ಫ್ಯಾಕ್ಟ್‌ಚೆಕ್ : ವ್ಯಕ್ತಿಯೊಬ್ಬನ ಕೈ ಬೆರಳುಗಳನ್ನು ಕತ್ತರಿಸುವ ವಿಡಿಯೋ ವೈರಲ್! ಕೈ ಬೆರಳನ್ನು ಕತ್ತರಿಸಿದ್ದು ಖಲಿಸ್ತಾನಿಗಳೇ?
ಖಲಿಸ್ತಾನಿ ಮುಖಂಡನ ಸಹಾಯಕನನ್ನು ಬಂಧಿಸಿದ್ದ ಪೊಲೀಸರ ಕ್ರಮವನ್ನು ವಿರೋದಿಸಿ ನೂರಾರು ಬೆಂಬಲಿಗರು ಪಂಜಾಬ್‌ನ ಅಮೃತಸರ ನಗರದ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಲು ಯತ್ನಿಸಿದಾಗ, ಅವರನ್ನು ನಿಯಂತ್ರಿಸಲಾಗದೆ ಪೊಲೀಸರು ಆತನನ್ನು ಬಿಡುಗಡೆ ಮಾಡುವುದಾಗಿ ತಿಳಿಸಿದ್ದರು.
“ವಾರಿಸ್ ಪಂಜಾಬ್ ದೆ‘ ಎಂಬ ಧಾರ್ಮಿಕ ಸಂಘಟನೆ ನಡೆಸುತ್ತಿರುವ ಅಮೃತಪಾಲ್ ಸಿಂಗ್ ನೇತೃತ್ವದಲ್ಲಿ ಬಂದೂಕುಗಳು ಮತ್ತು ಕತ್ತಿಗಳನ್ನು ಹಿಡಿದ ನೂರಾರು ಜನರ ಗುಂಪು ಪೊಲೀಸ್ ಠಾಣೆ ಕಡೆಗೆ ನುಗ್ಗಿತ್ತು. ಅಮೃತಪಾಲ್ ಸಿಂಗ್‌ನ ಸಹಚರ ಲವ್‌ಪ್ರೀತ್ ತೂಫಾನ್ ಸಿಂಗ್‌ನನ್ನು 24 ಗಂಟೆಗಳ ಒಳಗೆ ಬಿಡುಗಡೆ ಮಾಡುವಂತೆ ಪ್ರತಿಭಟನಾಕಾರರು ಒತ್ತಾಯಿಸಿದ್ದರು.
ಈ ಘರ್ಷಣೆಯ ಸಂದರ್ಭದಲ್ಲಿ ಖಲಿಸ್ತಾನ್ ಭಯೋತ್ಪಾದಕರು ವ್ಯಕ್ತಿಯ ಕೈಯ ಬೆರಳುಗಳನ್ನು ಕತ್ತರಿಸಿದ್ದಾರೆ ಎಂದು ಪ್ರತಿಪಾದಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ವಿಡಿಯೋವನ್ನು ಹಂಚಿಕೊಳ್ಳಲಾಗುತ್ತಿದೆ. ವಿಡಿಯೊವನ್ನು ಪಂಜಾಬ್‌ನಲ್ಲಿನ ಇತ್ತೀಚಿನ ಖಲಿಸ್ತಾನ್ ಪರ ಚಟುವಟಿಕೆಯೊಂದಿಗೆ ಲಿಂಕ್ ಮಾಡಲಾಗಿದೆ.
ಹಲವು ಸಾಮಾಜಿಕ ಮಾಧ್ಯಮಗಳ ಬಳಕೆದಾರರು ಈ ವಿಡಿಯೋವನ್ನು ಪರಿಶೀಲಿಸುವಂತೆ ಏನ್‌ಸುದ್ದಿ.ಕಾಂಗೆ ಸಂದೇಶಗಳ ಮೂಲಕ ವಿನಂತಿಸಿದ್ದಾರೆ. ಆದ್ದರಿಂದ ಈ ವೈರಲ್ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.
ಫ್ಯಾಕ್ಟ್‌ಚೆಕ್ :
ವ್ಯಕ್ತಿಯೊಬ್ಬನನ್ನು ಅಪಹರಿಸಿ ಮತ್ತು ಹಲ್ಲೆ ನಡೆಸಿದ ಆರೋಪದಲ್ಲಿ ತೂಫಾನ್ ಸಿಂಗ್‌ನನ್ನು ಪೊಲೀಸರು ಬಂಧಿಸಿದ್ದರು. ಆತ ಅಮೃತಪಾಲ್ ಸಿಂಗ್ ನೇತೃತ್ವದ ಗುಂಪಿನ ಸದಸ್ಯನಾಗಿದ್ದಾನೆ. ಕಳೆದ ವರ್ಷದ ಫೆಬ್ರವರಿಯಲ್ಲಿ ರಸ್ತೆ ಅಪಘಾತದಲ್ಲಿ ಮೃತಪಟ್ಟ ನಟ ಹಾಗೂ ಸಾಮಾಜಿಕ ಕಾರ್ಯಕರ್ತ ದೀಪ್ ಸಿಧು ಅವರು ಈ ಸಂಘಟನೆಯನ್ನು ಹುಟ್ಟುಹಾಕಿದ್ದರು.
23 ಫೆಬ್ರವರಿ 2023 ರಂದು, ಖಲಿಸ್ತಾನ್ ಪರ ನಾಯಕ ಮತ್ತು ವಾರಿಸ್ ಪಂಜಾಬ್ ದೇ ಮುಖ್ಯಸ್ಥ ಅಮೃತಪಾಲ್ ಸಿಂಗ್ ಅವರ ಬೆಂಬಲಿಗರು ಅಮೃತಸರದ ಅಜ್ನಾಲಾ ಪೊಲೀಸ್ ಠಾಣೆಗೆ ತಮ್ಮ ಬೆಂಬಲಿಗರೊಂದಿಗೆ ದಾಳಿ ಮಾಡಿದರು ಮತ್ತು ಬಂಧನಕ್ಕೊಳಗಾದ ಅವರ ಸಹೋದ್ಯೋಗಿಗಳಲ್ಲಿ ಒಬ್ಬರನ್ನು ಬಿಡುಗಡೆ ಮಾಡುವಂತೆ ಕೋರಿ ಅವರೊಂದಿಗೆ ಘರ್ಷಣೆ ನಡೆಸಿದರು.
ವೈರಲ್ ವಿಡಿಯೋ ಯಾವುದು?
ಸಾಮಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿರುವ ವ್ಯಕ್ತಿಯೊಬ್ಬನ ಕೈ ಬೆರಳುಗಳನ್ನು ಕತ್ತರಿಸುತ್ತಿರುವ ವಿಡಿಯೋವನ್ನು ಪರಿಶೀಲಿಸಿದಾಗ, ಖಲಿಸ್ತಾನ್ ಪರ ನಾಯಕ ಮತ್ತು ವಾರಿಸ್ ಪಂಜಾಬ್ ದೇ ಮುಖ್ಯಸ್ಥ ಅಮೃತಪಾಲ್ ಸಿಂಗ್ ಅವರ ಬೆಂಬಲಿಗರು ಮತ್ತು ಪೊಲೀಸರ ನಡುವೆ ನಡೆದ ಘರ್ಷಣೆಗೆ ಸಂಬಂಧಿಸಿಲ್ಲ ಎಂದು ತಿಳಿದುಬಂದಿದೆ.
ಈ ಘಟನೆ ಮೊಹಾಲಿಯಲ್ಲಿ ನಡೆದಿದೆ. ಇದಲ್ಲದೆ, ಈ ಘಟನೆಯು 08 ಫೆಬ್ರವರಿ 2023 ರಂದು ವರದಿಯಾಗಿದೆ. ಸುದ್ದಿ ವರದಿಗಳ ಪ್ರಕಾರ, ಇದು ಆರು ತಿಂಗಳ ಹಿಂದೆ ನಡೆದ ಕೊಲೆಗೆ ಪ್ರತೀಕಾರವಾಗಿ ಈ ಕೃತ್ಯ ಎಸಗಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಸುಮಾರು ಆರು ತಿಂಗಳ ಹಿಂದೆ ಬಾಳೋಂಗಿ ಕಾಲೋನಿಯಲ್ಲಿ ಬಂಟಿ ಎಂಬ ವ್ಯಕ್ತಿಯನ್ನು ಕೊಲೆ ಮಾಡಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಆ ಘಟನೆಯ ಸಮಯದಲ್ಲಿ ಬಂಟಿಯ ಸಹೋದರ ಗೌರವ್ ಅಲಿಯಾಸ್ ಗೋರಿ ಜೈಲಿನಲ್ಲಿದ್ದ. ಅವರು ಇತ್ತೀಚೆಗೆ ಜೈಲಿನಿಂದ ಬಿಡುಗಡೆಗೊಂಡಿದ್ದರು ಮತ್ತು ತನ್ನ ಸಹೋದರನ ಕೊಲೆಯ ಬಗ್ಗೆ ಮೊಹಾಲಿ ನಿವಾಸಿಯ ಹರ್ದೀಪ್ ಸಿಂಗ್ ಮೇಲೆ ಅನುಮಾನ ವ್ಯಕ್ತಪಡಿಸಿದ್ದು, ತಮ್ಮ ಸಹೋದರ ಬಂಟಿಯನ್ನು ಕೊಂದ ಕೊಲೆಗಾರರೊಂದಿಗೆ ಹರ್ದೀಪ್ ಸಿಂಗ್ ಸಂಪರ್ಕ ಹೊಂದಿದ್ದಾನೆಂದು ಗೌರವ್ ಶಂಕೆ ವ್ಯಕ್ತಪಡಿಸಿದ್ದನ್ನು.

ಹರ್ದೀಪ್ ಅವರನ್ನು ಉಪಾಯ ಮಾಡಿ ಬದ್ಮಜ್ರಾಗೆ ಕರೆದೊಯ್ದು ಅವನ ಬೆರಳುಗಳನ್ನು ಕತ್ತರಿಸಿದ ದುಷ್ಕರ್ಮಿಗಳು , ಸೆಲ್ ಫೋನ್ ಕಸಿದುಕೊಂಡು ಆತನನ್ನು ಬಿಟ್ಟು ಕಳಿಸಿದ್ದಾರೆ.
ಈಗಾಗಲೇ ಹಂತ-1 ಆರಕ್ಷಕ ಠಾಣೆಯಲ್ಲಿ ಸೆಕ್ಷನ್ 365 (ಅಪಹರಣ), 34 (ಸಾಮಾನ್ಯ ಉದ್ದೇಶಕ್ಕಾಗಿ ಹಲವಾರು ವ್ಯಕ್ತಿಗಳು ಮಾಡಿದ ಕೃತ್ಯಗಳು), 379-ಬಿ (ಸ್ನ್ಯಾಚಿಂಗ್) ಮತ್ತು ಭಾರತೀಯ ದಂಡ ಸಂಹಿತೆಯ (IPC) ಇತರ ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ.
ಫೆಬ್ರವರಿ 8 ರಂದು ಮೊಹಾಲಿ ಗ್ರಾಮದ ಮಾರುಕಟ್ಟೆಯಲ್ಲಿ ಇಬ್ಬರು ವ್ಯಕ್ತಿಗಳು ತಮ್ಮನ್ನು ಭೇಟಿಯಾಗಿ ತಾವು ಸಿಐಎ ಸಿಬ್ಬಂದಿ ಎಂದು ಹೇಳಿದ್ದರು ಎಂದು ಹರ್ದೀಪ್ ಸಿಂಗ್ ಅಲಿಯಾಸ್ ರಾಜಿ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾನೆ.

ಪೊಲೀಸ್ ಅಧಿಕಾರಿಗಳ ಹೇಳಿಕೆಗಳನ್ನು ಒಳಗೊಂಡ ಸುದ್ದಿ ವರದಿಯನ್ನು ಇಲ್ಲಿ ಮತ್ತು ಇಲ್ಲಿ ನೋಡಬಹುದು. ಈ ವರದಿಗಳಲ್ಲಿ ಬೆರಳು ಕತ್ತರಿಸಲಾದ ಘಟನೆಗೂ, 23 ಫೆಬ್ರವರಿ 2023 ರಂದು, ಖಲಿಸ್ತಾನ್ ಪರ ನಾಯಕ ಮತ್ತು ವಾರಿಸ್ ಪಂಜಾಬ್ ದೇ ಮುಖ್ಯಸ್ಥ ಅಮೃತಪಾಲ್ ಸಿಂಗ್ ಅವರ ಬೆಂಬಲಿಗರು ಮತ್ತು ಪೊಲೀಸರ ನಡುವೆ ನಡೆದ ಘರ್ಷಣೆಗೂ ಸಂಬಂಧವಿಲ್ಲ ಎಂಬುದು ಸ್ಪಷ್ಟವಾಗಿದೆ.
ಒಟ್ಟಾರೆಯಾಗಿ ಹೇಳುವುದಾದರೆ, ದುಷ್ಕರ್ಮಿಗಳು ವ್ಯಕ್ತಿಯ ಕೈಯನ್ನು ಕತ್ತರಿಸುವ ಈ ದೃಶ್ಯಗಳು ಪಂಜಾಬ್‌ನಲ್ಲಿ ಇತ್ತೀಚಿನ ಖಲಿಸ್ತಾನ್ ಪರ ಬೆಂಬಲಿಗರಿಗೂ ಈ ಘಟನೆಗೂ ಸಂಬಂಧವಿಲ್ಲ. 6 ತಿಂಗಳ ಹಿಂದೆ ನಡೆದ ಕೊಲೆಗೆ ಸೇಡು ತೀರಿಸಿಕೊಳ್ಳುವ ಸಲುವಾಗಿ ಕೈ ಬೆರಳುಗಳನ್ನು ಕತ್ತರಿಸಿಸುವ ಮೂಲಕ ಸೇಡು ತೀರಿಸಿಕೊಳ್ಳಲಾಗಿದೆ. ಹಾಗಾಗಿ ಪೊಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆ ತಪ್ಪಾಗಿದೆ.
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ
ಇದನ್ನು ಓದಿರಿ: ಫ್ಯಾಕ್ಟ್‌ಚೆಕ್ : ಶಾಲಾ ವಿದ್ಯಾರ್ಥಿ ಹಗ್ಗ ಹಿಡಿದು ನೇತಾಡುತ್ತ ನದಿ ದಾಟುವ ದೃಶ್ಯಗಳು ಭಾರತದ್ದಲ್ಲ!

