ಅಂಬಾನಿ ಮತ್ತು RSS ಸದಸ್ಯನಿಂದ 300 ಕೋಟಿ ಲಂಚ ಆಮಿಷ: ಮಾಜಿ ಗವರ್ನರ್‌

ತಾನು ಜಮ್ಮು ಕಾಶ್ಮೀರದ ರಾಜ್ಯಪಾಲರಾಗಿದ್ದಾಗ ಅಂಬಾನಿ ಮತ್ತು ಆರ್‌ಎಸ್‌ಎಸ್ ಮೂಲದ ವ್ಯಕ್ತಿಯೊಬ್ಬರ ಎರಡು ಕಡತಗಳಿಗೆ ಅಂಗೀಕಾರ ನೀಡಿದರೆ ತನಗೆ 300 ಕೋಟಿ ರೂಪಾಯಿ ಲಂಚ ನೀಡುವುದಾಗಿ ಆಮಿಷ ಒಡ್ಡಲಾಗಿತ್ತು ಎಂದು ಮಾಜಿ ರಾಜ್ಯಪಾಲ ಸತ್ಯ ಪಾಲ್ ಮಲಿಕ್ ಹೇಳಿದ್ದಾರೆ. ಆದರೆ ಆ ಎರಡು ಕಡತಗಳನ್ನು ತಾನು ರದ್ದುಗೊಳಿಸಿದ್ದು, ಲಂಚದ ಆಮಿಷಕ್ಕೆ ತಾನು ಬಿದ್ದಿಲ್ಲ ಎಂದು ಅವರು ತಿಳಿಸಿದ್ದಾರೆ.

ಅವರು ಭಾಷಣವೊಂದರಲ್ಲಿ ಇದನ್ನು ಬಹಿರಂಗ ಪಡಿಸಿದ್ದು, ಸಾಮಾಜಿಕ ಜಾಲತಾಣದಲ್ಲಿ ಅದು ವೈರಲ್ ಆಗಿದೆ. “ಕಾಶ್ಮೀರಕ್ಕೆ ರಾಜ್ಯಪಾಲನಾಗಿ ಹೋದ ನಂತರ, ಎರಡು ಕಡತಗಳು ಅಂಗೀಕಾರಕ್ಕಾಗಿ ನನ್ನ ಬಳಿ ಬಂದವು. ಒಂದು ಅಂಬಾನಿಗೆ ಸೇರಿದ್ದಾಗಿದ್ದು, ಮತ್ತೊಂದು ಆರ್‌ಎಸ್‌ಎಸ್‌ನೊಂದಿಗೆ ಸಂಬಂಧ ಹೊಂದಿರುವ ವ್ಯಕ್ತಿಯದ್ದು. ಈ ವ್ಯಕ್ತಿ ಹಿಂದಿನ ಮೆಹಬೂಬಾ ಮುಫ್ತಿ ನೇತೃತ್ವದ ಪಿಡಿಪಿ-ಬಿಜೆಪಿ ಸಮ್ಮಿಶ್ರ ಸರ್ಕಾರದಲ್ಲಿ ಸಚಿವರಾಗಿದ್ದರು. ಜೊತೆಗೆ ಪ್ರಧಾನಮಂತ್ರಿಯವರಿಗೆ ತುಂಬಾ ಹತ್ತಿರದವರು ಎಂದು ಹೇಳಿಕೊಂಡಿದ್ದರು” ಎಂದು ಹೇಳಿದ್ದಾರೆ.

ಇದನ್ನೂ ಓದಿ:ಕೃಷಿ ಕಾಯಿದೆಗಳು ಮತ್ತು ಆದಾನಿ, ಅಂಬಾನಿಗಳ ಲಾಭಗಳು!

ಆದರೆ ತಾನು ಎರಡೂ ಕಡತಗಳನ್ನು ರದ್ದುಗೊಳಿಸಿರುವುದಾಗಿ ಮಲಿಕ್ ಹೇಳಿದ್ದಾರೆ. “ಕಡತಗಳನ್ನು ತೆರವುಗೊಳಿಸಿದರೆ ನೀವು ತಲಾ 150 ಕೋಟಿ ರೂಪಾಯಿಗಳನ್ನು ಪಡೆಯಬಹುದು ಎಂದು ಕಾರ್ಯದರ್ಶಿಗಳು ನನಗೆ ಹೇಳಿದ್ದರು” ಎಂದು ಅವರು ವೈರಲ್‌ ವಿಡಿಯೋದಲ್ಲಿ ಹೇಳಿದ್ದಾರೆ.

ಈ ಬಗ್ಗೆ ಮುನ್ನೆಚ್ಚರಿಕೆಯಾಗಿ ಪ್ರಧಾನ ಮಂತ್ರಿಗೆ ಎರಡು ಕಡತಗಳು ಮತ್ತು ಹಗರಣದ ಬಗ್ಗೆ ಮಾಹಿತಿ ನೀಡಿದ್ದೆ. ಅವರ ಹೆಸರನ್ನು ಬಳಸುತ್ತಿದ್ದಾರೆ ಎಂದು ಹೇಳಿದ್ದೆ. “ರಾಜ್ಯಪಾಲ ಹುದ್ದೆಯಿಂದ ನನ್ನನ್ನು ತೆಗೆದರೂ ಸರಿ, ನಾನು ಆ ಕಡತಗಳಿಗೆ ಅಂಗೀಕಾರ ನೀಡುವುದಿಲ್ಲ” ಎಂದು ಅವರಿಗೆ ತಿಳಿಸಿದ್ದೆ ಎಂದು ಮಲಿಕ್ ಹೇಳಿದ್ದಾರೆ.

ಈ ಬಗ್ಗೆ ಪ್ರಧಾನಿಗೆ ತಿಳಿಸಿದಾಗ ಭ್ರಷ್ಟಾಚಾರದ ವಿಷಯದಲ್ಲಿ ರಾಜಿ ಮಾಡಿಕೊಳ್ಳುವ ಅಗತ್ಯವಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಕ್ಕಾಗಿ ಸತ್ಯಪಾಲ್ ಮಲಿಕ್ ಪ್ರತಿಪಾದಿಸಿದ್ದು, ಮೋದಿಯನ್ನು ಪ್ರಶಂಸಿಸಿದ್ದಾರೆ. ಜೊತೆಗೆ ಕಾಶ್ಮೀರವು ದೇಶದ ಅತ್ಯಂತ ಭ್ರಷ್ಟ ಪ್ರದೇಶವಾಗಿದೆ ಎಂದು ಮಲಿಕ್ ಆರೋಪಿಸಿದ್ದಾರೆ.

ಆಗಸ್ಟ್ 21, 2018 ರಂದು ಸತ್ಯ ಪಾಲ್ ಮಲಿಕ್ ಜಮ್ಮು ಕಾಶ್ಮೀರದ ರಾಜ್ಯಪಾಲರಾಗಿ ನೇಮಕಗೊಂಡಿದ್ದರು. ನಂತರ ಅವರನ್ನು 2019 ರ ಅಕ್ಟೋಬರ್‌ನಲ್ಲಿ ಗೋವಾಕ್ಕೆ ವರ್ಗಾಯಿಸಲಾಯಿತು. ಮಲಿಕ್ ಪ್ರಸ್ತುತ ಮೇಘಾಲಯದ ರಾಜ್ಯಪಾಲರಾಗಿದ್ದು, ದೇಶದಲ್ಲಿ ನಡೆಯುತ್ತಿರುವ ರೈತರ ಆಂದೋಲನವನ್ನು ಬೆಂಬಲಿಸುತ್ತಿದ್ದಾರೆ.

ಇದನ್ನೂ ಓದಿ:ಅಂಬಾನಿ ನಿವಾಸದ ಬಳಿ ಸ್ಫೋಟಕ ಪತ್ತೆ ಪ್ರಕರಣ: ಮುಂಬೈ ಪೊಲೀಸ್‌ ಅಧಿಕಾರಿ ಅಮಾನತು!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.