ಆಹಾರ ಡೆಲಿವೆರಿ ದರ ಇಳಿಕೆ, ಡೆಲಿವರಿ ಬಾಯ್‌ಗಳ ಉದ್ಯೋಗಕ್ಕೆ ಕುತ್ತು; ಜೀವನಕ್ಕಿಲ್ಲ ಉಪಾಯ!
ಲಾಕ್‍ಡೌನ್ ಸಂದರ್ಭದಲ್ಲೂ ಜನತೆಗೆ ಆಹಾರ ಡೆಲವರಿ ಮಾಡುವ ಮೂಲಕ ಜನರ ಪರದಾಟವನ್ನು ತಪ್ಪಿಸುವಲ್ಲಿ ನೆರವಾಗಿದ್ದ ಕೆಲಸಗಾರರ ಉದ್ಯೋಗಕ್ಕೆ ಕುತ್ತು ಬಂದೊದಗಿದೆ.
ಬೆಂಗಳೂರಿನಲ್ಲಿ ನಗರದಲ್ಲಿ ಸುಮಾರು 2 ಲಕ್ಷಕ್ಕೂ ಅಧಿಕ ಮಂದಿ ಡೆಲವರಿ ಬಾಯ್‍ಗಳಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಸ್ವಿಗ್ಗಿ ಮತ್ತು ಜೊಮೊಟೊದಂತಹ ಕಂಪನಿಗಳು ಆರ್ಥಿಕ ಸಂಕಷ್ಟದ ಸಮಯದಲ್ಲಿ ಆರ್ಡರ್‍ಗಳ ಡೆಲಿವರಿ ದರವನ್ನು ಇಳಿಸಿದ್ದು, ನೌಕರರಿಗೆ ಕೆಲಸ ಮಾಡುವವರು ಮಾಡಬಹುದು, ಇಲ್ಲದಿದ್ದರೆ ನಿಮ್ಮ ದಾರಿ ನೀವು ನೋಡಿಕೊಳ್ಳಬಹುದು ಎಂಬ ನಿರ್ದಾಕ್ಷೀಣ್ಯದ ಮಾತುಗಳನ್ನು ಹೇಳಿವೆ ಎಂದು ಆಹಾರ ಡೆಲಿವರಿ ಉದ್ಯೋಗಿಗಳು ಹೇಳಿಕೊಂಡಿದ್ದಾರೆ.
ಲಾಕ್‍ಡೌನ್ ಸಂದರ್ಭದಲ್ಲೂ ಕೊರೊನಾ ಭೀತಿಯಲ್ಲಿ ಕಾರ್ಯನಿರ್ವಹಿಸಿದ್ದ ಡೆಲವರಿ ಬಾಯ್‍ಗಳಿಗೆ ಒಂದು ಆರ್ಡರ್‍ಗೆ 30 ರೂ ನೀಡುವ ಕಾರಣ ಅವರಿಗೆ ಹೆಚ್ಚು ಆರ್ಡರ್‍ಗಳು ನೀಡುತ್ತಿಲ್ಲ. ಇನ್ನೂ ಊರುಗಳಿಂದ ಹಿಂತಿರುಗಿ ಕೆಲಸ ಆರಂಭಿಸಿರುವ ಡೆಲವರಿ ಬಾಯ್‍ಗಳಿಗೆ ಒಂದು ಆರ್ಡರ್‍ಗೆ ಕೇವಲ 20 ರೂ ನೀಡುತ್ತೇವೆ ಎಂದು ಕಂಪನಿಗಳು ಹೇಳಿವೆ. ಆದರೆ, ಎಲ್ಲಿಯೂ ಉದ್ಯೋಗ ಸಿಗದ ನಿರುದ್ಯೋಗ ತಾಂಡವವಾಡುತ್ತಿರುವ ಸಂದರ್ಭವನ್ನು ಎದುರಿಸಲಾಗದೆ ಅದೇ ಕೆಲಸ ನಿರ್ವಹಿಸುತ್ತಿದ್ದರೆ, ಇನ್ನೂ ಕೆಲವರು ಕೆಲಸ ತೊರೆದು ತಮ್ಮ ಊರುಗಳತ್ತ ಮುಖ ಮಾಡುತ್ತಿದ್ದಾರೆ.

ಈ ಮೊದಲು ಒಂದು ಆರ್ಡರ್ ಡೆಲಿವರಿಗೆ 40 ರೂ ನೀಡಲಾಗುತ್ತಿತ್ತು, ಕಳದೆ 6 ತಿಂಗಳ ಹಿಂದೆ ಅದನ್ನು 30ಕ್ಕೆ ಇಳಿಸಲಾಗಿತ್ತು. ಈಗ ಕೇವಲ 20 ರೂಗೆ ಇಳಿಸಿದ್ದಾರೆ. ಮೊದಲು ಹತ್ತಿರದಲ್ಲಿಯೇ ಡೆಲವರಿ ನೀಡಿದರೂ ನಿಗಧಿತ ಮೊತ್ತವನ್ನು ಕೊಡಲಾಗುತ್ತಿತ್ತು, ಈಗ ಕಡಿಮೆ ಅಂತರದ ಡೆಲಿವರಿಯ ಮೊತ್ತದಲ್ಲಿಯೂ ಕಡಿತಗೊಳಿಸಲಾಗಿದೆ. ರಾತ್ರಿಯೆಲ್ಲಾ ದುಡಿದರೂ 800 ರೂ ಸಂಪಾದಿಸುವುದು ಕಷ್ಟವಾಗುತ್ತಿದೆ. ಜೊತೆಗೆ ಇನ್‍ಸೆಂಟೀವ್ ಸಹ ಕಡಿಮೆ ಮಾಡಿದ್ದಾರೆ ಎಂದು ಡೆಲವರಿ ಬಾಯ್ ಶ್ರೀನಿವಾಸ್ ಹೇಳಿದ್ದಾರೆ.
ಲಾಕ್‌ಡೌನ್‌ಗೂ ಮುನ್ನ ಮಧ್ಯರಾತ್ರಿ 12 ರಿಂದ 3 ಗಂಟೆಯವೆರೆಗೆ ಕೆಲಸ ಮಾಡಿದರೆ ಒಂದು ಆರ್ಡರ್‍ಗೆ 50 ರೂ ನೀಡಲಾಗುತ್ತಿತ್ತು. ಈಗ 40 ರೂಗಳಿಗೆ ಇಳಿಸಲಾಗಿದೆ. ಜೊತೆಗೆ ಒಮ್ಮೊಮ್ಮೆ ಒಂದೂ ಆರ್ಡರ್ ಸಹ ಸಿಗುವುದಿಲ್ಲ. ಕಾದು ಕಾದು ಸುಸ್ತಾಗಬೇಕಿದೆ. ನಮಗೆ ಕುಳಿತುಕೊಳ್ಳಲು ಜಾಗವಿರುವುದಿಲ್ಲ. ರಸ್ತೆಯಲ್ಲೇ ನಿಂತು ಕಾಲ ಕಳೆಯಬೇಕು ಎಂದು ಜೋಮೋಟೋ ಡೆಲವರಿ ಬಾಯ್ ಕೃಷ್ಣ ತಿಳಿಸಿದ್ದಾರೆ.
ಹಗಲು-ಇರುಳು ಎನ್ನದೆ ದುಡಿದರೂ ನಮಗೆ ಯಾವುದೇ ಬೆಲೆ ಇಲ್ಲದಂತೆ ಆಗಿದೆ. ಕೊರೊನಾ ಸಂದರ್ಭದಲ್ಲೂ ದೂರದ ಪ್ರದೇಶಗಳಿಗೆ ಹೋಗಿ ಆಹಾರ ತಲುಪಿಸಿದ್ದೇವೆ. ಆದರೆ ನಮ್ಮ ಆರೋಗ್ಯದ ದೃಷ್ಟಿಯಿಂದ ಕಂಪನಿಯು ಯಾವುದೇ ಮಾಸ್ಕ್, ಸ್ಯಾನಿಟೈಸರ್, ಗ್ಲೌಸ್ ಏನೊಂದು ನೀಡಲಿಲ್ಲ. ಜೊತೆಗೆ ಆಹಾರ ಆರ್ಡರ್ ತೆಗೆದುಕೊಂಡಾಗ ನಾವು ಒಂದು ಸೆಲ್ಫಿ ತೆಗೆದು ಕಳಿಸಬೇಕು. ಆಗ ಮುಖದಲ್ಲಿ ಮಾಸ್ಕ್ ಇರಬೇಕು ಅದು ಇಲ್ಲದಿದ್ದರೆ ಒಂದು ದಿನ ಪೂರ್ತಿ ಐಡಿ ನಂಬರ್‍ನ್ನು ಬ್ಲಾಕ್ ಮಾಡಲಾಗುತ್ತದೆ ಎಂದು ಸ್ವಿಗ್ಗಿ ಡೆಲವರಿ ಬಾಯ್ ಬಸವರಾಜು ಮಾಹಿತಿ ನೀಡಿದ್ದಾರೆ.
ಫೇಕ್ ಆರ್ಡರ್‍ಗಳು ಬಂದಾಗ ನಮ್ಮ ಜೀವಕ್ಕೆ ಕುತ್ತು ಬರುತ್ತದೆ. ಇದರ ಬಗ್ಗೆ ಕಂಪನಿಗೆ ದೂರು ನೀಡಲೂ ಸಹ ಯಾವುದೇ ವ್ಯವಸ್ಥೆ ಇಲ್ಲ. ಜೊತೆಗೆ ಕೊರೊನಾ ಸಂಕಷ್ಟದಲ್ಲಿ ಯಾವುದೇ ನಿರ್ಧಾಕ್ಷೀಣ್ಯವಿಲ್ಲದೆ ಆರ್ಡರ್ ರೇಟ್ ಕಡಿಮೆ ಮಾಡಲಾಗಿದೆ. ಪ್ರಶ್ನೆ ಮಾಡಿದರೆ, ಬೇಕಿದ್ದರೆ ದುಡಿಯಿರಿ, ಇಲ್ಲವೆಂದರೆ ಬಿಟ್ಟು ಹೋಗಬಹುದು ಎಂದು ಹೇಳುತ್ತಿದ್ದಾರೆ. ಅವರ ಅಮಾನವೀಯ ಮಾತುಗಳು ತುಂಬಾ ಬೇಸರ ತಂದಿದೆ ಎಂಬುದು ಡೆಲವರಿ ಬಾಯ್‍ಗಳ ಅವಲತ್ತುಕೊಂಡಿದ್ದಾರೆ.

