ಪ್ರೀ ವೆಡ್ಡಿಂಗ್ ಶೂಟ್ ಹೆಸರಲ್ಲಿ ದರೋಡೆ ಮಾಡಿದ್ದ ನಾಲ್ವರು ಆರೋಪಿಗಳು…!
ಪ್ರೀ ವೆಡ್ಡಿಂಗ್ ಶೂಟ್ ಹೆಸರಲ್ಲಿ ದರೋಡೆ ಮಾಡಿದ್ದ ನಾಲ್ವರು ಆರೋಪಿಗಳನ್ನು ಹಾಸನ ಪೊಲೀಸರು ಬಂಧಿಸಿದ್ದಾರೆ. ಹೊಸಕೋಟೆ ಮೂಲದ ಮಲ್ಲಿಕಾರ್ಜುನ, ಆನಂದ್, ದಶರಥ, ಕೋಲಾರದ ಬಾಬು ಬಂಧಿತರು. ಬಂಧಿತರ ಮೇಲೆ ಹಿಂದೆ ಹಲವು ಕೇಸ್ಗಳಿವೆ.
ಪ್ರಮುಖ ಆರೋಪಿ ಛಲಪತಿ ತಲೆಮರೆಸಿಕೊಂಡಿದ್ದಾನೆ. ಫೆಬ್ರವರಿ.15 ರಂದು ಪ್ರೀ ವೆಡ್ಡಿಂಗ್ ಶೂಟ್ ಮಾಡಿಸಬೇಕು ಎಂದು ಸುಳ್ಳು ಹೇಳಿ ಹಾಸನದ ಇಬ್ಬರು ಫೋಟೋ ಗ್ರಾಫರ್ಗಳನ್ನು, ಹಾಸನ ತಾಲೂಕು ಜವೇನಹಳ್ಳಿ ಸಮೀಪ ಹೇಮಾವತಿ ಹಿನ್ನೀರಿನ ಬಳಿಗೆ ಆರೋಪಿಗಳು ಕರೆಸಿಕೊಂಡಿದ್ರು. ಫೋಟೋ ಶೂಟ್ ಇದೆ ಎಂದು ನಂಬಿ ಹೋಗಿದ್ದ ಫೋಟೋಗ್ರಾಫರ್ಗಳನ್ನು ಥಳಿಸಿ, ಕಟ್ಟಿಹಾಕಿ ಆರೋಪಿಗಳು ಕ್ಯಮೆರಾ ಕಿತ್ತುಕೊಂಡು ಪರಾರಿಯಾಗಿದ್ರು.
ಇದೀಗ ಆರೋಪಿಗಳು ಸೆರೆಯಾಗಿದ್ದು, ಇವರು ಜಸ್ಟ್ ಡಯಲ್ ಮೂಲಕ ಪ್ರೀ ವೆಡ್ಡಿಂಗ್ ಶೂಟ್ ಬುಕ್ ಮಾಡಿ ಹಾಸನ, ಮೈಸೂರು ಸೇರಿದಂತೆ ವಿವಿಧೆಡೆ ವಂಚಿಸಿ ಕ್ಯಾಮೆರಾಗಳನ್ನು ಕಿತ್ತುಕೊಂಡು ಹೋಗಿರುವುದು ಬೆಳಕಿಗೆ ಬಂದಿದೆ. ಆರೋಪಿಗಳಿಂದ ಒಂದು ಕ್ಯಾಮೆರಾ, 1 ಡ್ರೋನ್ ಹಾಗೂ ಮೊಬೈಲ್ ವಶಕ್ಕೆ ಪಡೆಯಲಾಗಿದೆ.

