ಎರಡು ಹೆಜ್ಜೆ ಮುಂದಿಟ್ಟಿದ್ದ ಚೀನಾ ಒಂದು ಹೆಜ್ಜೆ ಹಿಂದೆ ಸರಿದರೆ, ಹಿನ್ನೆಡೆಯೋ? ಮುನ್ನೆಡೆಯೋ?

ನಿನ್ನೆಯಿಂದ ಎಲ್ಲಾ ಮಾಧ್ಯಮಗಳು ಗಾಲ್ವಾನ್ ಪ್ರಾಂತ್ಯದಿಂದ ಚೀನಾ ಸೈನಿಕರು ಹಿಂದೆ ಸರಿಯುತ್ತಿದ್ದಾರೆ ಎಂದು ವರದಿ ಮಾಡುತ್ತಿವೆ. ಭಾರತ ಮತ್ತು ಚೀನಾದ ವಿಶೇಷ ಪ್ರತಿನಿಧಿಗಳಾದ ಅಜಿತ್ ದೋವಲ್ ಹಾಗು ವಾಂಗ್ ಯೀ ಟೆಲಿಫೋನ್ ಮಾತುಕತೆ ನಡೆಸಿದ ನಂತರ ಈ ಬೆಳವಣಿಗೆಯಾಗಿವೆ ಎಂದು ಹೇಳಲಾಗುತ್ತಿದೆ. ಈ ಸಮಯದಲ್ಲಿ ಎರಡು ಹೆಜ್ಜೆ ಮುಂದಿಟ್ಟಿದ್ದ ಚೀನಾ ಒಂದು ಹೆಜ್ಜೆ ಹಿಂದೆ ಸರಿದರೆ, ಅದು ಹಿನ್ನೆಡೆಯೋ? ಮುನ್ನೆಡೆಯೋ? ಎಂದುಆವಲೋಕಿಸಬೇಕಾಗಿದೆ.

ಆದರೆ ಎರಡು ದೇಶಗಳ ಸರ್ಕಾರಗಳು ಈವರೆಗೆ ಯಾವ ಅಧಿಕೃತ ಹೇಳಿಕೆಗಳನ್ನು ನೀಡಿಲ್ಲ. ಬದಲಿಗೆ ಭಾರತೀಯ ಮಾಧ್ಯಮಗಳು ಸೇನೆಯಲ್ಲಿನ ಅನಾಮಿಕ ಸರ್ಕಾರಿ “ಮೂಲಗಳನ್ನು” ಆಧರಿಸಿ ವರದಿ ಮಾಡಿವೆ. ಎಲ್ಲಾ ಮಾಧ್ಯಮಗಳಲ್ಲೂ ಈ ಸುದ್ದಿ ಏಕಕಾಲದಲ್ಲಿ ಪ್ರಕಟವಾಗಿರುವುದು ನೋಡಿದರೆ ಕೇಂದ್ರ ಸರ್ಕಾರ ಮತ್ತು ಸೇನೆಯು ಈ ಮೂಲಗಳಿಗೆ ಅನಾಮಿಕವಾಗಿ ಹೇಳಿಕೆ ನೀಡಲು ಅಧಿಕೃತ ಅನುಮತಿ ನೀಡಿರುವುದು ಸ್ಪಷ್ಟವಾಗಿದೆ. ಆದರೆ ಅಧಿಕೃತವಾದ ಹೇಳಿಕೆ ಏಕಿಲ್ಲ ಎಂಬ ಪ್ರಶ್ನೆ ಸಹಜವಾಗಿ ಹುಟ್ಟುತ್ತದೆ.

ಆದ್ದರಿಂದಲೇ ಭಾರತೀಯ ಸೇನೆಯ ನಿವೃತ್ತ ಕರ್ನಲ್ ಅಜಯ್ ಶುಕ್ಲಾ ಅವರು ಈ ಸುದ್ದಿಯ ಬಗ್ಗೆ ಕೆಲವು ಗಂಭೀರ ಪ್ರಶ್ನೆಗಳನ್ನು ಎತ್ತಿದ್ದಾರೆ :

ಈ ಸುದ್ದಿಯು ನಿಜವೇ ಆಗಿದ್ದಲ್ಲಿ ನಾನು
ಅ) ಸರ್ಕಾರದ ಅಧಿಕೃತ ಹೇಳಿಕೆಯನ್ನು ನೋಡಬಯಸುತ್ತೇನೆ. ಅನಾಮಿಕ ಮೂಲದ ಸುದ್ದಿಯನ್ನಲ್ಲ.
ಆ) ಚೀನಿಯರು ಹಿಂದಿರುಗುತ್ತಿರುವುದನ್ನು ಧೃಡಪಡಿಸುವ ಉಪಗ್ರಹ ಚಿತ್ರ ಹಾಗು
ಇ ) ಭಾರತೀಯ ಸೈನಿಕರು ಹಿಂದೆ ಸರಿದಿದ್ದು ಎಲ್ಲಿಗೆ ಎಂಬ ಪ್ರಶ್ನೆಗಳಿಗೆ ಉತ್ತರ ಬಯಸುತ್ತೇನೆ ಎಂದು ಕರ್ನಲ್ ಕೇಳಿದ್ದಾರೆ.

ಇದರ ಜೊತೆಗೆ ದೇಶಭಕ್ತಿಗೂ ಮೋದಿಭಕ್ತಿಗೂ ವ್ಯತ್ಯಾಸ ಗೊತ್ತಿರುವವರಿಗೂ ಹಾಗು ತಮ್ಮ ಬುದ್ಧಿಯನ್ನು ಮತ್ತು ಕಾಮನ್ ಸೆನ್ಸನ್ನು ಇತರರಿಗೆ ಒಪ್ಪಿಸದವರಿಗೂ ಇನ್ನು ಕೆಲವು ಪ್ರಶ್ನೆಗಳು ಮೂಡುವುದು ಸಹಜ.

ಆ ಅನಾಮಿಕ ಮೂಲದ ಹೇಳಿಕೆಯ ಪ್ರಕಾರ ಭಾರತ ಸೇನೆಯು ಕೂಡಾ ಗಾಲ್ವಾನ್ ಘರ್ಷಣೆ ನಡೆದ PP 14 ಪ್ರದೇಶದಿಂದ 1.8 ಕಿ.ಮೀ ಯಷ್ಟು ಹಿಂದೆ ಸರಿದಿದೆ.

 

ಇದರ ಅರ್ಥವೇನು?

ಈವರೆಗೆ ಮೋದಿ ಸರ್ಕಾರವು ಗಾಲ್ವಾನ್ ಘರ್ಷಣೆ ನಡೆದ ಪ್ರದೇಶವು ( PP 14 ) ವಿವಾದಾತೀತವಾಗಿ ಭಾರತ ಪ್ರದೇಶವಾಗಿದೆಯೆಂದು, ಚೀನಾ ಭಾರತದ ಸರಹದ್ದಿನೊಳಗೆ ಅತಿಕ್ರಮ ಪ್ರವೇಶ ಮಾಡಿದ್ದರಿಂದ ಅಲ್ಲಿ ಘರ್ಷಣೆಯುಂಟಾಯಿತೆಂದು ಹೇಳಿಕೊಂಡು ಬಂದಿದೆ.

ಹಾಗಿದ್ದಲ್ಲಿ PP 14 ಪ್ರದೇಶದಿಂದ 1.8 ಕಿಮಿ ಭಾರತ ಮತ್ತು ಚೀನಾ ಎರಡು ಹಿಂದೆ ಸರಿದಿದೆ ಎಂದರೆ ಭಾರತವು ಕೂಡಾ ವಿವಾದೀತವಾಗಿ ತನ್ನ ಸುಪರ್ದಿನಲ್ಲಿದ್ದ ಪ್ರದೇಶವನ್ನು ಬಿಟ್ಟು ಹಿಂದೆ ಸರಿದಿದೆ ಎಂದಾಗಲಿಲ್ಲವೇ?

ಹಾಗಿದ್ದ ಮೇಲೆ ಮೋದಿಯವರು ಲಢಾಕ್ ಗೆ ಕೇವಲ ಭೇಟಿ ಕೊಟ್ಟ ಮಾತ್ರಕ್ಕೆ ಚೀನಿಯರು ಹೆದರಿ ಹಿಂದೆಸರಿದರು ಎಂಬ ಮೋದಿಭಕ್ತರ ಪ್ರಚಾರ ದೇಶದ್ರೋಹವಲ್ಲವೇ?

What was the deadly India-China border clash really about? | India ...

ಗಾಲ್ವಾನ್ ಪ್ರದೇಶಕ್ಕಿಂತ ಇನ್ನು ತೀವ್ರವಾದ ಗಡಿ ವಿವಾದವಿರುವ ಪ್ರದೇಶ ಪಾಂಗಾಂಗ್ ಸರೋವರ ಪ್ರದೇಶ .

ಅಲ್ಲಿ ಸರೋವರದ ಪೂರ್ವಭಾಗದ ಚೀನಾದ ಕಡೆ ಇರುವ ಫಿಂಗರ್ 8 ಎಂಬಲ್ಲಿ ಯವರೆಗೆ ಭಾರತ ತನ್ನ ಪ್ರದೇಶವೆಂದು ವಾದಿಸಿದರೆ , ಸರೋವರದ ಪಶ್ಚಿಮಕ್ಕೆ ಭಾರತದ ಕಡೆ ಇರುವ ಫಿಂಗರ್ 4ರ ವರೆಗೆ ತನ್ನ ಪ್ರದೇಶವೆಂದು ಚೀನಾ ವಾದಿಸುತ್ತದೆ.

ಫಿಂಗರ್ 4ಹಾಗೂ ಫಿಂಗರ್ 8 ರ ನಡುವೆ 8 ಕಿಮಿ ವ್ಯಾಪ್ತಿಯ ಪ್ರದೇಶವಿದ್ದು ಚೀನಾವು ಫಿಂಗರ್ 4 ರಿಂದ ಒಂದು ಕಿಮಿ ದೂರ ಮಾತ್ರ ಹಿಂದೆ ಸರಿದಿದೆ ಎಂದು ಭಾರತೀಯ ‌ಸೇನಾ ಮೂಲವು ತಿಳಿಸುತ್ತದೆ .

ಅಂದರೆ ಚೀನಾ ಸೈನಿಕರು ಈಗಲೂ ಭಾರತವು ತನ್ನದೆಂದು ಪ್ರತಿಪಾದಿಸುವ ಪ್ರದೇಶದಲ್ಲೇ ಇದ್ದಾರೆ…..

ಹಾಗಿದ್ದಲ್ಲಿ ಯಾರನ್ನು ಮರುಳು ಮಾಡುವ ಉದ್ದೇಶದಿಂದ ಮೋದಿ ಸರ್ಕಾರ, ಅದರ ಸಾಕುನಾಯಿ ಮಾಧ್ಯಮಗಳು ಮತ್ತು ಭಕ್ತರು ಗಡಿಯಲ್ಲೆಲ್ಲೂ ಕಾಣದ ಮೋದಿಯ ಗುಡುಗು-ಸಿಡಿಲು ಕಂಪನಗಳನ್ನೂ ಸೃಷ್ಟಿಸುತ್ತಿದ್ದಾರೆ?

ಒಂದು ದೀರ್ಘಕಾಲೀನ ಶಾಂತಿ ಮಾತುಕತೆಯ ಭಾಗವಾಗಿ ಈ ಬಗೆಯ ತಾತ್ಕಾಲಿಕ ಹಿಂದೆ ಸರಿಕೆಯಲ್ಲಿ ತಪ್ಪಿಲ್ಲ.

ಅದರಲ್ಲೂ ಭಾರತ ಮತ್ತು ಚೀನಾ ನಡುವೆ ಗಡಿ ಭಾಗಗಳು ನಿಖರವಾಗಿ ಗುರುತುಪಡಿಸಿಲ್ಲವಾದ್ದರಿಂದ ಇಂಥಾ ರಾಜತಾಂತ್ರಿಕ-ಸೈನಿಕ ಕ್ರಮಗಳಿಗೆ ಸರ್ಕಾರ ಮುಂದಾಗಬೇಕಾಗುತ್ತದೆ.

ಆದರೆ ಸತ್ಯಕ್ಕೆ ತದ್ವಿರುದ್ಧವಾದ ಹೇಳಿಕೆಯನ್ನು ಕೊಟ್ಟು ಜನರಲ್ಲಿ ರಾಜಕೀಯ ದುರುದ್ದೇಶಗಳಿಗೆ ಹುಸಿ ಗೆಲುವಿನ ಉನ್ಮಾದವನ್ನು ಸೃಷ್ಟಿಸುವುದು ತಪ್ಪು. ಅಷ್ಟೇ…

ಎಲ್ಲಕ್ಕಿಂತ ಹೆಚ್ಚಾಗಿ ಈ ಗಾಲ್ವಾನ್ ಮತ್ತು ಹಿಂದಿನ ದೋಕ್ಲಾಮ್ ಘರ್ಷಣೆಗಳಿಂದ ಮೋದಿ ಸರ್ಕಾರ ಸಾಕಷ್ಟು ಪಾಠಗಳನ್ನು ಕಲಿಯಬೇಕಿದೆ.

ಈ ಭೂಭಾಗದಲ್ಲಿ ಅಮೇರಿಕ ಸಾಮ್ರಾಟನ ಸಾಮಂತನಾಗಿ ಕೆಲಸ ಮಾಡುವುದು ಅಮೇರಿಕಾದ ಹಿತಾಸಕ್ತಿಗಳಿಗೆ ಪೂರಕವೇ ಹೊರತು ಭಾರತದ ಹಿತಾಸಕ್ತಿಗೆ ಮಾರಕವೆಂಬುದನ್ನು ಈಗಲಾದರೂ ಅರ್ಥಮಾಡಿಕೊಳ್ಳುವ ಅಗತ್ಯವಿದೆ.

ಅಲ್ಲವೇ?

– ಶಿವಸುಂದರ್


ಇದನ್ನೂ ಓದಿಮೋದಿ ಹೇಳಿಕೆ ಬಳಸಿಕೊಂಡು ಮೋದಿಗೇ ಆಪ್‌ ಇಟ್ಟ ಚೀನಾ:

Spread the love

Leave a Reply

Your email address will not be published. Required fields are marked *