ಕನ್ನಡದ ಹಾಸ್ಯನಟ ಮಿಮಿಕ್ರಿ ರಾಜ ಗೋಪಾಲ್‌ ವಿಧಿವಶ!

ಕನ್ನಡ ಚಿತ್ರರಂಗದಲ್ಲಿ 600ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದು, ಕನ್ನಡಿಗರನ್ನು ತಮ್ಮ ಹಾಸ್ಯದ ನಟನೆ ಮತ್ತು ಡೈಲಾಗ್‌ಗಳ ಮೂಲಕ ರಂಜಿಸಿದ್ದ ಹಾಸ್ಯ ನಟ ಮಿಮಿಕ್ರಿ ರಾಜ ಗೋಪಾಲ್ ವಿಧಿವಶರಾಗಿದ್ದಾರೆ.

ಬೆಂಗಳೂರಿನಲ್ಲಿಯೇ ವಾಸವಿದ್ದ 64 ವರ್ಷದ ರಾಜ ಗೋಪಾಲ್ ಅವರು ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದರು. ನಿನ್ನೆ ರಾತ್ರಿ ಕೆಂಗೇರಿಯಲ್ಲಿರುವ ತಮ್ಮ ನಿವಾಸದಲ್ಲಿ ಕೊನೆಯುಸಿರೆಳೆದಿದ್ದಾರೆ.

ತಮ್ಮದೇ ಆದ ಮಿಮಿಕ್ರಿ ತಂಡವನ್ನು ಕಟ್ಟಿಕೊಂಡಿದ್ದ ರಾಜ ಗೋಪಾಲ್​ ಅವರು ಸಾವಿರಾರು ಸ್ಟೇಜ್​ ಶೋಗಳನ್ನೂ ನೀಡಿದ್ದಾರೆ. ಕೊರೋನಾದಿಂದಾಗಿ ಲಾಕ್​ಡೌನ್​ ಆರಂಭವಾಗುವವರೆಗೂ ಈ ನಟ ಸ್ಟೇಜ್​ ಶೋ ನೀಡುತ್ತಿದ್ದರು. ಇತ್ತೀಚೆಗೆ ಕಳೆದೋಗ್ಬುಟ್ಟೆ ಎಂಬ ಸಿನಿಮಾದಲ್ಲಿ ಅಭಿನಯಿಸಿದ್ದರು.

‘ವಿಷ್ಣುವರ್ಧನ್​, ಶಶಿಕುಮಾರ್ ಸೇರಿದಂತೆ ಸಾಕಷ್ಟು ಸ್ಟಾರ್ ನಟರ ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಜೊತೆಗೆ ಒಂದು ತಮಿಳು ಸಿನಿಮಾದಲ್ಲೂ ಅಭಿನಯಿಸಿದ್ದಾರೆ.  ಕರಿಬಸವಯ್ಯ, ಬ್ಯಾಂಕ್​ ಜನಾರ್ಧನ್ ಸೇರಿದಂತೆ ಇನ್ನೂ ಹಲವರೊಂದಿಗೆ ಸೇರಿ ತಮ್ಮದೇ ಆದ ಮಿಮಿಕ್ರಿತಂಡವನ್ನು ಕಟ್ಟಿಕೊಂಡು ಕಾರ್ಯಕ್ರಮ ನೀಡುತ್ತಿದ್ದರು. ಎರಡು ದಿನಗಳ ಹಿಂದೆಯಷ್ಟೆ ಅವರಿಗೆ ಕರೆ ಮಾಡಿ ಮಾತನಾಡಿದ್ದೆ. ನಾಳೆ ಅವರನ್ನು ಭೇಟಿ ಮಾಡಲು ಹೋಗಬೇಕಿತ್ತು. ಆದರೆ ವಿಧಿಯಾಟ ಇಷ್ಟು ಬೇಗೆ ರಾಜ ಗೋಪಾಲ್​ ನಮ್ಮಿಂದ ದೂರಾಗಿದ್ದಾರೆ’ ಎಂದು ಅವರ ಬಹುಕಾಲದ ಗೆಳೆಯ ಹಾಸ್ಯ ನಟ ಡಿಂಗ್ರಿ ನಾಗರಾಜ್​ ನ್ಯೂಸ್​ 18 ಕನ್ನಡಕ್ಕೆ ತಿಳಿಸಿದ್ದಾರೆ.

ಸ್ಟೇಜ್​ ಶೋಗಳಿಗೆ ಹೋದಾಗ ಅವರು ತಪ್ಪದೆ ಕಲ್ಪನಾ ಅವರಂತೆ ಮಿಮಿಕ್ರಿ ಮಾಡುತ್ತಿದ್ದರು. ಅವರು ಒಂದೊಂದು ಡೈಲಾಗ್​ ಹೇಳಿದಾಗಲೂ ಕಲ್ಪನಾ ಅವರೇ ಮಾತನಾಡಿದಂತೆ ಆಗುತ್ತಿತ್ತಂತೆ. ಇದರಿಂದಾಗಿಯೇ ಅವರು ಸಖತ್ ಫೇಮಸ್​ ಆಗಿದ್ದರಂತೆ.

ಆರೋಗ್ಯವಾಗಿದ್ದ ರಾಜ ಗೋಪಾಲ್​ ಅವರಿಗೆ ಬಹಳ ಸಮಯದಿಂದ ಮಂಡಿ ನೋವು ಇತ್ತಂತೆ. ಅದರಿಂದ ಹೆಚ್ಚಾಗಿ ಅವರು ನೋವನ್ನು ಕಡಿಮೆ ಮಾಡುವ ಮಾತ್ರೆ  ಸೇವಿಸುತ್ತಿದ್ದು, ಅದರಿಂದ ಅವರಿಗೆ ಕಿಡ್ನಿ ಸಮಸ್ಯೆ ಹೆಚ್ಚಾಗಿರಬಹುದು ಎಂದೂ ಹೇಳಲಾಗುತ್ತಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights