Fact check: ಸಿಖ್ ಸೈನಿಕರನ್ನು ಭಾರತ ಸರ್ಕಾರ ಟಾರ್ಗೆಟ್ ಮಾಡಿದೆ ಎಂಬುದು ಎಡಿಟ್ ಮಾಡಲಾದ ವಿಡಿಯೋ

ಪ್ರಸ್ತುತ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿರುವ ಎಲ್ಲಾ ಸಿಖ್ ಸೈನಿಕರನ್ನು, ಅಧಿಕಾರಿಗಳನ್ನು ತೆಗೆದುಹಾಕಲು ಭಾರತ ಸರ್ಕಾರ ಯೋಜಿಸುತ್ತಿದೆ ಎಂಬ ಹೇಳಿಕೆಯೊಂದಿಗೆ ಆಘಾತಕಾರಿ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಸಿಖ್‌‌‌‌ ಸಮುದಾಯದ ವಿರುದ್ಧ ಸಭೆ ನಡೆಯುತ್ತಿದೆ ಎಂದು  ವೀಡಿಯೋವೊಂದು ಹರಿದಾಡುತ್ತಿದ್ದು ಈ ವೀಡಿಯೋ ಬಗ್ಗೆ ಸಾಕಷ್ಟು ಅನುಮಾನಗಳು ಹುಟ್ಟಿಕೊಂಡಿವೆ.

ವೈರಲ್ ವೀಡಿಯೊದಲ್ಲಿ ಕಂಡುಬರುವ ದೃಶ್ಯಗಳು ಡಿಸೆಂಬರ್ 08, 2021 ರಂದು ರಕ್ಷಣಾ ಸಿಬ್ಬಂದಿ ಮುಖ್ಯಸ್ಥ (CDS) ಜನರಲ್ ಬಿಪಿನ್ ಅವರ ಮರಣದ ನಂತರ ನಡೆದ ಭದ್ರತಾ ಕ್ಯಾಬಿನೆಟ್ ಸಮಿತಿಯ ಸಭೆಯ ದೃಶ್ಯಗಳಂತೆ ಕಂಡುಬಂದಿವೆ.  ತಮಿಳುನಾಡಿನಲ್ಲಿ ಹೆಲಿಕಾಪ್ಟರ್ ಅಪಘಾತದಲ್ಲಿ ರಾವತ್ ಬಿಪಿನ್ ನಿಧನ ಹೊಂದಿದ್ದರು.

CDS ಜನರಲ್ ಬಿಪಿನ್ ರಾವತ್, ಅವರ ಪತ್ನಿ ಮತ್ತು ಇತರ 11 ಮಂದಿ ಹೆಲಿಕಾಪ್ಟರ್ ಅಪಘಾತದಲ್ಲಿ ಪ್ರಾಣ ಕಳೆದುಕೊಂಡ ನಂತರ ನಡೆದ ಭದ್ರತಾ ಕ್ಯಾಬಿನೆಟ್ ಸಮಿತಿ ಸಭೆಯನ್ನು ಈ ವೀಡಿಯೊ ತೋರಿಸುತ್ತದೆ ಎಂದು ನಾವು ಕಂಡುಕೊಂಡಿದ್ದೇವೆ. ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ಈ ಸಭೆ ನಡೆದಿದೆ. ಗೃಹ ಸಚಿವ ಅಮಿತ್ ಶಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮತ್ತು ಎನ್‌ಎಸ್‌ಎ ಅಜಿತ್ ದೋವಲ್ ಸಭೆಯಲ್ಲಿ ಭಾಗವಹಿಸಿದ್ದರು.

ಪ್ರಧಾನಿ ನರೇಂದ್ರ ಮೋದಿ ಅವರ ಇತ್ತೀಚಿನ ಪಂಜಾಬ್ ಭೇಟಿಯ ಸಂದರ್ಭದಲ್ಲಿ ಭದ್ರತಾ ಲೋಪ ಸಂಭವಿಸಿದೆ ಎಂದು ಬಿಜೆಪಿ ಆಪಾದಿಸಿದ ನಂತರ ಈ ವೀಡಿಯೊ ಹೊರಹೊಮ್ಮಿದೆ ಎಂಬುದು ಗಮನಾರ್ಹ. ಸಾಮಾಜಿಕ ಜಾಲತಾಣಗಳ ಮೇಲ್ವಿಚಾರಣೆಯ ಸಮಯದಲ್ಲಿ, ಕೆಲವು ಟ್ವಿಟರ್ ಹ್ಯಾಂಡಲ್‌ಗಳು ನಕಲಿ ಅಥವಾ ಮಾರ್ಫ್ ಮಾಡಿದ ವೀಡಿಯೊವನ್ನು ಹಂಚಿಕೊಂಡಿರುವುದು ಕಂಡುಬಂದಿದೆ ಎಂದು ಪೊಲೀಸರು ಹೇಳಿದ್ದಾರೆ.

ಫ್ಯಾಕ್ಟ್ ಚೆಕ್
ಇದರ ಸತ್ಯಾಸತ್ಯತೆಯನ್ನು ತಿಳಿಯಲು ನಾವು ವೈರಲ್ ವೀಡಿಯೋ ಮತ್ತು CDS  ಜನರಲ್ ರಾವತ್ ಬಿಪಿನ್ ಅವರ ಮರಣಾ ನಂತರದ ನಡೆದ ಸಭೆಯ ವೀಡಿಯೋಗಳನ್ನು ಪರಿಶೀಲಿಸಿದಾಗ ಸಾಕಷ್ಟು  ಸಾಮ್ಯತೆಗಳಿರುವುದನ್ನು ನಾವು ಕಾಣಬಹುದಾಗಿದೆ.
“ಭದ್ರತಾ ಕುರಿತ ಕ್ಯಾಬಿನೆಟ್ ಸಮಿತಿಯ ಸಭೆಯಲ್ಲಿ ಭಾರತೀಯ ಸೇನೆಯಿಂದ ಸಿಖ್ಖರನ್ನು ತೆಗೆದುಹಾಕಲು ಕರೆ ನೀಡಲಾಗಿದೆ ಎಂಬ ವೈರಲ್ ವೀಡಿಯೊ ಹೇಳಿಕೆಯನ್ನು ಉಲ್ಲೇಖಿಸುವ ಟ್ವೀಟ್‌ನ ಪ್ರತಿಪಾದನೆ ನಕಲಿಯಾಗಿದೆ. ಅಂತಹ ಯಾವುದೇ ಚರ್ಚೆ ಹಾಗೂ ಸಭೆ ನಡೆದಿಲ್ಲ” PIB ಫ್ಯಾಕ್ಟ್ ಚೆಕ್ ಟ್ವೀಟ್ ಮಾಡಿದೆ.
ಧರ್ಮದ ಆಧಾರದ ಮೇಲೆ ವಿವಿಧ ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸುವ ಇಂತಹ ಕೃತ್ಯವು ಸೌಹಾರ್ದತೆ ಹಾಳು ಮಾಡುತ್ತದೆ ಮತ್ತು ಸಾರ್ವಜನಿಕ ನೆಮ್ಮದಿಗೆ ಭಂಗ ತರುತ್ತದೆ. ಈ ಕೃತ್ಯವು ಭಾರತೀಯ ದಂಡ ಸಂಹಿತೆಯ ಸೆಕ್ಷನ್ 153A ಅಡಿಯಲ್ಲಿ ಅಪರಾಧವಾಗಿದೆ ಎಂದು ಡಿಸಿಪಿ ಹೇಳಿದ್ದಾರೆ.

“ದ್ವೇಷವನ್ನು ಉತ್ತೇಜಿಸುವ ಮತ್ತು ಕೋಮು ಸೌಹಾರ್ದತೆಯನ್ನು ಪ್ರಚೋದಿಸುವ ದುರುದ್ದೇಶದಿಂದ, ವೀಡಿಯೊವನ್ನು ಮಾರ್ಫ್ ಮಾಡಲಾಗಿದೆ. ಜೊತೆಗೆ ಅದಕ್ಕೆ ಹೊಸ ವಾಯ್ಸ್‌ಓವರ್‌ ನೀಡಲಾಗಿದ್ದು, ಸಭೆಯು ಸಿಖ್ ಸಮುದಾಯದ ವಿರುದ್ಧವಾಗಿದೆ ಎಂದು ಬಿಂಬಿಸಲು ಪ್ರಯತ್ನಿಸಲಾಗಿದೆ” ಎಂದು ಉಪ ಪೊಲೀಸ್ ಆಯುಕ್ತ (IFSO) ಕೆಪಿಎಸ್ ಮಲ್ಹೋತ್ರಾ ಹೇಳಿದ್ದಾರೆ.

“ಇಂತಹ ವೀಡಿಯೊಗಳನ್ನು ನಂಬಬೇಡಿ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುವ ಮೊದಲು ಸರಿಯಾದ ಸತ್ಯಾಸತ್ಯತೆಯನ್ನು ಪರಿಶೀಲಿಸಿ” ಎಂದು ದೆಹಲಿ ಪೊಲೀಸರು ಸಾರ್ವಜನಿಕರಿಗೆ ಪತ್ರಿಕಾ ಹೇಳಿಕೆಯ ಮೂಲಕ ತಿಳಿಸಿದ್ದಾರೆ.

ಈ ವಿಡಿಯೊಗೆ ನೀಡಲಾಗಿರುವ ವಾಯ್ಸ್‌‌‌‌‌‌‌‌‌‌ ಒವರ್‌‌‌‌‌‌‌ ಕ್ಲಬ್ ಹೌಸ್‌‌ನಲ್ಲಿ ಮಾಡಿರುವ ಒಂದು ಚರ್ಚೆಯಾಗಿದೆ. ಈ ಚರ್ಚೆಯನ್ನು ಏರ್ಪಡಿಸಿದ್ದು, ಬಿಜೆಪಿ ಪರವಾಗಿ ಪ್ರೊಪಗಾಂಡ ಚಲಾವಣೆ ಮಾಡುವ ವೆಬ್‌ಸೈಟ್‌‌ನ ಸಂಪಾದಕಿ ನುಪುರ್‌ ಜೆ ಶರ್ಮಾ ಅವರಾಗಿದ್ದಾರೆ. ಈ ಚರ್ಚೆಯಲ್ಲಿ ಮಾತನಾಡಿದ್ದ ವ್ಯಕ್ತಿಯೊಬ್ಬ, ಸೇನೆಯಲ್ಲಿರುವ ಪ್ರತಿಯೊಬ್ಬ ಸಿಖ್ಖರನ್ನೂ ತೆಗೆದುಹಾಕಬೇಕು ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದನು. ಅ ವಾಯ್ಸ್ ಅನ್ನು ತೆಗೆದು ಕ್ಯಾಬಿನೆಟ್ ಸಭೆಯ ವಿಡಿಯೋಗೆ ಸೇರಿಸಿ ತಪ್ಪಾಗಿ ಹಂಚಿಕೊಳ್ಳಲಾಗಿದೆ.

ಪ್ರಸ್ತುತ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿರುವ ಎಲ್ಲಾ ಸಿಖ್ ಸೈನಿಕರನ್ನು ತೆಗೆದುಹಾಕಲು ಭಾರತ ಸರ್ಕಾರ ಯೋಜಿಸುತ್ತಿದೆ ಎಂಬ ಹೇಳಿಕೆಯೊಂದಿಗೆ  ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ ಎನ್ನಲಾಗುತ್ತಿರುವ ವೀಡಿಯೋ ನಕಲಿ ಎಂದು ಸಾಬೀತಾಗಿದೆ.


ಇದನ್ನು ಓದಿ: Fact Check: ಪಂಜಾಬ್‌ನಲ್ಲಿ ರದ್ದಾದ ರ್ಯಾಲಿಗೆ ಸಾವಿರಾರು ಜನ ಸೇರಿದ್ದರು ಎಂದು ಯುಪಿ ಫೋಟೊ ಹಂಚಿಕೊಳ್ಳಲಾಗುತ್ತಿದೆ

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.