ರಾಜೀನಾಮೆ ನೀಡದೆ BJP ಸೇರಿರುವ 10 ಶಾಸಕರು ಪಕ್ಷಕ್ಕೆ ಮರಳಲು ಅವಕಾಶವಿಲ್ಲ: ದಿನೇಶ್‌ ಗುಂಡೂರಾವ್

ಗೋವಾದಲ್ಲಿ ಕಾಂಗ್ರೆಸ್‌ ಪಕ್ಷದಿಂದ ಸ್ಪರ್ಧಿಸಿ ಗೆದ್ದು, ರಾಜೀನಾಮೆ ನೀಡದೇ ಬಿಜೆಪಿ ಸೇರಿರುವ 10 ಶಾಸಕರನ್ನು ಮತ್ತೆ ಪಕ್ಷಕ್ಕೆ ವಾಪಸ್‌ ಸೇರಲು ಅವಕಾಶ ನೀಡುವುದಿಲ್ಲ ಎಂದು ಗೋವಾ ಕಾಂಗ್ರೆಸ್‌ ಉಸ್ತುವಾರಿ ದಿನೇಶ್‌ ಗುಂಡೂರಾವ್‌ ಹೇಳಿದ್ದಾರೆ.

ರಾಹುಲ್‌ಗಾಂಧಿ ಹುಟ್ಟಿದ ದಿನದ ಭಾಗವಾಗಿ ಗೋವಾದ ಮಡಗಾಂವ ಹಾಗೂ ಸಂತಾಕ್ರೂಜ್‍ನಲ್ಲಿ ಹಮ್ಮಿಕೊಳ್ಳಲಾಗಿದ್ದ ಉಚಿತ ಸಸಿ ವಿತರಣಾ ಕಾರ್ಯಕ್ರಮದಲ್ಲಿ ಭಾಗವಹಿಸಿ, ಮಾತನಾಡಿದ ಗುಂಡೂರಾವ್‌, ಕಾಂಗ್ರೆಸ್‌ ದ್ರೋಹ ಮಾಡಿ ಬಿಜೆಪಿ ಸೇರಿರುವ 10 ಶಾಸಕರು ವಾಪಸ್‌ ಪಕ್ಷಕ್ಕೆ ಸೇರಲು ಅವಕಾಶವಿಲ್ಲ ಎಂದು ಹೇಳಿದ್ದಾರೆ.

ಕಳೆದ ಗೋವಾ ವಿಧಾನಸಭಾ ಚುನಾವಣೆಯ ನಂತರ ಬಿಜೆಪಿ ಅಧಿಕಾರಕ್ಕೆ ಏರಿತ್ತು. ಈ ವೇಳೆ 2019ರಲ್ಲಿ ಕಾಂಗ್ರೆಸ್‌ನ 10 ಶಾಸಕರು ಆಡಳಿತಾರೂಢ ಬಿಜೆಪಿಗೆ ಸೇರ್ಪಡೆಯಾಗಿದ್ದರು. ಕಾಂಗ್ರೆಸ್‌ ತೊರೆದು ಬಿಜೆಪಿ ಸೇರಿದ 10 ಮಾಜಿ ಕಾಂಗ್ರೆಸ್‌ ಶಾಸಕರು ಮತ್ತು ಇಬ್ಬರು ಎಂಜಿಪಿ (ಮಹಾರಾಷ್ಟ್ರವಾದಿ ಗೋಮಾಂತಕ್‌ ಪಾರ್ಟಿ)ಯ ಶಾಸಕರ ವಿರುದ್ದ ಅನರ್ಹತೆ ಅರ್ಜಿಯನ್ನು ಕಾಂಗ್ರೆಸ್‌ ಮತ್ತು ಎಂಜಿಪಿ ಪಕ್ಷಗಳು ಸಲ್ಲಿಸಿದ್ದವು. ಆದರೆ, ಆಡಳಿತಾರೂಢ ಬಿಜೆಪಿಯಿಂದ ಸ್ಪೀಕರ್‌ ಆಗಿರುವ ಅನಂತ್‌ ಶೇಠ್‌ ಅವರು ಅರ್ಜಿಯನ್ನು ವಜಾಗೊಳಿಸಿದ್ದಾರೆ. ಹೀಗಾಗಿ ಗೋವಾ ಕಾಂಗ್ರೆಸ್‌ ಅಧ್ಯಕ್ಷ ಗಿರೀಶ್ ಚೋಡಣಕರ್ ಮುಂಬಯಿ ಉಚ್ಛ ನ್ಯಾಯಾಲಯದ ಗೋವಾ ಪೀಠದ ಮೆಟ್ಟಿಲೇರಿದ್ದಾರೆ.

ಚೋಡಂಕರ್ ಅವರ ದೂರಿನಲ್ಲಿ ಹೆಸರಿಸಿರುವ ಶಾಸಕರ ಹೆಸರುಗಳು ಹೀಗಿವೆ: ಕಾವ್ಲೇಕರ್, ಫಿಲಿಪ್ ನೆರಿ ರೊಡ್ರಿಗಸ್, ಜೆನಿಫರ್ ಮೊನ್ಸೆರಾಟ್ಟೆ, ಐಸಿಡೋರ್ ಫೆರ್ನಾಂಡಿಸ್, ನೀಲಕಾಂತ್ ಹಲಾರ್ಂಕರ್, ಅಟಾನಾಸಿಯೊ ಮೊನ್ಸೆರಾಟ್ಟೆ, ಆಂಟೋನಿಯೊ ಫರ್ನಾಂಡಿಸ್, ಫ್ರಾನ್ಸಿಸ್ ಸಿಲ್ವೀರಾ, ವಿಲ್ಫ್ರೆಡ್ ಡಿಸಾ ಮತ್ತು ಕ್ಲಾಫಾಸಿಯೊ ಡಯಾಸ್.

40 ಸದಸ್ಯತ್ವವಿರುವ ಗೋವಾ ವಿಧಾನಸಭೆಯಲ್ಲಿ ಬಿಜೆಪಿ ಪ್ರಸ್ತುತ 27 ಶಾಸಕರನ್ನು ಹೊಂದಿದೆ.

ಇದನ್ನೂ ಓದಿ: ಗೋವಾ ಚುನಾವಣೆ: ರಾಜಧಾನಿ ಹಾಗೂ 06 ಪುರಸಭೆಗಳ ಅಧಿಕಾರ BJP ವಶಕ್ಕೆ!

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights