ಪರಸ್ಪರ ಹೊಗಳಿಕೆ ಮುಂದಾದ ಬಿಜೆಪಿ, ಶಿವಸೇನೆ; ಮಹಾರಾಷ್ಟ್ರದಲ್ಲಿ ಕಾಂಗ್ರೆಸ್‌ ಜೊತೆ ಮೈತ್ರಿ ಮುರಿಯುವ ಮುನ್ಸೂಚನೆಯಾ?

ಮಾಜಿ ಮುಖ್ಯಮಂತ್ರಿ, ಬಿಜೆಪಿ ನಾಯಕ ದೇವೇಂದ್ರ ಫಡ್ನವಿಸ್ ಅವರನ್ನು ಶಿವಸೇನೆ ಹೊಗಳಿ ಅಟ್ಟಕರಿಸುತ್ತಿದೆ. ವಿರೋಧ ಪಕ್ಷದ ನಾಯಕನಾಗಿ ದೇವೇಂದ್ರ ಫಡ್ನವಿಸ್ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಶಿವಸೇನೆ ಹೇಳಿದೆ.

ಅಲ್ಲದೆ, ಕೊರೊನಾ ವಿರುದ್ಧದ ಹೋರಾಟದಲ್ಲಿ ಮಹಾರಾಷ್ಟ್ರದ ಉದ್ದವ್ ಠಾಕ್ರೆ ನೇತೃತ್ವದ ರಾಜ್ಯ ಸರ್ಕಾರ ಉತ್ತಮವಾಗಿ ಕೆಲಸ ಮಾಡುತ್ತಿದೆ. ಗುಣಾತ್ಮಕ ರೀತಿಯಲ್ಲಿ ಆರೋಗ್ಯ ಸೇವೆಗಳನ್ನು ಜನರಿಗೆ ಸರ್ಕಾರ ಒದಗಿಸುತ್ತಿದೆ ಎಂದು ಬಿಜೆಪಿ ನಾಯಕ ದೇವೇಂದ್ರ ಫಡ್ನವೀಸ್‌ ಅವರು ಸರ್ಕಾರದ ಬಗೆಗೆ ಮೆಚ್ಚುಗೆ ವ್ಯಕ್ತಿ ಪಡಿಸಿದ್ದರು.

ಫಡ್ನವೀಸ್‌ ಅವರು ಸರ್ಕಾರದ ಬಗ್ಗೆ ಒಳ್ಳೆ ಮಾತುಗಳನ್ನಾಡಿದ ಬೆನ್ನಲ್ಲೇ, ಅವರ ಮಾತಿಗೆ ಪ್ರತಿಕ್ರಿಸಿರುವ ಶಿವಸೇನೆ, ಫಡ್ನವೀಸ್‌ ಅವರ ಮಾತುಗಳು ರಾಜ್ಯ ಸರ್ಕಾರದ ನೈತಿಕ ಸ್ಥೈರ್ಯವನ್ನು ಹೆಚ್ಚಿಸಿದೆ. ಅಷ್ಟೇ ಅಲ್ಲದೆ, ಅವರ ಮಾತು ಕೊರೊನಾ ರೋಗಿಗಳಲ್ಲಿ ಕೂಡ ಧೈರ್ಯ ಹೆಚ್ಚಿಸುತ್ತದೆ ಎಂದು ತನ್ನ ಮುಖವಾಣಿ ಸಾಮ್ನಾದ ಸಂಪಾದಕೀಯದಲ್ಲಿ ಹೇಳಿದೆ.

ಮುಖ್ಯಮಂತ್ರಿಯಾಗಿದ್ದಾಗ ಹೇಗೆ ಕೆಲಸ ಮಾಡುತ್ತಿದ್ದರೋ, ವಿರೋಧ ಪಕ್ಷದ ನಾಯಕನಾಗಿ ಕೂಡ ಅಷ್ಟೇ ಉತ್ಸಾಹ, ಹುರುಪಿನಿಂದ ದೇವೇಂದ್ರ ಫಡ್ನವಿಸ್ ಕೆಲಸ ಮಾಡುತ್ತಿದ್ದಾರೆ. ಅವರ ಮಾತುಗಳಿಗೆ ನಂತರ ಟ್ರೋಲ್ ಗಳು ಸಾಕಷ್ಟು ಹರಿದುಬಂದವು ಅದು ಸರಿಯಲ್ಲ, ವಿರೋಧ ಪಕ್ಷದ ನಾಯಕನ ಸ್ಥಾನದಲ್ಲಿ ನಿಂತು ಅವರು ಹೇಳಿರುವ ಮಾತುಗಳನ್ನು ಧನಾತ್ಮಕವಾಗಿ ತೆಗೆದುಕೊಳ್ಳಬೇಕು ಎಂದು ಶಿವಸೇನೆ ಹೇಳಿದೆ.

ಮಹಾರಾಷ್ಟ್ರದಲ್ಲಿ ಕಳೆದ ವಿಧಾನ ಸಭಾ ಚುನಾವಣೆ ನಡೆದ ನಂತರ ಮುಖ್ಯಮಂತ್ರಿ ಸ್ಥಾನಕ್ಕಾಗಿ ಬಿಜೆಪಿ ಜೊತೆಗಿನ ಚುನಾವಣಾ ಪೂರ್ವ ಮೈತ್ರಿಯನ್ನು ಮುರಿದುಕೊಂಡಿದ್ದ ಶಿವಸೇನೆ, ಕಾಂಗ್ರೆಸ್‌ ಮತ್ತು ಎನ್‌ಸಿಪಿ ಜೊತೆಗೆ ಮೈತ್ರಿ ಮಾಡಿಕೊಂಡು ಸರ್ಕಾರ ರಚಿಸಿತ್ತು. ಇದಾದ ನಂತರ, ಉದ್ದವ್‌ ಠಾಕ್ರೆ ನೇತೃತ್ವದ ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ವಾಗ್ದಾಳಿಗಳನ್ನು ನಡೆಸುತ್ತಲೇ ಇದೆ.

ಕೊರೊನಾ ಸಂಕಷ್ಟದ ನಡುವೆಯೂ ಬಿಜೆಪಿ ನಾಯಕರು ರಾಜ್ಯ ಸರ್ಕಾರದ ವಿರುದ್ಧ ‘ಮಹಾರಾಷ್ಟ್ರ ರಕ್ಷಿಸಿ’ ಎಂದು ಪ್ರತಿಭಟನೆ ನಡೆಸಿತ್ತು. ಮಹಾರಾಷ್ಟ್ರದಲ್ಲಿ ಲಾಕ್‌ಡೌನ್‌ ಇದ್ದ ಸಂದರ್ಭದಲ್ಲಿಯೂ ಪ್ರತಿಭಟನೆ ನಡೆಸಿದ್ದ ಬಿಜೆಪಿ, ಜನರು ಕಪ್ಪು ಬಟ್ಟೆ ಧರಿಸಿ ತಮ್ಮ ಮನೆಯ ಬಾಲ್ಕಾನಿಯಲ್ಲಿ ಪ್ಲೆಕಾರ್ಡ್‌ ಹಿಡಿದು ಪ್ರತಿಭಟನೆ ನಡೆಸಲು ಕರೆಕೊಟ್ಟಿತ್ತು.

ಮಹಾರಾಷ್ಟ್ರದಲ್ಲಿ ಸರ್ಕಾರ ರಚನೆಯಾದ ಸಂದರ್ಭದಲ್ಲಿಯೇ ಶಿವಸೇನೆಗೆ ಬೆಂಬಲ ನೀಡಿದ್ದ ಕಾಂಗ್ರೆಸ್‌, ನಾವು ಸರ್ಕಾರವನ್ನು ಬೆಂಬಲಿಸುತ್ತೇವೆ, ಕಾನೂನು ಮತ್ತು ಯೋಜನೆಗಳ ರೂಪಿಸುವಲ್ಲಿ ಭಾಗಿಯಾಗುವುದಿಲ್ಲ ಎಂದು ಹೇಳಿತ್ತು. ಅಲ್ಲದೆ, ವಿಧಾನ ಪರಿಷತ್‌ ಚುನಾವಣಾ ಸಂದರ್ಭದಲ್ಲಿ ಸೀಟು ಹಂಚಿಕೆಯ ವಿಚಾರದಲ್ಲಿಯೂ ಎನ್‌ಸಿಪಿ ತಗಾದೆ ತೆಗೆದಿತ್ತು. ಶಿವಸೇನೆಯು ತನ್ನ ಮುಖವಾಣಿ ಸಾಮ್ನಾದಲ್ಲಿ ಕಾಂಗ್ರೆಸ್‌ ಪಕ್ಷವನ್ನು ಕಿರಕಿರ ಎನ್ನುವ ಮಂಚವಿದ್ದಂತೆ, ಯಾವಾಗಲೂ ಕಿರಿಕಿರಿ ಇರುತ್ತೆ ಎಂದು ಬರೆದುಕೊಂಡಿತ್ತು.

ಇದೆಲ್ಲದರಿಂದಾಗಿ, ಪರಸ್ಪರ ಕೆಸರೆರಚಾಟ ನಡೆಸುತ್ತಿದ್ದ ಶಿವಸೇನೆ ಮತ್ತು ಬಿಜೆಪಿ ಈಗ ಪರಸ್ಪರ ಹೊಗಳಿಕೆಗೆ ಮುಂದಾಗಿದೆ. ಇದು ಶಿವಸೇನೆಯು ಕಾಂಗ್ರೆಸ್‌ ಮತ್ತು ಎನ್‌ಸಿಪಿ ಜೊತೆಗಿನ ಮೈತ್ರಿಯನ್ನು ಮುರಿದುಕೊಳ್ಳುವುದ ಮುನ್ಸೂಚನೆಯೇ ಎಂದು ಹಲವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.


ಇದನ್ನೂ ಓದಿ:  ಕಾಂಗ್ರೆಸ್‌ ಕಿರಕಿರ ಎನ್ನುವ ಹಳೆಯ ಮಂಚ ಎಂದ ಶಿವಸೇನಾ

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights