ಯಡಿಯೂರಪ್ಪ ಮತ್ತು ಜಿಲ್ಲಾಧಿಕಾರಿಗಳೊಂದಿಗಿನ ಸಭೆಯ ಮುಖ್ಯಾಂಶಗಳು!

ಬೆಂಗಳೂರಿನಲ್ಲಿ ಒಂದು ವಾರಗಳ ಕಾಲ ಲಾಕ್‌ಡೌನ್‌ ಘೋಷಿಸಲಾಗಿದೆ. ಇದರ ಬೆನ್ನಲ್ಲೇ ರಾಜ್ಯಾದ್ಯಂತ ಲಾಕ್‌ಡೌನ್‌ ಘೋಷಿಸಬೇಕು ಎಂದು ಒತ್ತಡಗಳು ಕೇಳಿಬರುತ್ತಿವೆ. ಈ ಹಿನ್ನೆಲೆಯಲ್ಲಿ ಸೋಂಕು ಹೆಚ್ಚಿರುವ ಜಿಲ್ಲೆಗಳ ಜಿ‌ಲ್ಲಾಧಿಕಾರಿಗಳ ಜೊತೆಗೆ ಇಂದು ಸಿಎಂ ಬಿ.ಎಸ್‌. ಯಡಿಯೂರಪ್ಪ ವಿಡಿಯೋ ಕಾನ್ಫೆರೆನ್ಸ್‌ ನಡೆಸಿದ್ದು, ಮುಂದಿನ ದಿನಗಳಲ್ಲಿ ಮತ್ತೊಮ್ಮೆ ರಾಜ್ಯಾದ್ಯಂತ ಲಾಕ್‌ಡೌನ್ ಜಾರಿಯಾಗುವ ಅಗತ್ಯದ ಬಗ್ಗೆ ಚರ್ಚೆನಡೆಸಿದ್ದಾರೆ.

ಬೆಂಗಳೂರು ನಗರ, ಗ್ರಾಮಾಂತರ, ಕಲ್ಬುರ್ಗಿ, ಮೈಸೂರು, ಉಡುಪಿ, ಮಂಗಳೂರು, ರಾಯಚೂರು, ಗದಗ, ಬೆಳಗಾವಿ, ಬೀದರ್, ಧಾರವಾಡ ಸೇರಿದಂತೆ ಅನೇಕ ಜಿಲ್ಲೆಗಳ ಜಿಲ್ಲಾಧಿಕಾರಿ ಗಳು, ಸಿಇಒ, ಹಾಗೂ ಪೊಲೀಸ್‌ ವರಿಷ್ಠಾಧಿಕಾರಿ ಜೊತೆಗೆ ಕೊರೊನಾ ಪರಿಸ್ಥಿತಿ ಹಾಗೂ ನಿಯಂತ್ರಣದ ಕುರಿತು ಸಿಎಂ ಯಡಿಯೂರಪ್ಪ ವೀಡಿಯೋ ಕಾನ್ಪೆರೆನ್ಸ್ ಸಭೆ ನಡೆಸಿ  ಚರ್ಚೆ ನಡೆಸಿದ್ದಾರೆ.

ಯಡಿಯೂರಪ್ಪನವರು  ಜಿಲ್ಲಾಧಿಕಾರಿಗಳೊಂದಿಗೆ ನಡೆಸಿದ ವಿಡಿಯೋ ಕಾನ್ಫರೆನ್ಸ್‌ ಸಭೆಯ ಮುಖ್ಯಾಂಶಗಳು ಹೀಗಿವೆ.

1. ಕೋವಿಡ್ ನಿಯಂತ್ರಣ, ಕೃಷಿ ಚಟುವಟಿಕೆ, ಪ್ರವಾಹ ಪರಿಸ್ಥಿತಿಯ ಕುರಿತು ಮಾಹಿತಿ ಪಡೆಯಲು ವಿಡಿಯೋ ಕಾನ್ಫರೆನ್ಸ್ ನಡೆಸಿದರು.

2. ರ್ಯಾಪಿಡ್ ಆಂಟಿಜೆನ್ ಟೆಸ್ಟ್ ನಡೆಸಲು ಆದ್ಯತೆ ನೀಡಿ. 1 ಲಕ್ಷ ಟೆಸ್ಟ್ ಕಿಟ್ ಖರೀದಿಸಲಾಗಿದೆ. ಈಗಾಗಲೇ ಜಿಲ್ಲೆಗಳಿಗೆ ವಿತರಿಸಲಾಗಿದ್ದು, ತುರ್ತು ಪ್ರಕರಣಗಳಲ್ಲಿ ವಿವೇಚನೆಯಿಂದ ಈ ಪರೀಕ್ಷೆ ನಡೆಸಲು ಸೂಚಿಸಲಾಯಿತು.

3. ಬೆಂಗಳೂರು ನಗರ ಹಾಗೂ ದಕ್ಷಿಣ ಕನ್ನಡ, ಧಾರವಾಡ, ಬಳ್ಳಾರಿ, ಉಡುಪಿ , ಕಲಬುರಗಿ ಹೆಚ್ಚು ಪ್ರಕರಣ ದಾಖಲಾಗಿದೆ. ಬೀದರ್, ಧಾರವಾಡ, ಗದಗ, ಮೈಸೂರು ಜಿಲ್ಲೆಗಳಲ್ಲಿ ಸಾವಿನ ಪ್ರಮಾಣ ಹೆಚ್ಚುತ್ತಿದ್ದು, ಇದನ್ನು ನಿಯಂತ್ರಿಸಲು ಕ್ರಮ ಕೈಗೊಳ್ಳುವಂತೆ ಸೂಚಿಸಿದರು. ಬೀದರ್ ಜಿಲ್ಲೆ ಸಾವಿನ ಪ್ರಮಾಣ ದೇಶದ 5 ಜಿಲ್ಲೆಗಳಲ್ಲಿ ಒಂದಾಗಿದ್ದು, ಮರಣ ಪ್ರಮಾಣ ನಿಯಂತ್ರಿಸುವಂತೆ ಸೂಚಿಸಿದರು. ಈ ವರೆಗೆ ಸಂಭವಿಸಿದ ಮರಣಗಳ ಕುರಿತು ತಜ್ಞರ ವಿಶ್ಲೇಷಣಾ ವರದಿಯನ್ನು ಕೂಡಲೇ ಕಳುಹಿಸುವಂತೆ ತಿಳಿಸಲಾಯಿತು.

4. ಕಂಟೇನ್ ಮೆಂಟ್ ಝೋನ್ ಗಳಲ್ಲಿ ಕಟ್ಟುನಿಟ್ಟಾಗಿ ಕ್ರಮ ವಹಿಸಬೇಕಾಗಿದೆ. ಅಲ್ಲದೆ, ಕ್ಷೇತ್ರ ಮಟ್ಟದ ಆರೋಗ್ಯ ಸಿಬ್ಬಂದಿ ಕೊರತೆ ಇರುವಲ್ಲಿ ಗುತ್ತಿಗೆ ಆಧಾರದಲ್ಲಿ 6 ತಿಂಗಳ ಅವಧಿಗೆ ನೇಮಕ ಮಾಡುವಂತೆ ಸೂಚಿಸಲಾಯಿತು.

5. ಹೊರಗಿನಿಂದ ವಲಸೆ ಬಂದವರ ಕ್ವಾರಂಟೈನ್ ಮತ್ತು ಹೆಚ್ಚಿನ ನಿಗಾ ವಹಿಸಲು ಸೂಚಿಸಲಾಯಿತು.

6. ಅಲ್ಲದೆ, ನಾನ್ ಕೋವಿಡ್ ರೋಗಿಗಳ ಚಿಕಿತ್ಸೆಗೆ ಯಾವುದೇ ಅಡ್ಡಿಯಾಗದಂತೆ ಎಚ್ಚರ ವಹಿಸುವಂತೆ ತಿಳಿಸಲಾಯಿತು.

7. ಯಾವುದೆ ಕಾರಣಕ್ಕೆ ಸಾರ್ವಜನಿಕ ಉತ್ಸವಗಳ ಆಚರಣೆ ಮಾಡುವಂತಿಲ್ಲ ಎಂದು ಎಚ್ಚರಿಕೆ ನೀಡಿದರು.

8. ಬೆಂಗಳೂರಿನಲ್ಲಿ ಕೋವಿಡ್ ಮತ್ತು ನಾನ್ ಕೋವಿಡ್ ಚಿಕಿತ್ಸೆ ನೀಡಲು ಸಹಕರಿಸದ ಆಸ್ಪತ್ರೆಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಸೂಚಿಸಲಾಯಿತು.

9. ಬೂತ್ ಮಟ್ಟದಲ್ಲಿ ಕ್ವಾರಂಟೈನ್, ಸಂಪರ್ಕಿತರ ಪತ್ತೆ ಹಚ್ಚುವುದು, ಮನೆ ಮನೆ ಸಮೀಕ್ಷೆ ನಡೆಸುವ ಪ್ರಕ್ರಿಯೆಯನ್ನು ಪರಿಶೀಲನೆ ನಡೆಸಲು ಬೂತ್ ಮಟ್ಟದ ಸಮಿತಿಗಳನ್ನು ರಚಿಸಿ,. ಜನಪ್ರತಿನಿಧಿಗಳು ಹಾಗೂ ಸ್ವಯಂ ಸೇವಕರ ಸಹಕಾರವನ್ನು ಪಡೆಯುವಂತೆ ಸೂಚಿಸಲಾಯಿತು.

10. 60 ವರ್ಷ ಮೇಲ್ಪಟ್ಟವರು ಹಾಗೂ ಇತರ ತೀವ್ರ ಸ್ವರೂಪದ ಕಾಯಿಲೆಯಿಂದ ಬಳಲುತ್ತಿರುವವರನ್ನು ಪ್ರತ್ಯೇಕವಾಗಿರಿಸಬೇಕು ಮತ್ತು ಐಎಲ್ಐ ಮತ್ತು ಉಸಿರಾಟದ ತೊಂದರೆ ಇರುವವರನ್ನು ಗುರುತಿಸಿ, ಕಡ್ಡಾಯವಾಗಿ ಕೋವಿಡ್ ಪರೀಕ್ಷೆಗೊಳಪಡಿಸಬೇಕು.

11. ಸೀಲ್ ಡೌನ್ ಪ್ರಕ್ರಿಯೆಯನ್ನು ಪರಿಣಾಮಕಾರಿಯಾಗಿ ಮಾಡಬೇಕು. ಈ ಪ್ರದೇಶಗಳಲ್ಲಿ ಹೆಚ್ಚು ಪರೀಕ್ಷೆ ನಡೆಸಬೇಕು.

12. ಜನರು ಧಾರ್ಮಿಕ ಸ್ಥಳಗಳಲ್ಲಿ, ಮಾರುಕಟ್ಟೆ ಮೊದಲಾದ ಸ್ಥಳಗಳಲ್ಲಿ ಜನ ಗುಂಪುಗೂಡದಂತೆ ಎಚ್ಚರ ವಹಿಸಬೇಕು.

13. ಕೋವಿಡ್ ಆಸ್ಪತ್ರೆಯಲ್ಲಿ ಸ್ವಚ್ಛತೆ ನಿರ್ವಹಣೆಯಲ್ಲಿ ತೊಡಗಿರುವ ಡಿ ಗ್ರೂಪ್ ನೌಕರರ ಪ್ರೋತ್ಸಾಹಧನ ಹೆಚ್ಚಳಕ್ಕೆ ಕ್ರಮ ವಹಿಸಲಾಗುವುದು.

14. ಅಂಬ್ಯುಲೆನ್ಸ್ ಮತ್ತು ಚಿಕಿತ್ಸೆಗೆ ಹಾಸಿಗೆಗಳ ಕೊರತೆಯಾಗದಂತೆ ಎಚ್ಚರ ವಹಿಸುವಂತೆ ಸೂಚಿಸಿದರು..

15. ಡಿಜಿಟಲ್ ಎಕ್ಸ್ ರೇ ಯಂತ್ರಗಳ ಮೂಲಕ ಶ್ವಾಸಕೋಶದ ಸೋಂಕನ್ನು ತ್ವರಿತವಾಗಿ ಪತ್ತೆ ಹಚ್ಚಲು ಸಾಧ್ಯವಿದ್ದು, ಈ ಉಪಕರಣಗಳ ಬಳಕೆಗೆ ಆದ್ಯತೆ ನೀಡುವಂತೆ ಸೂಚಿಸಲಾಯಿತು.

16. ಕೋವಿಡ್ ಮಾರಣಾಂತಿಕ ಕಾಯಿಲೆ ಅಲ್ಲ, ಜನರು ಭಯಭೀತರಾಗುವ ಅಗತ್ಯವಿಲ್ಲ ಎಂದು ಜನರಿಗೆ ತಿಳುವಳಿಕೆ ನೀಡುವ ಅಗತ್ಯವಿದೆ.

ಮಳೆ ಬೆಳೆ:

17. ರಾಜ್ಯದಲ್ಲಿ ಉತ್ತಮ ಮಳೆಯಾಗಿದೆ. ಹೆಚ್ಚು ಮಳೆಯಾಗುತ್ತಿರುವ ಪ್ರದೇಶದಲ್ಲಿ ಜನರ ಸ್ಥಳಾಂತರಕ್ಕೆ ಮೊದಲೇ ಸ್ಥಳ ಗುರುತಿಸುವಂತೆ ಸೂಚಿಸಲಾಯಿತು..

18. ಮಹಾರಾಷ್ಟ್ರದ ಕೊಲ್ಹಾಪುರ ಜಿಲ್ಲಾಧಿಕಾರಿಗಳೊಂದಿಗೆ ಸತತ ಸಂಪರ್ಕದಲ್ಲಿದ್ದು, ಕೃಷ್ಣಾ ನದಿಗೆ ಮಹಾರಾಷ್ಟ್ರದಿಂದ ಹರಿದುಬರುವ ನೀರಿನ ಪ್ರಮಾಣದ ಕುರಿತು ಜಾಗೃತರಾಗಿರುವಂತೆ ತಿಳಿಸಿದರು. ಅಲ್ಲದೆ, ರಾಜಾಪೂರ ಬ್ಯಾರೇಜಿನಲ್ಲಿ ರಾಜ್ಯದ ಎಂಜಿನಿಯರ್ ಒಬ್ಬರನ್ನು ನಿಯೋಜಿಸುವಂತೆ ಸೂಚಿಸಲಾಯಿತು.

19. ಅಕ್ಟೋಬರ್ ವರೆಗೆ ಉತ್ತಮ ಮಳೆ ಆಗುವ ನಿರೀಕ್ಷೆ ಇದೆ. ಪ್ರವಾಹ ಕುರಿತು ಎಚ್ಚರ ವಹಿಸಿ. ಮಣ್ಣಿನ ತೇವಾಂಶ ಹೆಚ್ಚಾಗುವ ಸಾಧ್ಯತೆ ಇದೆ. ಇದರಿಂದ ಬೆಳೆಹಾನಿಯಾಗದಂತೆ ಎಚ್ಚರ ವಹಿಸಲು ಸೂಚಿಸಿದರು.

20. ಉತ್ತಮ ಮಳೆಯಾಗಿ, ಬಂಪರ್ ಬೆಳೆ ಬರುವ ಸಾಧ್ಯತೆ ಇದ್ದು, ಬೇಡಿಕೆ ಕಡಿಮೆ ಇರುವ ಕಾರಣ ಗೋಡೌನ್ ಗಳನ್ನು ಗುರುತಿಸಿ, ಕೃಷಿ ಉತ್ಪನ್ನ ದಾಸ್ತಾನಿಗೆ ಸೂಕ್ತ ವ್ಯವಸ್ಥೆ ಮಾಡುವಂತೆ ಸೂಚಿಸಲಾಯಿತು.

21. ಗೃಹ ಸಚಿವ ಬಸವರಾಜ ಬೊಮ್ಮಾಯಿ, ಕಂದಾಯ ಸಚಿವ ಆರ್. ಅಶೋಕ,, ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್, ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯಭಾಸ್ಕರ್, ಮುಖ್ಯಮಂತ್ರಿಯವರ ಅಪರ ಮುಖ್ಯ ಕಾರ್ಯದರ್ಶಿ ಪಿ. ರವಿಕುಮಾರ್ ಹಾಗೂ ಕಾರ್ಯದರ್ಶಿ ಡಾ. ಎಸ್. ಸೆಲ್ವಕುಮಾರ್, ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲಾಧಿಕಾರಿಗಳು ಮತ್ತು ಇತರ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights