Fact Check: ಪಂಜಾಬ್‌ನಲ್ಲಿ ರದ್ದಾದ ರ್ಯಾಲಿಗೆ ಸಾವಿರಾರು ಜನ ಸೇರಿದ್ದರು ಎಂದು ಯುಪಿ ಫೋಟೊ ಹಂಚಿಕೊಳ್ಳಲಾಗುತ್ತಿದೆ

ಪಂಜಾಬಿನ ಫಿರೋಜ್‌ಪುರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು  ಭಾಗವಹಿಸಲು ಉದ್ದೇಶಿಸಿದ್ದ ಸಾರ್ವಜನಿಕ ರ್ಯಾಲಿಗೆ ರೈತರು ಅಡ್ಡಿ ಪಡಿಸಿದ ಕಾರಣ ಸುಮಾರು 20ನಮಿಷಗಳ ಕಾಲ ಫ್ಲೈಓವರ್ ಮೇಲೆ ಸಿಕ್ಕಿಹಾಕಿಕೊಂಡ ಘಟನೆ ಇಡೀ ದೇಶದಲ್ಲಿ ವ್ಯಾಪಕವಾಗಿ ಚರ್ಚೆಯಾಗುತ್ತಿದೆ. ಈ ಕಾರಣಕ್ಕಾಗಿ ಪಂಜಾಬ್ ನ ಫಿರೋಜ್ ಪುರ್ ನಲ್ಲಿ ಹಮ್ಮಿಕೊಂಡಿದ್ದ ಚುನಾವಣಾ ರ್ಯಾಲಿಯನ್ನು ಮೊಟಕುಗೊಳಿಸಲಾಗಿದೆ ಎಂದು ಹೇಳಿಕೆ ಇರುವ ಫೋಟೋಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿವೆ.  5 ಜನವರಿ 2022 ರಂದು ನಡೆದ ಈ ಘಟನೆಯನ್ನು ಪಂಜಾಬ್ ಸರ್ಕಾರದ ಭದ್ರತಾ ವೈಫಲ್ಯ ಎಂದು ಬಿಜೆಪಿ ಆರೋಪಿಸಿದೆ. ಇದೇ ಸಂದರ್ಭದಲ್ಲಿ ಮೋದಿಯವರ ರ್ಯಾಲಿಗಾಗಿ ಸಾವಿರಾರು ಜನ ಭಾಗವಹಿಸಿದ್ದರು, ಆದರೆ ರದ್ದಾಯಿತು ಎಂದು ಕೆಲವರು ಫೋಟೊ ಮತ್ತು ವಿಡಿಯೋಗಳನ್ನು ಹಂಚಿಕೊಳ್ಳುತ್ತಿದ್ದಾರೆ.

ಈ ಘಟನೆಯು ಪಂಜಾಬ್‌ನಲ್ಲಿ ಅಧಿಕಾರದಲ್ಲಿರುವ ಕಾಂಗ್ರೆಸ್ ಮತ್ತು ವಿರೋದ ಪಕ್ಷ ಬಿಜೆಪಿ ನಡುವಿನ ವಾಕ್ಸಮರಕ್ಕೆ ಕಾರಣವಾಗಿದೆ. ಭದ್ರತಾ ಲೋಪಕ್ಕೆ ಪಂಜಾಬ್ ಸರ್ಕಾರವನ್ನು ಬಿಜೆಪಿ ದೂಷಿಸಿದರೆ, ಮೋದಿ ಅವರ ರ್ಯಾಲಿಯ ಸ್ಥಳದಲ್ಲಿ ಕಡಿಮೆ ಹಾಜರಾತಿ ಇದ್ದ ಕಾರಣ ಕಾರ್ಯಕ್ರಮವನ್ನು ರದ್ದುಗೊಳಿಸುವಂತೆ ಪ್ರಧಾನಿ ನರೇಂದ್ರ ಮೋದಿಯವರು ಆದೇಶಿಸಿದ್ದರು ಎಂದು ಕಾಂಗ್ರೆಸ್ ಹೇಳಿದೆ. ಹಾಗೂ ಪ್ರಧಾನ ಮಂತ್ರಿಯವರ ಭದ್ರತೆಗೆ ಎಲ್ಲ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿತ್ತು ಎಂದು ಪಂಜಾಬ್ ಮುಖ್ಯಮಂತ್ರಿ ಹೇಳಿದ್ದಾರೆ.

ಫ್ಯಾಕ್ಟ್ ಚೆಕ್

ಆದರೆ ಸಾಮಾಜಿಕ ಜಾಲತಾಣಗಳಲ್ಲಿ ಪ್ರಧಾನಿಗಳು ಭಾಗವಹಿಸಬೇಕಿದ್ದ ಪಂಜಾಬ್ ರ್ಯಾಲಿಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ಸಾರ್ವಜನಿಕರು ಭಾಗವಹಿಸಿದ್ದರು ಎಂದು ಪ್ರತಿಪಾದಿಸುತ್ತಿದ್ದಾರೆ. ಇದು ನಿಜವೇ ಎಂದು ತಿಳಿಯೋಣ.

ವೈರಲ್ ಆದ ಫೋಟೋಗಳನ್ನು ನಾವು ಗೂಗಲ್ ರಿವರ್ಸ್ ಸರ್ಚ್  ಮಾಡಿ ನೋಡಿದಾಗ ಭಾರಿ ಜನಸ್ತೋಮ ಇರುವ ಫೋಟೋ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಸಹರಾನ್ ಪುರ್ ಜಿಲ್ಲೆಯಲ್ಲಿ  ನಡೆಸಿದ ರ್ಯಾಲಿಯ ಫೋಟೋಗಳು ಎಂದು ತೋರಿಸುತ್ತಿದೆ.

4 ಜನವರಿ 2021 ರಂದು ಆದಿತ್ಯನಾಥ್ ಅವರು ತಮ್ಮ ಅಧಿಕೃತ ಟ್ವಿಟ್ಟರ್ ನಲ್ಲಿ ಪೋಸ್ಟ್ ಮಾಡಿದ ಇತರ ಕೆಲವು ಫೋಟೋಗಳೊಂದಿಗೆ ರಿವರ್ಸ್ ಸರ್ಚ್ ಅನ್ನು ಬಳಸಿ ಹುಡುಕಿದಾಗ ವೈರಲ್ ಆಗುತ್ತಿರುವ ಫೋಟೋಗಳು ಉತ್ತರ ಪ್ರದೇಶದಲ್ಲಿ ನಡೆದ ಕಾರ್ಯಕ್ರಮಕ್ಕೆ ಸಂಬಂಧಿಸಿವೆ ಎಂದು ತಿಳಿದುಬಂದಿದೆ.  ಫೋಟೋಗಳು ಯುಪಿಯ ಸಹರಾನ್‌ಪುರ ಜಿಲ್ಲೆಯ ದಿಯೋಬಂದ್‌ನಲ್ಲಿ ನಡೆದ ರ್ಯಾಲಿಯಲ್ಲಿ ತೆಗೆದಿರುವ ಪೋಟೋಗಳು ಎಂದು ಈ ಹಿಂದೆಯೆ ಹಲವರು ಟ್ವೀಟ್ ಮಾಡಿದ್ದಾರೆ.

ನಾವು ಈ ಸುದ್ದಿ ಮತ್ತು ಫೋಟೋಗಳಿಗೆ ಸಂಬಂಧಿಸಿದಂತೆ ಮತ್ತಷ್ಟು ಶೋಧ ನಡೆಸಿದಾಗ ನಮಗೆ ಲಭ್ಯವಾದ ಫೋಟೋಗಳೆಲ್ಲವು ಯೋಗಿ ಆದಿತ್ಯನಾಥ್ ಯುಪಿ ಯಲ್ಲಿ ನಡೆಸಿದ ಕಾರ್ಯಕ್ರಮಗಳ ಫೋಟೋಗಳದ್ದಾಗಿದೆ. ನಮಗೆ ಲಭಿಸಿರುವ ವರದಿಗಳ ಪ್ರಕಾರ, ಜನವರಿ 4 ರಂದು, ಆದಿತ್ಯನಾಥ್ ಅವರು ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್) ಕಮಾಂಡೋ ತರಬೇತಿ ಕೇಂದ್ರದ ಶಂಕುಸ್ಥಾಪನೆ ಮಾಡಿದ್ದಾರೆ ಮತ್ತು ದೇವಬಂದ್‌ನಲ್ಲಿ 200 ಕೋಟಿ ರೂಗಳ ಹಲವು ಅಭಿವೃದ್ಧಿ ಯೋಜನೆಗಳನ್ನು ಪ್ರಾರಂಭಿಸಿದ್ದಾರೆ ಎನ್ನುವ ವರದಿಗಳನ್ನು ಗಮನಿಸಬಹುದು. ಈ ಯಾವ ಕಾರ್ಯಕ್ರಮದಲ್ಲೂ ಪ್ರಧಾನಿ ನರೇಂದ್ರ ಮೋದಿಯವರು ಭಾಗವಹಿಸಿಲ್ಲ ಎಂಬುದು ಸ್ಪಷ್ಟವಾಗಿದೆ.

ಪಂಜಾಬ್ ನಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗವಹಿಸಬೇಕಿದ್ದ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಭಾಗಹಿಸಿಲ್ಲ ಎಂದು ಸಹ ಹಲವು ಮಾಧ್ಯಮಗಳು ವರದಿ ಮಾಡಿವೆ.

ಕಾರ್ಯಕ್ರಮಕ್ಕಾಗಿ ವಿವಿಧ ಜಿಲ್ಲೆಗಳಿಂದ ಪಕ್ಷದ ಬೆಂಬಲಿಗರನ್ನು ಕರೆದೊಯ್ಯುತ್ತಿದ್ದ ಹಲವಾರು ಬಸ್‌ಗಳನ್ನು ಪಂಜಾಬ್ ಪೊಲೀಸರು ವಿವಿಧ ಸ್ಥಳಗಳಲ್ಲಿ ತಡೆದಿದ್ದಾರೆ ಎಂದು ಪಂಜಾಬ್ ಬಿಜೆಪಿ ಅಧ್ಯಕ್ಷ ಅಶ್ವನಿ ಶರ್ಮಾ ಆರೋಪಿಸಿದ್ದಾರೆ. ಒಟ್ಟಾರೆ ಸಾಮಾಜಿಕ ಮಾಧ್ಯಮದಲ್ಲಿ ಹರುದಾಡುತ್ತಿರುವ ಫೋಟೋ ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್ ಅವರು ದಿಯೋಬಂದ್ ನಲ್ಲಿ ನಡೆಸಿದ ಸಾರ್ವಜನಿಕ ಸಭೆಯದ್ದಾಗಿದ್ದು, ಪಂಜಾಬ್ ನ ಫಿರೋಜ್ ಪುರ್ ನಲ್ಲಿ ನಡೆದ  ನರೇಂದ್ರ ಮೋದಿಯವರ ಕಾರ್ಯಕ್ರಮಕ್ಕೂ ವೈರಲ್ ಆಗಿರುವ ಫೋಟೋಗಳಿಗೂ ಯಾವ ಸಂಬಂಧವು ಇಲ್ಲ. ಆದರೆ ಈ ಫೋಟೋಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ತಪ್ಪಾಗಿ ಹಂಚಿಕೊಳ್ಳಲಾಗಿದೆ.


ಇದನ್ನು ಓದಿ : Fact Check : ಸಿಂಧೂತಾಯಿ ಸಪ್ಕಾಲ್‌ ಅವರ ಅಂತ್ಯಕ್ರಿಯೆಯಲ್ಲಿ ಸಚಿನ್ ತೆಂಡೂಲ್ಕರ್ ಭಾಗವಹಿಸಿದ್ದು ನಿಜವೆ.?

 

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.