ಪಾಲ್ಘರ್ ಲಿಂಚಿಂಗ್: ಇಲ್ಲಿಯವರೆಗೂ ನಡೆದಿದ್ದೇನು? ಕೋಮು ಬಣ್ಣ ನೀಡಲು ಬಿಜೆಪಿ ಯತ್ನ
ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯಲ್ಲಿ ಮೂವರು ವ್ಯಕ್ತಿಗಳನ್ನು ಗುರುವಾರ ಚಚ್ಚಿ ಕೊಲ್ಲಲಾಗಿದೆ. ಪ್ರಾಥಮಿಕ ತನಿಖೆಯ ಪ್ರಕಾರ ಪಾಲ್ಘರ್ ನ ಬುಡಕಟ್ಟು ಗ್ರಾಮ ಗದ್ಚಿಂಚಲೆಯ ಜನರು ಸೂರತ್ ಗೆ ಅಂತ್ಯಕ್ರಿಯೆಗೆ ತೆರಳುತ್ತಿದ್ದ ಈ ವ್ಯಕ್ತಿಗಳನ್ನು ಮಕ್ಕಳ ಕಳ್ಳ ಸಾಗಾಣಿಕೆ ಮಾಡುವವರು ಮತ್ತು ಮನುಷ್ಯರ ಅಂಗಾಂಗಗಳನ್ನೂ ಕಸಿದುಕೊಳ್ಳುವವರು ಎಂದು ಕಲ್ಲು, ಕೋಲು ಮತ್ತಿತರ ಆಯುಧಗಳಿಂದ ಹೊಡೆದು ಕೊಂದಿರುವುದಾಗಿ ತಿಳಿದುಬಂದಿತ್ತು.
ಈ ನಿಟ್ಟಿನಲ್ಲಿ ಇಲ್ಲಿಯವರೆಗೂ ಮಕ್ಕಳೂ ಸೇರಿದಂತೆ 101 ಜನರನ್ನು ಬಂಧಿಸಲಾಗಿದೆ. ಬಿಜೆಪಿ ಪಕ್ಷದ ಮುಖಂಡರು ಮತ್ತು ಹಿಂದುತ್ವ ಕಾರ್ಯಕರ್ತರು ಇದು ಹಿಂದೂಗಳ ಮೇಲೆ ಹಲ್ಲೆ ಎಂದು ಇದಕ್ಕೆ ಕೋಮು ಬಣ್ಣ ನೀಡಲು ಮಾಡುತ್ತಿರುವ ಪ್ರಯತ್ನ ಕೂಡ ಸಾಮಾಜಿಕ ಮಾಧ್ಯಮಗಳಲ್ಲಿ ನಡೆದಿದೆ.
ನಡೆದಿದ್ದೇನು?
ಏಪ್ರಿಲ್ 16 ರ ರಾತ್ರಿ ಕಂಡಿವಲಿ ಆಶ್ರಮದಲ್ಲಿ ವಾಸವಾಗಿದ್ದ 70 ವರ್ಷದ ಮಹಂತ್ ಕಲ್ಪವೃಕ್ಷ ಗಿರಿ ಮತ್ತು 35 ವರ್ಷದ ಸುಶೀಲ್ ಗಿರಿ ಮಹಾರಾಜ್ ಸೂರತ್ ನಲ್ಲಿ ಅಂತ್ಯಕ್ರಿಯೆಯೊಂದರಲ್ಲಿ ಭಾಗವಹಿಸಲು ನಿರ್ಧರಿಸಿದ್ದಾರೆ. ನಿಖಿಲ್ ಎಲ್ಗಾದೆ (30) ಎಂಬ ಚಾಲಕನ ಜೊತೆಗೆ ಅವರನ್ನು ಸೇರಿ ಈ ಮೂವರು ವ್ಯಕ್ತಿಗಳು ಫೋರ್ಡ್ ಎಕೋ ಸ್ಪೋರ್ಟ್ ನಲ್ಲಿ ತೆರೆಳುವಾಗ ಗದ್ಚಿಂಚಲೆ ಗ್ರಾಮದ ಬಳಿ ಅರಣ್ಯ ಅಧಿಕಾರಿಗಳು ತಡೆದಿದ್ದಾರೆ. ಆಗ ಇವರನ್ನು ಕಳ್ಳರು ಮತ್ತು ಮಕ್ಕಳ ಸಾಗಾಣಿಕರು ಎಂದು ತಿಳಿದ ವಿಕ್ರಂಘಡ್ ತಾಲೂಕಿನ 70-80 ಜನರ ಆದಿವಾಸಿ ಗ್ರಾಮಸ್ಥರ ಗುಂಪು ಅಲ್ಲಿಗೆ ತೆರಳಿ ಈ ಮೂವರಿಗೂ ಥಳಿಸಿ ಕೊಂದಿರುವ ಘಟನೆ ನಡೆದಿದೆ ಎಂದು ಪೊಲೀಸರು ಹೇಳಿದ್ದಾರೆ.
ಇದರಲ್ಲಿ ಸಂತ್ರಸ್ತರಾದ ಕಲ್ಪವೃಕ್ಷ ಗಿರಿ ಮತ್ತು ಸುಶೀಲ್ ಗಿರಿ ಗೋಸಾವಿ ಬುಡಕಟ್ಟಿಗೆ ಸೇರಿದವರು. ಈ ಇಬ್ಬರೂ ವಾರಣಾಸಿಯ ಆಶ್ರಮವೊಂದಕ್ಕೆ ನಂತರ ಸೇರಿದ್ದರು ಎನ್ನಲಾಗಿದೆ. ಈಗ ಬಂಧನವಾಗಿರುವ ಆರೋಪಿಗಳಲ್ಲಿ ಬಹುತೇಕರು ಗದ್ಚಿಂಚಲೆ ಗ್ರಾಮಕ್ಕೆ ಸೇರಿದವರು. 2011 ಜನಗಣತಿ ಪ್ರಕಾರ ಈ ಗ್ರಾಮದಲ್ಲಿ ಸುಮಾರು 248 ಮನೆಗಳಲ್ಲಿ ಎಲ್ಲರೂ ಆದಿವಾಸಿ ಸಮುದಾಯಕ್ಕೆ ಸೇರಿದವರೇ. ಈ ಗ್ರಾಮದ ಅಕ್ಷರಸ್ಥರ ಸಂಖ್ಯೆ ಸುಮಾರಿ 30% ಎನ್ನಲಾಗಿದೆ.
ಸ್ಥಳದಿಂದ 35 ಕಿಲೋಮೀಟರ್ ದೂರದಲ್ಲಿದ್ದ ಪೋಲಿಸ್ ಸ್ಟೇಶನ್ ನಿಂದ ಪೊಲೀಸರು ತಲುಪಿದರೂ ನೆರೆದಿದ್ದ ಅಷ್ಟು ಜನರನ್ನು ನಿಯಂತ್ರಿಸಲು ಸಾಧ್ಯವಾಗದೆ, ಪೋಲಿಸರೇ ಸಮ್ಮುಖದಲ್ಲಿಯೇ ಈ ಹಲ್ಲೆ ನಡೆದಿದೆ. ಬಂಧನವಾಗಿರುವ ಸುಮಾರು 101 ಜನರಲ್ಲಿ 9 ಜನ ಮಕ್ಕಳು ಎಂದು ತಿಳಿಯಲಾಗಿದೆ. ವಯಸ್ಕರನ್ನು 12 ದಿನಗಳ ಪೋಲಿಸ್ ವಶಕ್ಕೆ ನೀಡಲಾಗಿದೆ.
ಇದಕ್ಕೆ ಕೋಮುಬಣ್ಣ ನೀಡಲು ಶ್ರಮಿಸುತ್ತಿರುವ ಹಿಂದುತ್ವ ಕಾರ್ಯಕರ್ತರು
ಈ ಘಟನೆ ಖಂಡನೀಯ ಮತ್ತು ತನಿಖೆಯಾಗಿ ಆರೋಪಿಗಳಿಗೆ ಶಿಕ್ಷೆಯಾಗಬೇಕಿದೆ. ಆದರೆ ಇದು ಹಿಂದೂ ಸಾಧುಗಳ ಮೇಲೆ ಆದ ಹಲ್ಲೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಇದಕ್ಕೆ ಕೋಮು ಬಣ್ಣ ನೀಡಲು ಬಿಜೆಪಿ ಪಕ್ಷಕ್ಕೆ ಸಂಬಂಧಿಸಿದ ಹಲವು ಮುಖಂಡರು ಮತ್ತು ಹಿಂದುತ್ವ ಕಾರ್ಯಕರ್ತರು ಅವಿರತವಾಗಿ ಶರ್ಮಿಸುತ್ತಿದ್ದಾರೆ. ಇನ್ನೂ ಕೆಲವರು #JusticeforHinduSadhus ಹೆಸರಿನಲ್ಲಿ ಈ ವಿಷಯವನ್ನು ವೈರಲ್ ಮಾಡಲು ಪ್ರಯತ್ನಿಸುತ್ತಿದ್ದು, ಹಲ್ಲೆ ಮಾಡಿದವರು ಮುಸ್ಲಿಮರು ಎಂಬಂತೆ ಪರೋಕ್ಷವಾಗಿ ಬಿಂಬಿಸಲು ಪ್ರಯತ್ನಿಸುತ್ತಿದ್ದಾರೆ.
https://twitter.com/PandaJay/status/1251846802304692229

