Fact Check : ಸಿಂಧೂತಾಯಿ ಸಪ್ಕಾಲ್‌ ಅವರ ಅಂತ್ಯಕ್ರಿಯೆಯಲ್ಲಿ ಸಚಿನ್ ತೆಂಡೂಲ್ಕರ್ ಭಾಗವಹಿಸಿದ್ದು ನಿಜವೆ.?

ಇತ್ತೀಚೆಗೆ ನಿಧನರಾದ ಅನಾಥ ಮಕ್ಕಳ ತಾಯಿ ಎಂದೇ ಗುರುತಿಸಲಾದ ಸಮಾಜ ಸೇವಕಿ ಸಿಂಧೂತಾಯಿ ಸಪ್ಕಾಲ್‌ ಅವರ ಅಂತ್ಯಕ್ರಿಯೆಯಲ್ಲಿ ಭಾರತದ ಮಾಜಿ ಕ್ರಿಕೆಟ್ ಆಟಗಾರ ಸಚಿನ್ ತೆಂಡೂಲ್ಕರ್ ಅವರು ಭಾಗವಹಿಸಿ  ಆ ಮಹಾತಾಯಿಯ ಪಾರ್ಥೀವ ಶರೀರದ ಮೆರವಣಿಗೆಯಲ್ಲಿ ಹೆಗಲು ಕೊಟ್ಟು ನಡೆದಿದ್ದಾರೆ ಎಂಬ ಸುದ್ದಿ ಮತ್ತು ಫೋಟೋಗಳು ವೈರಲ್ ಆಗಿವೆ.  ಆದರೆ ನಾವು ಈ ಬಗ್ಗೆ ಪರಿಶೀಲನೆ ನಡೆಸಿದಾಗ ನಮಗೆ ಲಭ್ಯವಾಗಿರುವ ಮಾಹಿತಿ ಬೇರೆಯೇ ಇದೆ. ಅದೇನೆಂದು ತಿಳಿಯಲು ಮುಂದೆ ಓದಿ..

ವೈರಲ್ ಆಗಿರುವ ಸುದ್ದಿ ಮತ್ತು ಫೋಟೋದ ಜಾಡು ಹಿಡಿದು ಹೊರಟಾಗ ಲಭ್ಯವಾದ ಮಾಹಿತಿ ಏನೆಂದರೆ ಆ ಫೋಟೋ ಸಿಂಧೂತಾಯಿ ಸಪ್ಕಾಲ್ ಅವರ ಅಂತ್ಯಕ್ರಿಯೆಯ ಫೋಟೋ ಅಲ್ಲ. ಬದಲಿಗೆ 2019 ರ ಜನವರಿಯಲ್ಲಿ ತೆಂಡೂಲ್ಕರ್ ತಮ್ಮ ಕೋಚ್ ರಮಾಕಾಂತ್ ಅಚ್ರೇಕರ್ ಅವರ ಅಂತ್ಯಕ್ರಿಯೆಯಲ್ಲಿ ಮುಂಬೈನಲ್ಲಿ ಭಾಗವಹಿಸಿದ್ದಾಗ ವೈರಲ್ ಆದ ಫೋಟೋ ಎಂದು ತಿಳಿದುಬಂದಿದೆ.

ಸಿಂಧೂತಾಯಿ ಯವರು 4 ಜನವರಿ 2022 ರಂದು ಪುಣೆಯಲ್ಲಿ ಹೃದಯಾಘಾತದಿಂದ ನಿಧನರಾಗಿದ್ದರು. ಈ ಹಿನ್ನಲೆಯಲ್ಲಿ ಸಚಿನ್ ಅವರು ಮೃತ ದೇಹದ ಮೆರವಣಿಗೆಯಲ್ಲಿ ಹೆಗಲು ನೀಡಿದ್ದಾರೆ ಎಂಬ ಫೋಟೋ ಸಾಕಷ್ಟು ಶೇರ್ ಆಗಿತ್ತು. ಜೊತೆಗೆ ಆ ಪೋಸ್ಟ್ ನಲ್ಲಿ ಈ ಮರಾಠಿ ಭಾಷೆಯಲ್ಲಿ ಹೀಗೆ ಬರೆಯಲಾಗಿತ್ತು(ಅದನ್ನು ಇಲ್ಲಿ ಅನುವಾದಿಸಲಾಗಿದೆ) ‘ಇಂದು, ನಾನು ಪ್ರಶಸ್ತಿಗಳಿಗಿಂತ ಹೆಚ್ಚು ಕಾರ್ಯಗಳು ಮುಖ್ಯ ಎಂದು ಕಲಿತಿದ್ದೇನೆ. ಏಕೆಂದರೆ ಇಂದು ಪದ್ಮಶ್ರೀ ಪುರಸ್ಕೃತರೊಬ್ಬರಿಗೆ ಭಾರತ ರತ್ನ ಹೆಗಲು ಕೊಟ್ಟಿದೆ. ಸಂತಾಪಗಳು ಮಾಯ್’ ಎಂದಿತ್ತು, ಸಿಂಧುತಾಯಿ ಸಕ್ಪಾಲ್ ಅವರನ್ನು ಪ್ರೀತಿಯಿಂದ ಮಾಯ್ ಎಂದು ಕರೆಯಲಾಗುತ್ತಿತ್ತು. ಅವರು 2021 ರಲ್ಲಿ ಪದ್ಮಶ್ರೀ ಪ್ರಶಸ್ತಿಯನ್ನು ಪಡೆದಿದ್ದರು. ರಮಾಕಾಂತ್ ಅಚ್ರೇಕರ್ ಅವರು 2010 ರಲ್ಲಿ ಪದ್ಮಶ್ರೀಯನ್ನೂ ಪಡೆದಿದ್ದಾರೆ ಎಂಬುದನ್ನು  ನಾವು ಇಲ್ಲಿ ಗಮನಿಸಬಹುದು.

 

ಫ್ಯಾಕ್ಟ್ ಚೆಕ್

ನಮ್ಮ ತಂಡವು ಫೋಟೋಗಳ ಮೇಲೆ ರಿವರ್ಸ್ ಇಮೇಜ್ ಸರ್ಚ್ ಮಾಡಿದಾಗ ನಮಗೆ ಸಿಕ್ಕ ಮಾಹಿತಿ ಏನೆಂದರೆ ಈ  ಫೋಟೋಗಲ ಆಧಾರದಲ್ಲಿ 2019 ರಲ್ಲಿ ಹಲವು ವರದಿಗಳು ಪ್ರಕಟವಾಗಿರುವುದು ಕಂಡುಬಂದಿದೆ. ಇಂಡಿಯಾ ಟುಡೆಯಲ್ಲಿ ಜನವರಿ 3, 2019 ರಂದು ಸುದ್ದಿ ಪ್ರಕಟವಾಗಿದ್ದು “ ಸಚಿನ್ ತೆಂಡೂಲ್ಕರ್ ಅವರ ಕೋಚ್ ರಮಾಕಾಂತ್ ಅಚ್ರೆಕರ್ ನಿಧನ: ಮೆರವಣಿಗೆಯಲ್ಲಿ ಕ್ರಿಕೆಟ್ ದಿಗ್ಗಜ ಭಾಗಿ” ಎಂಬ ಸುದ್ದಿ ಸು್ದಿ ಬಿತ್ತರವಾಗಿರುವುದನ್ನು ಇಲ್ಲಿ ಕಾಣಬಹುದಾಗಿದೆ. ವೈರಲ್ ಆಗಿರುವ ಫೋಟೋವನ್ನು ಭಯಾನಿ ಎಂಬುವವರು ತಮ್ಮ Instagram ಪುಟದಲ್ಲಿ ಹಂಚಿಕೊಂಡಿದ್ದಾರೆ.

ವರದಿಯ ಪ್ರಕಾರ, ಹೆಸರಾಂತ ಕ್ರಿಕೆಟ್ ತರಬೇತುದಾರ ರಮಾಕಾಂತ್ ಅಂತ್ಯಕ್ರಿಯೆಯು ಜನವರಿ 3, 2019 ರಂದು ನಡೆಸಲಾಯಿತು. ರಮಾಕಾಂತ್ ಅವರು ವಯೋಸಹಜ ಕಾಯಿಲೆಗಳಿಂದ ನಿಧನರಾಗಿದ್ದರು. ಸಚಿನ್ ತೆಂಡೂಲ್ಕರ್ ಅವರು ತಮ್ಮ ಕೋಚ್‌ನ ಅಂತ್ಯಕ್ರಿಯೆಗೆ ಹಾಜರಾಗಿದ್ದರು ಎಂದು ವರದಿಲ್ಲಿ ತಿಳಿಸಲಾಗಿದೆ.

ಜನವರಿ 5 ರಂದು ಪುಣೆಯಲ್ಲಿ ನಡೆದ ಸಿಂಧುತಾಯಿ ಸಪ್ಕಾಲ್ ಅವರ ಅಂತ್ಯಕ್ರಿಯೆಯ ಸುದ್ದಿ ವರದಿಗಳು ಮತ್ತು ಚಿತ್ರಗಳನ್ನು ಸಹ ನಾವು ಪರಿಶೀಲಿಸಿದಾಗ, ಸಪ್ಕಾಲ್ ತಾಯಿ ಅವರ ಅಂತ್ಯಕ್ರಿಯೆಯಲ್ಲಿ ಸಚಿನ್ ತೆಂಡೂಲ್ಕರ್ ಭಾಗವಹಿಸಿದ ಯಾವ ವರದಿಗಳು ಲಭ್ಯವಾಗಿಲ್ಲ ಮತ್ತು ವೈರಲ್ ಆಗಿರುವ ಫೋಟೋಗಳನ್ನು ಸುಳ್ಳು ಮಾಹಿತಿಯೊಂದಿ ಹಂಚಿಕೊಂಡಿರುವುದು ತಪ್ಪಾಗಿದೆ.

ಅನಾಥ ಮಕ್ಕಳ ತಾಯಿ ಸಿಂಧುತಾಯಿ ಸಪ್ಕಾಲ್ ಬಗ್ಗೆ?

ಅನತಂಚಿ ಮಾಯೆ’ ಅಥವಾ ಅನಾಥ ಮಕ್ಕಳ ತಾಯಿ ಎಂದು ಪ್ರೀತಿಯಿಂದ ಕರೆಯಲ್ಪಡುವ ಸಿಂಧುತಾಯಿ ಸಪ್ಕಾಲ್ ಅವರು ಸಮಾಜ ಸೇವಕರಾಗಿದ್ದರು. ಅವರು ನವೆಂಬರ್ 14, 1948 ರಂದು ಜನಿಸಿದರು ಮತ್ತು ಜನವರಿ 4, 2022 ರಂದು ಪುಣೆಯಲ್ಲಿ ಕೊನೆಯುಸಿರೆಳೆದರು. ಅವರು ಪುಣೆಯಲ್ಲಿ ಅನಾಥಾಶ್ರಮವನ್ನು ನಡೆಸುತ್ತಿದ್ದರು – ಸನ್ಮತಿ ಬಾಲ ನಿಕೇತನ ಸಂಸ್ಥೆ. ಇಂಡಿಯನ್ ಎಕ್ಸ್‌ಪ್ರೆಸ್‌ನಲ್ಲಿ ಪ್ರಕಟವಾದ ವರದಿಯ ಪ್ರಕಾರ, ಸಿಂಧೂತಾಯಿ 1,000 ಕ್ಕೂ ಹೆಚ್ಚು ಅನಾಥ ಮಕ್ಕಳನ್ನು ದತ್ತು ತೆಗೆದುಕೊಂಡಿದ್ದಾರೆ. ಸಪ್ಕಲ್ ಅವರಿಗೆ 2021 ರಲ್ಲಿ ಪದ್ಮಶ್ರೀ ಪ್ರಶಸ್ತಿಯನ್ನು ನೀಡಲಾಗಿದೆ.


ಇದನ್ನು ಓದಿ: Fact Check: ಪಂಜಾಬ್ ಸಿಎಂ ಕ್ರೈಸ್ತ ಧರ್ಮಕ್ಕೆ ಮತಾಂತರ ಆಗಿದ್ದು ನಿಜವೇ..?

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights