ಪೆಟ್ರೋಲ್ ಬೆಲೆ ಏರಿಕೆಯ ವಿರುದ್ಧ ಬೈಕ್ ಶವ ಯಾತ್ರೆ ನಡೆಸಿ ಕಾಂಗ್ರೆಸ್ ಪತ್ರಿಭಟನೆ!
ಸತತ 21 ದಿನಗಳಿಂದ ನಿರಂತವಾಗಿ ಏರಿಕೆಯಾಗುತ್ತಿರುವ ಪೆಟ್ರೋಲ್ ಬೆಲೆಯನ್ನು ಖಂಡಿಸಿರುವ NSUI ಇಂದು ಬೆಂಗಳೂರಿನ ರೇಸ್ ಕೋರ್ಸ್ ರಸ್ತೆಯಲ್ಲಿರುವ ಕಾಂಗ್ರೆಸ್ ಭವನದ ಬಳಿ ಶವದಂತೆ ಬೈಕ್ ಹೊತ್ತು ಮೆರವಣಿಗೆ ಮಾಡುವ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ಮಾಡಿದ್ದಾರೆ.
NSUI ರಾಜ್ಯಾಧ್ಯಕ್ಷ ಮಂಜುನಾಥ ನೇತೃತ್ವದಲ್ಲಿ ನಡೆದ ಪ್ರತಿಭಟನೆ ಯಲ್ಲಿ ಶವದಂತೆ ಬೈಕ್ ಹೊತ್ತು ಮೆರವಣಿಗೆ ಮಾಡಲಾಯಿತು. ನಂತರ ಆ ಬೈಕ್ ಗೆ ಶವದಂತೆ ಸಂಸ್ಕಾರ ಮಾಡಿ ಕೊನೆಗೆ ಬೆಂಕಿ ಹಚ್ಚಿ ಬೈಕನ್ನು ಸುಡುವ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶವನ್ನು ವ್ಯಕ್ತಪಡಿಸಲಾಗಿದೆ.
ಬಳಿಕ ಮಾತನಾಡಿರುವ ಮಂಜುನಾಥ್, “ಕಳೆದ ಕೆಲವು ದಿನಗಳಿಂದ ಕೇಂದ್ರ ಸರ್ಕಾರ ನಿರಂತರವಾಗಿ ಪೆಟ್ರೋಲ್, ಡಿಸೇಲ್ ದರ ಏರಿಕೆ ಮಾಡುತ್ತಿದೆ. ಮೊದಲೇ ಕೊರೋನಾ ದಿಂದ ಜನರು ಸಂಕಷ್ಟದಲ್ಲಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಕೇಂದ್ರ ಸರ್ಕಾರ ತೈಲ ಬೆಲೆಯನ್ನು ಏರಿಕೆ ಮಾಡುವ ಮೂಲಕ ಜನರನ್ನು ಮತ್ತಷ್ಟು ಸಂಕಷ್ಟಕ್ಕೆ ಗುರಿ ಮಾಡುತ್ತಿದೆ” ಎಂದು ಕಿಡಿಕಾರಿದ್ದಾರೆ.

