ಹಳ್ಳಿ ಮಾತು-1: ಕೋವಿಡ್ ಲಾಕ್ ಡೌನ್ ನಿರ್ಮಿಸಿದ ನಿರುದ್ಯೋಗ-ಹಸಿವಿನ ತಾಕಲಾಟದಲ್ಲೂ ಸಾಮರಸ್ಯದ ಬೆಸುಗೆ

[ಇದು ಹೊಸದಾಗಿ ಪ್ರಾರಂಭವಾಗುತ್ತಿರುವ ಅಂಕಣ. ಭಾರತದ ಅದರಲ್ಲೂ ಕರ್ನಾಟಕದ ಗ್ರಾಮ ಲೋಕದ ಸುದ್ದಿ, ಸ್ವಾರಸ್ಯ, ಸಂತಸ ಮತ್ತು ಸಮಸ್ಯೆಗಳ ಮೇಲೆ ಯಶವಂತ್ ಪ್ರತಿ ವಾರ ಬೆಳಕು ಚೆಲ್ಲಲಿದ್ದಾರೆ. ಇದು ಹಳ್ಳಿ ಮಾತಿನ ಮೊದಲ ಕಂತು]

ಮಾರ್ಚ್ 22, 2020 ರ ಸಂಪೂರ್ಣ ಲಾಕ್ ಡೌನ್ ನಂತರ ಕೇವಲ ಒಂದು ದಿನದ ಬಿಡುವು ನೀಡಿ ಸತತವಾಗಿ ದೇಶ ದೀರ್ಘಾವಧಿಯ ಲಾಕ್ ಡೌನ್ ನಲ್ಲಿದೆ. 60 ದಿನಗಳ ಕಡೆ ಧಾವಿಸುತ್ತಿದೆ. ಇದು, ಅನೌಪಚಾರಿಕ ಕೃಷಿ ಆರ್ಥಿಕತೆಯ ಗ್ರಾಮ ಭಾರತದಲ್ಲಿ ವಿನೂತನ ತಲ್ಲಣಗಳನ್ನು ಸೃಷ್ಟಿಸಿದೆ. ಅಪೂರ್ವ ಹೊಂದಾಣಿಕೆಯ ಅಸೀಮ ಸಾಮರಸ್ಯಕ್ಕೆ ವೇದಿಕೆ ಒದಗಿಸಿದೆ.

“ಇದು ಇನ್ನೂ ಎಷ್ಟು ದಿನ ಇರುತ್ತೋ ಕಾಣೆ, ಮಕ್ಕಳು, ಸೊಸೆ, ಮಗಳು, ಅಳಿಯ ಎಲ್ಲ ಕುಂತಂಗೇ ಕುಂತವರೇ”, ಎಂದು ನಿಟ್ಟುಸಿರು ಬಿಟ್ಟವಳು 65 ವರ್ಷದ ದಲಿತ ಮಹಿಳೆ ಪುಟ್ಟಲಿಂಗಮ್ಮ.  ಎಲ್ಲೆಲ್ಲೋ ದುಡಿಯುತ್ತಿದ್ದವರು ಈಗ ಮನೆಯಲ್ಲೇ ಇದ್ದಾರೆ ಎಂಬುದು ಈಕೆಗೆ ಸಂಭ್ರಮದ ವಿಷಯ ಅಲ್ಲ; ಸಂಕಟದ ದುಗುಡ. ಮನೆ ಒಳಗಿರಲಿ, ಹೊರಗಿರಲಿ, ಅವಳ ಕಣ್ಣು ಸೊಸೈಟಿ ಅಕ್ಕಿ (ಪಡಿತರ ಧಾನ್ಯ) ತಂದಿರುವ ಚೀಲದ ಮೇಲೆಯೇ ಇದೆ. ಒಂದು ಹೆಣ್ಣು, ಐದು ಗಂಡು ಮಕ್ಕಳ ತಾಯಿಯಾಗಿರುವ ಈಕೆ ಮಂಡ್ಯ ತಾಲ್ಲೂಕಿನ ಹೊನಗಳ್ಳಿಮಠ ಗ್ರಾಮದವಳು. ಮಾತು ಮುಂದುವರೆಸಿ ಈಕೆ, “ಈಗ ಎಲ್ಲರಿಗೂ ಇದೇ ಆಧಾರ” ಎಂದಳು. ಎರಡು ತಿಂಗಳ ಪಡಿತರವನ್ನು ಒಮ್ಮೆಗೆ ಕೊಟ್ಟಿದ್ದರಿಂದ ತಲಾ ಹತ್ತು ಕೆಜಿಯಂತೆ ಸಿಕ್ಕಿರುವ ಆಹಾರ ಧಾನ್ಯವೇ ಈ ಬಿಪಿಎಲ್ ಕುಟುಂಬಕ್ಕಿರುವ ಏಕೈಕ ಆಸರೆ.                             ‌‌‌‌‌‌

ಜಾಗತಿಕ ಹಸಿವಿನ ಸೂಚ್ಯಂಕ-2019 ರಲ್ಲಿ ಪರಿಗಣಿಸಿರುವ 117 ದೇಶಗಳಲ್ಲಿ ಭಾರತದ್ದು 102 ನೇ ಸ್ಥಾನ. ಪಂಡಿತ್ ಜವಾಹರಲಾಲ್ ನೆಹರು ರವರು, ‘ಭಾರತದ ಭವಿಷ್ಯವನ್ನು ಮಕ್ಕಳ ಹೊಳೆಯುವ ಕಣ್ಣುಗಳಲ್ಲಿ ಕಾಣುತ್ತೇನೆ’ ಎಂದಿದ್ದರು. ಅಂತಹ ಭವಿಷ್ಯದ ಪ್ರಜೆಗಳಾದ, ವಿಶೇಷವಾಗಿ ಐದು ವರ್ಷ ವಯಸ್ಸಿನ ಕೆಳಗಿನ ಮಕ್ಕಳ ಹಸಿವಿನ  ರೇಖೆಯು, ಒಟ್ಟಾರೆ ಹಸಿವಿನ ರೇಖೆಗಿಂತ ಕೆಳಗಿರುವುದನ್ನು ಸಹ ಇದೇ ಸೂಚ್ಯಂಕ ತೋರಿಸಿದೆ. ದುಡಿಮೆಯೇ ಇಲ್ಲ ಎಂಬ ಪರಿಸ್ಥಿತಿಯ ಈ ಲಾಕ್ ಡೌನ್ ನ ಅವಧಿಯಲ್ಲಿ ಈ ಸೂಚ್ಯಂಕ ಕುಸಿದಿರಬಹುದಾದ ಪ್ರಮಾಣವನ್ನು ಯಾರಾದರೂ ಊಹಿಸಬಹುದು.

ಆದರೆ, ಈಗ ನೀಡುತ್ತಿರುವ ಕಡಿಮೆ ಆಹಾರ ಧಾನ್ಯದ ವಿತರಣೆ ಪರಿಸ್ಥಿತಿ ಹೇಗಿದೆ ನೋಡಿ; ಮದ್ದೂರು ತಾಲ್ಲೂಕು ಆತಗೂರು ಹೋಬಳಿ ಹನುಮಂತಪುರ ಗ್ರಾಮದ ಎಲ್ಲಾ ಬಿಪಿಎಲ್ ಪಡಿತರದಾರರಿಗೆ ರೇಷನ್ ಸಿಗುವ ಮೊದಲೇ, ಇಲ್ಲಿನ ನ್ಯಾಯ ಬೆಲೆ ಅಂಗಡಿ ವಿತರಕ ಸ್ಟಾಕ್ ಖಾಲಿ ಎಂದು ಘೋಷಿಸಿಬಿಟ್ಟಿದ್ದಾನೆ ಎಂದು ಕರ್ನಾಟಕ ಪ್ರಾಂತ ರೈತ ಸಂಘದ ತಾಲ್ಲೂಕು ಅಧ್ಯಕ್ಷ ಶಿವಣ್ಣ ಅಸಮರ್ಪಕ ವಿತರಣೆ ಕಡೆ ಬೊಟ್ಟು ಮಾಡುತ್ತಾರೆ. ಇದು ಕೇವಲ ಒಬ್ಬ ವಿತರಕನಿಗೆ ಮಾತ್ರ ಸೀಮಿತವಾಗಿಲ್ಲ.

ಶೇಕಡಾ 50 ರಷ್ಟು ಗ್ರಾಮೀಣ ಕುಟುಂಬಗಳು ದಿನದಲ್ಲಿನ ಊಟದ ಸಂಖ್ಯೆಯನ್ನು ಕಡಿಮೆ ಮಾಡಿದ್ದರೆ, ಶೇ 68 ರಷ್ಟು ಕುಟುಂಬಗಳು ತಮ್ಮ ಊಟದ ತಟ್ಟೆಯಲ್ಲಿನ ಐಟಂಗಳ ಸಂಖ್ಯೆಯನ್ನು ಕಡಿಮೆಗೊಳಿಸಿವೆ ಎಂಬುದನ್ನು ಹಸಿವಿಗೆ ಸಂಬಂಧಿಸಿದಂತೆ ನಡೆಸಿದ ಲಾಕ್ ಡೌನ್ ಅವಧಿಯ ಸಮೀಕ್ಷೆಯಲ್ಲಿ ವಿವಿಧ ಸಿವಿಲ್ ಸೊಸೈಟಿಯ ಅಧ್ಯಯನಕಾರರು ಕಂಡುಕೊಂಡಿದ್ದಾರೆ. “ರೇಷನ್ ಅಂಗಡಿಯಲ್ಲಿ ವಿತರಿಸುತ್ತಿರುವ ಆಹಾರ ಧಾನ್ಯ ಯಾವುದಕ್ಕೂ ಸಾಲದು” ಎನ್ನುವ ರಾಮಲಿಂಗಯ್ಯ, ಸಿವಿಲ್ ಸೊಸೈಟಿಗಳ ಸಮೀಕ್ಷೆಗೆ ತಮ್ಮ ಕ್ಷೀಣಿಸಿದ ಧ್ವನಿಯಲ್ಲೇ ಸಾಕ್ಷಿ ಒದಗಿಸುತ್ತಾರೆ.

ಮದ್ದೂರು ತಾಲ್ಲೂಕು ಯರಗನಹಳ್ಳಿ ಗ್ರಾಮದ ಕ್ಷೌರಿಕ ಸಮುದಾಯದ 65 ವರ್ಷ ವಯಸ್ಸಿನ ರಾಮಲಿಂಗಯ್ಯನವರದು ತುಂಬು ಕುಟುಂಬ. 85 ವರ್ಷದ ತಾಯಿ, ಗೃಹಿಣಿಯಾಗಿರುವ ಪತ್ನಿ, ಎಸ್ ಎಸ್ ಎಲ್ ಸಿ ಓದುತ್ತಿರುವ ಮಗ, ಬಿಕಾಂ ಪ್ರಥಮ ವರ್ಷದ ಮಗಳು ಇರುವ ಈ ಕುಟುಂಬದ ಹೊಣೆ ಇವರ ಹೆಗಲ ಮೇಲಿದೆ. ಮದ್ದೂರು ಟೌನ್ ನಲ್ಲಿ ಸ್ವಂತ ಕ್ಷೌರಿಕ ವೃತ್ತಿ ಅವಲಂಬಿಸಿ ಸ್ವಾಭಿಮಾನಿಯಾಗಿ ಜೀವಿಸುತ್ತಿದ್ದ ಇವರನ್ನು ಲಾಕ್ ಡೌನ್ ನಿರುದ್ಯೋಗಿಯಾಗಿಸಿದೆ.

ಮಕ್ಕಳು ಶಾಲೆಯಲ್ಲಿ, ಅಂಗನವಾಡಿಗಳಲ್ಲಿ, ವಿವಿಧ ಹಾಸ್ಟೆಲ್ ಗಳಲ್ಲಿ ಊಟ ಮಾಡುತ್ತಿದ್ದರು. ದೊಡ್ಡವರಿಗೆ ಮದುವೆ-ತಿಥಿ ಮುಂತಾದ ಕಾರ್ಯಗಳ ಆತಿಥ್ಯ ಇರುತ್ತಿತ್ತು. ಕೆಲಸದ ಮೇಲೆ ಹೋದವರು ನೂರಾರು ಹೋಟೆಲ್ ಗಳ ಗ್ರಾಹಕರಾಗಿದ್ದರು. ಈಗ ಎಲ್ಲರೂ ಊಟಕ್ಕೆ ಮನೆಯನ್ನೇ ಆಶ್ರಯಿಸಿದ್ದಾರೆ. ಇದು ಮನೆಯ ದಿನಸಿ ಮೇಲಿನ ಒತ್ತಡವನ್ನು ಹಲವು ಪಟ್ಟು ಹೆಚ್ಚಿಸಿದೆ. ಇಂತಹ ಸನ್ನಿವೇಶದಲ್ಲಿ ಪಡಿತರ ವಿತರಣೆ ಅಗತ್ಯಕ್ಕೆ ಅನುಗುಣವಾಗಿರಬೇಕಿತ್ತು.

ಸರ್ಕಾರದ ಪರಿಹಾರ ಚಟುವಟಿಕೆಗಳು ಚಮತ್ಕಾರಿ ಸಂಕೇತಗಳಾಗಿಯೇ ಉಳಿದುಬಿಟ್ಟಿವೆ; ಇಲ್ಲೂ ನೋಡಿ ಅಂತಹ ಚಮತ್ಕಾರ; ಕೋವಿಡ್-19 ಸಾಂಕ್ರಮಿಕ ಬರುವ ಮುಂಚೆ ವಿತರಿಸುತ್ತಿದ್ದ ಆಹಾರ ಧಾನ್ಯ ತಲಾ ಏಳು ಕೆಜಿ. ಅಂದರೆ ಐದು ಜನರಿರುವ ಕುಟುಂಬಕ್ಕೆ 35 kg ಆಹಾರ ಧಾನ್ಯ ಸಿಗುತ್ತಿತ್ತು. ಆದರೆ ಸಾಂಕ್ರಮಿಕದ ವಿರುದ್ಧ ಸೆಣಸಲು ವಿಶೇಷ ಪಡಿತರ ವಿತರಣೆ ಎಂದು ಜಾಹೀರಾತು ಪ್ರಚಾರ ಪಡೆದಿದ್ದರೂ ಈಗ ಸಿಗುತ್ತಿರುವ ಪ್ರಮಾಣ ಸಾಮಾನ್ಯ ಸಂದರ್ಭಕ್ಕಿಂತ ಕಡಿಮೆ. “ಐದು ಜನರಿರುವ ಕುಟುಂಬಕ್ಕೆ ತಲಾ ಐದು ಕೆಜಿಯಂತೆ 25 kg, ಜೊತೆಗೆ ಪ್ರತಿ ಕಾರ್ಡ್ ಗೆ 2 kg ಗೋಧಿ ಒಟ್ಟು 27 kg ಅಂದರೆ ಖೋತಾ 8 kg ” ಎಂದು ಗಮನ ಸೆಳೆದವರು ಎಂ.ಪುಟ್ಟಮಾದು. ಇವರು ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ಜಿಲ್ಲಾಧ್ಯಕ್ಷರು.

ಹಾಲು ಕರೆಯದೇ ಇರುವ ಹಸುವಿಗೆ ಕಡಿಮೆ ಪಶು ಆಹಾರ ನೀಡುವಂತೆ ದುಡಿಮೆ ಇಲ್ಲದಿದ್ದಾಗ ಕಡಿಮೆ ಆಹಾರ ಧಾನ್ಯ ಸಾಕು ಎಂದು ಸರ್ಕಾರಗಳು ಚಿಂತಿಸಿರಬಹುದು! ಮಂಡ್ಯ ಜಿಲ್ಲೆಯ ಒಟ್ಟು ಕುಟುಂಬಗಳ ಪೈಕಿ ಶೇಕಡಾ 89 ರಷ್ಟು ಬಿಪಿಎಲ್ ಕುಟುಂಬಗಳು. ಎಪಿಎಲ್ ಕುಟುಂಬಗಳ ಪ್ರಮಾಣ ಶೇಕಡಾ11 ಮಾತ್ರ. ಮಾದರಿ ಮೈಸೂರಿನ ಭಾಗವಾಗಿ ಸ್ವತಂತ್ರಪೂರ್ವದಲ್ಲೇ ಯೋಜನಾಬದ್ಧವಾದ ಆರ್ಥಿಕತೆಗೆ ಒಳಪಟ್ಟಿದ್ದ ಈ ಜಿಲ್ಲೆ ಜಾಗತೀಕರಣ ಧೋರಣೆಗಳ ಬಲಿಪಶುವಾಗಿ ಸಾರ್ವತ್ರಿಕ ಆಹಾರ ಅಭದ್ರತೆಗೆ ತುತ್ತಾಗಿರುವುದನ್ನು ಈ ಅಂಕಿಅಂಶ ಎತ್ತಿ ತೋರಿದೆ.

ಪುಟ್ಟಲಿಂಗಮ್ಮನ ಮನೆ ತುಂಬಿ ತುಳುಕುತ್ತಿರುವಂತೆ ಇಡೀ ಗ್ರಾಮಗಳೇ ತುಂಬಿ ತುಳುಕುತ್ತಿವೆ. ಗ್ರಾಮಕ್ಕೆ ಈಗ ಯೌವ್ವನ ಮರುಕಳಿಸಿದೆ. “ರಜಾ ಇಲ್ಲ ಎಂದು ಸಾವಿಗೂ ಕೂಡ ಬರದಿದ್ದವರು ಊರ ತುಂಬ ಹರಡಿಕೊಂಡಿದ್ದಾರೆ” ಎಂದವರು ವಳೆಗೆರೆಹಳ್ಳಿ ಗ್ರಾಮದ ರಾಮಣ್ಣ. ಅವಿಭಕ್ತ ಕುಟುಂಬ ಅಪರೂಪವಾಗಿದ್ದ ಸಾಮಾಜಿಕ ವಿದ್ಯಮಾನಕ್ಕೆ ಕೋವಿಡ್-19 ರ ಸಂಕಟ ಒಂದು ಅಪವಾದವಾಗಿದೆ. ಬೆಂಗಳೂರಿನಲ್ಲಿ ದುಡಿಯುತ್ತಿದ್ದೇನೆ, ಇಲ್ಲಿ ನನಗೆ ಮನೆ ಬೇಡ, ಸೈಟು ಕೊಟ್ಬಿಡಿ, ಮಾರಿಕೊಂಡು ಜೀವನ ಕಟ್ಟಿಕೊಳ್ಳುತ್ತೇನೆ ಎಂದು ಕಡ್ಡಿ ಮುರಿದಂತೆ ಹೇಳಿದ್ದವರು ಕೂಡ ಊರಿಗೆ ಮರಳಿದ್ದಾರೆ‌. “ಕಾಯಿಲೆ ಭಯದಿಂದ ಬಂದವರಿಗೆ ಆಸರೆ ಒದಗಿಸಿರುವ ಅವರದೇ ಅಣ್ಣ-ತಮ್ಮಂದಿರು ಮನೆಯ ಕುಟುಂಬದವರು, ಮಕ್ಕಳು ಎಲ್ಲರೂ ಜೊತೆಗೂಡಿ ಬೆರೆಯುತ್ತಿದ್ದಾರೆ” ಎನ್ನುತ್ತಾರೆ ಅಜ್ಜಹಳ್ಳಿ ಗ್ರಾಮದ ಪಂಚಾಯತಿ ಸದಸ್ಯ ಬಸವರಾಜು.

ಹಬ್ಬ-ಮದುವೆ ಮುಂತಾದ ಕಾರ್ಯಕಟ್ಟಳೆಗಳಿಗೆ ಮಾತ್ರ ಬರುತ್ತಿದ್ದವರು ಈಗ ಬಂದಿದ್ದಾರೆ. ಪೇಟೆಗಳಲ್ಲಿ ತಿಂದುಂಡು ರುಚಿ ನೋಡಿದವರು ಸುಮ್ಮನಿದ್ದಾರೆಯೇ; ಊರಿನಲ್ಲಿ ಮೇಕೆ-ಕುರಿ ಮಾಂಸಕ್ಕೆ ಬೇಡಿಕೆ ಸೃಷ್ಟಿಸಿದ್ದಾರೆ. “ಬೆಂಗಳೂರಿನಿಂದ ಬಂದವರಿಂದಾಗಿಯೇ ರೂ 400 -450 ಇದ್ದ ಕೆಜಿ ಮಟನ್ ರೂ 600-700 ಕ್ಕೆ ಜಿಗಿದಿದೆ” ಎಂದು ತೊರೆಶೆಟ್ಟಹಳ್ಳಿ ರಾಮಣ್ಣ ಹೇಳುತ್ತಾರೆ. “ಒಂದೇ ಸ್ಥಳದಲ್ಲಿ 22 ಮೇಕೆ -ಟಗರು ಕಡಿದಿರುವುದಕ್ಕೆ ನಾನು ಸಾಕ್ಷಿಯಾಗಿದ್ದೇನೆ. ಈ ಪ್ರಮಾಣದಲ್ಲಿ ನಮ್ಮೂರಿನಲ್ಲಿ ಮಾಂಸಕ್ಕೆ ಬೇಡಿಕೆ ಬಂದಿದೆ” ಎಂದು ವಳೆಗೆರಹಳ್ಳಿ ಗ್ರಾಮದ ಅಲೋಕ್ ಅಶ್ಚರ್ಯ ವ್ಯಕ್ತಪಡಿಸಿದರು.

ಗ್ರಾಮಗಳಲ್ಲಿ ಸಾಮರಸ್ಯದ ಬೆಸುಗೆಯೇ ಮಾಂಸಾಹಾರ ಊಟ. ಇದೊಂದು ಸಾಂಸ್ಕೃತಿಕ ಆಯಾಮದ ವಿಷಯ. ಔತಣದ ಊಟದಲ್ಲಿ ಮುನಿಸು ದೂರಾಗುವುದು ಒಂದು ಸಾಮಾನ್ಯ ಸಂಗತಿ. ಕೋವಿಡ್ ಸಂಕಟವು ಕುಟುಂಬಗಳ ಬೆಸುಗೆಗೆ ಒಂದು ಅವಕಾಶವಾಗಿದೆ. ಬೆಸುಗೆಯಲ್ಲಿ ಮಾಂಸಹಾರ ಊಟ ವಹಿಸುತ್ತಿರುವ ಪಾತ್ರವನ್ನು ಯಾರೂ ಕೂಡ ತಳ್ಳಿ ಹಾಕುವಂತಿಲ್ಲ. ಬೀಗರ ಊಟಕ್ಕೆ ಕರೆಯುವುದನ್ನು ಮರೆಯಬೇಡ ಎಂದು ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿಯವರಿಗೆ ಹೇಳುವ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಚನ್ನಪಟ್ಟಣ ತಾಲೂಕಿನ ವ್ಯಕ್ತಿಯೊಬ್ಬರ ಈ ವಿಡಿಯೋ ಕುಮಾರಸ್ವಾಮಿಯವರ ಮಗನ ಮದುವೆ ಹಿನ್ನಲೆಯಲ್ಲಿ ಹರಿದಾಡಿದ್ದು ಸಂಬಂಧಗಳಲ್ಲಿ ಮಾಂಸಹಾರಕ್ಕಿರುವ ಪಾತ್ರಕ್ಕೆ ಉದಾಹರಣೆ. ಹೀಗೆ ಕೋವಿಡ್-19 ರ ಲಾಕ್ ಡೌನ್, ಗ್ರಾಮ ಭಾರತದ ತಲ್ಲಣ -ಸಾಮರಸ್ಯದ ರಂಗಸ್ಥಳವಾಗಿದೆ.

  •  ಟಿ ಯಶವಂತ, ಮದ್ದೂರು ತಾಲೂಕಿನ ತೊರೆಶೆಟ್ಟಿಹಳ್ಳಿಯಲ್ಲಿ ವಾಸವಾಗಿರುವ ಯಶವಂತ್‌, ಹೊಸ ತಲೆಮಾರಿನ ಸಾಮಾಜಿಕ ಕಾರ್ಯಕರ್ತರ ಪೈಕಿ ಮುಂಚೂಣಿಯಲ್ಲಿರುವ ಗುಂಪಿನಲ್ಲಿ ಅಷ್ಟು ಸದ್ದು ಮಾಡದೇ ಕೆಲಸ ಮಾಡಿಕೊಂಡು ಹೋಗುತ್ತಿದ್ದಾರೆ. ವಿದ್ಯಾರ್ಥಿಯಾಗಿದ್ದಾಗಿನಿಂದಲೂ ಸಕ್ರಿಯವಾಗಿರುವ ಅವರು ಈ ಸದ್ಯ ಪ್ರಾಂತ ರೈತ ಸಂಘದ ಸಂಘಟಕರು. ಬೇರು ಮಟ್ಟದ ಬೆಳವಣಿಗೆಗಳನ್ನು ಜಾಗತಿಕ ರಾಜಕೀಯಾರ್ಥಿಕತೆಯ ಹಿನ್ನೆಲೆಯಲ್ಲಿ ವಿಶ್ಲೇಷಿಸುವ ಯಶವಂತ್‌ ತುಂಬಾ ಗಂಭೀರವಾಗಿ ಬರೆದುಬಿಡುತ್ತಾರೆ ಎಂಬ ಆತಂಕವನ್ನು ಹೋಗಲಾಡಿಸುವಂತೆ ಮೊದಲ ಕಂತು ಬರೆದಿದ್ದಾರೆ. ಮಂಡ್ಯದ ಸೊಗಡಿನ ಕನ್ನಡ ಮಾತನಾಡುವ ಅವರು ಅದೇ ಯಾಸೆಯಲ್ಲಿ ಹಳ್ಳಿ ಕಥೆಗಳನ್ನು ಬರೆಯಲಿ ಎಂಬುದು ನಮ್ಮಾಸೆ.
ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights