ಸೋನಿಯಾ ಗಾಂಧಿಗೆ 1% ಬೆಂಬಲವೂ ಇಲ್ಲ; ಆಂತರಿಕ ಚುನಾವಣೆ ನಡೆಯದಿದ್ದರೆ 50 ವರ್ಷ ಕಾಂಗ್ರೆಸ್‌ಗೆ ಅಧಿಕಾರವಿಲ್ಲ: ಗುಲಾಂ ನಬೀ

ಕಾಂಗ್ರೆಸ್‌ ಒಳಗಿನ ಬಿಕ್ಕಟ್ಟು ದಿನ ಕಳೆದಂತೆ ಬಿಗಡಾಯಿಸುತ್ತಲೇ ಇದೆ. ಕಳೆದ ಕಾರ್ಯಕಾರಿಣಿ ಸಭೆಯಲ್ಲಿ ಸೋನಿಯಾ ಗಾಂಧಿ ಅವರೇ ಆರು ತಿಂಗಳ ಮಟ್ಟಿಗೆ ಹಂಗಾಮಿ ಅಧ್ಯಕ್ಷರಾಗಿ ಮುಂದುವರೆಯಲಿದ್ದಾರೆ ಎಂದು ನಿರ್ಧರಿಸಿದ ನಂತರವೂ ಪಕ್ಷದೊಳಗೆ ಆಂತರಿಕ ಚುನಾವಣೆ ನಡೆಸಬೇಕು ಎಂಬ ಒತ್ತಾಯ ಹೆಚ್ಚಾಗಿದೆ.

ನಾಯಕತ್ವ ಬದಲಾವಣೆಗಾಗಿ ಪತ್ರ ಬರೆದಿದ್ದ 23 ನಾಯಕರಲ್ಲಿ ಒಬ್ಬರಾದ ಗುಲಾಮ್ ನಬೀ ಅಜಾದ್ ಅವರು, ಪಕ್ಷದಲ್ಲಿ ಆತಂರಿಕ ಚುನಾವಣೆ ನಡೆಯದಿದ್ದರೆ. ಕಾಂಗ್ರೆಸ್‌ ಸಾರ್ವತ್ರಿಕ ಚುನಾವಣೆಗಳನ್ನು ಗೆಲ್ಲಲು ಸಾಧ್ಯವಿಲ್ಲ. ಕಾಂಗ್ರೆಸ್‌ ಇನ್ನೂ 50 ವರ್ಷ ಕಳೆದರೂ ವಿರೋಧ ಪಕ್ಷವಾಗಿಯೇ ಇರಬೇಕಾಗುತ್ತದೆ ಎಂದು ಅಸಮಾಧಾನ ಹೊರಹಾಕಿರುವುದಾಗಿ ಎಎನ್‌ಐ ವರದಿ ಮಾಡಿದೆ.

ಈಗ ಆಯ್ಕೆ ಆಗಿರುವ ಅಧ್ಯಕ್ಷರಿಗೆ ಯಾರ ಬೆಂಬಲವೂ ಇಲ್ಲ. ಪಕ್ಷದ ಆಂತರಿಕ ಚುನಾವಣೆ ನಡೆದರೆ ಬಹುಶಃ ಅವರಿಗೆ ಶೇ.1 ಮತ ಬೀಳಬಹುದು ಎಂದು ಅವರು ಹೇಳಿದ್ದಾರೆ.

“ಅಧ್ಯಕ್ಷರನ್ನು ಬದಲಾಯಿಸಬೇಕು ಎನ್ನುವ ನಮ್ಮ ಪತ್ರಕ್ಕೆ ರಾಜ್ಯ ಹಾಗೂ ಜಿಲ್ಲಾ ಘಟಕದ ಅಧ್ಯಕ್ಷರು ಕಿಡಿಕಾರಿದ್ದಾರೆ. ದುರಾದೃಷ್ಟ ಎಂದರೆ ಚುನಾವಣೆ ನಡೆಯುವಾಗ ಅವರು ಎಲ್ಲಿಯೂ ಕಾಣಿಸಿಕೊಳ್ಳುವುದಿಲ್ಲ. ಯಾರು ಕಾಂಗ್ರೆಸ್​​ ಮೇಲೆ ನಿಜವಾದ ಅಭಿಮಾನ ಹೊಂದಿದ್ದಾರೋ ಅವರು ಮಾತ್ರ ನಮ್ಮ ಕೋರಿಕೆಯನ್ನು ಬೆಂಬಲಿಸಿದ್ದಾರೆ,” ಎಂದು ಅವರು​ ತಿಳಿಸಿದ್ದಾರೆ.

‘ನೀವು ಚುನಾವಣೆಗೆ ಸ್ಪರ್ಧಿಸಿದಾಗ, ನಿಮ್ಮ ಪರವಾದ ಮತಗಳು ಶೇಕಡಾ 51ರಷ್ಟು ಇರಬೇಕಾಗುತ್ತದೆ. ಶೇಕಡಾ 51ರಷ್ಟು ಮತಗಳನ್ನು ಪಡೆಯುವ ವ್ಯಕ್ತಿಯನ್ನು ಆಯ್ಕೆ ಮಾಡಲಾಗುತ್ತದೆ. ಚುನಾವಣೆ ಗೆದ್ದಮೇಲೆ ಪಕ್ಷದ ಉಸ್ತುವಾರಿ ವಹಿಸುವ ವ್ಯಕ್ತಿಯೊಂದಿಗೆ ಶೇಕಡಾ 51ರಷ್ಟು ಜನ ಇದ್ದಾರೆ ಎಂದು ಭಾವಿಸಬಹುದು. ಆದರೆ ಇದೀಗ, ನೇಮಕಾತಿಯ ಮೂಲಕ ಪಕ್ಷದ ಅಧ್ಯಕ್ಷರಾಗುವ ವ್ಯಕ್ತಿಗೆ ಶೇಕಡಾ 1 ರಷ್ಟೂ ಬೆಂಬಲವೂ ಇಲ್ಲದೇ ಹೋಗಬಹುದು! ಎಂದು ಗುಲಾಮ್ ನಬೀ ಹೇಳಿದ್ದಾರೆ.

ಕಳೆದ ಹಲವು ದಶಕಗಳಿಂದ ಪಕ್ಷದಲ್ಲಿ ಚುನಾವಣೆ ನಡೆಸದಿರುವುದಕ್ಕೆ ವಿಷಾದಿಸುತ್ತಾ, ಕಳೆದ ಹಲವು ದಶಕಗಳಿಂದ ನಾವು ಪಕ್ಷದಲ್ಲಿ ಚುನಾಯಿತರನ್ನು ಹೊಂದಿಲ್ಲ. ಬಹುಶಃ ನಾವು 10-15 ವರ್ಷಗಳ ಹಿಂದೆಯೇ ಇದಕ್ಕೆ ಮುಂದಾಗಿರಬೇಕಿತ್ತು. ಈಗ ನಾವು ಒಂದು ಚುನಾವಣೆಯ ನಂತರ ಮತ್ತೊಂದು ಚುನಾವಣೆಯಲ್ಲೂ ಸೋತಿದ್ದೇವೆ. ಹಾಗಾಗಿ ನಾವು ಮತ್ತೆ ಪಕ್ಷವನ್ನು ಬಲಪಡಿಸಬೇಕಾದರೆ ಚುನಾವಣೆಗಳನ್ನು ನಡೆಸುವ ಮೂಲಕ ಮಾತ್ರ ಸಾಧ್ಯ” ಎಂದು ಹೇಳಿದ್ದಾರೆ.

ಪಕ್ಷದ ಪ್ರತಿ ಹಂತದಲ್ಲೂ ಬದಲಾವಣೆ ತರಬೇಕು. ಕಾಂಗ್ರೆಸ್​ ಪಕ್ಷಕ್ಕೆ ಸಮರ್ಥ ನಾಯಕನ ಅಗತ್ಯವಿದೆ. ಹೀಗಾಗಿ ಉನ್ನತ ಮಟ್ಟದ ಹುದ್ದೆಯಲ್ಲಿ ಜನರಿಗೆ ಹೆಚ್ಚು ಪರಿಚಯವಾಗಿರುವ ಹಾಗೂ ಪಕ್ಷದಲ್ಲಿ ಹೆಚ್ಚು ಆಕ್ಟಿವ್​ ಆಗಿರುವ ನಾಯಕನನ್ನು ಆಯ್ಕೆ ಮಾಡಬೇಕು” ಎಂದು ಕಳೆದ ವಾರ ಐದು ಮಾಜಿ ಸಿಎಂಗಳು, ಕಾಂಗ್ರೆಸ್​ ಕಾರ್ಯ ಸಮಿತಿಯ ಸದಸ್ಯರು, ಸಂಸದರು, ಮಾಜಿ ಕೇಂದ್ರ ಸಚಿವರು ಸೇರಿ 23 ಕಾಂಗ್ರೆಸ್​ ನಾಯಕರು ಈ ಬಗ್ಗೆ ಒಟ್ಟಾಗಿ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿಗೆ ಪತ್ರ ಬರೆದಿದ್ದಾರೆ.


Read Also: ಬೊಕ್ಕಸದಲ್ಲಿ ಹಣವಿಲ್ಲ; ರಾಜ್ಯಗಳಿಗೆ ಜಿಎಸ್‌ಟಿ ಪರಿಹಾರ ನೀಡಲಾಗುವುದಿಲ್ಲ ಎಂದ ನಿರ್ಮಲಾ ಸೀತಾರಾಮನ್!

Spread the love

Leave a Reply

Your email address will not be published. Required fields are marked *