ಬೆಂಗಳೂರಿನಲ್ಲಿ ಕೊರೊನಾ ಚಿಕಿತ್ಸೆಗೆ ವೈದ್ಯರೇ ಇಲ್ಲ; ವಿಡಿಯೋ ಹರಿಬಿಟ್ಟ ವೈದ್ಯ

ಕರ್ನಾಟಕದ ಜನರು ಬೆಂಗಳೂರು ಎಂದರೆ ಭಯ ಪಡುವಂತಹ ಸ್ಥಿತಿಗೆ ಬೆಂಗಳೂರು ತಲುಪಿದೆ. ರಾಜ್ಯದಲ್ಲಿಯೇ ಅತಿ ಹೆಚ್ಚು ಕೊರೊನಾ ಸೋಂಕಿತರನ್ನು ಹೊಂದಿರುವ ರಾಜಧಾನಿ ಬೆಂಗಳೂರು ಹಾಟ್‌ಸ್ಪಾಟ್‌ ಆಗಿ ಬದಲಾಗಿದೆ. ದಿನೇ ದಿನೇ ದ್ವಿಗುಣಗೊಳ್ಳುತ್ತಿರುವ ಕೊರೊನಾ ಸೋಂಕಿತರಿಗೆ ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗಳನ್ನೂ ಕಾರ್ಯನಿರ್ವಹಿಸುವಂತೆ ಸರ್ಕಾರ ಆದೇಶಿಸಿದೆ. ಆದರೆ, ಆಸ್ಪತ್ರೆಗಳಲ್ಲಿನ ವಾಸ್ತವ ಸ್ಥಿತಿಯೇ ಬೇರೆ ಇದೆ.

ಖಾಸಗಿ ಆಸ್ಪತ್ರೆಗಳ ಕೊರೋನಾ ಚಿಕಿತ್ಸೆಯ ಐಸಿಯುಗಳಲ್ಲಿ ಬೆಡ್​ಗಳು, ವೆಂಟಿಲೇಟರ್ ಸೌಲಭ್ಯಗಳೆಲ್ಲವೂ ಇದೆ. ಆದರೆ, ಚಿಕಿತ್ಸೆ ನೀಡಲು ವೈದ್ಯರು ಮತ್ತು ನರ್ಸ್​ಗಳೇ ಸಿಗುತ್ತಿಲ್ಲ ಎಂದು ಬೆಂಗಳೂರಿನ ಹೆಚ್​ಬಿಎಸ್​ ಆಸ್ಪತ್ರೆಯ ಎಂಡಿ ಡಾ. ತಾಹಾ ಮ್ಯಾಟೀನ್ ವಿಡಿಯೋ ಸಂದೇಶದ ಮೂಲಕ ಹೇಳಿದ್ದಾರೆ.

ಐಸಿಯುನಲ್ಲಿ ನಿಂತು, ಪಿಪಿಇ ಕಿಟ್ ಧರಿಸಿಕೊಂಡು ಆಸ್ಪತ್ರೆಗಳ ಪ್ರಸ್ತುತ ಪರಿಸ್ಥಿತಿ ಮತ್ತು ವೈದ್ಯರ ಎದುರಿನ ಸವಾಲುಗಳನ್ನು ಹೇಳಿರುವ ಡಾ. ತಾಹಾ ಮ್ಯಾಟೀನ್ ಅವರ ವಿಡಿಯೋ ವೈರಲ್ ಆಗಿದೆ. ಪೊಲೀಸರು, ಸೈನಿಕರಿಗೆ ತಮ್ಮ ನಿಜವಾದ ಸಾಮರ್ಥ್ಯ ತೋರಿಸಲು ಸಂದರ್ಭಗಳು ಬರುತ್ತಿರುತ್ತವೆ. ಆಗ ಅವರು ಆ ಸ್ಥಿತಿಯನ್ನು ಸಮರ್ಥವಾಗಿ ನಿಭಾಯಿಸಿದ್ದಾರೆ. ಅದೇರೀತಿ, ವೈದ್ಯರು, ನರ್ಸ್​ಗಳಿಗೆ ನಮ್ಮ ಸಾಮರ್ಥ್ಯ ತೋರಿಸಲು ಸಂದರ್ಭ ಈಗ ಬಂದಿದೆ. ಈಗ ನಾವೆಲ್ಲರೂ ಕೊರೋನಾ ವಿರುದ್ಧ ಹೋರಾಡಲೇಬೇಕಾಗಿದೆ ಎಂದಿದ್ದಾರೆ.

ಕೊರೋನಾ ವಿರುದ್ಧ ಹೋರಾಡುವ ಸಲುವಾಗಿ ವೈದ್ಯರು 18 ಗಂಟೆಗಳ ಕಾಲ ಕೆಲಸ ಮಾಡುತ್ತಿದ್ದಾರೆ. ಐಸಿಯುನಲ್ಲಿ ಕೆಲಸ ಮಾಡಲು ವೈದ್ಯರು, ನರ್ಸ್​ಗಳೇ ಸಿಗುತ್ತಿಲ್ಲ. ನಾವು ಹಣಕ್ಕಾಗಿ ಅಲ್ಲ, ಮಾನವೀಯತೆಗಾಗಿ ಕೆಲಸ ಮಾಡುತ್ತಿದ್ದೇವೆ ಎಂದು ಜಗತ್ತಿಗೆ ತೋರಿಸಲು ಇದು ಸೂಕ್ತವಾದ ಸಮಯ. ಕೊರೋನಾ ವಾರಿಯರ್​ಗಳಾಗಿರುವ ನಾವು ಈ ಸಂಕಷ್ಟಕರ ಸ್ಥಿತಿಯಲ್ಲಿ ಇನ್ನಷ್ಟು ಹೆಚ್ಚಿನ ಬದ್ಧತೆ ತೋರಿಸಬೇಕಾಗಿದೆ ಎಂದು ಅವರು ವಿಡಿಯೋದಲ್ಲಿ ವೈದ್ಯರಿಗೆ ಕರೆನೀಡಿದ್ದಾರೆ.

ನಮ್ಮ ಆಸ್ಪತ್ರೆಯಲ್ಲಿ 30 ಕೊರೋನಾ ರೋಗಿಗಳಿಗೆ ಚಿಕಿತ್ಸೆ ನೀಡಲು ಬೆಡ್, ಆಕ್ಸಿಜನ್ ವ್ಯವಸ್ಥೆ, ವೆಂಟಿಲೇಟರ್ ಎಲ್ಲಾ ವ್ಯವಸ್ಥೆಯೂ ಇದೆ. ಆದರೆ ಕೆಲಸ ಮಾಡಲು ಡಾಕ್ಟರ್​ಗಳೇ ಬರುತ್ತಿಲ್ಲ. ದಿನದಲ್ಲಿ ನನಗೆ ನಿಮ್ಮ ಕೇವಲ ಆರೇ ಆರು ಗಂಟೆಯನ್ನು ನೀಡಿದರೂ ನಾವು ಜನರಿಗೆ ಉತ್ತಮ ಆರೋಗ್ಯ ಸೇವೆ ನೀಡಬಹುದು. ದಯವಿಟ್ಟು ನಮ್ಮೊಂದಿಗೆ ಕೈಜೋಡಿಸಿ, ಕೊರೋನಾ ಸೋಂಕು ನಿವಾರಣೆಗೆ ಸಹಾಯ ಮಾಡಿ ಎಂದು ವೈದ್ಯರು ಮತ್ತು ನರ್ಸ್​ಗಳ ಬಳಿ ಅವರು ಮನವಿ ಮಾಡಿದ್ದಾರೆ

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights