ಗಾಲ್ವನ್ ಸಂಘರ್ಷಕ್ಕೆ ಬಿಹಾರ 16 ನೇ ರೆಜಿಮೆಂಟ್ ಮೇಲೆ ಮತ್ತೆ ಆರೋಪ ಹೊರಿಸಿದ ಚೀನ

ಜೂನ್ 15 ರಂದು ಗಾಲ್ವನ್ ಗಡಿಯಲ್ಲಿ ಚೀನ ಮತ್ತು ಭಾರತೀಯ ಯೋಧರ ನಡುವೆ ನಡೆದ ಘರ್ಷಣೆಯಲ್ಲಿ ಕನಿಷ್ಠ 20 ಭಾರತೀಯ ಯೋಧರು ಮೃತರಾಗಿದ್ದರು. ಚೀನಾದ ಕಡೆಯ ಸಾವು ನೋವಿನ ಪ್ರಮಾಣದ ಅಧಿಕೃತ ಹೇಳಿಕೆ ಇನ್ನೂ ಬಂದಿಲ್ಲ ಆದರೆ ಭಾರತೀಯ ಸೈನ್ಯದ ಪ್ರಮುಖ ಘಟಕವಾದ 16 ನೇ ಬಿಹಾರ ರೆಜಿಮೆಂಟ್‌ನ ಸೈನಿಕರ ಪ್ರಚೋದನೆಯೇ ಸಂಘರ್ಷಕ್ಕೆ ಕಾರಣ ಎಂದು  ಚೀನಾ ಸೇನೆ ಮತ್ತೆ ಆರೋಪಿಸಿದೆ. ಅಲ್ಲದೆ ಭಾರತವು ಈ ಘಟಕವನ್ನು ಶಿಕ್ಷಿಸಬೇಕೆಂದು ಅದು ಆಗ್ರಹಿಸಿದೆ.

“ಜೂನ್ 15 ರ ಸಂಜೆ ನಡೆದ ಘರ್ಷಣೆಗೆ ಹೊಣೆಗಾರರಾಗಿರುವವರಿಗೆ ಭಾರತ ಕಠಿಣ ಶಿಕ್ಷೆ ವಿಧಿಸಬೇಕು. ಗಡಿ ಪ್ರದೇಶದಲ್ಲಿ ಶಾಂತಿ ಕಾಪಾಡಲು ಚೀನಾದೊಂದಿಗೆ ಒಟ್ಟಾಗಿ ಕೆಲಸ ಮಾಡಬೇಕು. ಅಂತಹ ಘಟನೆಗಳು ಮತ್ತೆ ಸಂಭವಿಸದಂತೆ ನೋಡಿಕೊಳ್ಳಲು ತನ್ನ ಮುಂಚೂಣಿ ಪಡೆಗಳನ್ನು ಕಟ್ಟುನಿಟ್ಟಾಗಿ ಶಿಸ್ತುಬದ್ಧಗೊಳಿಸಬೇಕು ಎಂದು ಚೀನಾದ ಕಡೆಯವರು ಒತ್ತಾಯಿಸುತ್ತಾರೆ” ಎಂದು ಚೀನೀ ಸೇನೆಯ ಹಿರಿಯ ಕರ್ನಲ್ ಮತ್ತು ರಕ್ಷಣಾ ಸಚಿವಾಲಯದ ವಕ್ತಾರ ವೂ ಕಿಯಾನ್ ಬುಧವಾರ ಬೀಜಿಂಗ್‌ನಲ್ಲಿ ಹೇಳಿದ್ದಾರೆ.

“ಘರ್ಷಣೆಗೆ ಜವಾಬ್ದಾರರಾಗಿರುವವರ ಮುಂಚೂಣಿ ಪಡೆ” ಎಂದು ಚೀನಾ 16 ನೇ ಬಿಹಾರ ರೆಜಿಮೆಂಟ್ ಘಟಕವನ್ನು ಉದ್ದೇಶಿಸಿ ಹೇಳಿದೆ. ಅಂದು 16 ನೇ ಬಿಹಾರ ರೆಜಿಮೆಂಟ್‌ನ ನೇತೃತ್ವವನ್ನು ಕರ್ನಲ್ ಸಂತೋಷ್ ಬಾಬು ವಹಿಸಿಕೊಂಡಿದ್ದು, ಸಂಘರ್ಷದಲ್ಲಿ ಕೊಲ್ಲಲ್ಪಟ್ಟಿದ್ದರು.

“ಕಾರ್ಪ್ಸ್ ಕಮಾಂಡರ್-ಮಟ್ಟದ ಸಭೆಯಲ್ಲಿ ಆದ ಒಪ್ಪಂದವನ್ನು ಉಲ್ಲಂಘಿಸಿ, ಜೂನ್ 15 ರ ಸಂಜೆ, ಭಾರತದ ಮುಂಚೂಣಿ ಪಡೆಗಳು ಉದ್ದೇಶಪೂರ್ವಕವಾಗಿ ಪ್ರಚೋದನೆ ಮಾಡಿ ಮತ್ತೊಮ್ಮೆ ಎಲ್‌ಎಸಿಯನ್ನು ದಾಟಿ ಅಲ್ಲಿದ್ದ ಚೀನಾದ ಅಧಿಕಾರಿಗಳು ಮತ್ತು ಸೈನಿಕರ ಮೇಲೆ ಹಿಂಸಾತ್ಮಕವಾಗಿ ದಾಳಿ ಮಾಡಿದರು” ಇದು ಸಂಘರ್ಷಕ್ಕೆ ಕಾರಣವಾಯಿತು ಎಂದು ವೂ ಹೇಳಿದ್ದಾರೆ.

ಜೂನ್ 16 ರಂದು ನಡೆದ ಘರ್ಷಣೆಯ ಬಗ್ಗೆ ತನ್ನ ಮೊದಲ ಹೇಳಿಕೆಯಲ್ಲಿ ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಚೀನಾವನ್ನು ದೂಷಿಸಿತ್ತು. ಈಗ ಕರ್ನಲ್ ಸಂತೋಷ್ ಬಾಬು ನೇತೃತ್ವದ ರೆಜಿಮೆಂಟ್ ನಾಶ ಮಾಡಿದ್ದ ಚೀನಾ ಸೇನೆಯ ಶಿಬಿರಗಳು ಅದೇ ಜಾಗದಲ್ಲಿ ಮತ್ತೆ ತಲೆಯೆತ್ತಿವೆ ಎಂಬ ವರದಿಗಳು ಕಾಣಿಸಿಕೊಳ್ಳುತ್ತಿದ್ದು ಚೀನಾದ ಉದ್ದೇಶಗಳ ಬಗ್ಗೆ ಮತ್ತೆ ಸಂದೇಹಗಳು ಎದ್ದಿವೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights