ಬಿಹಾರ ರಾಜಕೀಯದಲ್ಲಿ ಅಪಸ್ವರ; ಚುನಾವಣೆಗೂ ಮುನ್ನವೇ ಒಡೆಯುತ್ತವಾ ಮೈತ್ರಿಕೂಟ!

ಕೊರೊನಾ ವೈರಸ್‌ ಹಾವಳಿಯ ನಡುವೆ ಬಿಹಾರ ರಾಜ್ಯ ಸರ್ಕಾರದ ಅಧಿಕಾರಾವಧಿ ಮುಗಿಯಲಿದೆ. ಹಾಗಾಗಿ 2020ರ ವರ್ಷಾಂತ್ಯದೊಳಗೆ ವಿಧಾನಸಭಾ ಚುನಾವಣೆ ನಡೆಯಬೇಕಿದ್ದು, ಈಗಾಗಲೇ ಅಧಿಕಾರದಲ್ಲಿರುವ ಎನ್‌ಡಿಎ ಮೈತ್ರಿಕೂಟದೊಳಗೆ ಅಪಸ್ವರ ಜೋರಾಗಿದೆ. ಈ ಹಿಂದೆ ಯುಪಿಎ ಮೈತ್ರಿಕೂಟದಲ್ಲಿ ಜಿತನ್‌ ರಾಮ್‌ ಮಾಂಜಿ ಅಪಸ್ವರದ ರಾಗ ತೆಗೆದಿದ್ದರು. ಇದರ ಬೆನ್ನಲ್ಲೇ, ಆಡಳಿತಾರೂಢ ಎನ್‌ಡಿಎ ಮೈತ್ರಿಕೂಟದಲ್ಲೂ ಜೆಡಿಯು, ಬಿಜೆಪಿ ಮತ್ತು ಎಲ್‌ಜೆಪಿ ನಡುವೆ ಬಹಿರಂಗ ಕದನ ಶುರುವಾಗಿದೆ.

ನಿತೀಶ್‌ ಕುಮಾರ್‌ ನೇತೃತ್ವದ ಆಡಳಿತಾರೂಢ ಜೆಡಿಯು ಪಕ್ಷಕ್ಕೆ ಮುಂದಿನ ಚುನಾವಣೆ ಸಹಜವಾಗಿಯೇ ಪ್ರತಿಷ್ಠೆಯ ಸಮರ ಎನಿಸಿದೆ. ಆದರೆ ಎನ್‌ಡಿಎ ಒಕ್ಕೂಟದಲ್ಲಿ ಬಿಜೆಪಿ ಮತ್ತು ಎಲ್‌ಜೆಪಿಯಂತಹ ಪ್ರಬಲ ಪಕ್ಷಗಳಿರುವುದು ಅದಕ್ಕೆ ಒಂದು ರೀತಿಯ ಇಕ್ಕಟ್ಟನ್ನು ಸೃಷ್ಟಿಸಿದೆ.

”ಸೀಟು ಹಂಚಿಕೆಯಲ್ಲಿ ಜೆಡಿಯು ಹಿಡಿತ ಸಾಧಿಸುತ್ತದೆ. ಅದರಿಂದ ತನ್ನ ಅಸ್ತಿತ್ವಕ್ಕೆ ಧಕ್ಕೆ ಒದಗುತ್ತದೆ,” ಎನ್ನುವ ಆತಂಕ ಎಲ್‌ಜೆಪಿಗೆ ಕಾಡುತ್ತಿದೆ. ಆದ್ದರಿಂದಲೇ ಎಲ್‌ಜೆಪಿ ಯುವ ನಾಯಕ ಚಿರಾಗ್‌ ಪಾಸ್ವಾನ್‌ ನೇರವಾಗಿಯೇ ನಿತೀಶ್‌ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಚಿರಾಗ್ ಅವರ ಅಸಮಾಧಾನ ಮತ್ತು‌ ಟೀಕೆಗಳ ಹಿಂದಿನ ಮರ್ಮವನ್ನು ಜೆಡಿಯು ಹುಡುಕುವ ಕಸರತ್ತು ನಡೆಸುತ್ತಿದ್ದು, ಕೇಂದ್ರದಲ್ಲಿ ಅಧಿಕಾರದಲ್ಲಿರುವ ಮತ್ತು ಮರುಳು ಮಾಟಗಾತಿಯಂತಿರುವ ಮಿತ್ರಪಕ್ಷ ಬಿಜೆಪಿ ಮೇಲೂ ಜೆಡಿಯು ಅನುಮಾನಿಸುತ್ತಿದೆ.

”ಸೀಟು ಹಂಚಿಕೆ ವಿಷಯದಲ್ಲಿಎಲ್‌ಜೆಪಿ ತನ್ನ ನೈಜ ಸಾಮರ್ಥ್ಯ ಮೀರಿದ ಬೇಡಿಕೆಯನ್ನು ಮಂಡನೆ ಮಾಡಲು ಹೊರಟಿದೆ. ಚಿರಾಗ್‌ ಪಾಸ್ವಾನ್‌ ಅತಿ ಮಹತ್ವಾಕಾಂಕ್ಷಿಯಾಗಿ ವರ್ತಿಸುತ್ತಿದ್ದಾರೆ. ಇದರಿಂದ ಪ್ರಯೋಜನವಿಲ್ಲ. ಅಷ್ಟಕ್ಕೂ ನಮ್ಮ ಪಕ್ಷದ ಜತೆ ಅವರ ಮೈತ್ರಿ ಇಲ್ಲ. ಬಿಜೆಪಿ ಜತೆ ಸಂಘರ್ಷ-ಸಖ್ಯ ನಡೆಸಿಕೊಂಡು ಬಂದಿದ್ದಾರೆ. ಮುಂದೆ ಸೀಟು ಹಂಚಿಕೆ ಸಂದರ್ಭದಲ್ಲಿಯೂ ಬಿಜೆಪಿಯೇ ಎಲ್‌ಜೆಪಿಯ ಬೇಡಿಕೆಯನ್ನು ನಿಭಾಯಿಸಬೇಕಿದೆ” ಎಂದು ಜೆಡಿಯು ಹಿರಿಯ ಮುಖಂಡರೊಬ್ಬರು ಹೇಳಿದ್ದಾರೆ.

ಆರ್‌ಜೆಡಿ ನೇತೃತ್ವದ ಪ್ರತಿಪಕ್ಷ ಮೈತ್ರಿಕೂಟದಲ್ಲಿಯೂ ಇಂತಹದ್ದೇ ಮುಸುಕಿನ ಗುದ್ದಾಟ ಆರಂಭಗೊಂಡಿದೆ. ತಾವೇ ಮುಖ್ಯಮಂತ್ರಿ ಎಂಬರ್ಥದಲ್ಲಿಆರ್‌ಜೆಡಿ ನಾಯಕ ತೇಜಸ್ವಿ ಯಾದವ್‌ ಹೇಳಿಕೆ ನೀಡುತ್ತಿದ್ದಾರೆ. ಇದು ಮಿತ್ರಪಕ್ಷಗಳನ್ನು ಸಿಟ್ಟಿಗೆಬ್ಬಿಸಿದೆ. ಆದಷ್ಟು ಬೇಗ ಸೀಟು ಹಂಚಿಕೆಯ ಬಗ್ಗೆ ಪ್ರಸ್ತಾಪವಿಟ್ಟು, ಸೀಟು ಹಂಚಿಕೆ ಮಾಡದಿದ್ದರೆ ಮೈತ್ರಿ ತೊರೆಯುವುದಾಗಿ ಮಾಜಿ ಮುಖ್ಯಮಂತ್ರಿ ಜಿತನ್‌ ರಾಮ್‌ ಮಾಂಜಿ ನೇತೃತ್ವದ ಹಿಂದೂಸ್ಥಾನಿ ಅವಾಮಿ ಮೋರ್ಚಾ ಬೆದರಿಕೆ ಹಾಕಿದೆ. ನಾಯಕತ್ವದ ಕುರಿತಂತೆ ಉಪೇಂದ್ರ ಖುಶ್ವಾಹ ಅವರ ರಾಷ್ಟ್ರೀಯ ಲೋಕ ಸಮತಾ ಪಾರ್ಟಿ ಮತ್ತು ಮುಕೇಶ್‌ ಸಹಾನಿ ನೇತೃತ್ವದ ವಿಕಾಸಶೀಲ ಇಶಾನ್‌ ಪಾರ್ಟಿ ಸಹ ಭಿನ್ನಾಭಿಪ್ರಾಯ ವ್ಯಕ್ತಪಡಿಸಿವೆ.

ಒಟ್ಟಿನಲ್ಲಿ ಆಡಳಿತಾರೂಢ ಮೈತ್ರಿಕೂಟ ಮತ್ತು ಪ್ರತಿಪಕ್ಷ ಮಿತ್ರಕೂಟ ಎರಡರಲ್ಲಿಯೂ ಒಳಗೊಳಗೆ ಬುಸುಗುಡುತ್ತಿದ್ದ ಅಪಸ್ವರದ ಸರ್ಪ ಚುನಾವಣೆ ಸಮೀಪಿಸುತ್ತಿದ್ದಂತೆ ಬಹಿರಂಗಗೊಳ್ಳುತ್ತಿದೆ. ಚುನಾವಣೆಯ ವೇಳೆಗೆ ಮೈತ್ರಿ ಒಡೆಯುವುದೇ, ಮತ್ತಷ್ಟು ಮೈತ್ರಿಕೂಟಗಳು ಹುಟ್ಟಿಕೊಳ್ಳುತ್ತವೆಯೇ. ಬಿಹಾರ ರಾಜಕೀಯದಲ್ಲಿ ಮುಂದೇನಾಗಲಿದೆ ಕಾದು ನೋಡಬೇಕಾಗಿದೆ.


ಇದನ್ನೂ ಓದಿಕಾಂಗ್ರೆಸ್‌ಗೆ ಡಿಕೆಶಿ ಅಧ್ಯಕ್ಷರಾದರೆ, ಬಿಜೆಪಿಗೇ ಅನುಕೂಲ; ಡಾ.ಕೆ ಸುಧಾಕರ್​​​

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights