FACT CHECK | ಸಂಭಾಲ್ ಮಸೀದಿ ಸಮೀಕ್ಷೆ ವೇಳೆ ಹಿಂದೂ ದೇವರ ಪ್ರತಿಮೆಗಳು ಪತ್ತೆಯಾಗಿವೆಯೇ?
ಸಂಭಾಲ್ ಮಸೀದಿ ಸಮೀಕ್ಷೆಯಲ್ಲಿ 1500 ವರ್ಷ ಹಳೆಯ ವಿಷ್ಣು ಪ್ರತಿಮೆ, ಸುದರ್ಶನ ಚಕ್ರ, ಶಿವಲಿಂಗ, ಹಿಂದೂ ಚಿಹ್ನೆಗಳು ಪತ್ತೆಯಾಗಿವೆ ಎಂದು ಪ್ರತಿಪಾದಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್‌ಅನ್ನು ಹಂಚಿಕೊಳ್ಳುತ್ತಾ ವಿಷ್ಣು ಪ್ರತಿಮೆ, ಸುದರ್ಶನ ಚಕ್ರ, ಶಿವಲಿಂಗದ ಮೂರ್ತಿಗಳು ಪತ್ತೆಯಾಗಿವೆ ಎಂಬ ಹೇಳಿಕೆಯೊಂದಿಗೆ ಫೋಟೊಗಳನ್ನು ಪ್ರಸಾರಮಾಡಲಾಗುತ್ತಿದೆ.
ದೇಶಾದ್ಯಂತ ಸಂಭಾಲ್ ಮಸೀದಿ ಸರ್ವೆ ವಿವಾದ ತೀವ್ರ ಸ್ವರೂಪ ಪಡೆದಿರುವಂತೆ, ಸಂಭಾಲ್ ಮಸೀದಿಯಲ್ಲಿ ಸರ್ವೆ ನಡೆದಾಗ ಹಿಂದೂ ದೇವರ ಮೂರ್ತಿಗಳು ಪತ್ತೆಯಾಗಿವೆ ಎಂಬಂತೆ ಪೋಸ್ಟ್‌ಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ. ಅವುಗಳನ್ನು ಇಲ್ಲಿ, ಇಲ್ಲಿ, ಇಲ್ಲಿ, ಇಲ್ಲಿ ನೋಡಬಹುದು. ಹಾಗಿದ್ದರೆ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.
ಫ್ಯಾಕ್ಟ್‌ಚೆಕ್ :
ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿರುವಂತೆ ಸಂಭಾಲ್ ಮಸೀದಿಯಲ್ಲಿ ಸರ್ವೆ ನಡೆದ ಸಂದರ್ಭದಲ್ಲಿ ಹಿಂದೂ ದೇವರ ಮೂರ್ತಿಗಳು ಪತ್ತೆಯಾಗಿವೆ ಎಂದು ಪ್ರತಿಪಾದಿಸಿ ಹಂಚಿಕೊಳ್ಳಲಾಗತ್ತಿರುವ ಪೋಸ್ಟ್‌ಅನ್ನು ಪರಿಶೀಲಿಸಲು, ಗೂಗಲ್ ನಲ್ಲಿ ಕೀವರ್ಡ್ ಬಳಸಿಕೊಂಡು ಸರ್ಚ್ ಮಾಡಿದಾಗ, ಪ್ರಾಚೀನ ವಿಷ್ಣು ಮೂರ್ತಿ ಮತ್ತು ಶಿವಲಿಂಗವು ಕೃಷ್ಣಾ ನದಿ ತೀರದಲ್ಲಿ ನದಿ ದಂಡೆ ಕೆಲಸದ ವೇಳೆ ಪತ್ತೆಯಾಗಿವೆ ಎಂದು ಮಾಧ್ಯಮಗಳು ಮಾಡಿದ ವರದಿಗಳು ಲಭ್ಯವಾಗಿವೆ.
ಫೆಬ್ರವರಿ 7, 2024ರ ಸೋ ಸೌತ್ ಯೂಟ್ಯೂಬ್ ವೀಡಿಯೋದ ವಿವರಣೆಯಲ್ಲಿ ಕರ್ನಾಟಕದ ರಾಯಚೂರು ಜಿಲ್ಲೆಯ ಕೃಷ್ಣಾ ನದಿಯಲ್ಲಿ ಪುರಾತನವಾದ ವಿಷ್ಣುವಿನ ವಿಗ್ರಹ ಮತ್ತು ಶಿವಲಿಂಗ ಪತ್ತೆಯಾಗಿದೆ. ವಿಷ್ಣುವಿನ ವಿಗ್ರಹವು ವಿಷ್ಣುವಿನ “ದಶಾವತಾರ” ಕೆತ್ತನೆಗಳನ್ನು ಹೊಂದಿದೆ ಎಂದಿದೆ.
ಫೆಬ್ರವರಿ 7, 2024ರ ಇಂಡಿಯಾ ಟುಡೇ ವರದಿಯಲ್ಲಿ ಕರ್ನಾಟಕದ ರಾಯಚೂರು ಜಿಲ್ಲೆಯ ಕೃಷ್ಣಾ ನದಿಯಿಂದ ಪುರಾತನವಾದ ವಿಷ್ಣುವಿನ ವಿಗ್ರಹ ಮತ್ತು ಶಿವಲಿಂಗ ಪತ್ತೆಯಾಗಿವೆ. ಜಿಲ್ಲೆಯ ದೇವಸೂಗೂರು ಗ್ರಾಮದ ಬಳಿ ನದಿಯಲ್ಲಿ ಸೇತುವೆ ನಿರ್ಮಾಣ ಕಾಮಗಾರಿ ವೇಳೆ ಶತಮಾನಗಳಷ್ಟು ಹಳೆಯದಾದ ಹಿಂದೂ ದೇವರ ವಿಗ್ರಹಗಳು ಪತ್ತೆಯಾಗಿವೆ ಎಂದಿದೆ.
ಫೆಬ್ರವರಿ 6, 2024ರ ವಿಸ್ತಾರ ನ್ಯೂಸ್ ವರದಿಯಲ್ಲಿ ರಾಯಚೂರಿನ ಕೃಷ್ಣಾ ನದಿಯಲ್ಲಿ ಅಯೋಧ್ಯೆಯ ಬಾಲಕ ರಾಮನ ಮೂರ್ತಿಯನ್ನು ಹೋಲುವ ವಿಷ್ಣುವಿನ ವಿಗ್ರಹ ಸೇರಿದಂತೆ ಹಲವು ಪುರಾತನ ವಿಗ್ರಹಗಳು ಪತ್ತೆಯಾಗಿವೆ. ದಶಾವತಾರಗಳಿಂದ ಕೂಡಿದ ವಿಷ್ಣುವಿನ ವಿಗ್ರಹ ಮತ್ತು ಪುರಾತನ ಶಿವಲಿಂಗ ಪತ್ತೆಯಾಗಿವೆ. ಸೇತುವೆ ಕಾಮಗಾರಿ ವೇಳೆ ಪುರಾತನವಾದ ಈ ವಿಗ್ರಹಗಳು ಪತ್ತೆಯಾಗಿದ್ದು, 12-16ನೇ ಶತಮಾನದ ವಿಗ್ರಹಗಳಾಗಿರಬಹುದು ಎನ್ನಲಾಗಿದೆ. ವಿಷ್ಣುವಿನ ವಿಗ್ರಹ 11ನೇ ಶತಮಾನಕ್ಕೆ ಸೇರಿರುವ ಸಾಧ್ಯತೆ ಇದೆ. ನೀರಿಲ್ಲದೆ ನದಿ ಬತ್ತಿರುವುದರಿಂದ ನದಿಯ ಆಳದಲ್ಲಿ ಈ ವಿಗ್ರಹಗಳು ಕಂಡುಬಂದಿವೆ ಎಂದಿದೆ.


ಇದರೊಂದಿಗೆ ಮಾಧ್ಯಮಗಳಲ್ಲಿ ವಿಗ್ರಹ ಪತ್ತೆಯಾದ ಸುದ್ದಿಗಳೊಂದಿಗೆ ನೀಡಲಾದ ಫೊಟೋಗಳು, ಈಗ ಸಂಭಾಲ್ ಮಸೀದಿ ಸರ್ವೆ ವೇಳೆ ಪತ್ತೆಯಾಗಿದೆ ಎಂಬ ವೈರಲ್ ಹೇಳಿಕೆಗಳೊಂದಿಗೆ ಇರುವ ಫೊಟೋಗಳೊಂದಿಗೆ ಸಾಮ್ಯತೆ ಇರುವುದನ್ನು ನಾವು ಗುರುತಿಸಿದ್ದೇವೆ. ಇದೇ ರೀತಿಯ ವರದಿಗಳನ್ನು ಇಲ್ಲಿ ಇಲ್ಲಿ ನೋಡಬಹುದು.
ಇದರೊಂದಿಗೆ ವೈರಲ್ ಆಗಿರುವ ಸುದರ್ಶನ ಚಕ್ರದ ಕುರಿತು ನಾವು ರಿವರ್ಸ್ ಇಮೇಜ್ ಸರ್ಚ್ ಮಾಡಿ ಪರಿಶೀಲನೆ ಮಾಡಿದ್ದೇವೆ. ಈ ವೇಳೆ ಇಂಡಿಯಾಮಾರ್ಟ್ ಆನ್ಲೈನ್ ತಾಣದಲ್ಲಿ ಈ ಸುದರ್ಶನ ಚಕ್ರ ಮಾರಾಟಕ್ಕಿದೆ ಎಂಬ ಪೋಸ್ಟ್ ಇರುವುದು ಲಭ್ಯವಾಗಿದೆ. ಈ ಸುದರ್ಶನ ಚಕ್ರದ ಫೊಟೋಕ್ಕೂ ವೈರಲ್ ಫೊಟೋಕ್ಕೂ ಅನೇಕ ಸಾಮ್ಯತೆ ಇರುವುದನ್ನು ಕಂಡುಬಂದಿದೆ ಎಂದು ನ್ಯೂಸ್ ಚೆಕ್ಕರ್ ವರದಿ ಮಾಡಿದೆ.
ಒಟ್ಟಾರೆಯಾಗಿ ಹೇಳುವುದಾದರೆ, ಸಂಭಾಲ್ ಮಸೀದಿ ಸಮೀಕ್ಷೆಯಲ್ಲಿ 1500 ವರ್ಷ ಹಳೆಯ ವಿಷ್ಣು ಪ್ರತಿಮೆ, ಸುದರ್ಶನ ಚಕ್ರ, ಶಿವಲಿಂಗ ಪತ್ತೆಯಾಗಿದೆ ಎಂಬಂತೆ ಹಂಚಿಕೊಳ್ಳಲಾಗುತ್ತಿರುವ ಹೇಳಿಕೆಗಳು ಸುಳ್ಳು. ಕರ್ನಾಟಕದಲ್ಲಿ ರಾಯಚೂರಿನಲ್ಲಿ ದೊರಕಿದ ಪ್ರಾಚೀನ ಪ್ರತಿಮೆಗಳ ಫೊಟೋಗಳನ್ನು ಈಗ ಸುಳ್ಳು ಹೇಳಿಕೆಗಳೊಂದಿಗೆ ಹಂಚಿಕೊಳ್ಳಲಾಗುತ್ತಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ
ಇದನ್ನು ಓದಿರಿ : FACT CHECK | ಹೆಣ್ಣು ಮಕ್ಕಳಿಗಾಗಿ ಕೇಂದ್ರ ಸರ್ಕಾರ ಪ್ರಧಾನಮಂತ್ರಿ ಉಚಿತ ಸ್ಕೂಟಿ ಯೋಜನೆಯನ್ನು ಜಾರಿಗೆ ತಂದಿದೆಯೇ







