ಕುರಿಗಾಹಿಗೆ ಕೊರೊನಾ; ಕುರಿಗಳೂ ಕ್ವಾರಂಟೈನ್‌! ಪ್ರಾಣಿಗಳ ಕೊರೊನಾ ಬರಲ್ಲ!

ಕುರಿಗಾಹಿಗೆ ಕೊರೊನಾ ಬಂದ ಕಾರಣಕ್ಕೆ ಅವನ 45 ಕುರಿಗಳನ್ನು ಕ್ವಾರಂಟೈನ್ ಮಾಡಿರುವ ಅಪರೂಪದ ಪ್ರಸಂಗ ತುಮಕೂರು ಜಿಲ್ಲೆಯ ಚಿಕ್ಕನಾಯನಕಹಳ್ಳಿ ಗೋಡೆಕೆರೆ ಗೊಲ್ಲರಹಟ್ಟಿಯಲ್ಲಿ ನಡೆದಿದೆ. ಇದು ಅಕ್ಕಪಕ್ಕದ ಗೊಲ್ಲರಹಟ್ಟಿಗಳ ಜನರು ಆತಂಕಗೊಳ್ಳುವಂತೆ ಮಾಡಿದೆ. ಎತ್ತಿಗೆ ಜ್ವರ ಬಂದರೆ ಎಮ್ಮೆಗೆ ಬರೆ ಎಂಬಂತಿದೆ ಈ ಪ್ರಕರಣ. ಅಷ್ಟೇ ಅಲ್ಲದೇ ಸಚಿವ ಮಾಧುಸ್ವಾಮಿಯವರ ಆದೇಶ ಪಾಲನೆಗಾಗಿ ಜಿಲ್ಲಾ ಪಶುವೈದ್ಯ ಇಲಾಖೆಯ ಉಪ ನಿರ್ದೇಶಕರೂ ಗ್ರಾಮಕ್ಕೆ ತೆರಳಿ ಕುರಿಗಳ ಗಂಟಲು ಸ್ರಾವವನ್ನು ಪರೀಕ್ಷೆಗೆ ಕಳಿಸಲಾಗಿದೆ.

ಹೌದು! ಇದೊಂದು ವಿಶೇಷ ಪ್ರಕರಣ. ಗೋಡೆಕೆರೆ ಗೊಲ್ಲರಹಟ್ಟಿಯ ಕುರಿಗಾಹಿ ಯುವಕನಿಗೆ ಕೊರೊನ ಸೋಂಕು ದೃಢಪಟ್ಟು ಆತನನ್ನು ಜಿಲ್ಲಾಸ್ಪತ್ರೆಯ ಐಸೋಲೇಷನ್ ವಾರ್ಡಿನಲ್ಲಿ ಇಡಲಾಗಿದೆ. ಕುರಿಗಾಹಿಗೆ ಸೋಂಕು ಬಂದಮೇಲೆ ಕುರಿಗಳಿಗೂ ಅಂಟಿರಬಹುದೆಂದು ಜಿಲ್ಲಾಕೇಂದ್ರದಲ್ಲಿ ಕುಳಿತು ಸಚಿವರು ಕುರಿಗಳನ್ನು ಕ್ವಾರಂಟೈನ್ ಮಾಡುವಂತೆ ಆದೇಶಿಸಿದ್ದಾರೆ. ಹಾಗಾಗಿ 45 ಕುರಿಗಳನ್ನು ಪ್ರತ್ಯೇಕವಾಗಿ ಕೂಡಿಡಲಾಗಿದೆ.

ಸಚಿವರ ಆದೇಶ ಪಾಲನೆಗಾಗಿ ಜಿಲ್ಲಾ ಪಶುವೈದ್ಯಕೀಯ ಇಲಾಖೆಯ ಉಪನಿರ್ದೇಶಕ ಕೆ.ಜಿ.ನಂದೀಶ್ ತಂಡ ಗೋಡೆಕೆರೆ ಗೊಲ್ಲರಹಟ್ಟಿಗೆ ತೆರಳಿ ಕುರಿಗಳ ತಪಾಸಣೆ ನಡೆಸಿದ್ದಾರೆ. ಕುರಿಗಳ ಗಂಟಲು ಸ್ರಾವವನ್ನು ತೆಗೆದ ಪಶುವೈದ್ಯರ ತಂಡ ಭೂಫಾಲ್ ವೈರಾಲಜಿ ಸೆಂಟರ್ ಗೆ ಕಳಿಸಿಕೊಟ್ಟಿದೆ. ಇದರಿಂದ ಜನರೂ ಕೂಡ ಭೀತಿಗೆ ಒಳಗಾಗಿದ್ದು ಏನಾಗುವುದೋ ಏಂಬ ಆತಂಕ ಮನೆ ಮಾಡಿದೆ.

ನಾನುಗೌರಿ.ಕಾಂ ಜೊತೆ ಮೊಬೈಲ್ ನಲ್ಲಿ ಮಾತನಾಡಿದ ಜಿಲ್ಲಾ ಪಶುವೈದ್ಯಕೀಯ ಇಲಾಖೆಯ ಉಪನಿರ್ದೇಶಕ ಕೆ.ಜಿ.ನಂದೀಶ್ “ಪ್ರಾಣಿಗಳಿಗೆ ಕೊರೊನಾ ಸೋಂಕು ಹರಡುವುದಿಲ್ಲ. ಆದರೆ ನಾಲ್ಕು ಕುರಿಗಳು ಸತ್ತ ಹಿನ್ನೆಲೆಯಲ್ಲಿ ಜನರು ಭೀತರಾಗಿದ್ದರು. ಆದ್ದರಿಂದ ಕುರಿಗಳ ಸ್ರಾವವನ್ನು ಭೋಪಾಲ್ ಕೇಂದ್ರಕ್ಕೆ ಪರೀಕ್ಷೆಗೆ ಕಳಿಸಿದ್ದೇವೆ. ಬೆಂಗಳೂರಿಗೂ ಕಳಿಸಿದ್ದೇವೆ. ಕುರಿಗಳನ್ನು ಪ್ರತ್ಯೇಕವಾಗಿಡಲಾಗಿದೆ. ಸೋಂಕಿತ ಕುರಿಗಾಹಿ ತುಮಕೂರಿನಲ್ಲಿದ್ದರೆ ತಂದೆ ತಾಯಿ ತಾಲೂಕು ಆಸ್ಪತ್ರೆಯಲ್ಲಿ ಕ್ವಾರಂಟೈನಲ್ಲಿದ್ದಾರೆ.

ಸದ್ಯಕ್ಕೆ ಕುರಿ ನೋಡಿಕೊಳ್ಳಲು ಯಾರೂ ಇಲ್ಲ. ಜೊತೆಗೆ ಕುರಿ ಸಾವನ್ನಪ್ಪಿರುವುದರಿಂದ ಬೇರೆ ಪ್ರಾಣಿಗಳಿಗೆ ರೋಗ ಅಂಟಬಾರದು ಎಂಬ ಉದ್ದೇಶದಿಂದ ಕೊರೊನಾ ಸೋಂಕಿತ ವ್ಯಕ್ತಿಯ ಕುರಿಗಳನ್ನು ಪ್ರತ್ಯೇಕವಾಗಿ ಇರಿಸಿದ್ದೇವೆ. ಅದು ಕ್ವಾರಂಟೈನ್ ಅಲ್ಲ. ಜನರು ಕೂಡ ಸುಳ್ಳು ವದಂತಿಗಳಿಗೆ ಕಿವಿಗೊಡಬೇಡಿ ಎಂದು ಮನವಿ ಮಾಡಿದರು.

ಗೋಡೆಕೆರೆ ಗೊಲ್ಲರಹಟ್ಟಿಯಲ್ಲಿ ಕೊರೋನಾ ಸೋಂಕು ದೃಢಪಟ್ಟಿರುವುದು ಮತ್ತು ಕುರಿಗಳನ್ನು ಕ್ವಾರಂಟೈನ್ ಮಾಡುವ ವಿಷಯ ಜನರಲ್ಲಿ ಹಲವು ರೀತಿಯ ಗೊಂದಲ ಹುಟ್ಟುಹಾಕಿದೆ. ಈ ಕುರಿತು ನಾನುಗೌರಿ.ಕಾಂ ಜೊತೆ ಮಾತನಾಡಿದ ಯುವ ಮುಖಂಡ ಸಾಸಲು ಸತೀಶ್, ನಿಜವಾಗಿಯೂ ಕೊರೊನಾ ಸೋಂಕು ಬಂದಿರುವುದೇ ಬೇರೆ ಯುವಕನಿಗೆ. ಕುರಿಗಳು ಆ ಯುವಕನಿಗೆ ಸೇರಿದವಲ್ಲ. ಕುರಿಗಳನ್ನು ಕ್ವಾರಂಟೈನ್ ಮಾಡಿ ಎಂದು ಜಿಲ್ಲಾ ಉಸ್ತುವಾರಿ ಸಚಿವರು ಹೇಳುವ ಮೂಲಕ ಜನರಿಗೆ ತಪ್ಪು ಸಂದೇಶ ಹೋಗುವಂತೆ ಮಾಡಿದ್ದಾರೆ. ಕುರಿ ಮಾಲಿಕರ ಕುಟುಂಬವನ್ನು ಉಳಿದವರು ವಿಲನ್ ಅಂತೆ ನೋಡುವಂತಹ ಪರಿಸ್ಥಿತಿ ಸೃಷ್ಟಿ ಮಾಡಿದ್ದಾರೆ ಸೂಕ್ಷ್ಮ ವಿಚಾರಗಳನ್ನು ದೊಡ್ಡದು ಮಾಡುವ ಬದಲು ಗೊತ್ತಿಲ್ಲದೆ ಬಗೆಹರಿಸಬಹುದಿತ್ತು. ಸ್ಥಳಕ್ಕೆ ಬಂದು ನೋಡದ ಸಚಿವ ಮಾಧುಸ್ವಾಮಿ ಮತ್ತು ಜಿಲ್ಲಾಧಿಕಾರಿಗಳು ಹೀಗೆ ಆದೇಶ ಮಾಡುವುದು ಸರಿಯಾದ ಕ್ರಮವಲ್ಲ ಎಂದು ಬೇಸರ ವ್ಯಕ್ತಪಡಿಸಿದರು.


ಇದನ್ನೂ ಓದಿ: ಕೊರೊನಾಗೆ ಭಾರತದ ಕೊವಾಕ್ಸಿನ್ ಲಸಿಕೆ; ಮಾನವ ಪ್ರಯೋಗಕ್ಕೆ ಅಸ್ತು ಎಂದ ಸರ್ಕಾರ

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights