‘ಇಂಗು ತಿಂದ ಮಂಗನಂತಾಗಿದೆ’ ಯಡಿಯೂರಪ್ಪ ಸರ್ಕಾರ: ಕುಮಾರಸ್ವಾಮಿ ಟೀಕೆ

ರಾಜ್ಯದಲ್ಲಿ ಒಂದು ವಾರದಿಂದ ಈಚೆಗೆ ಕೊರೊನಾ ಸೋಂಕಿತರ ಸಂಖ್ಯೆ ದ್ವಿಗುಣಗೊಳ್ಳುತ್ತಿದೆ. ವಿಪರೀತವಾಗಿ ಕೊರೊನಾ ವೈರಸ್‌ ಆಕ್ರಮಣ ನಡೆಸುತ್ತಿದೆ. ಕೊರೊನಾ ವೈರಸ್‌ ನಿಯಂತ್ರಿಸುವಲ್ಲಿ ವಿಫಲವಾಗಿರುವ ಸರ್ಕಾರ ‘ಇಂಗು ತಿಂದ ಮಂಗನಂತಾಗಿದೆ’ ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಟೀಕಿಸಿದ್ದಾರೆ.

ಸರ್ಕಾರ ಕೊರೊನಾ ಹರಡುವಿಕೆಯನ್ನು ನಿಯಂತ್ರಿಸುವಲ್ಲಿ ಸೂಕ್ತ ಕ್ರಮಗಳನ್ನು ಕೈಗೊಳ್ಳುತ್ತಿಲ್ಲ. ಬದಲಾಗಿ ಸಚಿವರು ಒಳಗೊಳಗೇ ತಿಕ್ಕಾಟದಲ್ಲಿ ಮುಳುಗಿದ್ದಾರೆ. ಇದರಿಂದಾಗಿ ಜನರು ಹೈರಾಣಾಗಿದ್ದಾರೆ. ಕೊರೋನಾ ಪರಿಸ್ಥಿತಿಯ ನಿರ್ವಹಣೆಗೆ ನಾನು ಕೊಟ್ಟ ಸಲಹೆಗಳನ್ನು ರಾಜ್ಯ ಸರ್ಕಾರ ಲಘುವಾಗಿ ಪರಿಗಣಿಸಿದೆ. ಇನ್ನಾದರೂ ಮುಖ್ಯಮಂತ್ರಿ ಯಡಿಯೂರಪ್ಪ ಎಚ್ಚೆತ್ತುಕೊಳ್ಳಲಿ ಎಂದು ಹೆಚ್​.ಡಿ. ಕುಮಾರಸ್ವಾಮಿ ಟ್ವೀಟ್ ಮೂಲಕ ಕಿಡಿಕಾರಿದ್ದಾರೆ.

ರಾಜ್ಯದಲ್ಲಿ ಕೊರೋನಾ ಸೋಂಕು ಪೀಡಿತರು ಆಸ್ಪತ್ರೆಯಲ್ಲಿ ಬೆಡ್​ಗಳಿಲ್ಲದೆ, ಚಿಕಿತ್ಸೆ ಇಲ್ಲದೆ ಮನೆಯಲ್ಲೇ ನರಳಿ ಸಾಯುತ್ತಿದ್ದಾರೆ. ಆರಂಭಿಕ ಹಂತದಲ್ಲೇ ಕೋವಿಡ್-19 ನಿರ್ವಹಣೆಯಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಕಳೆದ ಮೂರು ತಿಂಗಳಿಂದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸೇರಿದಂತೆ ಎಲ್ಲ ಸಚಿವರು ಮಾತಿನ ಮಂಟಪ ಕಟ್ಟುವುದರಲ್ಲಿ ಕಾಲ ಕಳೆದರೇ ವಿನಃ ರಾಜ್ಯದ ಪರಿಸ್ಥಿತಿ ಸುಧಾರಿಸುವತ್ತ ಗಮನ ಕೊಡಲಿಲ್ಲ ಎಂದು ಹೆಚ್​.ಡಿ. ಕುಮಾರಸ್ವಾಮಿ ಆರೋಪಿಸಿದ್ದಾರೆ.

ಸರ್ಕಾರ ಈಗ ಇಂಗು ತಿಂದ ಮಂಗನಂತಾಗಿದ್ದು, ಸೋಂಕಿತರ ಸಂಖ್ಯೆಯ ಗಣನೀಯ ಏರಿಕೆಯನ್ನು ತಡೆಯಲು ಪೇಚಾಡುತ್ತಿದೆ. ಪಕ್ಕದ ರಾಜ್ಯವಾದ ಕೇರಳ ಸರ್ಕಾರ ಕೊರೋನಾ ತಡೆಗೆ ಕೈಗೊಂಡ ಕ್ರಮಗಳ ‘ಸಿದ್ದ’ ಮಾದರಿ ನಮ್ಮ ಕಣ್ಣೆದುರಿಗಿದೆ. ಆದರೆ, ನಮ್ಮ ರಾಜ್ಯದ ಸಚಿವರಲ್ಲಿ ಸಮನ್ವಯವಿಲ್ಲ, ಒಬ್ಬೊಬ್ಬರದು ಒಂದೊಂದು ನಿಲುವು. ಇವರ ತಿಕ್ಕಾಟದಲ್ಲಿ ರಾಜ್ಯದ ಜನತೆ ಹೈರಾಣಾಗಿದ್ದಾರೆ ಎಂದು ಹೆಚ್​ಡಿಕೆ ಟೀಕಿಸಿದ್ದಾರೆ.

ಕೊರೋನಾ ಸೋಂಕು ಶರವೇಗದಲ್ಲಿ ಎಲ್ಲೆಡೆ ವ್ಯಾಪಿಸುತ್ತಿರುವ ಪ್ರಸಕ್ತ ಸನ್ನಿವೇಶದಲ್ಲಿ ರಾಜ್ಯದಾದ್ಯಂತ ಸೋಂಕಿತರು ಚಿಕಿತ್ಸೆಯಿಲ್ಲದೆ ಸಾಯುತ್ತಿರುವ ಘಟನೆಗಳು ಕರುಳು ಹಿಂಡುತ್ತಿವೆ. ಸರ್ಕಾರ ಇನ್ನೂ ಮೈಮರೆತರೆ ಸೋಂಕಿತರು ಬೀದಿಯಲ್ಲಿ ಸಾಯುವ ಸ್ಥಿತಿ ನಿರ್ಮಾಣವಾಗುತ್ತದೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಎಚ್ಚರಿಕೆ ನೀಡಿದ್ದಾರೆ.

ಸರ್ಕಾರ ಇನ್ನಾದರೂ ಸಮರೋಪಾದಿಯಲ್ಲಿ ಕಾರ್ಯಪ್ರವೃತ್ತವಾಗಲಿ. ಕೊರೋನಾ ಸಮರ್ಪಕ ನಿರ್ವಹಣೆಗೆ ನಾನು ಕೊಟ್ಟ ಹತ್ತಾರು ಸಲಹೆಗಳನ್ನು ಲಘುವಾಗಿ ಪರಿಗಣಿಸಿದ ರಾಜ್ಯ ಸರ್ಕಾರ ಇನ್ನಾದರೂ ಎಚ್ಚೆತ್ತುಕೊಳ್ಳಲಿ ಎಂದು ಹೆಚ್​.ಡಿ. ಕುಮಾರಸ್ವಾಮಿ ರಾಜ್ಯ ಸರ್ಕಾರದ ಮೇಲೆ ಚಾಟಿ ಬೀಸಿದ್ದಾರೆ.


ಇದನ್ನೂ ಓದಿರಾಮನಗರವನ್ನು ರಕ್ಷಿಸದಿದ್ದರೆ ಬೀದಿಗಿಳಿಯುವೆ: ಅನಿತಾ ಕುಮಾರಸ್ವಾಮಿ

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights