ಆರೋಗ್ಯ ಇಲಾಖೆ ನಿರ್ಲಕ್ಷ್ಯ: ಕೊರೊನಾ ಸೋಂಕಿತ ವೃದ್ದೆಯನ್ನು ಮನೆಯಲ್ಲೇ ಬಿಟ್ಟು ಹೋದ ಸಿಬ್ಬಂದಿ
ಉತ್ತರ ಕರ್ನಾಕದ ಜಿಲ್ಲೆಗಳಲ್ಲಿ ಆರೋಗ್ಯ ಇಲಾಖೆಯ ನಿರ್ಲಕ್ಷ್ಯಗಳಿಗೆ ಮಿತಿಯೇ ಇಲ್ಲದಂತಾಗಿದೆ. ಕಳೆದ ವಾರವಷ್ಟೇ ಕೊರೊನಾ ಸೋಂಕಿಗೆ ಒಳಗಾಗಿ ಸಾವನ್ನಪ್ಪಿದ್ದವರ ಶವಗಳನ್ನು ಗುಂಡಿಗೆ ಎಸೆದು ಹೋಗಿದ್ದ ಅಮಾನವೀಯ ಘಟನೆ ಬಳ್ಳಾರಿ ಜಿಲ್ಲೆಯಲ್ಲಿ ನಡೆದಿತ್ತು. ಇದರ ಬೆನ್ನಲ್ಲೇ ನಿನ್ನೆ ಕಲಬುರ್ಗಿಯಲ್ಲಿ ಕೊರೊನಾ ಪಾಸಿಟಿವ್ ಬಂದ ವೃದ್ಧೆಯನ್ನು ಆಸ್ಪತ್ರೆಗೆ ಕೊಂಡೊಯ್ಯದೆ ಮನೆಯಲ್ಲೇ ಬಿಟ್ಟು ಹೋಗಿರುವ ಘಟನೆ ನಡೆಸಿದೆ.
ವೃದ್ಧೆಯಲ್ಲಿ ಕೊರೊನಾ ಲಕ್ಷಣಗಳು ಕಂಡುಬಂದ ಹಿನ್ನಲೆಯಲ್ಲಿ ಅವರನ್ನು ಪರೀಕ್ಷೆಗೆ ಒಳಪಡಿಸಲಾಗಿದ್ದು, ಸೋಂಕು ತಗುಲಿರುವುದು ದೃಢಪಟ್ಟಿದೆ.
ಸೋಂಕಿತ ವೃದ್ದೆಯು ಕಲಬುರ್ಗಿಯ ಅತ್ತರ್ ಕಂಪೌಂಡ್ನ ಮೂರನೇ ಮಹಡಿಯಲ್ಲಿರುವ ವಾಸವಾಗಿದ್ದು, ಕೆಲವಾರಗಳ ಹಿಂದೆ ಕಾಲು ಮುರಿದಿತ್ತು. ಆ ಕಾರಣದಿಂದಾಗಿ ಆಕೆಓಡಾಡುವ ಪರಿಸ್ಥಿತಿಯಲ್ಲಿ ಇರಲಿಲ್ಲ. ಅಲ್ಲದೆ, ಆಕೆಯ ಜೊತೆಗಿದ್ದ ಇಬ್ಬರು ಮಹಿಳೆಯರಿಗೂ ಆಕೆಯನ್ನು ರಸ್ತೆಗೆ ಕರೆತರಲು ಸಾಧ್ಯವೂ ಇರಲಿಲ್ಲ. ಇದರಿಂದಾಗಿ ಆರೋಗ್ಯ ಸಿಬ್ಬಂದಿ ಆಕೆಯನ್ನು ಕರೆತರಲು ನಿರಾಕರಿಸಿದ್ದು, ವೃದ್ದೆಯ ಮನೆಯವರೇ ಆಕೆಯನ್ನು ಕರೆತಂದು ಆ್ಯಂಬುಲೆನ್ಸ್ ನಲ್ಲಿ ಕೂರಿಸಿದರೆ ಮಾತ್ರ ಕರೆದುಕೊಂಡು ಹೋಗುವುದಾಗಿ ಹಟಕ್ಕೆ ಬಿದ್ದ ಸಿಬ್ಬಂದಿ ಆಕೆಯನ್ನು ಮನೆಯಲ್ಲಿಯೇ ಬಿಟ್ಟು ಹೋಗಿದ್ದಾರೆ. ಬೆಳಿಗ್ಗೆ ಫೋನ್ ಮಾಡಿದರೂ ಸಹ ಸರಿಯಾದ ರೀತಿಯಲ್ಲಿ ಸ್ಪಂದಿಸಿಲ್ಲ. ಬಂದು ಕರೆದೊಯ್ಯುತ್ತಾರೆ ಬಿಡಿ ಎಂದ ನಿರ್ಲಕ್ಷ್ಯದ ಉತ್ತರ ಬಂದಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಕೊರೋನಾ ಸೋಂಕು ದೃಢಪಟ್ಟಿರುವ 70 ವರ್ಷದ ವೃದ್ಧೆ ಇನ್ನೂ ಮನೆಯಲ್ಲಿಯೇ ಇದ್ದಾರೆ. ಆಕೆಗೆ ಏನಾದರೂ ಸಮಸ್ಯೆಯಾದರೆ ಎಂದು ಕುಟುಂಬದ ಸದಸ್ಯರು ಆತಂಕಗೊಂಡಿದ್ದಾರೆ. ಆರೋಗ್ಯ ಇಲಾಖೆ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆರೋಗ್ಯ ಇಲಾಖೆ ಸಿಬ್ಬಂದಿ ಮಾನವೀಯತೆ ಮರೆತು ವರ್ತಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

