ಕಾರ್ಕಾಳ ಶಾಸಕ ಸುನೀಲ್ ಬಂಗಲೆಗೆ ಬಳಸುತ್ತಿರುವ ಸಿಮೆಂಟ್‌ ಯಾರದ್ದು? ವಿಡಿಯೋ ಬಿಚ್ಚಿಟ್ಟ ಸತ್ಯ

ಕಾರ್ಕಳ ತಾಲ್ಲೂಕು ಪಂಚಾಯ್ತಿ ರಸ್ತೆಯಲ್ಲಿ ಭರ್ಜರಿ ಬಂಗ್ಲೆಯೊಂದು ತಲೆಯೆತ್ತುತ್ತಿದೆ. ಮುಂಬೈನ ಶಿವಸೇನೆಯ ಮುಖ್ಯ ಕಚೇರಿಯಲ್ಲಿರುವ ಬೃಹತ್ ಕಂಬಗಳನ್ನು ಹೋಲುವ ಆರು ಎತ್ತರದ ಕಂಬಗಳ ಮನೆಯಿದು. ಒಂದೊಂದು ಕಂಬಕ್ಕೆ ಭರ್ತಿ ಏಳೂ ನೂರು ಮೂಟೆ ಸಿಮೆಂಟ್, ಟನ್‌ಗಟ್ಟಲೆ ಕಬ್ಬಿಣ ಬಳಸಲಾಗಿದೆ ಎನ್ನಲಾಗುತ್ತಿದೆ. ಈ ಬಂಗಲೆಯ ಮುಂದೆ ನಿಂತು ಮನೆ ಕಟ್ಟಿಸುತ್ತಿರುವ ಥ್ರಿಲ್ ಅನುಭವಿಸುತ್ತಿರುವುದು ಬೇರೆ ಯಾರೂ ಅಲ್ಲ, ಕಾರ್ಕಳದ ಬಿಜೆಪಿ ಶಾಸಕ ಸುನೀಲ್ ಕುಮಾರ್.

ಇಷ್ಟು ದಿನ ಬಿಜೆಪಿ ಕಚೇರಿಯಿದ್ದ ಈ ಜಾಗವನ್ನು ಸುನೀಲ್ ಬೇನಾಮಿಯಾಗಿ ತನ್ನ ಹೆಂಡತಿಯ ತಾಯಿ (ಅತ್ತೆ) ಹೆಸರಿನಲ್ಲಿ ಖರೀದಿಸಿದ್ದಾರೆ ಎಂಬ ಆರೋಪ ಬಿಜೆಪಿ ಕಾರ್ಯಕರ್ತರದು. ಒಂದು ಅಂದಾಜಿನಂತೆ ಈ ಬಂಗ್ಲೆಯ ಕಟ್ಟಡಕ್ಕೇ ಐದು ಕೋಟಿ ರೂ ಬೇಕು. ಆ ನಂತರ ಅಂದ-ಚಂದ ಫಿನಿಶಿಂಗ್ ಅಂತೆಲ್ಲ ಇನ್ನೆರಡು ಕೋಟಿ ಅನಿವಾರ್ಯವಂತೆ. ಅವರು ಎಷ್ಟಾದರೂ ಖರ್ಚು ಮಾಡಿ ಬಂಗಲೆ ಕಟ್ಟಲಿ. ಆದರೆ ಆ ಬಂಗಲೆ ಕಟ್ಟಲು ಬಳಸುತ್ತಿರುವ ಸಿಮೆಂಟ್‌ ಮಾತ್ರ ಸರ್ಕಾರದ್ದು ಎಂಬ ಆರೋಪವನ್ನು ಬಿಜೆಪಿ ಕಾರ್ಯಕರ್ತರೆ ಹೊರಿಸಿದ್ದು, ವಿಡಿಯೋ ದಾಖಲೆ ಸಹ ಬಿಡುಗಡೆ ಮಾಡಿದ್ದಾರೆ.

ಈಗಾಗಲೇ ಈ ಬಂಗಲೆಗೆ 3 ಸಾವಿರ ಸಿಮೆಂಟ್ ಚೀಲ ಬಳಸಲಾಗಿದೆ. ವಿಡಿಯೋದಲ್ಲಿ ನಿರ್ಮಾಣ ಹಂತದಲ್ಲಿರುವ ಬಂಗಲೆಯಲ್ಲಿನ ಅಲ್ಟ್ರಾಟೆಕ್ ಕಂಪನಿಯ ಸಿಮೆಂಟ್ ಚೀಲಗಳ ಮೇಲೆ ’ನಾಟ್ ಫಾರ್ ಸೇಲ್’ ಎಂದು ಅಚ್ಚಿಸಿರುವುದು ಕಾಣುತ್ತದೆ. ಅಂದರೆ ಈ ಸಿಮೆಂಟ್ ಪ್ರಾಮಾಣಿಕವಾಗಿ ಖರೀದಿಸಿದ್ದಲ್ಲ. ಸರ್ಕಾರಿ ಗೋದಾಮುಗಳಿಂದ ತಂದದ್ದು ಅಥವಾ ಸರ್ಕಾರಿ ಗುತ್ತಿಗೆದಾರರ ಹೆದರಿಸಿ ತರಿಸಿಕೊಂಡಿದ್ದು ಎಂಬುದು ಕಾರ್ಯಕರ್ತರ ಆರೋಪ. ನಾನುಗೌರಿ.ಕಾಂಗೆ ಸಿಕ್ಕ ವಿಡಿಯೋ ದಾಖಲೆಯಂತೆ ಇವತ್ತಿಗೂ ಈ ನಿರ್ಮಾಣ ಹಂತದ ಮನೆಯಲ್ಲಿ ಸರ್ಕಾರದ ಸೀಲ್ ಇರುವ ಸಿಮೆಂಟ್ ಮೂಟೆಗಳಿರುವುದು ಕಂಡುಬಂದಿದೆ.

ವಿಡಿಯೋ ನೋಡಿ

ಸರ್ಕಾರಿ ಕಾಮಗಾರಿಗಳಿಗೆ ಸಿಮೆಂಟ್-ಕಬ್ಬಿಣ ಮತ್ತಿತರ ಸಾಮಗ್ರಿ ಒದಗಿಸುವ ಕೆ.ಆರ್.ಐ.ಡಿ.ಎಲ್ ಎಂಬ ಸಂಸ್ಥೆಯಿದೆ. ಸರ್ಕಾರಿ ಕಾಮಗಾರಿ ನಡೆಸುವ ಗುತ್ತಿಗೆದಾರರಿಗೆ ಈ ಸರ್ಕಾರಿ ಸಂಸ್ಥೆ ಮಾರುಕಟ್ಟೆ ದರಕ್ಕಿಂತಲೂ ಕಡಿಮೆ ಬೆಲೆಗೆ ಸಾಮಗ್ರಿ ಪೂರೈಸುತ್ತದೆ. ಇದನ್ನು ಗುತ್ತಿಗೆದಾರ ಯಾರಿಗೂ ದಾನ ಅಥವಾ ಮಾರಾಟ ಮಾಡುವಂತಿಲ್ಲ. ಹಾಗಿದ್ದರೆ ಶಾಸಕ ಸುನಿಲ್ ಬಂಗಲೆಗೆ ಈ ಸರ್ಕಾರಿ ಸಿಮೆಂಟ್ ಹೇಗೆ ಬಂತು? ಮೂಲಗಳ ಪ್ರಕಾರ ಕೋಟ್ಯಾಂತರ ರೂ.ಗಳ ಕೆ.ಆರ್.ಐ.ಡಿ.ಎಲ್ ಕಾಮಗಾರಿ ಕಾರ್ಕಳದಲ್ಲಿ ನಡೆಯುತ್ತಿದ್ದು ಆ ಕಾಮಗಾರಿ ಕಂಟ್ರಾಕ್ಟರ್‌ಗಳಿಂದ ಲೋಡ್‌ಗಟ್ಟಲೆ ಸಿಮೆಂಟ್ ಶಾಸಕ ಸಾಹೇಬರಿಗೆ ಸರಬರಾಜಾಗಿದೆ ಎನ್ನಲಾಗಿದೆ.

ಕಾರ್ಕಳದಲ್ಲಿ ನಡೆಯುತ್ತಿರುವ 108 ಕೋಟಿ ರೂ.ಗಳ ಏತ ನೀರಾವರಿ ಯೋಜನೆಯ ಗುತ್ತೇಗೆದಾರ ಕಂಪನಿಯು ಶಾಸಕರಿಗೆ ಕಾಣಿಕೆಯಾಗಿ ಸಿಮೆಂಟ್ ನೀಡಿರಬಹುದು ಎಂದು ಕೆಲವರು ಆರೋಪಿಸುತ್ತಾರೆ. ಇನ್ನೊಂದೆಡೆ ಸದರಿ ಕಾಮಗಾರಿ ಉಸ್ತುವಾರಿ ನೋಡಿಕೊಳ್ಳುತ್ತಿರುವುದು ಜಿಲ್ಲಾ ಯುವ ಬಿಜೆಪಿ ಅಧ್ಯಕ್ಷನೂ ಶಾಸಕರ ಪರಮಾಪ್ತ ಸರ್ಕಾರಿ ಗುತ್ತಿಗೆದಾರನೂ ಆಗಿರುವವರು ಕಾರ್ಕಳ ವಿಖ್ಯಾತ್ ಶೆಟ್ಟಿ. ಕಾರ್ಕಳದ ಬಹುತೇಕ ಸರ್ಕಾರಿ ಗುತ್ತಿಗೆಗಳೆಲ್ಲಾ ಇವರಿಗೆ ದಕ್ಕುವುದರಲ್ಲಿ ಶಾಸಕರ ಪಾತ್ರವಿದೆಯೇ? ಅದಕ್ಕಾಗಿ ಶಾಸಕರಿಗೆ ಈ ರೀತಿಯ ಕಾಣಿಕೆಗಳು ಸಿಗುತ್ತವೆಯೇ ಎಂದು ಕಾರ್ಯಕರ್ತರು ಪ್ರಶ್ನಿಸುತ್ತಿದ್ದಾರೆ. ಉತ್ತರಿಸುವ ಕೆಲಸ ಶಾಸಕರದಾಗಿದೆ.


ಇದನ್ನೂ ಓದಿಸುಳ್ಳು ಸುದ್ದಿ ಪ್ರಕಟಿಸಿದ ಬಿಜೆಪಿ ಮುಖಂಡ, ನಟ ಜಗ್ಗೇಶ್ ವಿರುದ್ಧ ದೂರು ದಾಖಲು!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights