ವ್ಯಕ್ತಿ ಪೂಜೆಗಿಲ್ಲ ಅವಕಾಶ; ಪಕ್ಷವನ್ನು ಪೂಜಿಸೋಣ, ಬೆಳೆಸೋಣ; ಪ್ರತಿಜ್ಞಾವಿಧಿ ಸ್ವೀಕರಿಸಿದ ಡಿಕೆಶಿ
ಕರ್ನಾಟಕ ಪ್ರದೇಶಿಕ ಕಾಂಗ್ರೆಸ್ ಸಮಿತಿ (ಕೆಪಿಸಿಸಿ)ಯ ಅಧ್ಯಕ್ಷರಾಗಿ ಡಿ.ಕೆ.ಶಿವಕುಮಾರ್ ‘ಪ್ರತಿಜ್ಞಾ ದಿನ’ – ಪ್ರತಿಜ್ಞಾವಿಧಿ ಕಾರ್ಯಕ್ರಮದ ಮೂಲಕ ಪದಗ್ರಹಣ ಮಾಡಿದ್ದಾರೆ. ನಿಕಟಪೂರ್ವ ಅಧ್ಯಕ್ಷ ದಿನೇಶ್ ಗುಂಡೂರಾವ್ ಕಾಂಗ್ರೆಸ್ ಧ್ವಜವನ್ನು ಡಿಕೆಶಿ ಗೆ ಹಸ್ತಾಂತರ ಮಾಡುವ ಮೂಲಕ ಅಧ್ಯಕ್ಷ ಸ್ಥಾನವನ್ನು ಬಿಟ್ಟುಕೊಟ್ಟಿದ್ದಾರೆ.
ಕೆಪಿಸಿಸಿಗೆ ಕಾರ್ಯಾಧ್ಯಕ್ಷರಾಗಿ ಆಯ್ಕೆಯಾಗಿರುವ ಈಶ್ವರ್ ಖಂಡ್ರೆ, ಸತೀಶ್ ಜಾರಕಿಹೊಳಿ ಹಾಗೂ ಸಲೀಂ ಅಹಮದ್ ಅವರೂ ಕೂಡ ಪದಗ್ರಹಣ ಮಾಡಿದರು.
ಇದೇ ವೇಳೆ ರಾಜ್ಯದ ಗ್ರಾಮ ಪಂಚಾಯ್ತಿ, ನಗರ ಸಭೆ ಹಾಗೂ ಪುರಸಭೆ ಸೇರಿದಂತೆ ಸುಮಾರು 10 ಸಾವಿರಕ್ಕೂ ಅಧಿಕ ಸ್ಥಳಗಳಲ್ಲಿ ವಿಡಿಯೋ ಲೈವ್ ಪ್ರದರ್ಶನ ಆಯೋಜಿಸಲಾಗಿದ್ದು, ಕಾಂಗ್ರೆಸ್ ಕಾರ್ಯಕರ್ತರು, ವಿಡಿಯೋ ಮೂಲಕ ಪ್ರತಿಜ್ಞಾ ದಿನ ಕಾರ್ಯಕ್ರಮದಲ್ಲಿ ಭಾಗಿ, ಪ್ರತಿಜ್ಞೆ ಸ್ವೀಕರದಲ್ಲಿ ಭಾಗಿಯಾಗಿದ್ದರು.
ಸಂಗೀತ ನಿರ್ದೇಶಕ ಸಾಧುಕೋಕಿಲ ಸಂಗೀತ ಸುಧೆಯೊಂದಿಗೆ ಜ್ಯೋತಿ ಬೆಳಗಿ ಕಾರ್ಯಕ್ರಮಕ್ಕೆ ರಂಗು ತಂದಿತು. ಕೆಪಿಸಿಸಿ ಅಧ್ಯಕ್ಷರ ಪ್ರಮಾಣ ವಚನ ಕಾರ್ಯಕ್ರಮದ ಆರಂಭದಲ್ಲಿ ಹುತಾತ್ಮ ಯೋಧರಿಗೆ ಗೌರವ ನಮನ ಸಲ್ಲಿಸಲಾಯಿತು.
ಸೇವಾದಳ ಘಟಕದಿಂದ ವಂದೇ ಮಾತರಂ ಗೀತೆ ಮೊಳಗಿದ್ದು, ಕೆಪಿಸಿಸಿ ವಿವಿಧ ಘಟಕಗಳು, ಮುಖಂಡರಿಂದ ಜ್ಯೋತಿ ಬೆಳಗಿಸಲಾಯಿತು. ವೇದಿಕೆಯಲ್ಲಿ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ, ರಾಜ್ಯಸಭಾ ಸದಸ್ಯ ಮಲ್ಲಿಕಾರ್ಜುನ ಖರ್ಗೆ ವಿಧಾನಪರಿಷತ್ ವಿಪಕ್ಷ ನಾಯಕ ಎಸ್.ಆರ್.ಪಾಟೀಲ್, ರಹ್ಮಾನ್ ಖಾನ್ ಮತ್ತಿತರರು ಉಪಸ್ಥಿತರಿದ್ದರು.
ಉದ್ಘಾಟನಾ ಭಾಷಣದಲ್ಲಿ ಪದಗ್ರಹಣ ಕಾರ್ಯಕ್ರಮ ಕುರಿತು ಎಐಸಿಸಿ ಅಧಿನಾಯಕಿ ಸೋನಿಯಾ ಗಾಂಧಿ ಸಂದೇಶವನ್ನು ವೇಣುಗೋಪಾಲ್ ವಾಚಿಸಿದರು. “ಎನ್‌ಎಸ್‌ಯುಐ ನಿಂದಲೂ ನಾನು ಡಿಕೆ ಶಿವಕುಮಾರ್ ರನ್ನು ಬಲ್ಲೆ. ತಳ ಮಟ್ಟದಿಂದ ಬೆಳೆದು ಬಂದು ಇಂದು ಈ ಮಟ್ಟಕ್ಕೇರಿದ್ದಾರೆ. ಸವಾಲುಗಳು ಅವಕಾಶಗಳನ್ನು ಸೃಷ್ಟಿ ಮಾಡುತ್ತವೆ. ಅಂತಹ ಅವಕಾಶಗಳನ್ನು ಶಿವಕುಮಾರ್ ಚೆನ್ನಾಗಿ ಬಳಸಿಕೊಂಡಿದ್ದಾರೆ. ಇಂದು ಬಂಡೆ ತರಹ ಸವಾಲುಗಳನ್ನೆಲ್ಲ ಗೆದ್ದು ನಮ್ಮ ಮುಂದೆ ನಿಂತಿದ್ದಾರೆ ಎಂದರು.
ಗುಜರಾತ್ ಕಾಂಗ್ರೆಸ್ ಶಾಸಕರ ರಕ್ಷಣೆ ವಿಚಾರದಲ್ಲಿ ಡಿ.ಕೆ ಶಿವಕುಮಾರ್ ನಿರ್ವಹಿಸಿದ ಸೇವೆ ಎದುರಿಸಿದ್ದ ಸಂಕಷ್ಟಗಳನ್ನು ವೇಣುಗೋಪಾಲ್ ಆ ಸಂದರ್ಭದಲ್ಲಿ ನೆನಪಿಸಿಕೊಂಡರು.
Preceding the 'Pratijna Dina' event hoisted the national flag at KPCC office in Bengaluru. Jai Hind.#PratijnaDina pic.twitter.com/zNEVq7TEK9
— DK Shivakumar (@DKShivakumar) July 2, 2020
ಕರ್ನಾಟಕದಲ್ಲಿ ಪಕ್ಷಕ್ಕೆ ಒಳ್ಳೆಯ ತಳಹದಿ ಇದೆ. ಒಳ್ಳೆಯ ಪಥದಲ್ಲಿ ಡಿ.ಕೆ.ಶಿವಕುಮಾರ್ ಪಕ್ಷವನ್ನು ಮುನ್ನಡೆಸಿಕೊಂಡು ಹೋಗಲಿದ್ದಾರೆ. ಕೋವಿಡ್ 19, ಆರ್ಥಿಕ ಪರಿಸ್ಥಿತಿಯ ಸಂಕಷ್ಟದ ನಡುವೆ ರಾಷ್ಟ್ರದ ಜನ ತೊಂದರೆಗೆ ಒಳಗಾಗಿದ್ದಾರೆ. ಇಂತಹ ಸಂದರ್ಭದಲ್ಲಿ ಸಾಮಾಜಿಕ ಅಂತರ ಕಾಯ್ದುಕೊಂಡು ಕಾರ್ಯಕ್ರಮ ಆಯೋಜಿಸಿರುವ ಡಿಕೆ ಶಿವಕುಮಾರ್ ರನ್ನು ಅಭಿನಂದಿಸುವುದಾಗಿ ವೇಣುಗೋಪಾಲ್ ಹೇಳಿದರು.
ಕಾಂಗ್ರೆಸ್ ಪ್ರತಿಜ್ಞೆ ಬೋಧನೆ ಬಳಿಕ ಮಾತನಾಡಿದ ಡಿ.ಕೆ.ಶಿವಕುಮಾರ್, ತಮಗೆ ಜಾತಿ, ಮತ, ಧರ್ಮದಲ್ಲಿ ನಂಬಿಕೆ ಇಲ್ಲ. ನನಗೆ ಕಾಂಗ್ರೆಸ್ ಪಕ್ಷವೇ ಧರ್ಮ, ಕಾಂಗ್ರೆಸ್ ಪಕ್ಷವೇ ಜಾತಿ, ಕಾಂಗ್ರೆಸ್ ಗುಂಪಿನ ಮೇಲೆ ಮಾತ್ರ ನಂಬಿಕೆ ಇದೆ. ವ್ಯಕ್ತಿ ಪೂಜೆ ಬಿಟ್ಟು ಪಕ್ಷ ಪೂಜೆ ಮಾಡೋಣ, ನಮಗೆ ಯಾವುದೇ ಹಿಂಬಾಲಕರು ಬೇಡ. ಪಕ್ಷವನ್ನು ಸಮೂಹ ನೆಲೆಯಿಂದ ಕೇಡರ್ ಆಧಾರಿತ ಪಕ್ಷವನ್ನಾಗಿ ಮಾಡೋಣ ಎಂದು ಹೇಳಿದರು.
ಇದನ್ನೂ ಓದಿ: ಕಾಂಗ್ರೆಸ್‌ಗೆ ಡಿಕೆಶಿ ಅಧ್ಯಕ್ಷರಾದರೆ, ಬಿಜೆಪಿಗೇ ಅನುಕೂಲ; ಡಾ.ಕೆ ಸುಧಾಕರ್