ಆರಂಭವಾದ ಒಂದೂವರೆ ತಿಂಗಳಿಗೇ ಬೆಂಗಳೂರಿನ ಕೊರೊನಾ ಕೇರ್ ಸೆಂಟರ್ ಮುಚ್ಚಲು ನಿರ್ಧಾರ!

ಕೊರೊನಾ ಸೋಂಕಿತರಿ ಚಿಕಿತ್ಸೆ ನೀಡುವ ಉದ್ದೇಶದಿಂದಾಗಿ ಬೆಂಗಳೂರು ಅಂತರರಾಷ್ಟ್ರೀಯ ವಸ್ತು ಪ್ರದರ್ಶನ ಕೇಂದ್ರದಲ್ಲಿ (ಬಿಐಇಸಿ) ಸ್ಥಾಪಿಸಲಾಗಿರುವ ಕೋವಿಡ್ ಕೇರ್ ಸೆಂಟರ್ ಅನ್ನು ಸೆ.15 ರಿಂದ ಸ್ಥಗಿತಗೊಳಿಸುವುದಾಗಿ ಬಿಬಿಎಂಪಿ ತಿಳಿಸಿದೆ. ಕೊರೊನಾ ಸೋಂಕಿತರು ಸಾಂಸ್ಥಿಕ ಕ್ವಾರಂಟೈನ್ ಸೆಂಟರ್‌ಗಳಿಗೆ ಹೋಗುವ ಬದಲು ಮನೆಯಲ್ಲಿಯೇ ಐಸೋಲೇಷನ್ ಆಗುತ್ತಿರುವುದರಿಂದ ಸರ್ಕಾರ ಈ ಕ್ರಮ ಕೈಗೊಂಡಿದೆ ಎಂದು ಬಿಬಿಎಂಪಿ ತಿಳಿಸಿದೆ.

ಕೋಟ್ಯಾಂತರ ರೂ ಖರ್ಚು ಮಾಡಿ ಕೇವಲ ಒಂದೂವರೆ ತಿಂಗಳ ಹಿಂದೆಯಷ್ಟೇ ಉದ್ಘಾಟನೆಯಾಗಿದ್ದು ಇದನ್ನು ಇಷ್ಟು ಬೇಗ ಮುಚ್ಚುತ್ತಿರುವುದರಿಂದ ಬಹಳಷ್ಟು ನಷ್ಟ ಉಂಟಾಗಲಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

ಕೇಂದ್ರದ ಉಸ್ತುವಾರಿ ಹಿರಿಯ ಐಎಎಸ್ ಅಧಿಕಾರಿ ರಾಜೇಂದ್ರ ಕಟಾರಿಯಾ, ಮುಖ್ಯಮಂತ್ರಿ ಯಡಿಯೂರಪ್ಪ ಅವರ ಜೊತೆ  ಚರ್ಚಿಸಿ ಈ ನಿರ್ಧಾರ ಕೈಗೊಂಡಿದ್ದಾರೆ ಎಂದು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ತನ್ನ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

ಈ ಕೋವಿಡ್ ಕೇರ್ ಸೆಂಟರ್ ಸಿಎಂ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರದ ಅತ್ಯಂತ ಮಹತ್ವಾಕಾಂಕ್ಷೆಯ ಯೋಜನೆಯಾಗಿತ್ತು. 10,100 ಹಾಸಿಗೆಗಳ ಸಾಮರ್ಥ್ಯದ ಆರೈಕೆ ಕೇಂದ್ರ ಮಾಡುವ ಉದ್ದೇಶ ಹೊಂದಿತ್ತು. ಮೊದಲ ದಿನ 5,500 ಬೆಡ್‌ಗಳಿದ್ದ ಈ ಕೇಂದ್ರವನ್ನು ಉಪಮುಖ್ಯಮಂತ್ರಿ ಅಶ್ವತ್ ನಾರಾಯಣ್ ಮತ್ತು ಹಿರಿಯ ಅಧಿಕಾರಿಗಳ ನೇತೃತ್ವದ ಸಚಿವರ ನಿಯೋಗವು ಜುಲೈ 27 ರಂದು ಉದ್ಘಾಟಿಸಿತ್ತು. ಈ ಬೃಹತ್ ಕೇಂದ್ರದಲ್ಲಿ ರೋಗಿಗಳ ಆರೈಕೆಗಾಗಿ ಕಾಟ್, ಫ್ಯಾನ್, ಬಕೆಟ್, ಮಗ್ ಮತ್ತು ಡಸ್ಟ್‌ಬಿನ್ ಸೇರಿದಂತೆ ಎಲ್ಲಾ ಸೌಲಭ್ಯಗಳನ್ನು ಒದಗಿಸಲಾಗಿತ್ತು. ಇದಕ್ಕಾಗಿ ಕೋಟ್ಯಾಂತರ ರೂ ಖರ್ಚಾಗಿದ್ದು ಇದರಲ್ಲಿಯೂ ಹಗರಣ ನಡೆದಿದೆ ಎಂಬ ಆರೋಪಗಳು ಕೇಳಿಬಂದಿದ್ದವು.

ಈಗ ಈ ಬೆಡ್‌ಗಳನ್ನು, ಪೀಠೋಪಕರಣಗಳನ್ನು ಸರ್ಕಾರಿ ಸಂಸ್ಥೆಗಳು, ವಿಶ್ವವಿದ್ಯಾಲಯದ ವಸತಿ ನಿಲಯಗಳು ಮತ್ತು ಸಾರ್ವಜನಿಕ ಆಸ್ಪತ್ರೆಗಳಿಗೆ ಕಳುಹಿಸಲಾಗುವುದು ಎನ್ನಲಾಗಿದೆ.

ಇನ್ನು ಅತೀ ದೊಡ್ಡ ಕೋವಿಡ್ ಸೆಂಟರ್ ಎನ್ನುವ ಹೆಗ್ಗಳಿಕೆ ಜೊತೆಗೆ ವಿವಾದಗಳಿಗಗೂ ಈ ಆರೈಕೆ ಕೇಂದ್ರ ಕಾರಣವಾಗಿತ್ತು. ಇಲ್ಲಿ ನೀಡಲಾದ ಸೌಲಭ್ಯಗಳಿಗಳಿಗಾಗಿ, ಅಗತ್ಯ ವಸ್ತುಗಳನ್ನು ಖರೀದಿಸುವುದರ ಬಗ್ಗೆ ಮತ್ತು BIECಗೆ ನೀಡುವ ಬಾಡಿಗೆ ವಿಚಾರದಲ್ಲೂ ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ ಎಂದು ಆರೋಪಿಸಲಾಗಿತ್ತು. ವಿರೋಧ ಪಕ್ಷಗಳು ಸಾಕ್ಷಿ ಸಮೇತ ಕೋಟ್ಯಾಂತರ ರೂಪಾಯಿ ಭ್ರಷ್ಟಾಚಾರ ನಡೆದಿರುವುದನ್ನು ಪತ್ರಿಕೆಗಳಿಗೆ ಬಿಡುಗಡೆ ಮಾಡಿದ್ದವು.

ಸದ್ಯ ಸೋಂಕಿತರು ದಾಖಲಾಗುವ ಪ್ರಮಾಣ ಕಡಿಮೆಯಿದೆ ಎಂದು ಸೆಪ್ಟೆಂಬರ್ 15ರಿಂದ BIEC ಮುಚ್ಚಲಾಗುತ್ತಿದೆ. ಇದರ ಹೊರತಾಗಿಯೂ ಹಲವಾರು COVID-19 ಆರೈಕೆ ಕೇಂದ್ರಗಳು ಸಹ ಮುಂದಿನ ದಿನಗಳಲ್ಲಿ ಮುಚ್ಚುವ ನಿರೀಕ್ಷೆಯಿದೆ.


ಇದನ್ನೂ ಓದಿ: ಸರ್ಕಾರದಲ್ಲಿ ಮೂಲಸೌಲಭ್ಯಕ್ಕೂ ಹಣವಿಲ್ಲ; ರಾಜ್ಯಕ್ಕೆ ಸಾಲದ ಹೊರೆ ಹೇರಲು ಬಿಎಸ್‌ವೈ ನಿರ್ಧಾರ!

Spread the love

Leave a Reply

Your email address will not be published. Required fields are marked *