ಜಮ್ಮುಕಾಶ್ಮೀರಕ್ಕೆ ಆಡಳಿತ ನಿಯಮ ಜಾರಿಗೊಳಿಸಿದ ಕೇಂದ್ರ: ಮುಖ್ಯಮಂತ್ರಿಗಿಲ್ಲ ಹೆಚ್ಚಿನ ಅಧಿಕಾರ

ಜಮ್ಮು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಲಾಗಿದ್ದ ೩೭೦ನೇ ವಿಧಿಯನ್ನು ತೀವ್ರ ವಿರೋಧದ ನಡುವೆಯೂ ರದ್ದುಗೊಳಿಸಿರುವ ಕೇಂದ್ರ ಸರ್ಕಾರ, ಕೇಂದ್ರಾಡಳಿತ ಪ್ರದೇಶ ಎಂದು ಘೋಷಿಸಿದೆ. ಅಲ್ಲದೆ, ವರ್ಷದ ನಂತರ ರಾಜ್ಯಕ್ಕೆ ಹೊಸ ನಿಯಮಗಳನ್ನು ನಿನ್ನೆ ಕೇಂದ್ರ ಗೃಹ ವ್ಯವಹಾರಗಳ ಸಚಿವಾಲಯ ಪ್ರಕಟಿಸಿದೆ.

ಪೊಲೀಸ್, ಸಾರ್ವಜನಿಕ ಸುವ್ಯವಸ್ಥೆ, ಅಖಿಲ ಭಾರತೀಯ ಸೇವೆ ಮತ್ತು ಭ್ರಷ್ಟಾಚಾರ ನಿಗ್ರಹ ವ್ಯವಸ್ಥೆಗಳು ಲೆಫ್ಟಿನೆಂಟ್ ಗವರ್ನರ್ ಕಾರ್ಯನಿರ್ವಹಣೆಯಡಿ ಬರುತ್ತವೆ ಎಂದು ಹೊಸ ವ್ಯವಹಾರ ನಿಯಮ ಹೇಳುತ್ತದೆ. ಸಚಿವರ ಸಮಿತಿ ಅಥವಾ ಮುಖ್ಯಮಂತ್ರಿಗೆ ಈ ಕಾರ್ಯ ವ್ಯವಸ್ಥೆಯಲ್ಲಿ ಯಾವುದೇ ಅಧಿಕಾರ ಇಲ್ಲ ಎಂದು ಹೇಳಲಾಗಿದೆ.

ಕೇಂದ್ರ ಗೃಹ ಕಾರ್ಯದರ್ಶಿ ಅಜಯ್ ಕುಮಾರ್ ಭಲ್ಲಾ ಹೊರಡಿಸಿದ ಅಧಿಸೂಚನೆ, ಕೇಂದ್ರಾಡಳಿತ ಪ್ರದೇಶದ ಶಾಂತಿ ಮತ್ತು ನೆಮ್ಮದಿಯ ಮೇಲೆ ಅಥವಾ ಅಲ್ಪಸಂಖ್ಯಾತ ಸಮುದಾಯ, ಎಸ್‌ಸಿ/ಎಸ್‌ಟಿ ಮತ್ತು ಹಿಂದುಳಿದ ವರ್ಗಗಳ ಮೇಲೆ ಪರಿಣಾಮ ಬೀರುವ ಅಥವಾ ಬೀಳಬಹುದಾದ ಯಾವುದೇ ವಿಷಯ ಅಥವಾ ಪ್ರಸ್ತಾವನೆಗೆ ಸಂಬಂಧಿಸಿ ಆದೇಶ ಹೊರಡಿಸುವ ಮುನ್ನ ಮುಖ್ಯಮಂತ್ರಿಯವರು ಮುಖ್ಯ ಕಾರ್ಯದರ್ಶಿಗಳ ಮೂಲಕ ಲೆಫ್ಟಿನೆಂಟ್ ಗವರ್ನರ್‌ಗೆ ಮಾಹಿತಿ ಸಲ್ಲಿಸಬೇಕು ಎಂದು ಹೇಳಿದೆ.

ಹೊಸ ತೆರಿಗೆ ವಿಧಿಸುವ ಪ್ರಸ್ತಾವನೆ, ಭೂಕಂದಾಯ, ಸರಕಾರಿ ಆಸ್ತಿಯ ಮಾರಾಟ ಅಥವಾ ಲೀಸ್ ಒಪ್ಪಂದ, ಇಲಾಖೆ ಅಥವಾ ಅಧಿಕಾರಿಗಳ ಮರು ಸಂಯೋಜನೆ, ಮಸೂದೆ ರೂಪಿಸುವುದು ಮುಂತಾದ ಅಖಿಲ ಭಾರತೀಯ ಸೇವೆಯ ಅಧಿಕಾರಿಗಳಿಗೆ ಸಂಬಂಧಿಸದ ಕೆಲಸಗಳನ್ನು ಮುಖ್ಯಮಂತ್ರಿ ನೇತೃತ್ವದ ಸಚಿವರ ಸಮಿತಿ ನಿರ್ಧರಿಸುತ್ತದೆ.

ಲೆಫ್ಟಿನೆಂಟ್ ಗವರ್ನರ್ ಮತ್ತು ಸಚಿವ ಸಂಪುಟದ ಮಧ್ಯೆ ಭಿನ್ನಾಭಿಪ್ರಾಯ ಮೂಡಿ, ಆರು ತಿಂಗಳ ಬಳಿಕವೂ ಒಮ್ಮತಾಭಿಪ್ರಾಯ ಮೂಡದಿದ್ದರೆ, ಆಗ ಲೆಫ್ಟಿನೆಂಟ್ ಗವರ್ನರ್ ಅವರ ನಿರ್ಧಾರವನ್ನು ಸಚಿವ ಸಮಿತಿ ಒಪ್ಪಬೇಕಾಗುತ್ತದೆ. ಕೇಂದ್ರಾಡಳಿತ ಪ್ರದೇಶದ ಸರಕಾರ ಮತ್ತು ಕೇಂದ್ರ ಸರಕಾರ, ರಾಜ್ಯ ಸರಕಾರಗಳ ಮಧ್ಯೆ ವಿವಾದಕ್ಕೆ ಕಾರಣವಾಗಬಲ್ಲ ಯಾವುದೇ ವಿಷಯವನ್ನು ಸಂಬಂಧಿತ ಇಲಾಖೆಯ ಕಾರ್ಯದರ್ಶಿ, ಮುಖ್ಯ ಕಾರ್ಯದರ್ಶಿಯ ಮೂಲಕ ಲೆಫ್ಟಿನೆಂಟ್ ಗವರ್ನರ್ ಮತ್ತು ಮುಖ್ಯಮಂತ್ರಿಯ ಗಮನಕ್ಕೆ ತರಬೇಕು ಎಂದು ಸೂಚಿಸಲಾಗಿದೆ.

ಪ್ರಧಾನಿ ಹಾಗೂ ಇತರ ಕೇಂದ್ರ ಸಚಿವರ ಸಹಿತ ದೈನಂದಿನ ವಿಷಯ ಮತ್ತು ಪ್ರಾಮುಖ್ಯವಿಲ್ಲದ ವಿಷಯ ಹೊರತುಪಡಿಸಿ ಕೇಂದ್ರ ಸರಕಾರದಿಂದ ಬರುವ ಎಲ್ಲಾ ಮಾಹಿತಿಗಳನ್ನುತಕ್ಷಣ ಮುಖ್ಯ ಕಾರ್ಯದರ್ಶಿ, ಆಯಾ ಖಾತೆಯ ಸಚಿವ, ಮುಖ್ಯಮಂತ್ರಿ ಮತ್ತು ಲೆಫ್ಟಿನೆಂಟ್ ಗವರ್ನರ್ ಗಮನಕ್ಕೆ ತರಬೇಕು ಎಂದು ನಿಯಮಾವಳಿಯಲ್ಲಿ ಸೂಚಿಸಲಾಗಿದೆ.

ಶಾಲಾ ಶಿಕ್ಷಣ, ಕೃಷಿ, ಉನ್ನತ ಶಿಕ್ಷಣ, ತೋಟಗಾರಿಕೆ, ಚುನಾವಣೆ, ಸಾಮಾನ್ಯ ಆಡಳಿತ, ಗೃಹ, ಗಣಿಗಾರಿಕೆ, ಇಂಧನ, ಲೋಕೋಪಯೋಗಿ ಇಲಾಖೆ, ಬುಡಕಟ್ಟು ವ್ಯವಹಾರ, ಸಾರಿಗೆ ಸೇರಿದಂತೆ ಕೇಂದ್ರಾಡಳಿತ ಪ್ರದೇಶದಲ್ಲಿ 39 ಇಲಾಖೆಗಳಿರುತ್ತವೆ.

 


ಇದನ್ನೂ ಓದಿ: ಜಮೀನ್ದಾರಿ ಪದ್ದತಿಯನ್ನು ಮರುಕಳಿಸುತ್ತಿದೆ ಭೂಸುಧಾರಣಾ ತಿದ್ದುಪಡಿ ಕಾಯ್ದೆ: ಮೋದಿಗೆ ಸಿದ್ದರಾಮಯ್ಯ ಪತ್ರ

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights