೀಡಬೇಕು ಎಂಬುದು ರಾಜ್ಯ ಬಿಜೆಪಿ ನಾಯಕರ ಕೈಯಲಿಲ್ಲ. ಆ ನಿರ್ಧಾರ ಮಾಡುವುದು ಬಿಜೆಪಿಯ ಹೈಕಮಾಂಡ್.
ಇದನ್ನೂ ಓದಿ: ಮತ್ತೆ ಭುಗಿಲೆದ್ದ ಸಂಪುಟ ಸದ್ದು; ಬಿಜೆಪಿಯಲ್ಲಿ ಹೊಸಬರು-ಹಳಬರ ನಡುವೆ ಜಟಾಪಟಿ!