ದೆಹಲಿ ಹಿಂಸಾಚಾರ ವಿಚಾರಣೆ ಒಂದು ತಿಂಗಳು ಮುಂದೂಡಿದ್ದು ಸಮರ್ಥನೀಯವಲ್ಲ: ಸುಪ್ರೀಂ ಕೋರ್ಟ್

ದೆಹಲಿ ಹಿಂಸಾಚಾರಕ್ಕೆ ಸಂಬಂಧಪಟ್ಟ ಎಲ್ಲ ಅರ್ಜಿಗಳನ್ನು ಮಾರ್ಚ್ 6 ರಂದು ಶುಕ್ರವಾರ ಆಲಿಸುವಂತೆ ದೆಹಲಿ ಹೈಕೋರ್ಟ್ ಗೆ ಸುಪ್ರೀಮ್ ಕೋರ್ಟ್ ಸೂಚಿಸಿದೆ. ಇದರ ಸಂಬಂಧವಾಗಿ ದೆಹಲಿ ಹೈಕೋರ್ಟ್ ಒಂದು ತಿಂಗಳು ವಿಚಾರಣೆ ಮುಂದೂಡಿದ್ದು ಸಮರ್ಥನೀಯವಲ್ಲ ಎಂದು ಅಭಿಪ್ರಾಯಪಟ್ಟಿದೆ.

ಮುಖ್ಯನ್ಯಾಧೀಶ ಎಸ್ ಎ ಬೋಬ್ಡೆ, ನ್ಯಾಯಮೂರ್ತಿ ಬಿ ಆರ್ ಗವೈ ಮತ್ತು ನ್ಯಾಯಮೂರ್ತಿ ಸೂರ್ಯಕಾಂತ್ ಒಳಗೊಂಡ ಪೀಠ ಈ ವಿಷಯವಾಗಿ ತ್ವರಿತ ವಿಚಾರಣೆ ಮಾಡುವಂತೆ ದೆಹಲಿ ಹೈಕೋರ್ಟ್ ಗೆ ಮನವಿ ಮಾಡಿದ್ದು, ಈ ಬಿಕ್ಕಟ್ಟಿಗೆ ಶಾಂತಿಯುತ ಪರಿಹಾರ ಕಂಡುಹಿಡಯಲು ಸಾಧ್ಯವೇ ಪರಿಶೀಲಿಸಿ ಎಂದಿದೆ.

“ಇಷ್ಟು ದೀರ್ಘ ಕಾಲಾವಧಿಯವರೆಗೆ ಮುಂದೂಡಿದ್ದು ಸಮರ್ಥನೀಯವಲ್ಲ ಎಂಬುದು ನಮ್ಮ ಅಭಿಪ್ರಾಯ. ಈಗ ಹೈಕೋರ್ಟ್ ನಲ್ಲಿರುವ ವಿಚಾರಣೆಯನ್ನು ನಾವು ಕೈಗೆತ್ತಿಕೊಳ್ಳುವುದಕ್ಕು ಸಮ್ಮತಿಯಿಲ್ಲ. ಆದುದರಿಂದ ಇದೇ ವಿಷಯಕ್ಕೆ ಸಂಬಂಧಿಸಿದಂತೆ ಮುಂದೂಡಲಾಗಿರುವ ವಿಚಾರಣೆಯನ್ನು ಮುಂಚಿತವಾಗಿ ಆಲಿಸಬೇಕಾಗಿದೆ” ಎಂದು ಮುಖ್ಯನ್ಯಾಯಾಧೀಶ ಬೋಬ್ಡೆ ಹೇಳಿದ್ದಾರೆ.

ಕಳೆದ ವಾರ ಈಶಾನ್ಯ ದೆಹಲಿಯಲ್ಲಿ ನಡೆದ ಕೋಮು ಹಿಂಸಾಚಾರಕ್ಕೆ ತಮ್ಮ ದ್ವೇಷಪೂರಿತ ಭಾಷಣದಿಂದ ಕರೆಕೊಟ್ಟರು ಎಂದು ಆರೋಪಿಸಲಾಗಿರುವ ಬಿಜೆಪಿ ಮುಖಂಡರ ವಿರುದ್ಧ ಬುಧವಾರ ಸುಪ್ರೀಂ ಕೋರ್ಟ್ ನಲ್ಲಿ, ವಿಚಾರಣೆ ನಡೆದಿತ್ತು. ಈ ಹಿಂಸಾಚಾರದಲ್ಲಿ ಕನಿಷ್ಟ 48 ಜನ ಪ್ರಾಣ ಕಳೆದುಕೊಂಡಿದ್ದು, ಸಂತ್ರಸ್ತರ ಬಂಧುಗಳು ಕೋರ್ಟ್ ಮೊರೆ ಹೋಗಿದ್ದಾರೆ.

ದೆಹಲಿ ಹೈಕೋರ್ಟ್ ನ್ಯಾಯಮೂರ್ತಿ ಎಸ್. ಮುರಳೀಧರ್ ಅವರು ಕೋರ್ಟ್ ಆವರಣದಲ್ಲಿಯೇ ಬಿಜೆಪಿ ಮುಖಂಡರ ಪ್ರಚೋದನಕಾರಿ ಭಾಷಣದ ವಿಡಿಯೋವನ್ನು ತೋರಿಸಿ, ಅವರ ವಿರುದ್ಧ ಎಫ್ ಐ ಆರ್ ದಾಖಲಿಸುವಂತೆ ದೆಹಲಿ ಪೊಲೀಸರಿಗೆ ತಾಕೀತು ಮಾಡಿದ್ದರು. ಆದರೆ ಅಂದೇ ರಾತ್ರಿ ನ್ಯಾಯಮೂರ್ತಿ ಮುರಳೀಧರ್ ಅವರನ್ನು ಪಂಜಾಬ್ ಮತ್ತು ಹರ್ಯಾಣ ಹೈಕೋರ್ಟ್ ಗೆ ವರ್ಗಾವಣೆ ಮಾಡಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿತ್ತು. ಈ ನಂತರ ದೆಹಲಿ ಹೈಕೋರ್ಟ್ ದೆಹಲಿ ಪೊಲೀಸರಿಗೆ ಕ್ರಮ ತೆಗೆದುಕೊಳ್ಳಲು ನಾಲ್ಕು ವಾರಗಳ ಕಾಲಾವಕಾಶ ನೀಡಿತ್ತು.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights