ಮಹಿಳಾ ಪೊಲೀಸ್ ಪ್ರೇಮಪುರಾಣ! ಯುವಕನನ್ನು ತನ್ನ ಗಂಡನೆಂದು ನಂಬಿಸಿ ಪ್ರಿಯಕರನ ಜೊತೆ ಕ್ವಾರಂಟೈನ್ ಆದ ಪೇದೆ!
ಕೊರೊನದ ಸಂಕಟ ಮತ್ತು ಅದರಿಂದ ಎಲ್ಲರ ಪಾಲಿಗೆ ಬಂದ ಈ ಲಾಕ್ ಡೌನ್ ಸಮಯದಲ್ಲಿ ಅನೇಕ ಪ್ರೇಮಕಥೆಗಳು ಸ್ವಾರಸ್ಯಕರ ರೀತಿಯಲ್ಲಿ ಹೊರ ಬೀಳುತ್ತಿವೆ. ನೆರೆಯ ಮಹಾರಾಷ್ಟ್ರದ ಉಪರಾಜಧಾನಿಯಾದ ನಾಗಪುರದಲ್ಲಿ ನಡೆದ ಒಂದು ಪ್ರಕರಣ ಸದ್ಯಕ್ಕೆ ತುಂಬಾ ಚರ್ಚೆಯಲ್ಲಿದೆ. ಆತ ಮತ್ತು ಆಕೆ (ಹೆಸರು ಬೇಡ) ಇವರಿಬ್ಬರ ಪ್ರೇಮಪುರಾಣ ಪ್ರಕರಣದಿಂದ ಮಹಾನಗರ ಪಾಲಿಕೆ, ಆರೋಗ್ಯ ವಿಭಾಗ ಮತ್ತು ಪೊಲೀಸ್ ಇಲಾಖೆಯವರು ಹೀಗೆ ಮೂರು ವಿಭಾಗದವರು ಬೆಚ್ಚಿ ಬಿದ್ದಿದ್ದಾರೆ.
ನಾಗಪೂರದ ಇಲ್ಲಿಯ ಸುರೇಂದ್ರ ನಗರ ಭಾಗದಲ್ಲಿಯ ಪೊಲೀಸ್ ಪ್ರಶಿಕ್ಷಣಾ ಕೇಂದ್ರದ ಪರಿಸರದಲ್ಲಿ ಕ್ವಾರಂಟೈನ್ ಸೆಂಟರ್ ಇದೆ. ಕೊರೊನ ಕಾರಣದಿಂದ ಇಲ್ಲಿ ಕ್ವಾರಂಟೈನ್ ಆಗ ಬಯಸುವ ಪೊಲೀಸರನ್ನು ಇಡಲಾಗಿತ್ತು. ಅದೇ ರೀತಿ ಕೆಲವು ಸಾಮಾನ್ಯ ನಾಗರಿಕರ ವ್ಯವಸ್ಥೆಯನ್ನು ಇಲ್ಲಿ ಮಾಡಲಾಗಿತ್ತು. ಈ ಕೆಂದ್ರದಲ್ಲಿಂದಲೇ ಪ್ರೀತಿಯ ಒಂದು ಪ್ರೇಮಕಥೆ ಹೊರ ಬಿದ್ದಿದೆ.
ವಿಸ್ತೃತ ಮಾಹಿತಿ ಏನೆಂದರೆ, ನಾಗಪೂರ ಪೊಲೀಸರ ಒಂದು ಆಫೀಸಿನಲ್ಲಿ ಒಬ್ಬ ಪೊಲೀಸ್ ಸಿಪಾಯಿ ಕೊರೊನಾ ಬಾಧಿತನೆಂದು ಸಾಬೀತಾದಾಗ ಉಳಿದ ಸಹವರ್ತಿಗಳಿಗೂ ಕ್ವಾರಂಟೈನ್ ಆಗುವ ಸಮಸ್ಯೆ ಬಂತು. ಇದೇ ಆಫೀಸ್ ನಲ್ಲಿ ಕೆಲಸ ಮಾಡುತ್ತಿದ್ದ ಒಬ್ಬಳು ಮಹಿಳಾ ಪೊಲೀಸ್ ಸಹಿತ ಈ ಸೆಂಟರ್ ನಲ್ಲಿ ಕ್ವಾರಂಟೈನ್ ಆದಳು. ಅಲ್ಲಿ ಕ್ವಾರಂಟೈನ್ ಆಗಲು ಬಂದಾಗ ಅವಳ ಜೊತೆ ಒಬ್ಬ ಯುವಕನಿದ್ದನು. ಈ ಯುವಕ ತನ್ನ ಗಂಡನಿದ್ದು ಈತ ಸತತ ನನ್ನ ಸಂಪರ್ಕದಲ್ಲಿದ್ದಾನೆ ಮತ್ತು ಈತನಿಗೂ ಸೋಂಕಿನ ಭೀತಿ ಇದ್ದು ಈತನೂ ಕ್ವಾರಂಟೈನ್ ಆಗುತ್ತಿದ್ದಾನೆಂದು ಅಲ್ಲಿಯ ಸಿಬ್ಬಂದಿ ವರ್ಗಕ್ಕೆ ಹೇಳಿದಳು. ಕುಟುಂಬದ ಸದಸ್ಯರಿಗೆ ಒಂದು ರೂಮ್ ಕೊಡುವ ನಿಯಮದ ಪ್ರಕಾರ ಮತ್ತು ಮಾನವೀಯ ದೃಷ್ಟಿಕೋನದಿಂದ ಕ್ವಾರಂಟೈನ್ ಸೆಂಟರ್ ಇನ್ಚಾರ್ಜ್ ಆಕೆ ಮತ್ತು ಆತ ನಿಗೆ ಜೊತೆಗಿರಲು ಒಂದು ರೂಮ್ ಕೊಟ್ಟಿದ್ದರು.
ಇಬ್ಬರ ಕ್ವಾರಂಟೈನ್ ಸೆಂಟರ್ ದಲ್ಲಿಯ ಕೆಲವು ದಿನಗಳು ರಮ್ಯವಾಗಿ ಕಳೆದಿದ್ದವು. ಆಗ ಅಲ್ಲಿಯದೆ ಬಜಾಜ್ ನಗರ ಪೊಲೀಸ್ ಸ್ಟೇಶನ್ ನಲ್ಲಿ ಮಹಿಳೆಯೊಬ್ಬಳು ಒಂದು ಕೇಸ್ ದಾಖಲಿಸಿದಳು. ಕಾರಣ, ನನ್ನ ಗಂಡ ಕೆಲವು ದಿನಗಳಿಂದ ಮನೆಗೆ ಬಂದಿಲ್ಲ ಎಂಬುದಾಗಿತ್ತು. ಆಕೆಯ ಆರೋಪದಲ್ಲಿ ತನ್ನ ಗಂಡ ಕ್ವಾರಂಟೈನ್ ಸೆಂಟರ್ ನಲ್ಲಿ ಬೇರೆ ಮಹಿಳೆಯ ಜೊತೆಗೆ (ಮಹಿಳಾ ಪೊಲೀಸ್ ಜೊತೆ) ತಾನೇ ಆಕೆಯ ಗಂಡನೆಂದು ಹೇಳಿಕೊಂಡು ಇದ್ದಾನೆ. ಆದರೆ ಅಸಲಿಗೆ ಆತ ಆಕೆಯ ಗಂಡನಲ್ಲದೆ ನನ್ನ ನಿಜವಾದ ಗಂಡನಾಗಿದ್ದಾನೆಂದು ದಾವೆ ಮಾಡಿದ್ದಳು. ಸರಕಾರದ ಕ್ವಾರಂಟೈನ್ ಸೆಂಟರ್ ಗಳು ಪ್ರೇಮಿಗಳ ಅಡ್ಡಾ ಆಗಿವೆಯೇ ಎಂಬ ಪ್ರಶ್ನೆಯನ್ನು ಸಹಿತ ಉಪಸ್ಥಿತ ಮಾಡಲು ಮರೆತಿಲ್ಲ.
ಬಜಾಜ್ ನಗರ ಪೊಲೀಸ್ ಠಾಣೆಯಲ್ಲಿ ಈ ತಕರಾರು ದಾಖಲಾಗುತ್ತಿದ್ದಂತೆಯೇ ಪೊಲೀಸ್ ವರ್ಗ ಬೆಚ್ಚಿದೆ. ಬೇರೊಬ್ಬಳ ಪತಿಯನ್ನು ತನ್ನ ಪತಿಯೆಂದು ಹೇಳಿ ಕ್ವಾರಂಟೈನ್ ಸೆಂಟರ್ ನಲ್ಲಿ ಆತನ ಜೊತೆಯಾಗಿ ಆರಾಮಾಗಿ ಇರುವ ಮಹಿಳೆ, ಪೊಲೀಸ್ ಪೇದೆಯಾದ ಕಾರಣದಿಂದ ವರಿಷ್ಠ ಪೊಲೀಸ್ ಅಧಿಕಾರಿಗಳು ಈ ಪ್ರಕರಣವನ್ನು ಗಾಂಭೀರ್ಯತೆಯಿಂದ ತೆಗೆದುಕೊಂಡು ಪ್ರಾಥಮಿಕ ತನಿಖೆ ನಡೆಸಿದರು. ತನಿಖೆಯಲ್ಲಿ ಬಜಾಜ್ ನಗರ ಪೊಲೀಸ್ ಠಾಣೆಯಲ್ಲಿ ತಕರಾರು ದಾಖಲಿಸಿದ ಮಹಿಳೆಯೇ ಯುವಕನ ನಿಜವಾದ ಪತ್ನಿಯೆಂದು ಗೊತ್ತಾಯಿತು. ಹೀಗಾಗಿ ಸುಳ್ಳು ಮಾಹಿತಿಯನ್ನು ಕೊಟ್ಟು ಕ್ವಾರಂಟೈನ್ ಸೆಂಟರ್ ದಲ್ಲಿರುವ ಆಕೆ ಮತ್ತು ಆತ ನನ್ನು ಬೇರೆ ಬೇರೆ ಮಾಡಲಾಯಿತು.
ಏತನ್ಮಧ್ಯೆ, ಇಬ್ಬರೂ ಪತಿ ಪತ್ನಿ ಇಲ್ಲದೆ, ಕ್ವಾರಂಟೈನ್ ಸೆಂಟರ್ ನಲ್ಲಿ ಕೂಡಿ ಇರುವದರ ಹಿಂದಿನ ಕಾರಣವೂ ಸ್ವಾರಸ್ಯಕರವಾಗಿದೆ.
ದೊರೆತ ಮಾಹಿತಿಯ ಪ್ರಕಾರ ನಾಗಪೂರದಲ್ಲಿ ಇಬ್ಬರೂ ಬೇರೆ ಬೇರೆ ಸರಕಾರಿ ಆಫೀಸ್ ಗಳಲ್ಲಿ ನೌಕರಿ ಮಾಡುತ್ತಾರೆ. ಇಬ್ಬರ ಆಫೀಸ್ ಗಳು ಮಾತ್ರ ಸಮೀಪದಲ್ಲೇ ಇವೆ. ಹೀಗಾಗಿ ಯಾವುದೋ ಒಂದು ಸಮಯ ಇಬ್ಬರ ಭೆಟ್ಟಿಯಾಗಿ ಆಮೇಲೆ ಮೊಬೈಲ್ ನಂಬರ್ ಕೊಡಕೊಳ್ಳುವಿಕೆಯಾಗಿತ್ತು. ಆರಂಭದಲ್ಲಿ ಚಾಟಿಂಗ್ ಅನಂತರ ಆಪ್ತ ಸ್ನೇಹ ಆಮೇಲೆ ಭೆಟ್ಟಿ ಹೀಗೆಲ್ಲ ಅದರಲ್ಲಿ ವಿಕಾಸವಾಗುತ್ತ ಹೋಯಿತು. ಈಗ ಆಕೆ 14 ದಿವಸಗಳ ಕ್ವಾರಂಟೈನ್ ಅಂದ ಮೇಲೆ ಇಬ್ಬರೂ ಈ ವಿರಹ ವೇದನೆಯನ್ನು ಹೇಗೆ ಸಹಿಸಿಕೊಳ್ಳುವದು? ಎಂಬ ಪ್ರಶ್ನೆ ಬಿದ್ದಾಗ ನೆರವಿಗೆ ಬಂದದ್ದು ಈ ಕೊರೊನ ಕ್ವಾರಂಟೈನ್ ಸೆಂಟರ್. ಅಲ್ಲಿ ಆರೋಗ್ಯ ಅಧಿಕಾರಿಗೆ ತಾವಿಬ್ಬರೂ ಗಂಡ ಹೆಂಡತಿ ಎಂದು ಸುಳ್ಳು ಹೇಳಿ ಒಂದೇ ರೂಮಿನಲ್ಲಿ ಇರಲಿಕ್ಕೆ ವ್ಯವಸ್ಥೆ ಮಾಡಿಕೊಂಡರು.
ಆದರೆ ಇಲ್ಲಿ ಸುಮಾರು ನಾಲ್ಕೈದು ದಿನಗಳ ವರೆಗೆ ಪತಿರಾಯ ಮನೆಗೆ ಬಾರದೆ ಇದ್ದಾಗ ಪತ್ನಿಗೆ ತವಕ, ಕಾಳಜಿ ಉಂಟಾಗಿ ಆಕೆ ಅಲ್ಲಿ ಇಲ್ಲಿ ಚೌಕಾಶಿ ಮಾಡಿದಾಗ ಗಂಡ ಕ್ವಾರಂಟೈನ್ ಸೆಂಟರನಲ್ಲಿ ಬೇರೆಯೇ ಮಹಿಳೆಯ ಜೊತೆ ಇದ್ದಾನೆಂದು ತಿಳಿದು ಬಂತು. ಅಮೇಲೇನು ಕೇಳುವುದೇ, ಪತ್ನಿ ಮೊದಲು ಕ್ವಾರಂಟೈನ್ ಸೆಂಟರ್ ಗೆ ಹೋಗಿ ತನ್ನ ಗಂಡನನ್ನು ಮೊದಲು ಈ ಸೆಂಟರ್ ನಿಂದ ಹೊರಗೆ ಕಳುಹಿಸಿ ಎಂದು ದುಂಬಾಲು ಬಿದ್ದಳು. ಆದರೆ ಅಲ್ಲಿ ಯಾರು ಅವಳ ಮಾತಿಗೆ ಬೆಲೆ ಕೊಡದಾದಾಗ ಪೊಲೀಸ ಠಾಣೆಯಲ್ಲಿ ತಕರಾರು ದಾಖಲಿಸಿದಳು. ಆಗ ಈ ಪ್ರಕರಣವು ಎಲ್ಲರ ಗಮನಕ್ಕೆ ಬಂತು.
ಪೊಲೀಸ್ ಪ್ರಶಿಕ್ಷಣಾ ಕೇಂದ್ರದಲ್ಲಿಯ ಕ್ವಾರಂಟೈನ್ ಸೆಂಟರನಲ್ಲಿ ಮಹಿಳಾ ಪೊಲೀಸ್ ಪೇದೆಯು ಮಾಡಿದ ಪ್ರತಾಪದಿಂದ ಘಟಿಸಿದ ಈ ಪ್ರೇಮನಾಟ್ಯ ಎಲ್ಲರ ಎದುರು ಓಪನ್ನಾಗಿದ್ದಕ್ಕೆ, ಪೊಲೀಸರಿಂದ ಹಿಡಿದು ಮಹಾನಗರ ಪಾಲಿಕೆ ಮತ್ತು ಆರೋಗ್ಯ ಇಲಾಖೆ ಹೀಗೆ ಎಲ್ಲರೂ ಸದ್ಯಕ್ಕೆ ಮೌನವಾಗಿರುವದೇ ಲೇಸು ಎಂದು ಸುಮ್ಮನಾಗಿದ್ದಾರೆ. ಈಗ ಇಬ್ಬರಿಗೂ ಬೇರೆ ಬೇರೆ ಕ್ವಾರಂಟೈನ್ ಸೆಂಟರನಲ್ಲಿಟ್ಟಿದ್ದಾರೆಂದು ಪೊಲೀಸರು ಹೇಳಿದ್ದಾರೆ. ಮಹಿಳಾ ಸಾಮಾಜಿಕ ಕಾರ್ಯಕರ್ತೆಯಾದ ನೂತನ್ ರೇವತಕರ್ ಅವರು ಮಾತ್ರ ಸಂಪೂರ್ಣ ಪ್ರಕರಣದ ತನಿಖೆಗೆ ಬೇಡಿಕೆ ಇಟ್ಟಿದ್ದಾರೆ.
ಒಂದು ಮಹಿಳೆ ಇನ್ನೊಂದು ಮಹಿಳೆಯ ಜೀವನದಲ್ಲಿ ವಿಷ ಬೆರೆಸುವ ಕೆಲಸ ಇದಾಗಿದೆ, ಮಹಿಳಾ ಪೊಲೀಸ್ ಪೇದೆ ಮಾಡಿದ ಈ ನೀಚ ಕೃತ್ಯದ ತನಿಖೆಯಾಗಲೇಬೇಕು ಎಂದು ಡಿಮಾಂಡ್ ಮಾಡಿದ್ದಾರೆ.
ಇದನ್ನೂ ಓದಿ: ಪ್ರೀತಿಸಿದ, ಮನೆಯವರೂ ಇಷ್ಟಪಟ್ಟ ಇಬ್ಬರು ಹುಡುಗಿಯರಿಗೆ ತಾಳಿ ಕಟ್ಟಿದ ಭೂಪ…