ಕೊರೊನಾ ನಿಯಂತ್ರಣ ಸಭೆಯಲ್ಲಿ ನಿಯಂತ್ರಣ ತಪ್ಪಿದ ಸಂಸದ ಡಿ.ಕೆ.ಸುರೇಶ್ ಮತ್ತು ಉಪಮುಖ್ಯಮಂತ್ರಿ ಅಶ್ವತ್ಥ ನಾರಾಯಣ
ಬೆಂಗಳೂರಿನಲ್ಲಿ ಕೊರೊನಾ ಸೋಂಕಿನ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಹಾಗಾಗಿ ಸೋಂಕು ಹರಡುವಿಕೆಯನ್ನು ನಿಯಂತ್ರಿಸುವ ಕುರಿತು ಸಿಎಂ ಬಿ.ಎಸ್. ಯಡಿಯೂರಪ್ಪ ಶುಕ್ರವಾರ ಬೆಂಗಳೂರಿನ ಎಲ್ಲಾ ಶಾಸಕ, ಸಂಸದರೊಂದಿಗೆ ಸಭೆ ನಡೆಸಿದ್ದಾರೆ. ಸಭೆಯಲ್ಲಿ ಬೆಂಗಳೂರು ಗ್ರಾಮಾಂತರ ಸಂಸದ ಡಿ.ಕೆ. ಸುರೇಶ್ ಹಾಗೂ ಉಪ ಮುಖ್ಯಮಂತ್ರಿ ಅಶ್ವತ್ಥ್ ನಾರಾಯಣ್ ನಡುವೆ ಬಿರುಸಿನ ಮಾತಿನ ಚಕಮಕಿ ನಡೆದಿದೆ ಎನ್ನಲಾಗುತ್ತಿದೆ.
ಸಭೆಯಲ್ಲಿ, “ಸರ್ಕಾರ ಏನು ಮಾಡುತ್ತಿಲ್ಲ. ಇತ್ತ ವಿಪಕ್ಷದ ಸಲಹೆಗಳನ್ನು ಪಡೆಯುತ್ತಿಲ್ಲ. ಮನಸೋಯಿಚ್ಛೆ ಆಡಳಿತ ಮಾಡುತ್ತಿದ್ದೀರಿ.ಇದರಿಂದಲೇ ಸೋಂಕು ವ್ಯಾಪಕವಾಗಿ ಹರಡುತ್ತಿದೆ. ಇನ್ನೂ ನಮ್ಮ ಜಿಲ್ಲೆಯಲ್ಲಿ ಉಸ್ತುವಾರಿ ಸಚಿವರೇ ಸರಿಯಿಲ್ಲ. ಅವರಿಗೆ ಎಲ್ಲಿ, ಯಾವಾಗ, ಏನು ನಿರ್ಧಾರ ತೆಗೆದುಕೊಳ್ಳಬೇಕು? ಎಂಬುದೇ ತಿಳಿದಿಲ್ಲ” ಎಂದು ಬೆಂ. ಗ್ರಾಮಾಂತರ ಜಿಲ್ಲೆಯ ಸಂಸದ ಡಿ.ಕೆ. ಸುರೇಶ್ ನೇರಾನೇರ ಡಿಸಿಎಂ ಅಶ್ವತ್ಥ್ ನಾರಾಯಣ್ ವಿರುದ್ಧ ಕಿಡಿಕಾರಿದ್ದಾರೆ.
ಡಿ.ಕೆ.ಸುರೇಶ್ ಮಾತಿಗೆ ಸಭೆಯಲ್ಲಿಯೇ ತಿರುಗೇಟು ಕೊಟ್ಟ ಡಾ.ಅಶ್ವತ್ನಾರಾಯಣ್, “ನಾನು ಕೂಡ ಒಬ್ಬ ಜವಾಬ್ದಾರಿ ಇರುವ ವ್ಯಕ್ತಿ. ಉಪ-ಮುಖ್ಯಮಂತ್ರಿ, ಸಚಿವ ಎಂಬ ಪಟ್ಟಕ್ಕಿಂತ ಮೊದಲು ನಾನು ಕೂಡ ಮನುಷ್ಯ. ಅದನ್ನು ಸಂಸದರು ಮತ್ತು ಅವರ ಸಹೋದರ ಅರ್ಥ ಮಾಡಿಕೊಳ್ಳಬೇಕು. ರಾಮನಗರ ಜಿಲ್ಲೆಯಲ್ಲಿ ಆಗುತ್ತಿರುವ ಎಲ್ಲಾ ರಾಜಕೀಯಗಳು ನನಗೆ ಗೊತ್ತಿದೆ.
ನಾವು ಎಲ್ಲವನ್ನೂ ನಿಯಂತ್ರಿಸುವುದು. ಸಂಸದರು ಹಾಗೂ ಅವರ ಸಹೋದರರ ಬೆಂಬಲಿಗರು ಬಂದು ಗಲಾಟೆ ಎಬ್ಬಿಸುವುದು ನಮಗೆ ಗೊತ್ತಿದೆ. ಕೋವಿಡ್-19 ವ್ಯಾಪಕವಾಗಿ ಹರಡುತ್ತಿರುವ ಸಂದರ್ಭವನ್ನು ಸಂಸದರು ಹಾಗೂ ಅವರ ಸಹೋದರ ಚೆನ್ನಾಗಿ ಬಳಕೆ ಮಾಡಿಕೊಳ್ಳುತ್ತಿದ್ದಾರೆ” ಎಂದು ಟಾಂಗ್ ನೀಡಿದ್ದಾರೆ.
ಈ ವೇಳೆ ಮಾಜಿ ಸಚಿವ ರಾಮಲಿಂಗಾ ರೆಡ್ಡಿ ಮಧ್ಯಪ್ರವೇಶದಿಂದ ಪರಿಸ್ಥಿತಿ ಶಾಂತವಾಗಿದೆ. ಆದರೆ, ಅಷ್ಟರಲ್ಲಿ ಬಿಜೆಪಿ ಶಾಸಕ ಸತೀಶ್ ರೆಡ್ಡಿ ಮತ್ತು ಕೆ.ಜೆ. ಜಾರ್ಜ್ ನಡುವೆಯೂ ಮಾತಿನ ಚಕಮಕಿ ನಡೆದಿದೆ. “ಸಭೆಯಲ್ಲಿ ಮಾತನಾಡಿದ ಕೆ.ಜೆ. ಜಾರ್ಜ್ ನಮ್ಮನ್ನ ಯಾವುದೇ ಸಭೆಗೆ ಬಿಜೆಪಿ ನಾಯಕರು ಕರೆಯುವುದೇ ಇಲ್ಲ” ಎಂದು ಅಸಾಮಾಧನ ತೋಡಿಕೊಂಡಿದ್ದಾರೆ.

