ರಾಮದೇವ್ ಆಯುರ್ವೇದ ಕಿಟ್: ಸರ್ಕಾರದ ಒಪ್ಪಿಗೆ ಇಲ್ಲ; ಅಲೋಪತಿ ಔಷಧ ಬಳಸಿ ಪರೀಕ್ಷೆ

ಕೋವಿಡ್-19 ಗೆ ಪರಿಣಾಮಕಾರಿ ಆಯುರ್ವೇದ ಚಿಕಿತ್ಸೆ ಎಂಬ ಜಾಹೀರಾತಿನೊಂದಿಗೆ ರಾಮದೇವ್ ಅವರು ‘ಕೊರೊನ ಕಿಟ್’ಮಾರುಕಟ್ಟೆಗೆ ಬಿಡುಗಡೆ ಮಾಡಿದ ಒಂದು ದಿನದ ನಂತರ ಪತಂಜಲಿ ಉತ್ಪನ್ನಗಳನ್ನು ಮಾರಾಟ ಮಾಡುವ ಪತಂಜಲಿ ಆಯುರ್ವೇದ ಲಿಮಿಟೆಡ್ ಮತ್ತು ಈ ಸಂಸ್ಥೆಗೆ ಔಷಧಿಗಳನ್ನು ಉತ್ಪಾದಿಸುವ ದಿವ್ಯ ಫಾರ್ಮಸಿಯ ವ್ಯವಹಾರಗಳ ಬಗ್ಗೆ ಸಂದೇಹ ಎದ್ದಿದೆ.

ಕೋವಿಡ್-19ಗೆ ಚಿಕಿತ್ಸೆ ಕಂಡುಹಿಡಿದಿರುವುದಾಗಿ ಪ್ರಚಾರ ನೀಡದಂತೆ ಪತಂಜಲಿಗೆ, ಆಯುಶ್ ಸಚಿವಾಲಯ ಬುಧವಾರ ಆಗ್ರಹಿಸಿದ ನಂತರ ಕೊರೊನ ಕಿಟ್ ಗೆ ಯಾವುದೇ ಪರವಾನಗಿ ನೀಡಿಲ್ಲ ಎಂದು ಉತ್ತರಾಖಂಡ ಸರ್ಕಾರ ಹೇಳಿರುವುದಾಗಿ ಇಂಡಿಯನ್ ಎಕ್ಸ್ಪ್ರೆಸ್ ವರದಿ ಮಾಡಿದೆ. ಹಾಗೆಯೇ ಈ ಸಂಬಂಧವಾಗಿ ಪತಂಜಲಿ ಅಧ್ಯಯನ ನಡೆಸಿದ್ದಾಗಿ ಹೇಳಿಕೊಂಡಿದ್ದ, ಜೈಪುರದ ಖಾಸಗಿ ಆಸ್ಪತ್ರೆ ನ್ಯಾಶನಲ್ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ ಅಂಡ್ ರಿಸರ್ಚ್ (ಎನ್ ಐ ಎಮ್ ಎಸ್) ನಲ್ಲಿ, ಈ ಕಾರಣಕ್ಕಾಗಿ ಯಾವುದೇ ಕ್ಲಿನಿಕಲ್ ಪರೀಕ್ಷೆ ನಡೆದಿರುವುದು ನಮ್ಮ ಗಮನಕ್ಕೆ ಬಂದಿಲ್ಲ ಎಂದು ರಾಜಸ್ಥಾನ ಸರ್ಕಾರ ಹೇಳಿರುವುದಾಗಿಯೂ ಪತ್ರಿಕೆ ವರದಿ ಮಾಡಿದೆ.

ಆ ಆಸ್ಪತ್ರೆಯಲ್ಲಿ ಸಾಮಾನ್ಯವಾಗಿ ಸಣ್ಣ ಪುಟ್ಟ ರೋಗ ಲಕ್ಷಣಗಳಿದ್ದ ಕೋವಿಡ್ ಸೋಂಕಿತರನನ್ನು ದಾಖಲಿಸಿಕೊಂಡು ಅವರಿಗೆ  ಅಲೋಪತಿ ಚಿಕಿತ್ಸೆ ನೀಡಲಾಗಿದೆ. ಅಲ್ಲಿ ಸೋಂಕಿನ ಯಾವುದೇ ಲಕ್ಷಣ ಕಾಣಿಸಿಕೊಳ್ಳದ ಅಥವಾ ಸಣ್ಣ ಪುಟ್ಟ ಲಕ್ಷಣಗಳು ಇರುವ ರೋಗಿಗಳಿಗಷ್ಟೇ ಚಿಕಿತ್ಸೆ ನೀಡಿದ್ದು, ಗಂಭೀರ ರೋಗ ಲಕ್ಷಣಗಳಿದ್ದ ರೋಗಿಗಳನ್ನು ಅಲ್ಲಿ ದಾಖಲಿಸಿಕೊಂಡಿಲ್ಲ.

ಅಲ್ಲದೆ ಎನ್ ಐ ಎಮ್ ಎಸ್ ನಲ್ಲಿ ನಡೆದ ಚಿಕಿತ್ಸೆಯ ಅಧ್ಯಯನವನ್ನು ಬೇರೆ ಯಾವ ಪರಿಣಿತರೂ ಪರಿಶೀಲಿಸಿಲ್ಲ ಎಂದು ಜೈಪುರದ ಎನ್ ಐ ಎಂ ಎಸ್ ನ ಪ್ರಮುಖ ಅಧಿಕಾರಿಯಾದ ಡಾ. ಗಣಪತ್ ದೇವಪುರ ಒಪ್ಪಿಕೊಂಡಿದ್ದಾರೆ ಎಂದು ಕೂಡ ಪತ್ರಿಕೆ ವರದಿ ಮಾಡಿದೆ.

ಈ ಎಲ್ಲ ಹಿನ್ನೆಲೆಯೊಂದಿಗೆ ಉತ್ತರಾಖಂಡ್ ಸರ್ಕಾರ ದಿವ್ಯ ಫಾರ್ಮಸಿಗೆ ನೀಡಿರುವ ನೋಟಿಸ್ ಮತ್ತು ಪತಂಜಲಿ ಹೇಳಿಕೊಂಡಿರುವ ಆಸ್ಪತ್ರೆಯಲ್ಲಿ ನಡೆದಿರುವ ಕ್ಲಿನಿಕಲ್ ಪರೀಕ್ಷೆಯ ಅಧ್ಯಯನವನ್ನು ರಾಜಸ್ತಾನ ಸರ್ಕಾರ ಅಲ್ಲಗೆಳೆದಿರುವುದು ಪತಂಜಲಿ ಆಯುರ್ವೇದದ ವ್ಯವಹಾರಗಳ ಮೇಲೆ ಪ್ರಶ್ನೆಗಳು ಏಳುವಂತೆ ಮಾಡಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights