ರಾಜ್ಯಗಳಿಗೆ 5 ಅಂಶಗಳ ಮಾರ್ಗಸೂಚಿ ಕೊಟ್ಟ ಒಕ್ಕೂಟ ಸರ್ಕಾರ; ತೆಲಂಗಾಣ ಸಂಪೂರ್ಣ ಅನ್‌ಲಾಕ್‌!

ದೇಶದಲ್ಲಿ ಕೊರೊನಾ 2ನೇ ಅಲೆಯ ಅಬ್ಬರ ಇಳಿಯುತ್ತಿದೆ. ಅದರೆ, 3ನೇ ಅಲೆಯ ಆತಂಕ ಹೆಚ್ಚಾಗಿದೆ. ಹೀಗಾಗಿ ಕೊರೊನಾ ಕಡಿಮೆಯಾಗುತ್ತಿದ್ದರೂ ಸಹ ಎಲ್ಲಾ ರಾಜ್ಯಗಳು ಪ್ರಮುಖವಾಗಿ 05 ಅಂಶಗಳನ್ನು ಪಾಲಿಸಬೇಕು ಎಂದು ಒಕ್ಕೂಟ ಸರ್ಕಾರ ಮಾರ್ಗಸೂಚಿ ಹೊರಡಿಸಿದೆ. ಈ ಮಧ್ಯೆಯೂ ತೆಲಂಗಾಣ ಲಾಕ್‌ಡೌನ್‌ಗೆ ಗುಡ್‌ಬೈ ಹೇಳಿದ್ದು, ಸಂಪೂರ್ಣವಾಗಿ ಅನ್‌ಲಾಕ್‌ ಮಾಡಿದೆ.

‘ಸೂಕ್ತ ವರ್ತನೆ, ಪರೀಕ್ಷೆ ಮಾಡುವುದು, ಪತ್ತೆ ಹಚ್ಚುವುದು, ಚಿಕಿತ್ಸೆ ನೀಡುವುದು ಮತ್ತು ಲಸಿಕೆ ನೀಡುವುದು’ ಈ ಐದು ಪ್ರಮುಖ ಕಾರ್ಯತಂತ್ರಗಳನ್ನು ರೋಗ ಹರಡುವ ಸ್ಥಳಗಳಲ್ಲಿ ಖಚಿತಪಡಿಸಬೇಕು ಎಂದು ಒಕ್ಕೂಟ ಸರ್ಕಾರ ರಾಜ್ಯಗಳಿಗೆ ಹೇಳಿದೆ.

ಎಲ್ಲಾ ರಾಜ್ಯಗಳು ಮತ್ತು ಒಕ್ಕೂಟಾಡಳಿತ ಪ್ರದೇಶ (Union Territories) ಗಳಿಗೆ ಬರೆದಿರುವ ಪತ್ರದಲ್ಲಿ, ಒಕ್ಕೂಟ ಗೃಹ ಕಾರ್ಯದರ್ಶಿ ಅಜಯ್ ಭಲ್ಲಾ, “ಪ್ರಸ್ತುತ ಸನ್ನಿವೇಶದಲ್ಲಿ ಕೊರೊನಾ ವಿರುದ್ಧ ನೀಡುವ ಲಸಿಕೆಯೆ ಸೋಂಕು ಹರಡವುದುದನ್ನು ತಡೆಯುವಲ್ಲಿ ನಿರ್ಣಾಯಕವಾದ ಪಾತ್ರ ವಹಿಸುತ್ತದೆ” ಎಂದು ಹೇಳಿದ್ದಾರೆ.

ಆದ್ದರಿಂದ, ಎಲ್ಲಾ ರಾಜ್ಯಗಳು ಮತ್ತು ಒಕ್ಕೂಟಾಡಳಿತ ಪ್ರದೇಶದ ಸರ್ಕಾರಗಳು ಲಸಿಕೆ ನೀಡುವ ವೇಗವನ್ನು ಹೆಚ್ಚಿಸಿ ಗರಿಷ್ಠ ಸಂಖ್ಯೆಯ ಜನರನ್ನು ಶೀಘ್ರವಾಗಿ ಒಳಗೊಳ್ಳಬೇಕು ಎಂದು ಅವರು ಹೇಳಿದ್ದಾರೆ.

ದೆಹಲಿ ಮಾರುಕಟ್ಟೆಗಳಲ್ಲಿ ಕೊರೊನಾ ಮಾರ್ಗಸೂಚಿಗಳ ಉಲ್ಲಂಘನೆಯಾಗುತ್ತಿದೆ ಎಂದು ದೆಹಲಿ ಹೈಕೋರ್ಟ್ ಹೇಳಿದ ಒಂದು ದಿನದ ನಂತರ ಒಕ್ಕೂಟ ಸರ್ಕಾರ ಈ ಪತ್ರವನ್ನು ಬರೆಯುತ್ತಿದೆ. ಮಾರ್ಗಸೂಚಿಯ ಉಲ್ಲಂಘನೆಯು ಮೂರನೇ ಅಲೆಯ ಸೋಂಕನ್ನು ತ್ವರಿತಗೊಳಿಸುತ್ತದೆ ಎಂದು ಅವರು ಹೇಳಿದ್ದಾರೆ.

ಮಾರ್ಗಸೂಚಿ ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಬೇಕು, ಅಂಗಡಿಯವರನ್ನು ಈ ನಿಟ್ಟಿನಲ್ಲಿ ಸಂವೇದನಾಶೀಲಗೊಳಿಸಬೇಕು. ಇದಕ್ಕಾಗಿ ಮಾರುಕಟ್ಟೆಗಳು ಮತ್ತು ಮಾರಾಟಗಾರರ ಸಂಘಗಳೊಂದಿಗೆ ಸಭೆ ನಡೆಸಬೇಕು ಎಂದು ನ್ಯಾಯಾಲಯ ಅಧಿಕಾರಿಗಳಿಗೆ ಸೂಚಿಸಿತ್ತು.

ತಮಿಳುನಾಡು, ದೆಹಲಿ, ಕಾರ್ನಾಟಕ ಸೇರಿದಂತೆ ಹಲವು ರಾಜ್ಯಗಳಲ್ಲಿ ಲಾಕ್‌ಡೌನಿನ ನಿರ್ಬಂಧಗಳು ಹಂತಹಂತವಾಗಿ ತೆರವುಗೊಳ್ಳುತ್ತಿದೆ.

ತೆಲಂಗಾಣವು ರಾಜ್ಯದಲ್ಲಿ ಹೇರಲ್ಪಟ್ಟ ಲಾಕ್‌ಡೌನ್‌‌ನ ಎಲ್ಲಾ ನಿರ್ಬಂಧಗಳನ್ನು ಇಂದಿನಿಂದ ಸಂಪೂರ್ಣವಾಗಿ ಕಿತ್ತು ಹಾಕಲಾಗಿದೆ. ರಾಜ್ಯದಲ್ಲಿ ಗಣನೀಯವಾಗಿ ಸೋಂಕಿನ ಪ್ರಮಾಣ ಕಡಿಮೆಯಾಗಿರುವುದರಿಂದ ರಾಜ್ಯದ ಸಚಿವ ಸಂಪುಟ ಈ ನಿರ್ಧಾರ ಕೈಗೊಂಡಿದೆ.

ಭಾರತದಲ್ಲಿ ಕಳೆದ ಒಂದು ದಿನ 60,753 ಕೊರೊನಾ ಪ್ರಕರಣಗಳು ದಾಖಲಾಗಿದೆ. ಹಾಗೆಯೆ ಸೋಂಕಿನಿಂದಾಗಿ ಕಳೆದ ಒಂದು ದಿನದಲ್ಲಿ 1,647 ಸಾವುಗಳಾಗಿವೆ.

ಇದನ್ನೂ ಓದಿ: ಆಂಧ್ರ ರಾಜ್ಯಪಾಲರಾಗಿ ಯಡಿಯೂರಪ್ಪ? ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಖಚಿತ?

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights