ಅಮ್ಮನಿಗೆ ‘ಜೀವನದಿಂದ ಸ್ವಾತಂತ್ರ್ಯ’ ಕೊಟ್ಟೆನೆಂದು ತಾಯಿಯನ್ನೇ ಕೊಂದ ಮಗ
45 ವರ್ಷದ ಮಹಿಳೆಯನ್ನು ಆಕೆಯ ಮಗನೇ ಇರಿದು ಕೊಂದಿರುವ ಘಟನೆ ದಕ್ಷಿಣ ದೆಹಲಿಯಲ್ಲಿ ನಡೆದಿದೆ.
ತಾಯಿಯನ್ನೇ ಕೊಂದಿರುವ 22 ವರ್ಷದ ಆರೋಪಿ ಸಾಗರ್ ತನ್ನ ತಾಯಿಗೆ “ಜೀವನದಿಂದ ಸ್ವಾತಂತ್ರ್ಯ” ನೀಡುವುದಕ್ಕಾಗಿ ಕೊಂದಿದ್ದೇನೆ ಎಂದು ಪೊಲೀಸರಿಗೆ ಹೇಳಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಮಹಿಳೆ ಕಿರುಚುವುದನ್ನು ಕೇಳಿದ ನೆರೆಹೊರೆಯವರು ಪೊಲೀಸರಿಗೆ ಕರೆ ಮಾಡಿದ್ದಾರೆ. ಪೊಲೀಸರು ಸ್ಥಳಕ್ಕೆ ಬಂದಾಗ ಸಾಗರ್ ತನ್ನ ತಾಯಿಯ ದೇಹದ ಪಕ್ಕದಲ್ಲಿ ಕುಳಿತಿದ್ದ. ಮಹಿಳೆಗೆ ಐದು ಬಾರಿ ಚುಚ್ಚಿದ್ದರಿಂದಾಗಿ ಅತಿಯಾದ ರಕ್ತಸ್ರಾವವಾಗಿದ್ದು, ಆಕೆ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾಳೆ.
‘ಆಜ್ ಮೈನೆ ಅಪ್ನಿ ಮಾ ಕೊ ಮುಕ್ತಿ ಡಿ ಹೈ’ (ಇಂದು, ನಾನು ಈ ಜೀವನದಿಂದ ನನ್ನ ತಾಯಿಗೆ ಸ್ವಾತಂತ್ರ್ಯವನ್ನು ನೀಡಿದ್ದೇನೆ) ಎಂದು ಸಾಗರ್ ನಿರಂತರವಾಗಿ ಜಪಿಸುತ್ತಿದ್ದರು ಎಂದು ತನಿಖಾ ಅಧಿಕಾರಿಗಳು ತಿಳಿಸಿದ್ದಾರೆ.
“ಘಟನೆಯ ಬಗ್ಗೆ ಪ್ರಶ್ನಿಸುವಾಗಲೂ, ಆತ ಸಾವಿನ ನಂತರದ ಜೀವನ ಮತ್ತು ತತ್ತ್ವಶಾಸ್ತ್ರದ ಬಗ್ಗೆ ಮಾತನಾಡುತ್ತಿದ್ದ. ಅಸ್ಪಷ್ಟವಾದ ಉತ್ತರಗಳನ್ನು ನೀಡುತ್ತಿದ್ದ. ಅಲ್ಲದೆ, ಆತ ಮಾದಕ ದ್ರವ್ಯ ಮತ್ತು ಮದ್ಯದ ಚಟಕ್ಕೆ ಒಳಗಾಗಿದ್ದ. ಅವುಗಳನ್ನು ಪ್ರತಿದಿನ ಸೇವಿಸುತ್ತಿದ್ದ ಎಂದು ನೆರೆಹೊರೆಯವರು ಹೇಳಿದ್ದಾರೆ. ಅತನ ಉತ್ತರಗಳು ಹಾಗೂ ಆತನ ನಡತೆಯನ್ನು ಗಮನಿಸಿ, ಆತ ಮಾನಸಿಕವಾಗಿ ಸ್ಥಿರವಾಗಿಲ್ಲ. ಆತನಿಗೆ ಭ್ರಮೆಯ ಸಮಸ್ಯೆಗಳಿರಬಹುದಾಗಿ ನಾವು ಅನುಮಾನಿಸುತ್ತೇವೆ ”ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.
“ಆರೋಪಿಯು ಯಾವುದೇ ದೇವರನ್ನು ಅನುಸರಿಸುತ್ತಿದ್ದಾನೆಯೇ ಅಥವಾ ಆತ ಯಾರೊಂದಿಗಾದರೂ ಮಾತನಾಡುತ್ತಿದ್ದಾನೆಯೇ ಎಂದು ಮನಶಾಸ್ತ್ರಜ್ಞರೊಂದಿಗೆ ತನಿಖೆ ನಡೆಸುತ್ತಿದ್ದೇವೆ” ಎಂದು ಅಧಿಕಾರಿ ಹೇಳಿದ್ದಾರೆ.
“ಕೊಲೆ ಪ್ರಕರಣ ದಾಖಲಾಗಿದ್ದು, ಆರೋಪಿಗಳನ್ನು ಬಂಧಿಸಲಾಗಿದೆ. ಕೊಲೆಗೆ ಬಳಸಲಾದ ಅಡಿಗೆ ಚಾಕುವನ್ನು ವಶಪಡಿಸಿಕೊಳ್ಳಲಾಗಿದೆ. ಹೆಚ್ಚಿನ ತನಿಖೆ ನಡೆಯುತ್ತಿದೆ” ಎಂದು ದಕ್ಷಿಣ ದೆಹಲಿಯ ಡಿಸಿಪಿ ಹೇಳಿದ್ದಾರೆ.

