ಹಳ್ಳಿ ಮಾತು-7: ರೈತಾಪಿ ದುಡಿಮೆ ದೋಚಲು ಖಾಸಗಿ ಸಕ್ಕರೆ ಉದ್ಯಮಿಗಳ ಹುನ್ನಾರ

‘ಮಂಡಿ ಉದ್ದ ಕಬ್ಬು, ಎದೆ ಉದ್ದ ಸಾಲ’ ಎಂಬುದು ಮಂಡ್ಯ ರೈತರ ಪರಿಸ್ಥಿತಿಯನ್ನು ಪ್ರತಿನಿಧಿಸುವ ಒಂದು ಜನಜನಿತ ಗಾದೆ ಮಾತು. ಜಾಗತೀಕರಣ ಧೋರಣೆಗಳ ಕಾರಣದಿಂದ ರಸಗೊಬ್ಬರ, ಡೀಸೆಲ್‌, ಸಕ್ಕರೆ ಮುಂತಾದವುಗಳನ್ನು ನಿಯಂತ್ರಣಮುಕ್ತಗೊಳಿಸಿದ್ದರಿಂದ ಕಬ್ಬು ಬೆಳೆದು ಸಾಲದ ಸುಳಿಗೆ ಸಿಲುಕಿ ಆತ್ಮಹತ್ಯೆಕ್ಕೀಡಾದ ರೈತರ ಆತ್ಮ, ಸಕ್ಕರೆ ಕಾರ್ಖಾನೆಗಳ ಆವರಣಗಳಿಗೆ ಬಂದು, ಹೋಗಿ ಮಾಡತ್ತಿರಬಹುದು. ಏಕೆಂದರೆ ಇವರೆಲ್ಲಾ ಕಟಾವು ಪರ್ಮಿಟ್ ಗೆ, ಕಬ್ಬಿನ ಹಣಕ್ಕೆ ಅಲೆದಾಡಿ ನೊಂದವರೇ.

ಒಂದು ಕಡೆ ನೂತನ ಕಬ್ಬು ಬೆಳೆ ತಳಿ ವಿಸಿಎಫ್ 517 ನ ಕಾರಣದಿಂದ ಸರಾಸರಿ ಎಕರೆ ಇಳುವರಿ 40 ಟನ್ ನಿಂದ 80 ಟನ್ ಗೆ ಹೆಚ್ಚಿರುವಾಗ, ಇನ್ನೊಂದು ಕಡೆ ಸಾರ್ವಜನಿಕ ಸ್ವಾಮ್ಯದ ಮೈಷುಗರ್ ಹಾಗೂ ಸಹಕಾರಿ ವಲಯದ ಪಿ ಎಸ್ ಎಸ್ ಕೆ, ಕಬ್ಬು ಅರೆಯುತ್ತಿಲ್ಲ. ಇದು ಜಿಲ್ಲೆಯ ಖಾಸಗಿ ಕಾರ್ಖಾನೆಗಳಿಗೆ ಹಬ್ಬವನ್ನುಂಟು ಮಾಡಿ, ರೈತರ ಮೇಲಿನ ತಮ್ಮ ಶೋಷಣಾ ಹಿಡಿತವನ್ನು ಮತ್ತಷ್ಟು ಬಿಗಿಗೊಳಿಸಿ ತಮ್ಮ ಲಾಭಪಿಪಾಸುತನಕ್ಕೆ ಸಿಕ್ಕ ಅವಕಾಶವೆಂಬಂತೆ ರೈತರ ದುಸ್ಥಿತಿಯನ್ನು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ. ಹೀಗೆ ನೊಂದ ರೈತರು ಹೇಗಾದರೂ ಸರಿ ಮೈಷುಗರ್ ಹಾಗೂ ಪಿ ಎಸ್ ಎಸ್ ಕೆ ಕಾರ್ಖಾನೆಗಳನ್ನು ಪ್ರಾರಂಭ ಮಾಡಿ ಎಂದು ಹತಾಶ ಮೊರೆಯಿಡುತ್ತಿರುವಾಗ, ಇಂತಹ ಸಂದರ್ಭದಕ್ಕೆ ಕಾದು ಕುಳಿತಿದ್ದ ಈ ಖಾಸಗಿ ಕಾರ್ಖಾನೆಗಳು ಮೈಷುಗರ್, ಪಿ ಎಸ್ ಎಸ್ ಕೆ ನುಂಗಲು ಎಲ್ಲ ತಯಾರಿ ನಡೆಸುತ್ತಿವೆ. ಈಗಾಗಲೇ ಪಿ ಎಸ್ ಎಸ್ ಕೆಯನ್ನು 40 ವರ್ಷಗಳ ದೀರ್ಘಾವಧಿಗೆ ಗುತ್ತಿಗೆ ಹೆಸರಿನಲ್ಲಿ ಬಿಜೆಪಿ ಮುಖಂಡ, ಮಾಜಿ ಸಚಿವ ಮುರುಗೇಶ್ ನಿರಾಣಿ ಒಡೆತನದ ನಿರಾಣಿ ಷುಗರ್ಸ್ ತನ್ನದಾಗಿಸಿಕೊಂಡಿದೆ. ಸಾವಿರಾರು ಕೋಟಿರೂಗಳ ಸಾರ್ವಜನಿಕ ಆಸ್ತಿ ಇರುವ ಮೈಷುಗರ್ ಕಾರ್ಖಾನೆ ಮೇಲೆ ಕಣ್ಣಿಟ್ಟಿದೆ.

ಈ ವರ್ಷ ಮೈಷುಗರ್ ಕಬ್ಬು ಅರೆಯಬೇಕಾದರೆ ಖಾಸಗಿಯವರಿಗೆ ನೀಡುವುದು ಒಂದೇ ದಾರಿ ಎಂದು ಕೆಲವರು ಅಭಿಪ್ರಾಯಪಟ್ಟರೆ, ತನ್ನ ಮಾಲೀಕತ್ವದ ಕಂಪನಿಯನ್ನು ಸಮರ್ಥವಾಗಿ ನಡೆಸಲು ಸರ್ಕಾರಕ್ಕೇನು ತೊಂದರೆ ಎಂಬುದು ಹಲವರ ಪ್ರಶ್ನೆಯಾಗಿದೆ. ಮಂಡ್ಯದಲ್ಲಿ ಮಾತ್ರವೇ ಚುನಾವಣೆ ನಡೆಯುತ್ತಿದೆ ಎಂಬಂತೆ ಬಿಂಬಿತವಾದ ಕಳೆದ ಲೋಕಸಭಾ ಚುನಾವಣೆಯಲ್ಲಿ ಮಂಡ್ಯದ ‘ಸ್ವಾಭಿಮಾನಿ’ಯಾಗಿ ಗೆದ್ದ ಸುಮಲತಾ ಅಂಬರೀಶ್ ರವರ, ಮೈಷುಗರ್ ಖಾಸಗೀಕರಣ ಪರವಾದ ಆಕ್ರಮಣಕಾರಿ ನಿಲುವು, ‘ಸ್ವಾಭಿಮಾನ’ ಎಂದರೆ ಜಿಲ್ಲೆಯ ಆಸ್ತಿಯನ್ನು ಮಾರಿಕೊಳ್ಳುವುದೋ ಅಥವಾ ಕಾಪಾಡಿಕೊಳ್ಳುವುದೋ ಎಂಬ ಪ್ರಶ್ನೆಗಳು ಎದ್ದೇಳುವಂತೆ ಮಾಡಿದೆ.

“22-6-20 ರಂದು ಮಂಡಿಸಿರುವ 2013-14 ರ ವಾರ್ಷಿಕ ವರದಿಯಲ್ಲಿ, ಕಾರ್ಖಾನೆಯ ಒಂದು ಮಿಲ್ಅನ್ನು ದಿನಕ್ಕೆ ಐದು ಸಾವಿರ ಟನ್ ಅರೆಯುವ ಸಾಮಾರ್ಥ್ಯದ ಮಿಲ್ ಆಗಿ ಯಶಸ್ವಿಯಾಗಿ ಉನ್ನತೀಕರಣಗೊಳಿಸಿದ್ದು, ತೃಪ್ತಿಕರವಾಗಿ ಕಾರ್ಯನಿರ್ವಹಿಸುವ ಸಾಮಾರ್ಥ್ಯ ಇದೆ ಎಂದು ಉಲ್ಲೇಖಿಸಿರುವಾಗ ಕಾರ್ಖಾನೆ ಪ್ರಾರಂಭಕ್ಕೆ ವಿಳಂಬ ಮಾಡುತ್ತಿರುವುದು ಏಕೆ?” ಎಂದು ಹಿರಿಯ ರೈತ ನಾಯಕಿ ಸುನಂದಾ ಜಯರಾಂರವರು ಸತತವಾಗಿ ಪ್ರಶ್ನಿಸುತ್ತಿದ್ದಾರೆ. ಆದರೆ ಈ ಪ್ರಶ್ನೆ ಕಿವಿಗೆ ಬೀಳದಿರುವಂತೆ ನಟಿಸುತ್ತಿರುವ ಸರ್ಕಾರ, ಮಂಡ್ಯ ಜನರನ್ನು ಒಲಿಸಿಕೊಳ್ಳಲು ಮುರುಗೇಶ್ ನಿರಾಣಿರವರನ್ನೇ ಅಖಾಡಕ್ಕೆ ಇಳಿಸಿದೆ. ಮಂಡ್ಯದ ಜನರನ್ನು ಉದ್ದೇಶಿಸಿ ಸಾರ್ವಜನಿಕ ಹೇಳಿಕೆಗಳನ್ನು ಕೊಡುತ್ತಿರುವ ಮುರುಗೇಶ್ ನಿರಾಣಿಯವರು “ಸಕ್ಕರೆ ಕಾರ್ಖಾನೆ ನಡೆಸುವುದು ಸರ್ಕಾರದ ಕೆಲಸವಲ್ಲ; ಸಕ್ಕರೆ ಕಾರ್ಖಾನೆ ಮಾತ್ರವೇ ಅಲ್ಲ ಯಾವ ಉದ್ದಿಮೆಯನ್ನು ಸಹ ನಡೆಸಬಾರದು” ಎಂದು ಅಬ್ಬರಿಸಿದ್ದಾರೆ.

ಮೈಷುಗರ್ ನ ಪ್ರಸ್ತಾಪ ಬಂದಾಗಲೆಲ್ಲಾ, ರಾಜ್ಯ ಸರ್ಕಾರ ಕಳೆದ ಹತ್ತು ವರ್ಷಗಳ ಅವಧಿಯಲ್ಲಿ ನೀಡಿರುವ ಸುಮಾರು 400 ಕೋಟಿಗೂ ಹೆಚ್ಚು ಹಣಕಾಸು ನೆರವು ಪ್ರಯೋಜನಕ್ಕೆ ಬರಲಿಲ್ಲ. ಇನ್ನು ಎಷ್ಟು ಹಣ ಕೊಟ್ಟರೂ ವ್ಯರ್ಥವೇ. ಸುಮ್ಮನೇ ಖಾಸಗೀಯವರಿಗೆ ಕೊಟ್ಟು ಬಿಡುವುದು ಸರಿ ಎಂಬ ಅಭಿಪ್ರಾಯ ದುತ್ತನೇ ನಮ್ಮ ರಾಜಕಾರಣಿಗಳ ಬಾಯಲ್ಲಿ ಬರುತ್ತಿದೆ. ಆದರೆ ಇದೇ ಸಂದರ್ಭದಲ್ಲಿ ಖಾಸಗಿ ಕಾರ್ಖಾನೆಗಳಿಗೆ ನೀಡಿರುವ ಸಹಸ್ರಾರು ಕೋಟಿ ರೂಗಳ ನೆರವಿನ ಬಗ್ಗೆ ಮೌನ ವಹಿಸುತ್ತಿದ್ದಾರೆ. ಕೇವಲ 2018-19 ರ ಒಂದೇ ಸಾಲಿನಲ್ಲಿ ಖಾಸಗಿ ಕಾರ್ಖಾನೆಗಳು ಒಂದು ಟನ್ ಅರೆದರೆ ಸರ್ಕಾರ 138.80 ರೂ ಅನ್ನು ಸಬ್ಸಿಡಿ ನೀಡಿದೆ. ಇದರ ಜೊತೆಗೆ ಎಥೆನಾಲ್ ಉತ್ಪಾದನಾ ಸಾಮರ್ಥ್ಯ ಹೆಚ್ಚಿಸಲು 4440 ಕೋಟಿ, 4 ಮಿಲಿಯನ್ ಟನ್ ಸಕ್ಕರೆಯನ್ನು ಗೊಡೌನ್ ಗಳಲ್ಲಿ ಕಾಪಾಡಿಕೊಳ್ಳಲು 1175 ಕೋಟಿ, ಹೀಗೆ ಈ ಒಂದೇ ವರ್ಷದಲ್ಲಿ ಹತ್ತಾರು ಸಾವಿರ ಕೋಟಿಗೂ ಹೆಚ್ಚು ನೆರವು ನೀಡಿದೆ. ಪ್ರತಿ ವರ್ಷ ಸಹಸ್ರಾರು ಕೋಟಿ ರೂ ಗಳ ಬಡ್ಡಿ ರಹಿತ ಸಾಲಗಳನ್ನು ಒದಗಿಸುತ್ತಲೇ ಬಂದಿದೆ. ಆದರೆ ಮೈಷುಗರ್ ಗೆ ನೀಡಿದ ಈ 400 ಕೋಟಿಯಲ್ಲಿ ಸರ್ಕಾರವೇ ವರ್ಷಾನುಗಟ್ಟಲೆ ಬಾಕಿ ಉಳಿಸಿಕೊಂಡ ವಿದ್ಯುತ್ ಖರೀದಿ ಮತ್ತಿತರ ಬಾಕಿ ಪಾವತಿಯೂ ಸೇರಿದೆ. ವರ್ಷಾನುಗಟ್ಟಲೆ ಬಾಕಿ ಉಳಿದಿದ್ದ ಕಾರ್ಮಿಕರ ವೇತನ ಮತ್ತು ಇತರೆ ಆಡಳಿತ ವೆಚ್ಚಗಳನ್ನು ನಿಭಾಯಿಸಲು ನೀಡಿರುವ ಹಣವೇ ಹೊರತು ಕಾರ್ಖಾನೆಯ ಪುನಶ್ಚೇತನಕ್ಕೆ ನೀಡಿರುವ ಹಣ ಆಗಿರಲಿಲ್ಲ. ಇದನ್ನೇನೂ ಒಂದೇ ಸಾರಿ ಕೊಟ್ಟಿಲ್ಲ. ಬದಲಾಗಿ ತಮ್ಮ ತಮ್ಮ ರಾಜಕೀಯ ನೆಲೆಗಳನ್ನು ಪ್ರಭಾವಿಸಲು ಅಥವಾ ಬೇರೆ ಪಕ್ಷಗಳ ರಾಜಕೀಯ ನೆಲೆಗಳನ್ನು ಕುಗ್ಗಿಸಲು ನೀಡಿರುವ ರಾಜಕೀಯ ಪ್ಯಾಕೇಜಾಗಿ ಬಂದಿದೆಯೇ ಹೊರತು ಆರ್ಥಿಕ ಪ್ಯಾಕೇಜ್ ಗಳಾಗಿ ಇದು ಬಂದಿಲ್ಲ ಎನ್ನುವುದು ಗಮನಾರ್ಹ.

ಮೈಷುಗರ್ ಗೆ 400 ಕೋಟಿ ಹಣಕಾಸು ನೀಡಿರುವ ಇದೇ ಅವಧಿಯಲ್ಲಿ ಖಾಸಗಿ ಕಾರ್ಖಾನೆಗಳು ಪಡೆದಿರುವ ಕಬ್ಬು ಅರೆಯುವ ಸಬ್ಸಿಡಿ, ರಪ್ತು ಉತ್ತೇಜಕ ಸಬ್ಸಿಡಿ, ರಪ್ತು ಸಾಗಾಣಿಕೆ ಸಬ್ಸಿಡಿ, ಬಪರ್ ಸ್ಟಾಕ್ ಸಬ್ಸಿಡಿ, ಎಥೆನಾಲ್ ಮತ್ತಿತರ ಉಪ ಉತ್ಪಾದನಾ ಘಟಕಗಳ ಸಾಮಾರ್ಥ್ಯ ಹೆಚ್ಚಳಕ್ಕೆ ಪಡೆದಿರುವ ಸಬ್ಸಿಡಿ, ಇವುಗಳ ಜೊತೆಗೆ ಕೇಂದ್ರ ಸರ್ಕಾರ ನಿಗದಿ ಮಾಡುವ ಕಬ್ಬು ಬೆಳೆ ಉತ್ಪಾದನಾ ವೆಚ್ಚಕ್ಕಿಂತ ಕಡಿಮೆ ಮಟ್ಟದ ನ್ಯಾಯಯುತ ಹಾಗೂ ಲಾಭದಾಯಕ ಬೆಲೆಯನ್ನು ಕೂಡ ಪಾವತಿಸದೇ ಉಳಿಸಿಕೊಂಡಿರುವ ಬಾಕಿ, ರಾಜ್ಯ ಸರ್ಕಾರಗಳು ನಿಗದಿ ಮಾಡುತ್ತಿದ್ದ ರಾಜ್ಯ ಸಲಹಾ ಬೆಲೆ (SAP) ನಿಂತು ಹೋದ ಮೇಲೆ ಇದರಿಂದ ಆಗಿರುವ ಲಾಭ ಇವೆಲ್ಲವನ್ನೂ ಲೆಕ್ಕ ಹಾಕಿ ಒಟ್ಟು ಮಾಡಿದರೆ ಒಂದೊಂದು ಖಾಸಗಿ ಕಾರ್ಖಾನೆಗೆ ಆಗಿರುವ ಸರ್ಕಾರಿ ನೆರವು ಸಾವಿರಾರು ಕೋಟಿಗಳಾಷ್ಟಾಗುತ್ತದೆ.

“ಸರ್ಕಾರ ನಡೆಸಿದರೆ ನಷ್ಟಕ್ಕೀಡಾಗುತ್ತದೆ ಎನ್ನುವುದು ಸಾರ್ವಜನಿಕ ಆಸ್ತಿ ನುಂಗಲು ಕಟ್ಟಿರುವ ಕಟ್ಟುಕಥೆ. ಮೈಷುಗರ್ ನ ಅನುಭವವನ್ನೇ ತೆಗೆದುಕೊಳ್ಳುವುದಾದರೂ ಸುಮಾರು 85 ವರ್ಷಗಳ ಗತ ವೈಭವದ ಇತಿಹಾಸದಲ್ಲಿ ಸುಮಾರು 75 ವರ್ಷಗಳಷ್ಟು ಕಾಲ ಲಾಭ ಮಾಡಿದೆ ಎನ್ನುವುದನ್ನು ಮರೆಯಲಾಗದು” ಎನ್ನುತ್ತಾರೆ ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಿ.ಕುಮಾರಿ ರವರು.

ಹೌದು; ಸುಮಾರು ಹತ್ತು ವರ್ಷಗಳಷ್ಟು ಕಾಲದಿಂದ ಈ ಸಕ್ಕರೆ ಕಾರ್ಖಾನೆ ಹಾಗೂ ಪಿ ಎಸ್ ಎಸ್ ಕೆ ಯಂತಹ ಸಹಕಾರಿ ಕಾರ್ಖಾನೆಗಳು ನಷ್ಟಕ್ಕೆ ಸಿಲುಕಿವೆ. ಇದಕ್ಕೆ ರೈತರಾಗಲಿ, ಕಾರ್ಮಿಕರಾಗಲಿ ಕಾರಣರಲ್ಲ.ಇವರದು ಸಣ್ಣ-ಪುಟ್ಟ ತಪ್ಪುಗಳಿರಬಹುದು. ಆದರೆ ಇವು ಈ ಪ್ರಮಾಣದ ತೊಂದರೆಗೆ ಸಿಲುಕಲು ಕಾರಣವಲ್ಲ. ತಮ್ಮ ಆರ್ಥಿಕ ಧೋರಣೆಗಳು ಹಾಗೂ ಸಕ್ಕರೆ ನೀತಿಗಳಲ್ಲಾದ ಜನ ವಿರೋಧಿ ಬದಲಾವಣೆಗಳನ್ನು ಬೇಕೆಂತಲೇ ಮರೆ ಮಾಚಿ, ರೈತರು-ಕಾರ್ಮಿಕರು ಮತ್ತು ನಿರ್ವಹಣೆ ಮೇಲೆ ಕೇಂದ್ರ, ರಾಜ್ಯ ಸರ್ಕಾರಗಳು ಗೂಬೆ ಕೂರಿಸಿವೆ.

1991 ರಿಂದ ಅನುಸರಿಸಲಾದ ಜಾಗತೀಕರಣ, ಉದಾರೀಕರಣ ಮತ್ತು ಖಾಸಗೀಕರಣ ಧೋರಣೆಗಳ ಫಲವಾಗಿ ವಿಶ್ವ ವಾಣಿಜ್ಯ ಸಂಸ್ಥೆ ಒಪ್ಪಂದಗಳ ಷರತ್ತುಗಳು ಉಂಟು ಮಾಡಿದ ಆಮದು ಮತ್ತು ರಪ್ತು ನೀತಿಗಳು ದೇಶದ ಒಟ್ಟಾರೆ ಸಕ್ಕರೆ ಉದ್ಯಮ ಬಿಕ್ಕಟ್ಟಿಗೆ ಸಿಲುಕಲು, ವಿಶೇಷವಾಗಿ ಮೈಷುಗರ್ ನಂತಹ ಸಾರ್ವಜನಿಕ ಉದ್ಯಮ ಮಕಾಡೆ ಮಲಗಲು ಇರುವ ಪ್ರಧಾನ ಕಾರಣಗಳಾಗಿವೆ.

ಈ ಜಾಗತೀಕರಣದ ಪೈಪೋಟಿಯಲ್ಲಿ ಖಾಸಗಿ ಕಾರ್ಖಾನೆಗಳಿಗೆ ನೆರವಾಗಲು ಕೇಂದ್ರ ಸರ್ಕಾರ ತನ್ನ ಸಾಮಾಜಿಕ ಜವಾಬ್ದಾರಿ ಹೊಣೆಗಾರಿಕೆಯಿಂದ ನುಣುಚಿಕೊಂಡು ಅನಾಹುತಗಳನ್ನೇ ಸೃಷ್ಟಿಸಿತು. 21 ಆಕ್ಟೋಬರ್ 2009 ರಂದು ಅಂದಿನ ಸರ್ಕಾರ, 1955 ರ ಅಗತ್ಯ ವಸ್ತುಗಳ ಕಾಯಿದೆಗೆ ಸುಗ್ರಿವಾಜ್ಞೆ ಮೂಲಕ ತಿದ್ದುಪಡಿ ತಂದು ಸಕ್ಕರೆ ಉತ್ಪಾದನೆ ಧೋರಣೆಗಳಲ್ಲಿ ಗಮನಾರ್ಹ ಬದಲಾವಣೆಗಳನ್ನು ಉಂಟು ಮಾಡಿತು.ಇದರಿಂದಾಗಿ ಹಲವು ದಶಕಗಳಿಂದ ಅಸ್ತಿತ್ವದಲ್ಲಿದ್ದ ಶಾಸನಬದ್ಧ ಕನಿಷ್ಠ ಬೆಲೆ (SMP) ಹಾಗೂ ರಾಜ್ಯ ಸಲಹಾ ಬೆಲೆ (SAP) ವ್ಯವಸ್ಥೆ ಕೊನೆಗೊಂಡಿತು.  ಈ ಕ್ರಮವು  1966 ರ ಸಕ್ಕರೆ ನಿಯಂತ್ರಣ ಆದೇಶವನ್ನು ಗಣನೀಯವಾಗಿ ದುರ್ಬಲಗೊಳಿಸಿ, ಬೆಲೆ ನಿಗದಿಯಲ್ಲಿದ್ದ ರಾಜ್ಯಗಳ ಹಕ್ಕುಗಳನ್ನು, ರೈತ ಸಂಘಟನೆಗಳು ಒತ್ತಡ ಹೇರುವ ಅವಕಾಶವನ್ನು ಕಿತ್ತುಕೊಂಡಿತು. ಇನ್ನೊಂದು, ಸಕ್ಕರೆ ಆಮದು ಸುಂಕವನ್ನು ಶೇಕಡಾ 15 ಕ್ಕೆ ಇಳಿಸಿ, ಆಮದು ಮೇಲಿನ ಪ್ರಮಾಣಾತ್ಮಕ ನಿರ್ಬಂಧಗಳನ್ನು ಸಡಿಲಿಸಿ ಬ್ರೆಜಿಲ್, ಪಾಕಿಸ್ತಾನ, ಮೆಕ್ಸಿಕೋ ಮುಂತಾದ ದೇಶಗಳಿಂದ ಸಕ್ಕರೆ ದಾಖಲೆ ಪ್ರಮಾಣದಲ್ಲಿ ದೇಶದೊಳಗೆ ಬಂದು ಬೀಳುವಂತೆ ಮಾಡಿತು. ನಮ್ಮ ದೇಶದಲ್ಲೇ ಹೆಚ್ಚುವರಿ ಉತ್ಪಾದನೆ ಇರುವಾಗಲೂ ಈ ಕ್ರಮದಿಂದ ದೇಶದ ಸಕ್ಕರೆ ಉದ್ಯಮ ಮಾರಣಾಂತಿಕ ಹೊಡೆತ ಅನುಭವಿಸಿತು. ರೈತರಿಂದ ಕಬ್ಬು ಅರೆದು ಸಕ್ಕರೆ ಉತ್ಪಾದಿಸುವ ಬದಲು ಕಡಿಮೆ ಬೆಲೆಯ  ಕಚ್ಚಾ ಸಕ್ಕರೆಯನ್ನು ಆಮದು ಮಾಡಿಕೊಂಡು ಸಂಸ್ಕರಿಸಿ ರಪ್ತು ಮಾಡುವ ಸಕ್ಕರೆ ಉದ್ಯಮವನ್ನು ಬೆಳೆಸಲು ಸರ್ಕಾರ ಆಸಕ್ತಿ ವಹಿಸಿತು.

ಅಖಿಲ ಭಾರತ ಸಕ್ಕರೆ ಉತ್ಪಾದಕರ ಸಂಘಟನೆ (ISMA) ಕಟ್ಟಿಕೊಂಡು ಸಕ್ಕರೆ ಉದ್ಯಮಿಗಳು ತಮಗಾಗುತ್ತಿರುವ ತೊಂದರೆ ಬಗ್ಗೆ ಸರ್ಕಾರದ ಜೊತೆ ಲಾಭಿ ನಡೆಸಿದವು. ಈ ಸಂಘಟನೆಗೆ ನಿಷ್ಠರಾಗಿದ್ದ ಹಲವು ಉದ್ಯಮಿಗಳು ಎಲ್ಲಾ ಬಂಡವಾಳಶಾಹಿ ರಾಜಕೀಯ ಪಕ್ಷಗಳಲ್ಲಿ ಪ್ರಭಾವಿ ನಾಯಕರೇ ಆಗಿದ್ದಾರೆ. ಈ ಬಲವನ್ನು ಉಪಯೋಗಿಸಿ ಬಲವಾದ ಸಕ್ಕರೆ ಲಾಭಿ ನಡೆಸಿದ ಪರಿಣಾಮ, ಖಾಸಗಿ ಸಕ್ಕರೆ ಕಾರ್ಖಾನೆಗಳ ಹಿತರಕ್ಷಣೆಗೆ ಸಕ್ಕರೆ ನೀತಿಯಲ್ಲಿ ಬದಲಾವಣೆ ತರಲು ಒಪ್ಪಿ ರಂಗರಾಜನ್ ಸಮಿತಿಯನ್ನು ರಚಿಸಿತು.

ಈ ಸಮಿತಿಯು ಸಕ್ಕರೆ ಉದ್ಯಮವನ್ನು ಸಂಪೂರ್ಣವಾಗಿ ನಿಯಂತ್ರಣ ಮುಕ್ತ ಮಾಡುವಂತೆ ಶಿಪಾರಸ್ಸು ನೀಡಿತು. ರೈತರ, ಗ್ರಾಹಕರ ಹಾಗೂ ಸಹಕಾರಿ ಮತ್ತು ಸಾರ್ವಜನಿಕ ವಲಯಗಳ  ಹಿತವನ್ನು ಸಂಪೂರ್ಣ ಕಡೆಗಣಿಸಿ ಖಾಸಗಿ ಕಾರ್ಪೊರೇಟ್ ಸಕ್ಕರೆ ಕಾರ್ಖಾನೆಗಳ ಲಾಭದ ಹಿತಾಸಕ್ತಿ ಎತ್ತಿಹಿಡಿಯುವ ಶಿಪಾರಸ್ಸುಗಳನ್ನು ಇದು ಒಳಗೊಂಡಿತ್ತು. ಬಲಿಷ್ಠ ಸಕ್ಕರೆ ಲಾಭಿಗೆ ಮಣಿದ ಕೇಂದ್ರ ಸರ್ಕಾರ ಈ ಶಿಪಾರಸ್ಸುಗಳನ್ನು ಸಂಪೂರ್ಣವಾಗಿ ಜಾರಿಗೆ ತಂದಿತು.

ಇದರ ಪರಿಣಾಮ ರಾಜ್ಯ ಸಲಹಾ ಬೆಲೆ ನಿಗದಿ ಮಾಡುವ ಅಧಿಕಾರ ರಾಜ್ಯಗಳಿಂದ ಕೈ ತಪ್ಪಿ ಹೋಯಿತು. 2004 ರ ಸುಪ್ರೀಂ ಕೋರ್ಟ್ ತೀರ್ಪಿನಲ್ಲಿ ರಾಜ್ಯಗಳಿಗೆ ಕಬ್ಬು ಬೆಲೆ ನಿಗದಿ ಮಾಡುವ ಅಧಿಕಾರವನ್ನು ಎತ್ತಿ ಹಿಡಿದಿದ್ದರೂ ಯಾವುದೇ ಪ್ರಯೋಜನವಾಗಲಿಲ್ಲ. ಕೇಂದ್ರ ಹೇಳುವ ನ್ಯಾಯಯುತ ಹಾಗೂ ಲಾಭದಾಯಕ ಬೆಲೆ ಎಂಬುದು ರೈತರನ್ನು ವಂಚಿಸುವ ಮತ್ತು ಅಣಕಿಸುವ ನುಡಿಗಟ್ಟಾಯಿತು. ಪ್ರತಿ ವರ್ಷವೂ ಉತ್ಪಾದನಾ ವೆಚ್ಚಕ್ಕಿಂತ ಕಡಿಮೆ ಮಟ್ಟದಲ್ಲೇ ನ್ಯಾಯಯುತ ಹಾಗೂ ಲಾಭದಾಯಕ ಬೆಲೆ ಹೆಸರಿನಲ್ಲಿ ಕಬ್ಬಿನ ಬೆಲೆ ನಿಗದಿಯಾಗುತ್ತಿದೆ.

ರಂಗರಾಜನ್ ಶಿಫಾರಸ್ಸಿನಂತೆ ಲೆವಿ ಸಕ್ಕರೆ ಪೂರೈಸುವ ಬದ್ಧತೆಯಿಂದ ಖಾಸಗಿ ಕಾರ್ಖಾನೆಗಳನ್ನು ಮುಕ್ತಗೊಳಿಸಿದ ಕೇಂದ್ರ ಸರ್ಕಾರ, ಮಾರುಕಟ್ಟೆ ದರಗಳನ್ನು ಪ್ರಭಾವಿಸುತ್ತವೆ ಎಂಬ ಖಾಸಗಿ ಕಾರ್ಖಾನೆಗಳ ಒತ್ತಡಕ್ಕೆ ಮಣಿದು ಮೈಷುಗರ್, ಪಿ ಎಸ್ ಎಸ್ ಕೆ ಯಂತಹ ಕಾರ್ಖಾನೆಗಳಿಂದ ಪಡಿತರ ವಿತರಣೆಗೆ ಪಡೆಯುತ್ತಿದ್ದ ಸಕ್ಕರೆಯನ್ನು ನಿಲ್ಲಿಸಿತು. ಖಾಸಗಿ ಸಕ್ಕರೆ ಕಾರ್ಖಾನೆಗಳ ಸಕ್ಕರೆ ರಫ್ತು ಮತ್ತಿತರ ವಿಷಯಗಳಿಗೆ ಎಲ್ಲ ರೀತಿಯ ಬೆಂಬಲ ನೆರವು ನೀಡುತ್ತಿದ್ದ ಸರ್ಕಾರ, ಅದೇ ಆಸಕ್ತಿಯನ್ನು ಮೈಷುಗರ್ ಗೆ ನೀಡಲಿಲ್ಲ. ಈ ಮೊದಲು ಶೇಕಡಾ 65 ರಷ್ಟನ್ನು ಲೆವಿ ಮೂಲಕ ಶೇಕಡಾ 35 ರಷ್ಟನ್ನು ಮುಕ್ತ ಮಾರುಕಟ್ಟೆಯಲ್ಲಿ ಮಾರಾಟ ಮಾಡುವ ನಿರ್ಬಂಧ ಇತ್ತು. ಈ ಲೆವಿಯನ್ನು ಕೇವಲ ಶೇಕಡಾ 10 ಕ್ಕೆ ಇಳಿಸಿತು. ಆದರೂ ಈ ಶೇಕಡಾ 10 ರ ಪಾಲನ್ನುಹ ಕೂಡ ಖರೀದಿಸದೇ ಖಾಸಗಿ ಕಂಪನಿಗಳಿಗೆ ಮಾರುಕಟ್ಟೆಯಲ್ಲಿ ಮುಕ್ತ ಅವಕಾಶ ನೀಡಿತು.

ಕಬ್ಬು ಮೀಸಲು ಪ್ರದೇಶವನ್ನು ತೆಗೆದುಹಾಕುವ ಮೂಲಕ ಹಾಗೂ ಸಕ್ಕರೆ ಮತ್ತು ಇತರೆ ಉಪ ಉತ್ಪನ್ನಗಳ ದರದ ಶೇಕಡಾ 80 ರಷ್ಟನ್ನು ಕಬ್ಬು ಬೆಲೆ ಮೂಲಕ ನೀಡಬೇಕೆಂಬ, ಪಾಲಿಸಲೇಬೇಕಾದ ನಿರ್ಬಂಧಗಳಿಂದ ಖಾಸಗಿ ಸಕ್ಕರೆ ಕಾರ್ಖಾನೆಗಳನ್ನು ಮುಕ್ತಗೊಳಿಸಿದ ಕೇಂದ್ರ ಸರ್ಕಾರ, ಇದೇ ರಂಗರಾಜನ್ ಸಮಿತಿಯ ಶಿಫಾರಸ್ಸಿನಂತೆ ಆಮದು ಮತ್ತು ರಪ್ತು ನಿರ್ಬಂಧವನ್ನು ಪೂರ್ಣ ತೆಗೆದುಹಾಕಿತು. ಜಾಗತಿಕವಾಗಿ ಸಕ್ಕರೆ ಮತ್ತಿತರ ಉಪ ಉತ್ಪನ್ನಗಳ ಬೆಲೆ ಹೆಚ್ಚಳವಾದಾಗ ಅದರ ಪೂರ್ಣ ಲಾಭ ಖಾಸಗಿ ಕಂಪನಿಗಳು ದೋಚುವಂತೆ, ನಷ್ಟವಾದಾಗ ಅದರ ಪೂರ್ಣ ಹೊಣೆಯನ್ನು ಕಬ್ಬು ಬೆಳೆಗಾರರಿಗೆ ವರ್ಗಾಯಿಸುವ ಅವಕಾಶ ಕಲ್ಪಿಸಿತು.

ಇದೆಲ್ಲದರ ಜೊತೆ ಕಬ್ಬು ಬೆಳೆಗಾರರ ಬಾಕಿ ತೀರಿಸುವಂತೆ ಹತ್ತಾರು ಸಾವಿರ ಕೋಟಿ ರೂಗಳ ಪ್ಯಾಕೇಜ್ ಅನ್ನು ಕೂಡ ಕಾಲದಿಂದ ಕಾಲಕ್ಕೆ ನೀಡುತ್ತಾ ಬಂದಿದೆ. ಈ ಎಲ್ಲಾ ಪ್ರಧಾನ ಕಾರಣಗಳಿಂದ ಮೈಷುಗರ್ ಹಾಗೂ ಪಿ ಎಸ್ ಎಸ್ ಕೆ ನಷ್ಟಕ್ಕೀಡಾಗಿ ಮಕಾಡೆ ಮಲಗಿದೆ. ಆದರೆ ಈ ಎಲ್ಲವನ್ನೂ ಮರೆ ಮಾಚಿ ರೈತ – ಕಾರ್ಮಿಕರನ್ನು ಹೊಣೆ ಮಾಡಿ ಜನರೆಲ್ಲರೂ ಖಾಸಗೀಕರಣದ ಜಪ ಮಾಡುವಂತೆ ದಿಕ್ಕು ತಪ್ಪಿಸಿವೆ.

ಸಾರ್ವಜನಿಕ ವಲಯ ಹಾಗೂ ಸಾಮಾಜಿಕ ಒಳಗೊಳ್ಳುವಿಕೆಯೇ ಪ್ರಧಾನ ಆಧಾರಸ್ಥಂಭವಾಗಿ ನಿರ್ಮಿಸಿದ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ರವರ ಮಾದರಿ ಮೈಸೂರು ಪರಿಕಲ್ಪನೆಗೆ ಸಂಪೂರ್ಣ ವಿರುದ್ಧವಿರುವ ಖಾಸಗೀಕರಣ ಧೋರಣೆಗಳು ಹೊಸ ಹೊಸ ಪರಿಭಾಷೆಗಳ ಬಟ್ಟೆಗಳನ್ನು ತೊಡುತ್ತಿವೆ.

ಓ ಆ್ಯಂಡ್ ಎಂ ಎಂದರೆ ಖಾಸಗೀಕರಣ ಅಲ್ಲವೇ ಅಲ್ಲ; ಒಡೆತನ ಸರ್ಕಾರದ ಬಳಿ ಇರುತ್ತದೆ ಎಂದು ಕೆಲವರು ನಂಬಿದ್ದಾರೆ. ಈಗಾಗಲೇ ಕ್ಯಾಬಿನೆಟ್ ನೋಟ್ ಗೆ ಸಿದ್ಧವಾಗಿರುವ ಟಿಪ್ಪಣಿಯಲ್ಲಿ 40 ವರ್ಷ ಓ ಆ್ಯಂಡ್ ಎಂ ಗೆ ನೀಡುವ ಪ್ರಸ್ತಾಪ ಇದೆ. ಹಿಂದೇ ಇದೇ ರೀತಿ ದೀರ್ಘಾವಧಿಯವರೆಗೆ ಗುತ್ತಿಗೆಗೆ ಭೂಮಿ ಪಡೆದ ಕೈಗಾರಿಕೆಗಳ ಮಾಲೀಕರಿಗೆ ಸಂಪೂರ್ಣ ಆಸ್ತಿ ಒಡೆತನ ಹಸ್ತಾಂತರಿಸುವ ತೀರ್ಮಾನಗಳನ್ನು ಕೈಗೊಂಡಿರುವ ಉದಾಹರಣೆಗಳು ಸಾಕಷ್ಟು ನಮ್ಮ ಕಣ್ಣ ಮುಂದೆಯೇ ಇವೆ. ಒಂದು ಸಾರಿ ಆಸ್ತಿ ಸ್ವಾಧೀನಕ್ಕೆ ಹೋದ ಮೇಲೆ, ಅದೂ ದೀರ್ಘಾವಧಿಗೆ ಮತ್ತೆ ವಾಪಸ್ಸು ಪಡೆಯಲು ಸಾಧ್ಯವಿಲ್ಲ. ಅಂದರೆ ಓ ಆ್ಯಂಡ್ ಎಂ ಎಂಬುದು ಖಾಸಗೀಕರಣ ಅಲ್ಲದೇ ಬೇರೇನೂ ಅಲ್ಲ.

ಅದ್ದರಿಂದ ದೀರ್ಘಾವಧಿಯ ಓ ಆ್ಯಂಡ್ ಎಂ ಮಾದರಿಯಲ್ಲಿ ಯಾವುದೇ ಖಾಸಗಿ ವ್ಯಕ್ತಿ ಅಥವಾ ಸಂಸ್ಥೆಗೆ ನೀಡಿದರೆ ಅದೂ ಬಂಡವಾಳ ಇಲ್ಲದೇ ಲಾಭ ಮಾಡಿಕೊಳ್ಳುವುದಕ್ಕೆ ಕೊಡುವ ಮುಕ್ತ ಅವಕಾಶ. ಇದು ಕ್ರಮೇಣ ಆಸ್ತಿಯ ಒಡೆತನಕ್ಕೂ ದಾರಿ ಮಾಡಿಕೊಡುತ್ತದೆ.

ಬಹುತೇಕ ಜಿಲ್ಲೆಯ ಜನರಂತೆ ಮಂಡ್ಯದ ಸ್ವಾಭಿಮಾನ, ಹೆಗ್ಗಳಿಕೆ ಮುಂತಾದ ಅನ್ವರ್ಥಗಳಿಗೆ ಕಾರಣವಾಗಿರುವ ಮೈಷುಗರ್ ಖಾಸಗಿಯವರ ಪಾಲಾಗಲಿದೆ ಎಂದು ಆತಂಕ ವ್ಯಕ್ತಪಡಿಸುವ ರೈತ ಮುಖಂಡ ಮದ್ದೂರು ತಾಲ್ಲೂಕು ಸೊಳ್ಳೇಪುರ ಗ್ರಾಮದ ಎಸ್ ವಿಶ್ವನಾಥ್ “ಇದುವರೆಗೆ ಮೈಷುಗರ್ ಗೆ ನೀಡಿರುವ ಹಣದ ಲೆಕ್ಕ ಎಲ್ಲಿ; ಈ ಹಣ ಪ್ರಯೋಜನಕ್ಕೆ ಬರಲಿಲ್ಲ ಎಂದರೆ ತಪ್ಪಿತಸ್ಥರು ಯಾರು ಎಂದು ಏಕೆ ತನಿಖೆ ನಡೆಸುತ್ತಿಲ್ಲ” ಎಂದು ಪ್ರಶ್ನಿಸುತ್ತಾರೆ.

ಮೈಸೂರು ಅಸಿಟೇಟ್ ಕಾರ್ಖಾನೆಯ ಆಸ್ತಿ ಕೈ ಬದಲಾಗಿ ಹೇಗೆ ಸಾರ್ವಜನಿಕ ಸಂಪತ್ತು ಲೂಟಿಯಾಗುತ್ತದೆ ಎಂಬುದಕ್ಕೆ ಆಧಾರ ಸಮೇತ ಸಾಕ್ಷಿ ಕಣ್ಣ ಮುಂದೆಯೇ ಇದೆ. ಈ ಅನುಭವದ ಪಾಠವಾದರೂ ಬೇಡವೇ?

(ಎಲ್ಲ ಅಭಿಪ್ರಾಯಗಳು ಲೇಖಕರದ್ದೆ)

  • ಟಿ ಯಶವಂತ, ಮದ್ದೂರು ತಾಲೂಕಿನ ತೊರೆಶೆಟ್ಟಿಹಳ್ಳಿಯಲ್ಲಿ ವಾಸವಾಗಿರುವ ಯಶವಂತ್‌, ಹೊಸ ತಲೆಮಾರಿನ ಸಾಮಾಜಿಕ ಕಾರ್ಯಕರ್ತರ ಪೈಕಿ ಮುಂಚೂಣಿಯಲ್ಲಿರುವ ಗುಂಪಿನಲ್ಲಿ ಅಷ್ಟು ಸದ್ದು ಮಾಡದೇ ಕೆಲಸ ಮಾಡಿಕೊಂಡು ಹೋಗುತ್ತಿದ್ದಾರೆ. ವಿದ್ಯಾರ್ಥಿಯಾಗಿದ್ದಾಗಿನಿಂದಲೂ ಸಕ್ರಿಯವಾಗಿರುವ ಅವರು ಈ ಸದ್ಯ ಪ್ರಾಂತ ರೈತ ಸಂಘದ ಸಂಘಟಕರು. ಬೇರು ಮಟ್ಟದ ಬೆಳವಣಿಗೆಗಳನ್ನು ಜಾಗತಿಕ ರಾಜಕೀಯಾರ್ಥಿಕತೆಯ ಹಿನ್ನೆಲೆಯಲ್ಲಿ ವಿಶ್ಲೇಷಿಸುವ ಯಶವಂತ್‌ ತುಂಬಾ ಗಂಭೀರವಾಗಿ ಬರೆದುಬಿಡುತ್ತಾರೆ ಎಂಬ ಆತಂಕವನ್ನು ಹೋಗಲಾಡಿಸುವಂತೆ ಈ ಸರಣಿ ಬರೆಯುತ್ತಿದ್ದಾರೆ.
  • ನಿಮ್ಮ ಪ್ರತಿಕ್ರಿಯೆಗಳನ್ನು ಈ ಈಮೇಲ್ ಐಡಿಗಳಿಗೆ [email protected],  [email protected] ಕಳುಹಿಸಿ ಅಥವಾ 9448572764 ವಾಟ್ಸ್ ಆಪ್ ನಂಬರ್ ಗೆ ಕಳುಹಿಸಿ.
ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights