ರಾಜ್ಯದಲ್ಲಿ ಪ್ರತಿ ಭಾನುವಾರ ಲಾಕ್ಡೌನ್, ನಾಳೆಯಿಂದ ನೈಟ್ ಕರ್ಫ್ಯೂ!
ರಾಜ್ಯದಲ್ಲಿ ದಿನೇ ದಿನೇ ಏರಿಕೆಯಾಗುತ್ತಿರುವ ಕೊರೊನಾ ಪ್ರಕರಣಗಳನ್ನು ಕಂಡು ರಾಜ್ಯದ ಜನರು ಆತಂಕಕ್ಕೆ ಒಳಗಾಗಿದ್ದಾರೆ. ಆ ಕಾರಣದಿಂದಾಗಿ ರಾಜ್ಯದಲ್ಲಿ ಮತ್ತೆ ಲಾಕ್ಡೌನ್ ಮಾಡಬೇಕೆಂದು ವಿರೋಧ ಪಕ್ಷಗಳು ಒತ್ತಡ ಏರುತ್ತಲೇ ಇವೆ. ಅಲ್ಲದೆ, ಆಡಳಿತಾರೂಢ ಬಿಜೆಪಿ ಶಾಸಕರೂ ಬೆಂಗಳೂರಿನಲ್ಲಿ ಲಾಕ್ಡೌನ್ ಮಾಡಬೇಕೆಂದು ಅಭಿಪ್ರಾಯ ವ್ಯಕ್ತ ಪಡಿಸಿದ್ದರು. ಆದರೆ, ಯಾವುದೇ ಕಾರಣಕ್ಕೂ ಲಾಕ್ಡೌನ್ ಮಾಡುವುದಿಲ್ಲ ಎಂದಿದ್ದ ಸರ್ಕಾರ, ಈಗ ಮತ್ತೆ ಭಾನುವಾರದ ಲಾಕ್ಡೌನ್ ಜಾರಿಗೊಳಿಸಲು ಮುಂದಾಗಿದೆ.
ಜುಲೈ 05 ರಿಂದ ಭಾನುವಾರ ಸಂಪೂರ್ಣ ಲಾಕ್ಡೌನ್ ಘೋಷಿಸಿದ್ದು, ನಾಳೆಯಿಂದ ರಾತ್ರಿ ವೇಳೆ ಕರ್ಫ್ಯೂ ಜಾರಿಯಾಗಲಿದೆ. ನಾಳೆಯಿಂದ ರಾತ್ರಿ 09 ಗಂಟೆಯಿಂದ ಬೆಳಗ್ಗೆ 05 ಗಂಟೆಯ ವರೆಗೆ ರಾತ್ರಿ ಕರ್ಫ್ಯೂ ಜಾರಿಯಲ್ಲಿರಲಿದೆ ಎಂದು ರಾಜ್ಯ ಸರ್ಕಾರ ತಿಳಿಸಿದೆ.
ರಾಜ್ಯವ್ಯಾಪಿ ಲಾಕ್ಡೌನ್ ಮಾಡಬೇಕೆಂದು ವಿಪಕ್ಷಗಳು ಒತ್ತಡ ಹಾಕುತ್ತಿದ್ದರೂ ಆರ್ಥಿಕತೆಯ ದೃಷ್ಟಿಯಿಂದ ಆ ಕ್ರಮ ಕೈಗೊಳ್ಳಲು ಸರ್ಕಾರ ನಿರಾಕರಿಸಿದೆ. ಆದರೆ, ತಜ್ಞರ ಸಲಹೆ ಪಡೆದು ಪರ್ಯಾಯ ಕ್ರಮಗಳನ್ನ ಜಾರಿಗೊಳಿಸಲು ನಿರ್ಧರಿಸಿದೆ. ಅದರಂತೆ, ರಾಜ್ಯ ಸರ್ಕಾರಿ ನೌಕರರಿಗೆ ವಾರದಲ್ಲಿ ಐದು ದಿನ ಮಾತ್ರ ಕೆಲಸ ಮಾಡಲು ಅವಕಾಶ ಕೊಡಲಾಗಿದೆ. ವಾರದಲ್ಲಿ ಎರಡು ದಿನ ಸರ್ಕಾರಿ ನೌಕರರಿಗೆ ರಜೆ ನೀಡಲಾಗಿದೆ. ಜುಲೈ 10ರಿಂದ ಒಂದು ತಿಂಗಳ ಕಾಲ ಈ ಕ್ರಮ ಜಾರಿಯಲ್ಲಿರುತ್ತದೆ. ಈ ಮುಂಚೆ, ತಿಂಗಳಲ್ಲಿ ಪ್ರತಿ ಭಾನುವಾರದ ಜೊತೆಗೆ 2ನೇ ಮತ್ತು 4ನೇ ಶನಿವಾರದಂದು ರಾಜ್ಯ ಸರ್ಕಾರಿ ನೌಕರರಿಗೆ ರಜೆ ಇರುತ್ತಿತ್ತು. ಈಗ ಎಲ್ಲಾ ಶನಿವಾರ ಮತ್ತು ಭಾನುವಾರದಂದು ರಜೆ ಇರಲಿದೆ.
ಇವತ್ತಿನ ಸಭೆಯಲ್ಲಿ ವಾರದಲ್ಲಿ ಎರಡು ದಿನ ಲಾಕ್ಡೌನ್ ಮಾಡುವ ಚಿಂತನೆ ನಡೆದಿತ್ತು. ಆದರೆ, ಸದ್ಯಕ್ಕೆ ಸಂಡೇ ಲಾಕ್ಡೌನ್ ಮಾತ್ರ ಮಾಡಿ, ಒಂದೆರಡು ವಾರಗಳ ಬಳಿಕ ಅದರ ಪರಿಣಾಮ ನೋಡಿಕೊಂಡು ವಾರಕ್ಕೆರಡು ದಿನ ಲಾಕ್ಡೌನ್ ಮಾಡುವುದು ಒಳ್ಳೆಯದು ಎಂಬ ತಜ್ಞರ ಅಭಿಪ್ರಾಯವನ್ನ ಸ್ವೀಕರಿಸಲಾಗಿದೆ.
ಈಗ ರಾತ್ರಿ 9ಗಂಟೆಯಿಂದ ಬೆಳಗ್ಗೆ 5 ಗಂಟೆಯವರೆಗೆ ಕರ್ಫ್ಯೂ ಇದೆ. ಈಗ ಒಂದು ಗಂಟೆ ಮುಂಚಿತವಾಗಿ, ಅಂದರೆ ರಾತ್ರಿ 8 ಗಂಟೆಗೇ ಕರ್ಫ್ಯೂ ಶುರುವಾಗಲಿದೆ. ಸರ್ಕಾರ ಈ ಬಗ್ಗೆ ಅಧಿಕೃತವಾಗಿ ಆದೇಶ ಹೊರಡಿಸಿದೆ.
ಬೆಂಗಳೂರನ್ನ ಹೊರಗಿನಿಂದ ಪ್ರವೇಶ ನಿರ್ಬಂಧಿಸುವ ಕುರಿತೂ ಇವತ್ತಿನ ಸಿಎಂ ಸಭೆಯಲ್ಲಿ ಪ್ರಸ್ತಾಪವಾಗಿತ್ತು. ಆದರೆ, ಪ್ರವೇಶ ನಿರ್ಬಂಧ ಮಾಡಿದರೆ ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಅಡ್ಡಿಯಾಗಬಹುದು. ಆದ್ದರಿಂದ ಪರೀಕ್ಷೆ ಬಳಿಕ ಆ ನಿರ್ಧಾರ ತೆಗೆದುಕೊಳ್ಳಲು ಸರ್ಕಾರ ಆಲೋಚಿಸಿದೆ.
ಬಿಬಿಎಂಪಿ ಕೇಂದ್ರ ಕಚೇರಿ ಮತ್ತು ಆಯುಕ್ತರ ಮೇಲೆ ಇರುವ ಕೆಲಸದ ಹೊರೆ ಕಡಿಮೆಗೊಳಿಸಲು ಬಿಬಿಎಂಪಿಯ 8 ವಲಯಗಳ ಜಂಟಿ ಆಯುಕ್ತರಿಗೆ ಹೆಚ್ಚಿನ ಜವಾಬ್ದಾರಿ ನೀಡಲಾಗಿದೆ. ಈ ಜಂಟಿ ಆಯುಕ್ತರ ಜೊತೆ ಕೆಲಸ ಮಾಡಲು ಕೆಎಎಸ್ ಅಧಿಕಾರಿಗಳನ್ನ ನಿಯೋಜಿಸಲು ಸರ್ಕಾರ ತೀರ್ಮಾನಿಸಿದೆ.
ವೈದ್ಯರ ಕೊರತೆ ನೀಗಿಸಲು ಕಾರ್ಮಿಕ ಇಲಾಖೆಯಿಂದ ನೇಮಕವಾಗಿರುವ 180 ಇಎಸ್ಐ ವೈದ್ಯರನ್ನ ಕೋವಿಡ್ ಕರ್ತವ್ಯಕ್ಕೆ ಜೋಡಿಸಿಕೊಳ್ಳಲಾಗುತ್ತಿದೆ. ಪರೀಕ್ಷಾರ್ಥಿ ತಹಶೀಲ್ದಾರ್ಗಳನ್ನ ಕೋವಿಡ್ ಆಸ್ಪತ್ರೆ ಮತ್ತು ಕೇರ್ ಸೆಂಟರ್ಗಳಿಗೆ ನೋಡಲ್ ಅಧಿಕಾರಿಗಳನ್ನಾಗಿ ನಿಯೋಜಿಸಲು ಸರ್ಕಾರ ಸೂಚಿಸಿದೆ.

