ನವ ಉದಾರವಾದಿ ಭಾರತದಲ್ಲಿ ದಲಿತರು- ಮೇಲ್ಚಲನೆಯೋ ಅಥವಾ ಮೂಲೆಗುಂಪೋ?

ಇದು, ಭಾರತವು ಅಂಬೇಡ್ಕರ್ ಮತ್ತು ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿ ಕಾರ್ಪೊರೇಟ್ ಬಂಡವಾಳಶಾಹಿ ಮಾರುಕಟ್ಟೆ ವ್ಯವಸ್ಥೆಗೆ ಅನುವು ಮಾಡಿಕೊಟ್ಟ ನವ ಉದಾರವಾದಿ ನೀತಿಗಳನ್ನು ಅಳವಡಿಸಿಕೊಂಡ ಮೇಲೆ ದಲಿತರ ಬದುಕು ಹೇಗಾಗಿದೆ ಎಂಬ ಚಿತ್ರಣವನ್ನು ಕಟ್ಟಿಕೊಡುವ ಪುಸ್ತಕ. ನವ ಉದಾರವಾದಿ ಭಾರತದಲ್ಲಿ ದಲಿತರು- ಮೇಲ್ಚಲನೆಯೋ ಅಥವಾ ಮೂಲೆಗುಂಪೋ? ನೋಡೋಣ….

ಸಮಕಾಲೀನ ದಲಿತ ಬದುಕಿನ ಸಂಕೀರ್ಣತೆ ಮತ್ತು ಸಮಕಾಲೀನ ಸಂದರ್ಭದಲ್ಲಿ ಜಾತಿ ವಿನಾಶದ ಸ್ವರೂಪಗಳ ಅನ್ವೆಷಣೆಯಲ್ಲಿ ತೊಡಗಿಕೊಂಡಿರುವ ಗಂಭೀರ ಕಾರ್ಯಕರ್ತರು ಹಾಗೂ ಸಂಶೋಧಕರಿಬ್ಬರೂ ಗಮನಿಸಲೇ ಬೇಕಾದ ಪುಸ್ತಕವಿದೆಂದು ನಾನು ಭಾವಿಸುತ್ತೇನೆ. ಸಾಮಾಜಿಕ ಕಾರ್ಯಕರ್ತರು ಇದನ್ನು ಅತ್ಯಗತ್ಯವಾಗಿ ಒದಬೇಕೆಂದು ನಾನು ಬಲವಾಗಿ ಶಿಫಾರಸ್ಸು ಮಾಡುತ್ತೇನೆ.

ಪುಸ್ತಕ ಅಡಕದಲ್ಲಿದೆ ಡೌನ್‌ಲೋಡ್‌ ಮಾಡಿಕೊಳ್ಳಿ.

ಈ ಪುಸ್ತಕವು ಇತ್ತೀಚೆಗೆ ಆಕ್ಸ್ ಫರ್ಡ್ ವಿಶ್ವವಿದ್ಯಾಲಯದಲ್ಲಿ ಇದೇ ವಿಷಯದ ಬಗ್ಗೆ ನಡೆದ ಅಂತರರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಮಂಡಿಸಲಾದ ಪ್ರಬಂಧಗಳ ಸಂಕಲನವೂ ಆಗಿದೆ. ಪುಸ್ತಕದಲ್ಲಿ ಮಂಡಿತವಾಗಿರುವ ಅಧ್ಯಾಯಗಳಲ್ಲಿ ಪ್ರಧಾನವಾಗಿ ಈ 5 ಪ್ರಶ್ನೆಗಳಿಗೆ ಉತ್ತರವನ್ನು ಕಂಡುಕೊಳ್ಳುವ ಪ್ರಯತ್ನವನ್ನು ಮಾಡಲಾಗಿದೆ.

1) ಪ್ರಧಾನವಾಗಿ ದುಡಿಯುವ ವರ್ಗಗಳಿಗೆ ಸೇರಿದ ದಲಿತರ ಮೇಲೆ ಬದಲಾಗುತ್ತಿರುವ ನವ ಉದಾರವಾದಿ ಮತ್ತು ಮಾರುಕಟ್ಟೆ ಶಕ್ತಿಗಳ ಪರವಾಗಿರುವ ಆರ್ಥಿಕ ಪರಿಸರವು ಯಾವ ರೀತಿಯ ಪ್ರಭಾವನ್ನು ಬೀರುತ್ತಿದೆ? ಹೊಸ ಕಾರ್ಮಿಕ ಕಾನೂನು ವ್ಯವಸ್ಥೆಗಳು, ಉದ್ಯೋಗಾವಕಾಶಗಳು, ಮತ್ತು ವಲಸೆಯ ಸಂದರ್ಭಗಳು ದಲಿತರನ್ನು ಆರ್ಥಿಕವಾಗಿ ಸಬಲೀಕರಿಸುತ್ತಿವೆಯೇ?

2)  ಭಾರತದಲ್ಲಿ ವೇಗವಾಗಿ ಸಂಭವಿಸುತ್ತಿರುವ ನಗರೀಕರಣವು ಜಾತಿ-ಜಾತಿಗಳ ನಡುವಿನ ಸಮೀಕರಣದ ಮೇಲೆ ಯಾವ ರೀತಿಯ ಪ್ರಭಾವವನ್ನು ಬೀರುತ್ತಿದೆ? ಈ ನಗರೀಕರಣವು ಹಳೆಯ ವಸತಿ, ರಕ್ತ ಸಂಬಂಧ, ಭೋಜನ ಬೇಧ, ಹಾಗೂ ಶ್ರಮ ವಿಭಜನೆಗಳಿಗೆ ಸವಾಲು ಹಾಕುತ್ತಿವೆಯೇ ಹಾಗೂ ಅದು ದಲಿತ ಸಮುದಾಯಗಳ ಹಿತಕಾಯುವಂತಿದೆಯೇ?

3) ದಲಿತರ ನೈಜ ಸಾಮಾಜಿಕ ಮೇಲ್ಚಲನೆಗೆ ಅವಕಾಶಗಳು ಒದಗಿದೆಯೇ? ಸ್ವಾತಂತ್ರ್ಯಾ ನಂತರದಲ್ಲಿ ಜಾತಿಯ ಸಾಮಾಜಿಕ ಆಚರಣೆಯು ಕಡಿಮೆಯಾಗುತ್ತಾ ಬಂದಿದ್ದರೂ ಅದು ಧಾರ್ಮಿಕ ಮಡಿ-ಮೈಲಿಗೆ ಆಧಾರಿತ ಸಾಂಪ್ರದಾಯಿಕ ಕಳಂಕಗಳನ್ನು ಕಡಿಮೆ ಮಾಡಿದೆಯೇ? ದಲಿತರಿಗೆ ಸ್ವಾತಂತ್ರ್ಯ, ನ್ಯಾಯ ಮತ್ತು ದೈಹಿಕ ಭದ್ರತೆಗಳನ್ನು ಪಡೆದುಕೊಳ್ಳುವ ಅವಕಾಶಗಳು ನ್ಯಾಯೋಚಿತವಾಗಿ ದಕ್ಕುತ್ತಿದೆಯೇ? ದಲಿತರಿಗೆ ತಮ್ಮ ಬದುಕು ಹಾಗೂ ಸಾಮರ್ಥ್ಯಗಳನ್ನು ಹೆಚ್ಚಿಸಿಕೊಳ್ಳುವಷ್ಟು  ಶಿಕ್ಷಣದ ಹಾಗೂ ಉದ್ಯೋಗದ ಅವಕಾಶಗಳು ದಕ್ಕುತ್ತಿವೆಯೇ? ಅಥವಾ ಹೊಸ ಸಾಮಾಜಿಕ ಸ್ಟಿಗ್ಮಾ ಮತ್ತು ಪೂರ್ವಗ್ರಹಗಳೇ ಆಧುನಿಕ ಕಾಲದ ‘ಮೈಲಿಗೆ’ಯಾಗಿ ವರ್ತಿಸುತ್ತಿದೆಯೇ?

4) ಸಮಕಾಲೀನ ಭಾರತದಲ್ಲಿ ರಾಜಕೀಯ ಇಚ್ಛಾಶಕ್ತಿಗಳು ಮತ್ತು ಆಧುನಿಕ ಪ್ರಜಾತಾಂತ್ರಿಕ ಸಂಸ್ಥೆಗಳು ಸಾಮಾಜಿಕ ಬದಲಾವಣೆಗಳನ್ನು ತರುವಲ್ಲಿ ಹಾಗೂ ದಲಿತರಿಗೆ ಅವಕಾಶಗಳನ್ನು ಒದಗಿಸುವಲ್ಲಿ ಯಶಸ್ವಿಯಾಗಿದೆ ಎಂದು ಹೇಳಬಲ್ಲ ಯಾವ್ಯಾವ ಉದಾಹರಣೆಗಳಿವೆ? ಈ ಉದಾಹರಣೆಗಳಿಂದ ನಾವು ಏನನ್ನು ಕಲಿಯಬಹುದು ಮತ್ತು ಅದನ್ನು ಎಲ್ಲಾ ಕಡೆಗಳಲ್ಲೂ ಪುನರಾವರ್ತಿಸಬಹುದೇ?

5) ಅಂತಿಮವಾಗಿ ಚುನಾವಣಾ ರಾಜಕೀಯವು ಕೊಡಮಾಡಿರುವ ಅವಕಾಶಗಳು ಮತ್ತು ಸಾಮಾಜಿಕ ಮೇಲ್ಚಲನೆಯ ಕಡುಕಷ್ಟದ ಸವಾಲುಗಳ ನಡುವಿನ ಸೆಣಸಾಟಗಳ ಸಂಬಂಧದ ಸ್ವರೂಪವೇನು?

ಮೇಲಿನ ಪಶ್ನೆಗಳನ್ನು ಹಲವಾರು ವಿದ್ವಾಂಸರು ತಮ್ಮ  ಅತ್ಯಂತ ಗಹನವಾದ ಅಧ್ಯಯನ ಹಾಗೂ ವಿದ್ವತ್ತುಗಳ ಮೂಲಕ ಪರಿಶೀಲಿಸಿದ್ದಾರೆ.

ಸಾರಾಂಶದಲ್ಲಿ ಹೇಳುವುದಾದರೆ ಹಳೆಯ ಧಾರ್ಮಿಕ ಮಡಿ-ಮೈಲಿಗೆ ಆಧಾರಿತ ಜಾತಿ ವ್ಯವಸ್ಥೆ ಹಾಗೂ ಅದನ್ನು ಆಧರಿಸಿದ ದಲಿತ ಬದುಕಿನಲ್ಲಿ ಕೆಲವು ಗಮನಾರ್ಹ ಬದಲಾವಣೆಗಳು ಬಂದಿದ್ದರೂ, ಮಾರುಕಟ್ಟೆ ಆಧಾರಿತ ನವ ಉದಾರವಾದಿ ಭಾರತವು ಹಳೆಯ ಜಾತಿ ವ್ಯವಸ್ಥೆಯನ್ನು ಮತ್ತು ಹೊರದೂಡುವಿಕೆಗಳನ್ನು ಮೆರಿಟ್, ಸಾಮಾಜಿಕ ಪೂರ್ವಗ್ರಹ, ಸಾಂಸ್ಕೃತಿಕ, ಸಾಮರ್ಥ್ಯ ಕೊರತೆ ಇತ್ಯಾದಿಗಳ ಹೆಸರಿನಲ್ಲಿ ಇನ್ನಷ್ಟು ಹಿಂಸಾತ್ಮಕವಾಗಿ ಪುನರುತ್ಪಾದಿಸುತ್ತಿದೆ ಎಂಬುದನ್ನು ಸಾಧಾರಪೂರ್ವಕವಾಗಿ ಈ ಪುಸ್ತಕವು ಸಾಬೀತು ಮಾಡುತ್ತದೆ.

ನವ ಉದಾರವಾದವು ತಂದಿರುವ ಸೀಮಿತ ಚಲನೆಯೂ ಸಹ ದಲಿತ ಬದುಕಿನಲ್ಲಿ ಹೊಸ ವೈರುಧ್ಯಗಳನ್ನು ಸೃಷ್ಟಿ ಮಾಡುತ್ತಾ ದಲಿತ ಅಸ್ಮಿತೆಯನ್ನೇ ಪ್ರಶ್ನೆಗೆ ದೂಡುವಂಥ ಸಂಕೀರ್ಣ ಸಂದರ್ಭವನ್ನು ಸೃಷ್ಟಿ ಮಾಡಿದೆ ಎಂದು ವಿದ್ವಾಂಸರ ಕ್ಷೇತ್ರಾಧ್ಯಯನಗಳು ಹೇಳುತ್ತವೆ.

ಉದಾಹರಣೆಗೆ ಮಾರುಕಟ್ಟೆ ಆರ್ಥಿಕತೆಯಲ್ಲಿ ಯಶಸ್ವಿಯಾಗಬೇಕೆಂದರೆ ಹಣಕಾಸು ಬಂಡವಾಳದ ಜೊತೆಗೆ ಶೈಕ್ಷಣಿಕ, ಸಾಮಾಜಿಕ ಮತ್ತು ರಾಜಕೀಯ ಬಂಡವಾಳಗಳು ಬೇಕಾಗುತ್ತವೆ. ಭಾರತದ ಜಾತಿ ಆಧಾರಿತ ಶ್ರೇಣೀಕರಣದ ಇತಿಹಾಸದಿಂದಾಗಿ ಈ ಎಲ್ಲಾ ಬಂಡವಾಳಗಳು ಮೇಲ್ಜಾತಿ ಮತ್ತು ಮೇಲ್ವರ್ಗದ ಸ್ವತ್ತಾಗಿದ್ದು ದಲಿತರು ಸಹಜವಾಗಿಯೇ ಸ್ಪರ್ಧೆಯಲ್ಲಿ ಹಿಂದೆ ಬೀಳುತ್ತಾರೆ. ಅದೇ ಸಮಯದಲ್ಲಿ ಸಮಾನಾವಕಾಶಗಳನ್ನು ಒದಗಿಸಬೇಕಾದ ಪ್ರಭುತ್ವವು ನವ ಉದಾರವಾದಿ ನಿಯಮಗಳಿಗೆ ಅನುಗುಣವಾಗಿ ಹಿಂದೆ ಸರಿಯುತ್ತಿರುವುದರಿಂದ ದಲಿತ ಬದುಕು ಮತ್ತಷ್ಟು ಮೂಲೆಗುಂಪಾಗುತ್ತಿದೆ ಎಂಬುದನ್ನು ಕೆಲವು ಪ್ರಬಂಧಗಳು ಗಟ್ಟಿಯಾಗಿ ವಾದಿಸುತ್ತವೆ.

ಭಾರತದ ಮಧ್ಯಮವರ್ಗವೂ ಅತ್ಯಂತ ಜಾತಿಗ್ರಸ್ಥವಾಗಿರುವುದರಿಂದ ಸರ್ಕಾರದ ಮೀಸಲಾತಿ ಕ್ರಮಗಳು ಮೇಲ್ಜಾತಿ ಮಧ್ಯಮ ವರ್ಗಗಳಲ್ಲಿ ದೊಡ್ಡ ಅಸಹನೆಯನ್ನು ಹುಟ್ಟಿಹಾಕಿದ್ದು ತಮ್ಮ ತಮ್ಮ ಜಾತಿಯ ಹಿತಾಸಕ್ತಿಯನ್ನು  ರಕ್ಷಿಸಿಕೊಳ್ಳುವ ಸ್ವಜನಪಕ್ಷಪಾತಕ್ಕೆ ಸಮರ್ಥೆನೆಯಾಗಿ ಬಿಟ್ಟಿದೆ. ಮತ್ತೊಂದೆಡೆ ಈ ಸ್ಥಾಪಿತ ಹಿತಾಸಕ್ತಿಗಳು ತಾವು ಈವರೆಗೆ ಆಳುತ್ತಿದ್ದ “ಸಾರ್ವಜನಿಕ  ವಲಯಗಳಲ್ಲಿ” ದಲಿತರ ಪ್ರವೇಶವನ್ನು ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಗಿ ನಿಷೇಧಿಸುತ್ತಾ ಹೊಸ ರೀತಿಯಲ್ಲಿ ಹಳೆಯ ಜಾತಿ ವ್ಯವಸ್ಥೆಯನ್ನು ಮುಂದುವರೆಸುತ್ತಿದ್ದಾರೆ. ಕೆಲವೆಡೆ ಈ ಅಸಹನೆಗಳು ಪರಾಕಾಷ್ಟೆಯನ್ನೇ ತಲುಪಿ ದಲಿತರ ಮೇಲೆ ಸಾಮೂಹಿಕ ಹಾಗೂ ಅತ್ಯಂತ ಹಿಂಸಾತ್ಮಕ ದೌರ್ಜನ್ಯಗಳಿಗೂ ಕಾರಣವಾಗುತ್ತಿದೆ. ಅಟ್ರಾಸಿಟಿ ಕಾಯಿದೆಯ ಬೆನ್ನಲ್ಲೇ ಸ್ವಾತಂತ್ರ್ಯಾ ನಂತರದ ಇತಿಹಾಸದಲ್ಲೇ ಅತ್ಯಂತ ಬರ್ಬರವಾದ ಅತ್ಯಾಚಾರ ಹಾಗ ದೌರ್ಜನ್ಯಗಳು ನವ ಉದಾರವಾದಿ ಭಾರತದಲ್ಲಿ ಸಂಭವಿಸಿದೆ.

ಆರ್ಥಿಕ ಉದಾರೀಕರಣದ ಕಳೆದ ಮೂವತ್ತು ವರ್ಷಗಳಲ್ಲಿ ಭಾರತದಲ್ಲಿ ಒಟ್ಟಾರೆಯಾಗಿ ಬಡತನದ ಪ್ರಮಾಣಗಳು ಇಳಿಕೆಯಾಗಿದ್ದರೂ ಅದರಲ್ಲೂ ಜಾತಿ ಆಧಾರಿತ ವ್ಯತ್ಯಾಸಗಳು ಇರುವುದನ್ನು ಹಾಗೂ ಅಸಮಾನತೆಗಳು ಮತ್ತು ದಲಿತ ಬಡತನದ ದಾರುಣತೆಗಳು ತೀವ್ರಗೊಂದಿರುವುದನ್ನು ಪ್ರಬಂಧಗಳು ಅಂಕಿಅಂಶಗಳ ಸಮೇತ ಸಾಬೀತುಪಡಿಸುತ್ತವೆ.

ಹಾಗೆಯೇ ಇತರ ಜಾತಿಗಳ ಅಭ್ಯರ್ಥಿಗಳಿಗಿಂತ ದಲಿತ ಹಿನ್ನೆಲೆಯ ಅಭ್ಯರ್ಥಿಗಳು ಹೆಚ್ಚಿನ ಅಥವಾ ಸಮಾನ ಶೈಕ್ಷಣಿಕ ಸಾಮರ್ಥ್ಯಗಳನ್ನು ಹೊಂದಿದ್ದರೂ ಕಾರ್ಮಿಕ ಮಾರುಕಟ್ಟೆಯು ದಲಿತರಿಗೆ ತಾರತಮ್ಯ ಮಾಡುತ್ತಾ ಅವಕಾಶವಂಚಿತರನ್ನಾಗಿಸುತ್ತಿರುವುದೂ ಸಹ ಕ್ಷೇತ್ರಾಧ್ಯಯನಗಳು ಸಾಬೀತು ಮಾಡುತ್ತವೆ.

ಕಾರ್ಪೊರೇಟ್ ಸಂಸ್ಥೆಗಳು ತಮ್ಮ ಉದ್ಯೋಗಿ-ಸಿಬ್ಬಂದಿಯನ್ನು ನೇಮಿಸಿಕೊಳ್ಳುವಾಗಲೂ ಅವರ ತಲೆಯಲ್ಲಿರುವ ಆದರ್ಶ ಕಾರ್ಮಿಕನ ಪರಿಕಲ್ಪನೆಯೂ ಸಹ ಮೇಲ್ಜಾತಿ/ ಬ್ರಾಹ್ಮಣೀಯ ಅಭಿರುಚಿಗಳಿಂದಲೇ ಹುಟ್ಟಿರುತ್ತವೆ. ಹೀಗಾಗಿಯೇ ಒಂದು ಕಾರ್ಪೊರೇಟ್ ಸಂಸ್ಥೆಯಲ್ಲಿ ಕೆಲಸ ಸಿಗಲು ಕೇವಲ ಶೈಕ್ಷಣಿಕ ಅರ್ಹತೆಗಳು ಮಾತ್ರವಲ್ಲದೆ  ‘ವಿದ್ಯಾವಂತಿಕೆ’, ವರ್ತನೆ, ಶಿಷ್ಟಾಚಾರ, ಮಾತಿನ ಶೈಲಿ, ಇಂಗ್ಲೀಷ್ ಮಾತುಗಾರಿಕೆ, ‘ಹೊರಜಗತ್ತಿ’ನ ಜ್ಞಾನ, ಆತ್ಮವಿಶ್ವಾಸ, ಉಡುಗೆ-ತೊಡುಗೆ, ಆಂಗಿಕ ಭಾಷೆ ಹಾಗೂ ಧೋರಣೆಗಳು ಕೂಡಾ ತುಂಬಾ ಮಹತ್ವದ ಪಾತ್ರ ವಹಿಸುತ್ತವೆ. ಈ ಎಲ್ಲಾ ʼಪ್ರತಿಭೆʼಗಳ ಪರಿಕಲ್ಪನೆಗಳೂ ಸರ್ವೇ ಸಹಜವೆಂದಾಗಿಬಿಟ್ಟಿದ್ದರೂ ಆಳದಲ್ಲಿ ಅವು ಜಾತಿಗ್ರಸ್ಥ ಬ್ರಾಹ್ಮಣ್ಯ ಧೋರಣೆಯಿಂದ ಕೂಡಿರುವುದು ಸ್ಪಷ್ಟ. ಹೀಗಾಗಿ ಇವು  ದಲಿತ-ಆದಿವಾಸಿ ಮತ್ತು ಮುಸ್ಲಿಮ್ ಹಿನ್ನೆಲೆಯವರ ಬಗ್ಗೆ  ತೀವ್ರ ತಾರತಮ್ಯ ಮಾಡುತ್ತವೆ ಹಾಗೂ ‘ಆರ್ಥಿಕ ನಾಗರಿಕತ್ವ’ದಿಂದ (ಎಕಾನಾಮಿಕ್ ಸಿಟಿಜನ್ ಶಿಪ್) ದೂರಗೊಳಿಸುತ್ತವೆ ಎಂದು ಕೆಲವು ವಿದ್ವಾಂಸರು ವಾದಿಸಿದ್ದಾರೆ.

ನವ ಉದಾರವಾದಿ ಭಾರತ ಒದಗಿಸಿರುವ ಹೊಸ ಉದ್ಯೋಗಾವಕಾಶಗಳು ಸಹ ಹೇಗೆ ಹಳೆಯ ಜಾತಿ ವ್ಯವಸ್ಥೆಯನ್ನು ಪನರುತ್ಪಾದಿಸುತ್ತಿವೆ ಎಂಬುದನ್ನು ಇನ್ನೊಂದು ಕ್ಷೇತ್ರಾಧ್ಯಯನ ಸಾಬೀತುಪಡಿಸುತ್ತದೆ. ಈ ಹಿಂದಿನಂತೆ ದಲಿತರು ಮಲವನ್ನು ಹೊರುವುದು ಕಡಿಮೆಯಾಗಿದ್ದರೂ ನಗರದ ಒಳಚರಂಡಿಗಳನ್ನು ಸ್ವಚ್ಚ ಮಾಡುವ ಪೌರ ಕಾರ್ಮಿಕರು ಅವರೇ ಆಗಿದ್ದಾರೆ. ಈ ಹಿಂದಿನಿಂತ ದಲಿತರು ಪ್ರಾಣಿಗಳ ಚರ್ಮವನ್ನು ಹದಮಾಡುವ ಕೆಲಸಗಳಲ್ಲಿ ಮೊದಲಿನಷ್ಟು ತೊಡಗಿಲ್ಲದೆ ಇರಬಹುದು, ಆದರೆ ಇಂದಿನ ನಗರ ಆರ್ಥಿಕತೆಯಲ್ಲಿ ಚಪ್ಪಲಿ-ಶೂ ರಿಪೇರಿ ಅಥವಾ ಅವನ್ನು ತಯಾರು ಮಾಡುವ ಕಾರ್ಖಾನೆಗಳಲ್ಲಿ ಕೆಲಸ ಮಾಡುವವರಲ್ಲಿ  ಹೆಚ್ಚಿನಾಂಶ ಅವರೇ ಆಗಿದ್ದಾರೆ. ದಲಿತ ಸೂಲಗಿತ್ತಿಯರೇ ಇಂದೂ ಸಹ ಆಧುನಿಕ ಆಸ್ಪತ್ರೆಗಳ ಲೇಬರ್ ವಾರ್ಡುಗಳಲ್ಲಿ ಅತ್ಯಂತ ಮಲಿನವೆಂದು ಪರಿಗಣಿಸಲ್ಪಟ್ಟ ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ.

ವಾಸ್ತವದಲ್ಲಿ ಹಿಂದೆ ಹಳ್ಳಿಗಳಲ್ಲಿ ಹೇಗೆ ದಲಿತರು  ಸಾವು, ಕೊಳಕು, ಹಾಗೂ ತ್ಯಾಜ್ಯ (ಡೆತ್, ಡರ್ಟ್ ಅಂಡ್ ವೇಸ್ಟ್) ಸಂಬಂಧಿ ‘ಹೀನಾಯ ಕೆಲಸಗಳಲ್ಲಿ’  ಸಾಂಪ್ರದಾಯಿಕವಾಗಿ ತೊಡಗಿಕೊಂದಿದ್ದರೋ ಅಂಥದೇ ಕೆಲಸಗಳಲ್ಲಿ ಈಗ ಆಧುನಿಕ ಆರ್ಥಿಕತೆಯಲ್ಲಿ ಪೌರಕಾರ್ಮಿಕರ ಹೆಸರಲ್ಲಿ ತೊಡಗಿಸಿಕೊಂಡಿದ್ದಾರೆ. ಇದು ದಲಿತರ ಬಗ್ಗೆ ಹೊಸ ಬಗೆಯ ‘ಕೊಳಕು, ಖಾಯಿಲೆ, ಹಾಗೂ ಸೋಮಾರಿಗಳೆಂಬ’ ಹೊಸ ಸ್ಟಿಗ್ಮಾಗಳನ್ನು ಸೃಷ್ಟಿಸಿದೆ. ಸ್ವಚ್ಛ ಭಾರತದ ಸಾಂಸ್ಕೃತಿಕ ರಾಜಕಾರಣವೂ ಇದನ್ನು ಗಟ್ಟಿಗೊಳಿಸುತ್ತಿದೆ.

ಈ ಹೊಸ ಸಾಮಾಜಿಕ ಸ್ಟಿಗ್ಮಾಗಳು  ಹಳೆಯ ಸಾಂಪ್ರದಾಯಿಕ ಮಾಲಿನ್ಯದ ಜಾಗವನ್ನು ಆಕ್ರಮಿಸಿಕೊಂಡು ಹಳೆಯ ಜಾತಿ ವ್ಯವಸ್ಥೆಯ ಮುಂದುವರೆಕೆಗೆ ಕಾರಣವಾಗುತ್ತಿವೆ. ಇದೇ ಆಧುನಿಕತೆಯ ಆವಾಸಸ್ಥಾನವಾದ ನಗರಗಳಲ್ಲಿ ದಲಿತರಿಗೆ ಸುಲಭವಾಗಿ ಬಾಡಿಗೆ ಮನೆಯೂ ಸಿಗದಂತೆ ಮಾಡಿ ಆಧುನಿಕ ‘ಭಾರತೀಯ ವರ್ಣಬೇಧ’ ವ್ಯವಸ್ಥೆಯನ್ನು ಸೃಷ್ಟಿಸಿದೆ.

ಇದ್ದುದ್ದರಲ್ಲಿ ಮೇಲ್ಚಲನೆ ಪಡೆದ ದಲಿತ ಮಧ್ಯಮ ವರ್ಗ ಎದುರಿಸುತ್ತಿರುವ ಇಬ್ಬಂದಿಗಳನ್ನು ಇನ್ನು ಕೆಲವು ಪ್ರಬಂಧಗಳು ವಿವರಿಸುತ್ತವೆ. ಕೆಲವು ಕಡೆ ದಲಿತ ಮಧ್ಯಮ ವರ್ಗ ಈವರೆಗೆ ಯಾವುದನ್ನು ಸವರ್ಣೀಯ ಸಮಾಜ ಮಲಿನ ಎಂದು ಭಾವಿಸುತ್ತಿದ್ದವೋ ಆ ಲಾಂಚನಗಳನ್ನು, ಆಹಾರ ಪದ್ಧತಿಗಳನ್ನು, ಹೆಸರುಗಳನ್ನು ಹೆಮ್ಮೆಯಿಂದ ಧರಿಸುವ ಆಚರಿಸುವ ಮೂಲಕ ಸವಾಲೆಸೆಯುತ್ತಿದ್ದಾರೆ.

ಆದರೆ ಎಲ್ಲಾ ಸಾಮಾಜಿಕ ಮೇಲ್ಚಲನೆಗಳೂ ಕ್ರಾಂತಿಕಾರಿಯೇ ಆಗಿರಬೇಕಿಲ್ಲಬೇಕೆಂಬ ಕೆಲವು ಸತ್ಯಗಳನ್ನು ಇತರ ಬರಹಗಳು ಎದಿರುಗಿರಿಸುತ್ತವೆ.

ಉದಾಹರಣೆಗೆ ದಲಿತ ಸಮುದಾಯದಲ್ಲಿ ಮಧ್ಯಮ ವರ್ಗ ಮೇಲ್ಚಲನೆ ಪಡೆಯುತ್ತಿದ್ದಂತೆ ಆ ಕುಟುಂಬದ ಹೆಂಗಸರು ‘ಹೆಚ್ಚೆಚ್ಚು ಗೃಹೀಣಿಕರಣ’ಗೊಳ್ಳುತ್ತಾ ಈವರೆಗೆ ಅನುಭವಿಸದಿದ್ದ ಪಿತೃಸ್ವಾಮ್ಯ ದಮನಗಳಿಗೆ ಗುರಿಯಾಗುತ್ತಿರುವುದನ್ನು ಅವು ವಿವರಿಸುತ್ತವೆ. ಹಾಗೆಯೇ ದಲಿತ ಮಧ್ಯಮ ವರ್ಗದಲ್ಲೂ ಸಾಂಸ್ಕೃತಿಕ ಏಕಾಭಿರುಚಿಯ ಕಾರಣಗಳಿಗಾಗಿ ಅಂತರ್ಜಾತಿ ಮದುವೆಗಳ ಬಗ್ಗೆ ಒಲವು ಕಡಿಮೆಯಾಗುತ್ತಿರುವುದನ್ನೂ ಸೂಚಿಸುತ್ತದೆ.

ಅದೇ ರೀತಿ ದಲಿತ ರಾಜಕಾರಣವು ದಲಿತರಿಗೆ ಈ ಹಿಂದೆ ದಕ್ಕದ ಹಾಗೂ ಇರದಿದ್ದ ಪ್ರಾತಿನಿಧಿತ್ವ ಹಾಗೂ ಅಧಿಕಾರಗಳನ್ನು ಪಡೆಯುವ ಅವಕಾಶವನ್ನು ಕೊಟ್ಟಿದ್ದರೂ ಈ ದಲಿತ ರಾಜಕಾರಣ, ಪ್ರಧಾನಧಾರೆ ರಾಜಕಾರಣವನ್ನು ಅನುಕರಣೆ ಮಾಡುತ್ತಿರುವುದರಿಂದ ದಲಿತ ವಿಮೋಚನೆಗೆ ಪೂರಕವಾಗುತ್ತಿದೆಯೇ ಎಂಬ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಇನ್ನೊಂದಷ್ಟು ಪ್ರಬಂಧಗಳು ಎತ್ತುತ್ತವೆ.

ಒಟ್ಟಿನಲ್ಲಿ ಸಮಾಜ ಬದಲಾವಣೆ, ದಲಿತ ವಿಮೋಚನೆ,  ಹಾಗೂ ಜಾತಿವಿನಾಶಗಳನ್ನು ಬಯಸುವ ಕಾರ್ಯಕರ್ತರಿಗೆ ಹಾಗೂ ಸಮಾಜವಿಜ್ಞಾನದ ವಿದ್ಯಾರ್ಥಿಗಳೆಲ್ಲರಿಗೂ ಈ ಪಸ್ತಕವು ಖಂಡಿತ  ಒಂದು ಮಹತ್ವದ ಓದಾಗುತ್ತದೆ.

  • – ಶಿವಸುಂದರ್

ಇದನ್ನೂ ಓದಿ: I am Not Your Negro: ಆಳವಾಗಿ ನೆಲೆಯೂರಿರುವ ವರ್ಣಬೇಧವನ್ನು ತೋರಿಸುವ ಸಾಕ್ಷ್ಯಚಿತ್ರ

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights