ಕರ್ನಾಟಕದಲ್ಲಿ ಮತ್ತೆ ಲಾಕ್‌ಡೌನ್‌ ಸಾಧ್ಯವಿಲ್ಲ: ವದಂತಿಗಳ ನಡುವೆ ಡಿಸಿಎಂ ಅಶ್ವಥ್ ನಾರಾಯಣ್

ಕರ್ನಾಟಕದಲ್ಲಿ ಮತ್ತೆ ಲಾಕ್‌ಡೌನ್ ಘೋಷಿಸಲಾಗುತ್ತಿದೆ ಎಂಬ ವದಂತಿಗಳ ನಡುವೆ “ಮತ್ತೆ ಲಾಕ್ ಡೌನ್ ಮಾಡಲು ಸಾಧ್ಯವಿಲ್ಲ” ಎಂದು ಉಪಮುಖ್ಯಮಂತ್ರಿ ಸಿ.ಎನ್ ಅಶ್ವಥ್ ನಾರಾಯಣ್ ಹೇಳಿದ್ದಾರೆ.

ಕರ್ನಾಟಕದಲ್ಲಿ ಕೊರೊನಾ ವೈರಸ್ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಲಾಕ್‌ಡೌನ್ ಮಾಡಬೇಕು ಅಥವಾ ನಾಗರಿಕರೇ ಸ್ವಯಂಪ್ರೇರಣೆಯಿಂದ ಲಾಕ್ ಡೌನ್ ಅನುಸರಿಸಬೇಕು ಎಂಬ ಪ್ರಸ್ತಾಪಗಳ ಕುರಿತು ಮಾತನಾಡಿರುವ ಅವರು “ಲಾಕ್‌ಡೌನ್‌ ಮಾಡಬೇಕೆಂಬುದು ಅನೇಕ ವಿರೋಧ ಪಕ್ಷದ ನಾಯಕರ ಸಲಹೆಯಾಗಿದೆ. ಪ್ರಸ್ತುತ ಆ ಪ್ರಶ್ನೆ ಉದ್ಭವಿಸುವುದಿಲ್ಲ ಎಂದು ಹೇಳಿರುವುದಾಗಿ” ಎಎನ್‌ಐ ವರದಿ ಮಾಡಿದೆ.

“ರಾಜ್ಯದಲ್ಲಿ ಆರ್ಥಿಕತೆಯ ಪುನಶ್ಚೇತನವು ಈಗಷ್ಟೇ ಪ್ರಾರಂಭವಾಗಿದೆ. ಜನರ ಜೀವನೋಪಾಯ ಬಹಳ ಅವಶ್ಯಕ. ಇಂತಹ ಸಮಯದಲ್ಲಿ ಲಾಕ್‌ಡೌನ್‌ ಮಾಡುವುದು ತುಂಬಾ ಕಷ್ಟಕರವಾಗುತ್ತದೆ ಮತ್ತು ಜನರು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಎಂದು ನಾನು ಭಾವಿಸುತ್ತೇನೆ” ಎಂದು ಅವರು ತಿಳಿಸಿದ್ದಾರೆ.

ಮಾಜಿ ಮುಖ್ಯಮಂತ್ರಿಗಳಾದ ಎಚ್‌.ಡಿ ಕುಮಾರಸ್ವಾಮಿಯವರು ಕೊರೊನಾ ಪ್ರಕರಣಗಳನ್ನು ತಡೆಯಲು ಲಾಕ್‌ಡೌನ್‌ ಅಗತ್ಯ ಎಂದು ಅಭಿಪ್ರಾಯಪಟ್ಟಿದ್ದರು.

ಕೊರೋನಾ ಸೋಂಕಿತರಿಗೆ ಸೂಕ್ತ ಚಿಕಿತ್ಸೆ ನೀಡುವಲ್ಲಿ ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಈಗಿರುವ ಮೂರ್ನಾಲ್ಕು ಸಾವಿರ ರೋಗಿಗಳಿಗೆ ಚಿಕಿತ್ಸೆ ನೀಡಲು ಬೆಡ್ ಗಳಿಲ್ಲ, ವೆಂಟಿಲೇಟರ್ ಗಳ ಕೊರತೆ ಇದೆ. ಇದಕ್ಕೆ ಸ್ವಯಂ ಪ್ರೇರಿತ ಲಾಕ್ ಡೌನ್ ಒಂದೇ ಪರಿಹಾರ ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ ಕುಮಾರಸ್ವಾಮಿ ಆಗ್ರಹಿಸಿದ್ದರು.

ಬೆಂಗಳೂರು ಸೇರಿದಂತೆ ರಾಜ್ಯದ ನಿವಾಸಿಗಳೇ, ನೀವು COVID-19 ನಿಂದ ಪಾರಾಗಲು ಈಗ ಉಳಿದಿರುವುದು ಒಂದೇ ದಾರಿ. ಮನೆಯಲ್ಲೇ ಉಳಿದು ನೀವೇ ಸ್ವಯಂ ಘೋಷಿತ ಬಂದ್ ಆಚರಿಸಿ. ಪ್ರಾಣಕ್ಕಿಂತಲೂ ಹಣ ಮುಖ್ಯವಲ್ಲ.‌ ಜೀವ ಇದ್ದರೆ ಹೇಗಾದರೂ ಬದುಕಬಹುದು. ನಿಮ್ಮ ಜೀವ ಜೀವನ ಈಗ ನಿಮ್ಮ ಕೈಯಲ್ಲಿದೆ ಎಂದು ಕುಮಾರಸ್ವಾಮಿ ತಿಳಿಸಿದ್ದರು. ಈ ಸಂದೇಶ ವೈರಲ್ ಆಗಿ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights