ನಂಜನಗೂಡಿನಲ್ಲಿ ಹೊಸದಾಗಿ ನಾಲ್ವರಿಗೆ ಕೊರೊನಾ : ಸಾವಿರದಷ್ಟು ಜನರಿಗೆ ಸೋಂಕು ಶಂಕೆ!
ಮೈಸೂರಿನ ನಂಜನಗೂಡಿನಲ್ಲಿ ಹೊಸದಾಗಿ ನಾಲ್ವರಿಗೆ ಕೊರೊನಾ ಸೋಂಕು ಪತ್ತೆಯಾದ ಹಿನ್ನೆಲೆಯಲ್ಲಿ ಜನರಲ್ಲಿ ಆತಂಕ ಹೆಚ್ಚಾಗಿದೆ. ಇದರ ಜೊತೆಗೆ ಸಾವಿರದಷ್ಟು ಕಾರ್ಮಿಕರಿಗೆ ಸೋಂಕು ಶಂಕೆ ಇದ್ದು ಕ್ವಾರಂಟೈನ್ ಮಾಡಲು ನಿರ್ಧಾರ ಮಾಡಲಾಗಿದೆ.
ಹೌದು… ನಂಜನಗೂಡಿನ ಕಾರ್ಖಾನೆಯ ಸಾವಿರದಷ್ಟು ಜನರಿಗೆ ಕೊರೊನಾ ಸೋಂಕು ಶಂಕೆ ವ್ಯಕ್ತವಾಗಿದ್ದು, ಇವರಲ್ಲಿ 30 ಮಂದಿಯನ್ನು ಕ್ವಾರಂಟೈನ್ ಮಾಡಲು ನಿರ್ಧಾರ ಮಾಡಲಾಗಿದೆ.
ಮಂಡ್ಯ ವಿಳಾಸದಲ್ಲಿರುವ 20 ಮಂದಿಗೆ ಆಸ್ಪತ್ರೆಗಳಲ್ಲಿ ಹಾಗೂ ಮೈಸೂರು ವಿಳಾಸದಲ್ಲಿರುವ ಉಳಿದ 10 ಮಂದಿಗೆ ಮೈಸೂರಲ್ಲಿ ಕ್ವಾರಂಟೈನ್ ಮಾಡಲಾಗುತ್ತಿದೆ. ಸೋಂಕು ಹರಡುವುದನ್ನು ತಡೆಗಟ್ಟುವ ಸಲುವಾಗಿ ಕ್ವಾರಂಟೈನ್ ಮಾಡಲು ನಿರ್ಧಾರ ಮಾಡಲಾಗಿದೆ.
ಕೊರೊನಾಗೆ ಸಂಬಂಧಿಸಿದಂತೆ ಸಂಘಟನೆ ಮತ್ತು ಕಾರ್ಯಕರ್ತರ ಕೆಲಸದ ವೈಖರಿ ಬಗ್ಗೆ ಫೇಸ್ಬುಕ್ ಲೈವ್ ಬಂದಿದ್ದ ಮೈಸೂರು ಸಂಸದ ಪ್ರತಾಪ್ ಸಿಂಹ ತಿಳಿಸಿದರು. ಇದೇ ವೇಳೆ ನಂಜನಗೂಡಿನ ಜುಬಿಲೆಂಟ್ಸ್ ಕಾರ್ಖಾನೆಯಲ್ಲಿ ನೌಕರರು ಬಗ್ಗೆ ಮಾಹಿತಿ ನೀಡಿದರು. ಮೊದಲಿಗೆ ಒಬ್ಬರಿಗೆ ಕೊರೊನಾ ಸೋಂಕು ತಗುಲಿತ್ತು. ಮೂರರಿಂದ ಐದು ಆಯ್ತು. ಒಟ್ಟಾರೆ ಜಿಲ್ಲೆಯಲ್ಲಿ ಎಂಟು ಜನ ಸೋಂಕಿತರು ಪತ್ತೆಯಾಗಿರೋದು ಆತಂಕಕ್ಕೆ ಕಾರಣವಾಗಿದೆ. ಮತ್ತೆ ನಾಲ್ಕು ಜನರಿಗೆ ಕೊರೊನಾ ಸೋಂಕು ದೃಢವಾಗಿದ್ದು, ಅಧಿಕೃತ ಪ್ರಕಟಣೆ ಹೊರ ಬೀಳಬೇಕಿದೆ ಎಂದಿದ್ದಾರೆ.
ಬಹುತೇಕರಲ್ಲಿ ತಮಗೆ ಕೊರೊನಾ ಇರೋದು ಬಗ್ಗೆಯೂ ಗೊತ್ತಿರಲಿಲ್ಲ. ಅಧಿಕಾರಿಗಳು ಮುಂಜಾಗ್ರತಾ ಕ್ರಮವಾಗಿ ವೈದ್ಯಕೀಯ ತಪಾಸಣೆಗೆ ಒಳಪಡಿಸಿದಾಗ ಸೋಂಕು ಇರೋದು ದೃಢಪಟ್ಟಿದೆ ಎಂದು ಪ್ರತಾಪ್ ಸಿಂಹ ತಿಳಿಸಿದ್ದಾರೆ.

