ಸೋಂಕಿತರು ಆತ್ಮವಿಶ್ವಾಸ ಕಳೆದುಕೊಳ್ಳಬಾರದು; ಕೊರೊನಾ ಆಸ್ಪತ್ರೆಗೆ ಡಿಕೆಶಿ ಭೇಟಿ

ವಿಕ್ಟೋರಿಯಾ ಆಸ್ಪತ್ರೆಗೆ ಇಂದು (ಬುಧವಾರ) ಭೇಟಿ ನೀಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಕೊರೊನಾ ಸೋಂಕಿತರು, ಅವರಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರು, ಆಸ್ಪತ್ರೆ ಸಿಬ್ಬಂದಿ ಜತೆ ಸಮಾಲೋಚನೆ ನಡೆಸಿದ್ದಾರೆ.

ಕೋವಿಡ್ ಸೋಂಕಿತರನ್ನು ಸಮಾಜವು ವಿಚಿತ್ರ ಹಾಗೂ ನಿರ್ಲಕ್ಷ್ಯ ಭಾವದಿಂದ ನೋಡುತ್ತಿರುವ ಸಂದರ್ಭದಲ್ಲಿ ಶಿವಕುಮಾರ್ ಅವರು ಆಸ್ಪತ್ರೆಗೆ ನೀಡಿ, ಅವರಲ್ಲಿ ಧೈರ್ಯ ತುಂಬಿದ್ದು ಮಾದರಿ ನಡೆಯಾಗಿದೆ.

ಜತೆಗೆ ಮನೆ, ಕುಟುಂಬ ಪರಿವಾರದವರನ್ನು ಬಿಟ್ಟು, ತಮ್ಮ ಆರೋಗ್ಯ ಹಾಗೂ ಜೀವವನ್ನು ಪಣಕ್ಕಿಟ್ಟು ಸೇವಾಮನೋಭಾವದಿಂದ ಕೆಲಸ ಮಾಡುತ್ತಿರುವ ವೈದ್ಯರು, ಆಸ್ಪತ್ರೆ ಸಿಬ್ಬಂದಿಗಳ ಜತೆಗೂ ಮಾತನಾಡಿದ ಶಿವಕುಮಾರ್ ಅವರು, ‘ನೀವು ಉತ್ತಮವಾಗಿ ಕೆಲಸ ಮಾಡುತ್ತಿದ್ದೀರಿ. ಜನರ ಜೀವ ಉಳಿಸುತ್ತಿದ್ದೀರಿ. ನಿಮ್ಮ ಸೇವೆ ಅಮೂಲ್ಯವಾದದ್ದು. ನಿಮ್ಮ ಸೇವೆಗೆ ಬೆಲೆ ಕಟ್ಟಲು ಆಗದು’ ಎಂದು ಅವರ ಕಾರ್ಯವೈಖರಿ ಹಾಗೂ ಕಾರ್ಯಕ್ಷಮತೆಯನ್ನು ಪ್ರಶಂಸಿದ್ದು, ಅವರ ಸಮಸ್ಯೆಗಳನ್ನು ಆಲಿಸಿದ್ದಾರೆ.

‘ಇಂದು ವಿಕ್ಟೋರಿಯಾ ಆಸ್ಪತ್ರೆಗೆ ಭೇಟಿ ನೀಡಿದ್ದು, ಇಲ್ಲಿರುವ ಸೋಂಕಿತರು, ವೈದ್ಯರು, ಆಸ್ಪತ್ರೆ ಸಿಬ್ಬಂದಿಗಳ ಜತೆ ಮಾತನಾಡಿ ಅವರಿಗೆ ಧೈರ್ಯ ತುಂಬಿದ್ದೇನೆ. ನಾನು ಈ ಹಿಂದೆ ವೈದ್ಯಕೀಯ ಶಿಕ್ಷಣ ಸಚಿವನಾಗಿ ಕೆಲಸ ಮಾಡಿದ್ದರಿಂದ ಇಲ್ಲಿನ ವೈದ್ಯಕೀಯ ಸಿಬ್ಬಂದಿ ಪರಿಚಯ ನನಗಿದೆ. ಆಸ್ಪತ್ರೆಗಳು ಹೇಗೆ ಕಾರ್ಯನಿರ್ವಹಿಸುತ್ತವೆ ಎಂಬುದನ್ನೂ ಅರಿತಿದ್ದೇನೆ’ ಎಂದು ಡಿಕೆಶಿ ತಿಳಿಸಿದ್ದಾರೆ.

‘ಮಹಾಮಾರಿ ಕೊರೊನಾ ವಿರುದ್ಧದ ಹೋರಾಟದಲ್ಲಿ ವೈದ್ಯರು, ಆಸ್ಪತ್ರೆ ಸಿಬ್ಬಂದಿ, ನರ್ಸ್ ಗಳು, ಪೊಲೀಸರು ಸೇರಿದಂತೆ ಎಲ್ಲ ವಾರಿಯರ್ಸ್ ಗಳು ತಮ್ಮ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸುತ್ತಿದ್ದಾರೆ. ತಮ್ಮ ಜೀವದ ಹಂಗು ತೊರೆದು ಹೋರಾಡುತ್ತಿದ್ದಾರೆ. ಈ ಸಮಯದಲ್ಲಿ ಅವರ ಬೆನ್ನಿಗೆ ನಿಲ್ಲುವುದು, ಅವರಿಗೆ ಧೈರ್ಯ ತುಂಬುವುದು ನಮ್ಮ ಕರ್ತವ್ಯ’ ಎಂದು ಹೇಳಿದ್ದಾರೆ.

‘ಹಲವಾರು ಸೋಂಕಿತರ ಜತೆಗೂ ನಾನು ಮಾತನಾಡಿದ್ದು, ಅವರು ಚಿಕಿತ್ಸೆ ಮತ್ತಿತರ ವ್ಯವಸ್ಥೆಗಳ ಬಗ್ಗೆ ತೃಪ್ತಿ ವ್ಯಕ್ತಪಡಿಸಿದ್ದಾರೆ. ಇಲ್ಲಿ 4 ವರ್ಷದ ಮಗುವಿನಿಂದ ಹಿಡಿದು 99 ವರ್ಷದ ವೃದ್ಧರವರೆಗೂ ಅನೇಕ ಸೋಂಕಿತರು ಚಿಕಿತ್ಸೆ ಪಡೆದು, ಗುಣಮುಖರಾಗಿ ಮನೆಗೆ ಮರಳಿದ್ದಾರೆ. ನೂರಾರು ಗರ್ಭಿಣಿಯರು ಚಿಕಿತ್ಸೆ ಪಡೆದು ಮನೆಗೆ ಮರಳಿರುವ ದಾಖಲೆಗಳನ್ನು ನೋಡಿದ್ದೇನೆ. ಇನ್ನೂ ವಿಶೇಷವೆಂದರೆ ಇಲ್ಲಿ ಚಿಕಿತ್ಸೆ ಪಡೆದು, ಗುಣಮುಖರಾಗಿ ಹೋದವರು ಮತ್ತೆ ಇಲ್ಲಿಗೆ ಬಂದು ಸ್ವಯಂ ಸೇವಕರಾಗಿ ಕಾರ್ಯನಿರ್ವಹಿಸಲು ಮುಂದಾಗಿದ್ದಾರೆ. ಹೀಗಾಗಿ ಸೋಂಕಿತರು, ಚಿಕಿತ್ಸೆ ನೀಡುತ್ತಿರುವವರು ಇಬ್ಬರಿಗೂ ನಾವೆಲ್ಲರೂ ನೈತಿಕ ಬೆಂಬಲ ನೀಡಬೇಕಿದೆ. ಅವರು ಯಾವುದೇ ಕಾರಣಕ್ಕೂ ಹೆದರುವ ಅಗತ್ಯವಿಲ್ಲ ಎಂಬ ಮನೋಭಾವ ತುಂಬುವ ಹೊಣೆ ನಮ್ಮ-ನಿಮ್ಮೆಲ್ಲರದ್ದಾಗಿದೆ’ ಎಂದಿದ್ದಾರೆ.

‘ಮಂತ್ರಿಗಳು ಕೂಡ ಆಸ್ಪತ್ರೆಗಳಿಗೆ ಭೇಟಿ ನೀಡಿ ಸೋಂಕಿತರು ಮತ್ತು ಚಿಕಿತ್ಸೆ ನೀಡುತ್ತಿರುವವರಿಗೆ ಆತ್ಮವಿಶ್ವಾಸ ತುಂಬುವುದು ಉತ್ತಮ. ಕೋವಿಡ್ ಸೋಂಕಿತರ ಬಗ್ಗೆ ತಪ್ಪು ಕಲ್ಪನೆಗಳನ್ನು ಇಟ್ಟುಕೊಳ್ಳುವುದು ಬೇಡ. ಚಿಕಿತ್ಸೆ ವ್ಯವಸ್ಥೆಯಲ್ಲಿ ಸಣ್ಣಪುಟ್ಟ ದೋಷಗಳಿದ್ದರೆ ಅದನ್ನು ಸರಿಪಡಿಸುವುದು ಸರಕಾರದ ಕರ್ತವ್ಯ. ಕೋವಿಡ್ ಸಲಕರಣೆಗಳ ಖರೀದಿಯಲ್ಲಿ ಅಕ್ರಮ ನಡೆದಿರುವ ಬಗ್ಗೆ ಇಲ್ಲಿ ಮಾತನಾಡುವುದು ಸರಿಯಲ್ಲ. ಅದನ್ನು ಬೇರೆ ಸಂದರ್ಭದಲ್ಲಿ, ಬೇರೆ ವೇದಿಕೆಯಲ್ಲಿ ಪ್ರಸ್ತಾಪ ಮಾಡುತ್ತೇನೆ. ಇಲ್ಲಿಗೆ ಬಂದಿರುವುದು ಸೋಂಕಿತರು, ವೈದ್ಯರು ಮತ್ತು ಸಿಬ್ಬಂದಿಗೆ ಆತ್ಮವಿಶ್ವಾಸ ತುಂಬಲು ಮಾತ್ರ. ಬೇರೆ ವಿಚಾರಗಳ ಬಗ್ಗೆ ಇಲ್ಲಿ ಮಾತನಾಡುವುದಿಲ್ಲ.’

‘ಈ ಸಮಯದಲ್ಲಿ ಸೋಂಕಿತರ ಮಾನಸಿಕ ಆರೋಗ್ಯವೂ ಬಹಳ ಮುಖ್ಯ. ಆಸ್ಪತ್ರೆಯಲ್ಲಿ ರೋಗಿಗಳಿಗೆ ಫೋನ್ ಸೌಲಭ್ಯವನ್ನು ಕಲ್ಪಿಸಲಾಗಿದ್ದು, ಸೋಂಕಿತರು ತಮ್ಮ ಕುಟುಂಬದವರ ಜತೆ ಮಾತನಾಡಬಹುದಾಗಿದೆ. ಎಲ್ಲ ಆಸ್ಪತ್ರೆಗಳಲ್ಲೂ ಈ ರೀತಿಯ ಫೋನ್ ವ್ಯವಸ್ಥೆ ಕಲ್ಪಿಸಬೇಕು’ ಎಂದು ಹೇಳಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights