ಸುಗಂಧಿ ಬೇರು-14: ಸಾರಾ ಶಗುಫ್ತಾ: ‘ನೋವಿನ ಗಾಯಗಳಿಗೆ ಸಾಕ್ಷಿಯಾದ ಕಾವ್ಯ’

ಪಾಕಿಸ್ತಾನದ ಕವಯಿತ್ರಿ ಸಾರಾ ಶಗುಫ್ತಾ ಒಂದು ವೇಳೆ ಬದುಕಿದ್ದರೆ ಈಗ ಅರವತ್ತು ವರ್ಷ ದಾಟಿರುತ್ತಿತ್ತು. ಸಾರಾ ಪಾಕಿಸ್ತಾನದ ಗುಜರಾಂವಾಲಾದ ಬರೋಜ್ ಮಂಗಲ್‌ದಲ್ಲಿ 1954ರಂದು ಅನಕ್ಷರಸ್ಥ ಕುಟುಂಬದಲ್ಲಿ ಜನಿಸಿದಳು. ಭಾರತದ ವಿಭಜನೆಯ ಸಂದರ್ಭದಲ್ಲಿ ಆಕೆಯ ಕುಟುಂಬವು ಪಂಜಾಬಿನಿಂದ ಕರಾಚಿಗೆ ವಲಸೆ ಹೋಗಿತ್ತು. ಸಾರಾಳ ಜೀವನವು ಬರಿ ಗಾಯಗಳಿಂದಲೇ ತುಂಬಿ ಹೋಗಿತ್ತು. ಸಾರಾ ತನ್ನ ಬದಕಿನಲ್ಲಿ ನಡೆದ ಘಟನೆಗಳಿಂದ ರೋಸಿ ಹೋಗಿ ಟಾಲ್‌ಸ್ಟಾಯ್‌ನ ‘ಅನ್ನಾ ಕರೆನೀನ’ ಕಾದಂಬರಿಯ ನಾಯಕಿ ಅನ್ನಾಳಂತೆ ಚಲಿಸುವ ಟ್ರೇನ್ ಎದುರು ಹಾರಿಕೊಂಡು ಆತ್ಮಹತ್ಯೆ ಮಾಡಿಕೊಂಡಳು. ಸಾರಾ 1984ರ ಒಂದು ಮಧ್ಯರಾತ್ರಿ ಆತ್ಮಹತ್ಯೆ ಮಾಡಿಕೊಂಡಾಗ ಆಕೆಗೆ ಮೂವತ್ತು ವರ್ಷವೂ ತುಂಬಿರಲಿಲ್ಲ. ಆಕಾಶದಲ್ಲಿ ಕೆಲವೇ ಕ್ಷಣಗಳ ಕಾಲ ಮಿಂಚಿ ಮಾಯವಾಗುವ ಉಲ್ಕಾಪಾತದಂತೆ ಉರಿದು ಹೋದವಳು ಸಾರಾ ಶಗುಫ್ತಾ. ಸಾರಾಳ ಬದುಕನ್ನು ಕುರಿತು ಪಂಜಾಬಿ ಭಾಷೆಯ ಪ್ರಖ್ಯಾತ ಲೇಖಕಿ ಅಮೃತಾ ಪ್ರೀತಂ ಬರೆದ ‘ಏಕ್ ಥೀ ಸಾರಾ’ ಎಂಬ ಕೃತಿಯನ್ನು ಬೆಳಗಾವಿ ಜಿಲ್ಲೆಯ ರಾಮದುರ್ಗದವರಾದ ಹಸನ್ ನಯೀಂ ಸುರಕೋಡ ಅವರು ‘ಸಾರಾ ಶಗುಫ್ತಾ: ಜೀವನ ಮತ್ತು ಕಾವ್ಯ’ (2016) ಎಂಬ ಶೀರ್ಷಿಕೆಯಲ್ಲಿ ಕನ್ನಡಕ್ಕೆ ತಂದಿದ್ದಾರೆ. ಇದು ಲಡಾಯಿ ಪ್ರಕಾಶನದಿಂದ ಪ್ರಕಟವಾಗಿದೆ.

ಸಾರಾ ಪಂಜಾಬಿಯ ಪ್ರಖ್ಯಾತ ಕವಯಿತ್ರಿ ಮತ್ತು ಲೇಖಕಿಯಾದ ಅಮೃತಾ ಪ್ರೀತಂ ಅವರ ಅತ್ಯಂತ ಆಪ್ತ ಗೆಳತಿಯಾಗಿದ್ದಳು. ಸಾರಾ ಭಾರತಕ್ಕೆ ಬಂದು ಅಮೃತಾಳನ್ನು ಭೇಟಿಯಾಗಿದ್ದಳು. ಆಕೆ ಅಮೃತಾಳನ್ನು ನೆರಳು ನೀಡುವ ಮರದಂತೆ ಆಶ್ರಯಿಸಿದ್ದಳು. ಸಾರಾ ಯಾವುದೇ ಮುಚುಗರವಿಲ್ಲದೇ ಅಮೃತಾಳಿಗೆ ಪತ್ರಗಳನ್ನು ಬರೆದು ತನ್ನ ಒಡಲ ಬೇಗುದಿಯನ್ನು ತೋಡಿಕೊಂಡಿದ್ದಾಳೆ. ಸಾರಾ ಬರೆದ ಒಂದೊಂದು ಪತ್ರಗಳು ಆಕೆಯ ಬದುಕಿನ ದುರಂತಮಯ ಕತೆಯನ್ನು ಹೇಳುತ್ತವೆ. ಆ ಪತ್ರಗಳಲ್ಲಿದ್ದ ಒಂದೊಂದು ಕವಿತೆಗಳು ಕೂಡ ಆಕೆಯ ಜೀವನದ ಚರಮಗೀತೆಗಳಾಗಿವೆ. ಆಕೆಯ ಪತ್ರಗಳಲ್ಲಿ ಒಂಟಿತನ, ಹತಾಶೆ ಮತ್ತು ಮಾನಸಿಕ ಅಸ್ವಸ್ಥತೆಯ ಮುಖಗಳಿವೆ; ಸಾರಾಳ ಪ್ರಖರ ವೈಚಾರಿಕ ಆಕ್ರೋಶವಿದೆ. ಅಂದಿನ ಸಮಾಜವು ಸಾರಾಳ ಬಗ್ಗೆ ಎಷ್ಟೊಂದು ಅಮಾನುಷವಾಗಿ ನಡೆದುಕೊಂಡಿದೆ ಎಂಬುದರ ವಿವರಗಳಿವೆ. ಸಾರಾಳ ಗದ್ಯವು ಕೂಡ ಕಾವ್ಯದಷ್ಟೇ ಕಲಾತ್ಮಕವಾಗಿದೆ. ಆಕೆಯ ಪ್ರತಿಭೆ ತನ್ನ ಕಾಲಕ್ಕಿಂತ ಎಷ್ಟೋ ಮುಂದಿತ್ತು. ಆದರೆ ಸಮಾಜಿಕ ವ್ಯವಸ್ಥೆಯು ಆಕೆಯನ್ನು ಆಹುತಿ ತೆಗೆದುಕೊಂಡಿತು. ಆಕೆ ಅಮೃತಾಗೆ ಬರೆದ ಸರಣಿ ಪತ್ರಗಳ ಗುಚ್ಚವೇ ಈ ಪುಸ್ತಕವಾಗಿದೆ.

ಸಾರಾ ಗಂಡು ಪ್ರಧಾನ ಸಮಾಜಿಕ ವ್ಯವಸ್ಥೆಯನ್ನು ಒಪ್ಪಿಕೊಳ್ಳಲಿಲ್ಲ. ಈ ವ್ಯವಸ್ಥೆಯು ಸಾರಾಳನ್ನು ಪಂಜರದ ಗಿಳಿಯನ್ನಾಗಿಸಲು ಇನ್ನಿಲ್ಲದಂತೆ ಪ್ರಯತ್ನಿಸಿತು. ಆಕೆ ತನ್ನನ್ನು ಬಂಧಿಸಿಡುವುದರ ವಿರುದ್ಧವಾಗಿ ಕೊನೆಯ ಉಸಿರಿನತನಕವು ದಿಟ್ಟವಾಗಿ ಸೆಣಸಾಡಿದಳು. ಬೊಗಸೆಯಷ್ಟು ಪ್ರೀತಿಗಾಗಿ ತನ್ನ ಜೀವನಪೂರ್ತಿ ಹಂಬಲಿಸಿದಳು; ಸಮಾಜವು ಇಲ್ಲಸಲ್ಲದ ಆಪಾದನೆಗಳ ಮೂಟೆಯನ್ನು ಆಕೆಯ ಮೇಲೆ ಹೊರಿಸಿತು. ಇದನ್ನೆಲ್ಲ ಮೌನವಾಗಿ ಸಹಿಸಿಕೊಳ್ಳುವ ಜಾಯಮಾನ ಅವಳದ್ದಾಗಿರಲಿಲ್ಲ. ಸಾರಾ ಎಷ್ಟೆಲ್ಲ ದಮನಕ್ಕೆ ಒಳಗಾದಳೋ ಅಷ್ಟೇ ತೀವ್ರವಾಗಿ ಕೆಂಡದಂತಹ ಕಾವ್ಯವನ್ನೇ ರಚಿಸಿದಳು. ಆಕೆಯ ಕಾವ್ಯದ ಕಾವು ಪುರುಷಪ್ರಧಾನ ವ್ಯವಸ್ಥೆಯ ತಳಪಾಯವನ್ನು ಅಲುಗಾಡಿಸಿತು. ಇದರಿಂದ ಆಕೆಯನ್ನು ವಿರೋಧಿಸುವವರ ಸಂಖ್ಯೆಯು ಹೆಚ್ಚಾಯಿತು. ಇದನ್ನೆಲ್ಲ ನಿರೀಕ್ಷಿಸಿದಂತೆಯೇ ಸಾರಾ ಎಲ್ಲವನ್ನು ತನ್ನ ಮೈಮೇಲೆ ಎಳೆದುಕೊಂಡು ಹೋರಾಟಕ್ಕೆ ಸಿದ್ಧಳಾಗಿದ್ದಳು.

 

ಸಾರಾಳಿಗೆ ಹದಿನಾಲ್ಕನೆಯ ವಯಸ್ಸಿನಲ್ಲಿಯೇ ಬುರ್ಖಾದ ಶಿಕ್ಷೆಗೆ ಒಳಪಡಿಸಲಾಯಿತು. ಮದುವೆಯಾದ ಮೂರು ವರ್ಷದಲ್ಲಿ ಮೂವರು ಮಕ್ಕಳಿಗೆ ಜನ್ಮ ನೀಡಿದಳು. ತಾನು ಹೆಂಡತಿಯಾಗಿರಲಿಲ್ಲ; ಅದೊಂದು ಶರಣಾಗತ ಬದುಕಾಗಿತ್ತು; ಒಂದು ರೂಪಾಯಿ ಖರ್ಚು ಮಾಡಲು ಕೂಡ ಗಂಡನ ಅನುಮತಿ ಪಡಯಬೇಕಾಗಿತ್ತು; ಗಂಡ ತನಗೆ ಬೇಕಾದಾಗ ಒಂದು ರಬ್ಬರ್ ಗೊಂಬೆಯಂತೆ ತನ್ನನ್ನು ಭೋಗಿಸುತ್ತಿದ್ದ; ಗಂಡನ ದೈಹಿಕ ಹಲ್ಲೆಗಳಿಂದ ತನ್ನ ದೇಹವೇ ಕಪ್ಪಿಟ್ಟು ಹೋಗುತ್ತಿತ್ತು; ಆತನ ಚಿತ್ರಹಿಂಸೆಗಳಿಂದ ಅನುಭವಿಸಿದ ಆಘಾತಗಳನ್ನು ದೀರ್ಘವಾಗಿಯೇ ಸಾರಾ ತನ್ನ ಪತ್ರಗಳಲ್ಲಿ ಬರೆದುಕೊಂಡಿದ್ದಾಳೆ. ಸಾರಾ ಇಂತಹ ದೌರ್ಜನ್ಯವನ್ನು ಖಂಡಿಸಿ ಗಂಡನಿಗೆ ತಲಾಕ್ ನೀಡುವಷ್ಟು ಧೈರ್ಯಗಾರ್ತಿಯಾಗಿದ್ದಾಳೆ. ಆದರೆ ಸಾರಾ ತನ್ನ ಮಕ್ಕಳನ್ನು ಪಡೆಯಲು ನ್ಯಾಯಾಲಯದ ಮೆಟ್ಟಿಲೇರುತ್ತಾಳೆ. ಕಟಕಟೆಯಲ್ಲಿ ನಿಂತು ಈ ಮಕ್ಕಳು ತನ್ನ ಗಂಡನಿಗೆ ಹುಟ್ಟಿದ್ದಲ್ಲವೆಂದು ಹೇಳುವಷ್ಟು ಬಂಡುಕೋರಳಾಗುತ್ತಾಳೆ. ಸಾರಾಳಿಗೆ ಮಕ್ಕಳು ಸಿಗುತ್ತಾರೆ. ಆದರೆ ಕೆಲವೇ ತಿಂಗಳಲ್ಲಿ ಪುನಃ ವಿಚ್ಛೇದಿತ ಗಂಡನ ಕಿರುಕುಳ ಶುರುವಾಗುತ್ತದೆ. ಸಾರಾಳ ಬದುಕು ಬೀದಿ ಪಾಲಾಗುತ್ತದೆ. ಆಕೆಯ ಎಷ್ಟೋ ಕವಿತೆಗಳಲ್ಲಿ ಮಕ್ಕಳ ಮೇಲಿನ ತಾಯ್ತನದ ಮಮಕಾರವೇ ಹೆಪ್ಪುಗಟ್ಟಿದೆ.

ಗಂಡನ ಸ್ನೇಹಿತನೊಬ್ಬ ಸಾರಾಳನ್ನು ಇಷ್ಟಪಡುತ್ತಾನೆ. ಸಾರಾ ಎರಡನೇ ಮದುವೆಯಾಗುತ್ತಾಳೆ. ಆಗ ಪುನಃ ಈ ಗಂಡನ ಕಾಟ ಶುರುವಾಗುತ್ತದೆ. ಮೊದಲ ಗಂಡನಿಗೆ ತಲಾಕ್ ನೀಡಿದಂತೆಯೇ ಸಾರಾ ಎರಡನೇ ಗಂಡನಿಂದಲೂ ಕಳಚಿಕೊಳ್ಳುತ್ತಾಳೆ. ಆಕೆ ತನ್ನ ತಾಯಿಯ ಒತ್ತಾಯಕ್ಕೆ ಮಣಿದು ನಾಲ್ಕನೆಯ ಮದುವೆಗೆ ಮನಸ್ಸಿಲ್ಲದ ಮನಸ್ಸಿಂದ ಒಪ್ಪಿಕೊಳ್ಳುತ್ತಾಳೆ. ಈ ಗಂಡನ ಶೋಷಣೆಯಿಂದಲೂ ಸಾರಾ ಜರ್ಜರಿತಳಾಗುತ್ತಾಳೆ; ಯಥಾಪ್ರಕಾರ ತಲಾಕ್ ನೀಡುತ್ತಾಳೆ. ಹೀಗೆ ಸಾರಾಳ ಜೀವನದಲ್ಲಿ ನಾಲ್ಕುಜನ ಗಂಡಂದಿರು ಬಂದು ಹೋಗುತ್ತಾರೆ. ಈ ಗಂಡಂದಿರು ಸಾರಾಳ ಕ್ರಿಯಾಶೀಲತೆ ಮತ್ತು ಸೃಜನಶೀಲತೆಯನ್ನು ಸಹಿಸಿಕೊಳ್ಳಲಿಲ್ಲ. ಸಾರಾ ತನ್ನ ಸಹೋದರ ಮತ್ತು ಸಹೋದರಿಯರಿಂದಲೂ ಹಿಂಸೆಯನ್ನು ಎದುರಿಸಬೇಕಾಯಿತು. ಆಕೆ ಪತ್ರಿಕೆಗಳಿಗೆ ಕವನ ಮತ್ತು ಲೇಖನಗಳನ್ನು ಬರೆಯುವುದನ್ನು ಇವರು ವಿರೋಧಿಸುತ್ತಿದ್ದರು. ಆಕೆಯ ಎಷ್ಟೋ ಕವಿತೆ ಮತ್ತು ಲೇಖನಗಳನ್ನು ಸುಟ್ಟು ಹಾಕಲಾಗಿದೆ. ಮನೆತನದ ಮಾನ ಮರ್ಯಾದೆಯನ್ನು ನಾಶ ಮಾಡುತ್ತಿದ್ದಾಳೆ ಎಂದು ದೂಷಿಸಲಾಗಿದೆ. ಸಾರಾ ಅತಿಕಾಮಿಯಾಗಿದ್ದಳು ಎನ್ನುವ ಆರೋಪಗಳ ಹಣೆಪಟ್ಟಿಯನ್ನು ಆಕೆಗೆ ಅಂಟಿಸಲಾಯಿತು. ಸಾರಾ ಅನೇಕ ಗಂಡಸರೊಂದಿಗೆ ಮಲಗುತ್ತಾಳೆ ಎನ್ನುವ ಅಪಪ್ರಚಾರದ ಮೂಲಕ ಆಕೆಯ ಚಾರಿತ್ರ್ಯಹರಣ ಮಾಡಲಾಯಿತು. ಸಾರಾ ಇಂತಹ ಆರೋಪಗಳಿಂದ ನೊಂದುಕೊಳ್ಳುತ್ತಾಳೆ. ಆದರೆ ಏಕಾಂಗಿಯಾಗಿಯೇ ತನ್ನೊಳಗಿನ ಸೃಜನಶೀಲತೆಯ ಮೂಲಕವೇ ಎದುರೇಟು ನೀಡಿದ್ದಾಳೆ.

ಸಾರಾ ತನ್ನದೊಂದು ಕವಿತೆಯಲ್ಲಿ ‘ಒಂದು ಸರಹದ್ದು ಇದೆಯೇ ಹೆಣ್ಣಿಗೆ| ತನ್ನ ದೇಹದ ಹೊರತಾಗಿ?’ ಎಂದು ಪ್ರಶ್ನಿಸುತ್ತಾಳೆ. ಹೆಣ್ಣಿನ ಚೈತನ್ಯವನ್ನು ದಮನಿಸುವ ಎಲ್ಲ ಬಗೆಯ ವ್ಯವಸ್ಥೆಯನ್ನೂ ವಿರೋಧಿಸುತ್ತಾಳೆ. ಮತ್ತೊಂದು ಕವಿತೆಯಲ್ಲಿ ‘ನಾನು ಬರೆಯುತ್ತಿಲ್ಲ ಉರಿಯುತ್ತೇನೆ| ಈ ನಾಲಾಯಕ ಜನರಿಗೆ ಬೇಕಿಲ್ಲ ಕಮಲ| ಅಲೆಗಳಿಲ್ಲದ ಸಮುದ್ರವಿರಲಾರದು| ಹೆಣ್ಣು ಸಂಧಿಸಲೇಬೇಕು ಒಬ್ಬ ಪುರುಷನನ್ನು’ ಎಂದು ಲಿಂಗತಾರತಮ್ಯವನ್ನು ಪ್ರತಿರೋಧಿಸುತ್ತಾಳೆ; ಸಾರಾಗೆ ಹೆಣ್ಣು ಗಂಡುಗಳ ಸೌಹಾರ್ದಯುತ ಬಾಳ್ವೆಯಲ್ಲಿ ನಂಬಿಕೆಯಿತ್ತು. ಸಾರಾಳ ಕವಿತೆಗಳಲ್ಲಿ ‘ಮನಸ್ಸಾಕ್ಷಿ’, ‘ದಫನ್’, ‘ಗೋರಿ’, ‘ದೇವರು’ ಮತ್ತು ‘ಸಮಾಧಿ’ ಎಂಬ ಪದಗಳು ಹೇರಳವಾಗಿ ಬಳಕೆಯಾಗುತ್ತವೆ. ಈ ಸಮಾಜವು ತನಗೆ ಜೀವವಿರುವಾಗಲೇ ‘ಗೋರಿ ಕಟ್ಟಿದೆ’ ಎಂದು ರೋದಿಸಿದ್ದಾಳೆ. ಸಾರಾ ತಮ್ಮ ಕವಿತೆಯೊಂದರಲ್ಲಿ ‘ನಾನು ದೇವರಿಗಿಂತಲೂ ಹೆಚ್ಚು ಒಂಟಿ| ಆದರೆ ನಾನು ಹಾಜರು ನನ್ನ ಪಾಪಗಳಲ್ಲಿ| ಮನಸ್ಸಾಕ್ಷಿಯ ವಿಷ ಸಾಕ್ರೇಟಿಸ್‌ನ ಬಟ್ಟಲೊಳಗಿನ ವಿಷಕ್ಕಿಂತಲೂ ಘೋರ’ ಎಂದಿದ್ದಾಳೆ. ಈ ಜನರಿಗೆ ‘ಮನಸ್ಸಾಕ್ಷಿ’ ಇದ್ದಿದ್ದರೆ ತನ್ನ ವಿಷಯದಲ್ಲಿ ಇಷ್ಟೊಂದು ಬರ್ಬರವಾಗಿ ನಡೆದುಕೊಳ್ಳುತ್ತಿದ್ದರೆ ಎಂದು ನೇರವಾಗಿಯೇ ಕೇಳುತ್ತಾಳೆ. ‘ನಾನೊಂದು ದೇವರ ನಿರ್ಜೀವ ಪ್ರತಿಮೆ’ ಎಂದಿರುವ ಸಾರಾ ‘ಬದುಕು ಎಂದೂ ಸ್ನೇಹಮಯಿಯಾಗಿರಲಿಲ್ಲ ನನಗೆ| ಆದಿಯಿಂದಲೇ ಮರಳಿ ಬರುವೆ| ದೂಷಿಸಲು ದೇವರನ್ನು|’ ಎನ್ನುತ್ತಾಳೆ. ಆಕೆಯ ಎಷ್ಟೋ ಕವಿತೆಗಳು ದೇವರನ್ನು ತರಾಟೆಗೆ ತೆಗೆದುಕೊಳ್ಳುತ್ತವೆ.

ಅಮೃತಾ ಪ್ರೀತಂ ಮತ್ತು ಸಾರಾ ಶಗುಫ್ತಾ-ಇಬ್ಬರ ಬದುಕಿನ ನಡುವೆ ಕೆಲವು ಸಮಾನ ಅಂಶಗಳಿವೆ. ಇರ್ವರೂ ಉರ್ದು ಮತ್ತು ಪಂಜಾಬಿ ಭಾಷೆಯಲ್ಲಿ ಬರೆದವರು. ಅಮೃತಾ ಪ್ರೀತಂ ಅವರು ಕೂಡ ಕುಟುಂಬದ ಕಟ್ಟುಪಾಡಿಗೆ ಬಲಿಬಿದ್ದು ಬಾಲ್ಯದಲ್ಲಿಯೇ ಮದುವೆಯಾಗಿದ್ದರು. ಅಮೃತಾ ತಮ್ಮ ಮೊದಲ ಮದುವೆಯಿಂದ ವಿಚ್ಛೇದನ ಪಡೆದುಕೊಂಡಿದ್ದರು; ಆದರೆ ಕಾವ್ಯ ಲೋಕದ ಮಾಯಾವಿ ಸಾಹಿರ್ ಲುಧಿಯಾನ್ವಿಯನ್ನು ಗಾಢವಾಗಿ ಪ್ರೇಮಿಸಿದ್ದರು. ಅಮೃತಾ ಮತ್ತು ಸಾರಾ ಮದುವೆಯ ವಿಷಯದಲ್ಲಿ ಸಮಾನ ದುಃಖಿಗಳಾಗಿದ್ದಾರೆ. ಅಮೃತಾ ಮತ್ತು ಸಾರಾ-ಇಬ್ಬರೂ ತಮ್ಮ ಆಳದ ನೋವುಗಳಿಗೆ ಕಾವ್ಯದ ರೂಪವನ್ನು ನೀಡಿದವರು; ಅಭಿವ್ಯಕ್ತಿ ಸ್ವಾತಂತ್ರ್ಯಯದ ದಮನವನ್ನು ಪ್ರತಿರೋಧಿಸಿದವರು. ನಂತರದಲ್ಲಿ ಅಮೃತಾರ ಬಾಳ ಸಂಗಾತಿಯಾಗಿ ಕಲಾವಿದ ಇಮ್ರೋಜ್ ಬಂದರು. ಆದರೆ ಸಾರಾಳ ಬದುಕಿನಲ್ಲಿ ಇಮ್ರೋಜ್‌ನಂತಹ ಉದಾತ್ತ ವ್ಯಕ್ತಿತ್ವದವರೊಬ್ಬರು ಬಾಳ ಸಂಗಾತಿಯಾಗಿ ಬರಲಿಲ್ಲ.

ಸಾರಾ ಶಗುಫ್ತಾಗೆ ನಾಲ್ಕು ಸಂಗತಿಗಳಿಂದ ನಿಷೇಧಗಳು ವ್ಯಕ್ತವಾಗಿವೆ. 1. ಲಿಂಗ ತಾರಮ್ಯತೆಯ ಕಾರಣಕ್ಕಾಗಿಯೇ ಸಾರಾಳ ಜೀವನ ದುಸ್ತರವಾಯಿತು. ಇದರಲ್ಲಿ ಗಂಡು ಹೆಣ್ಣೆಂಬ ಭೇದಭಾವವಿಲ್ಲದೇ ಎಲ್ಲರೂ ಭಾಗಿಗಳಾಗಿದ್ದಾರೆ. 2. ಹೆಣ್ಣನ್ನು ಅಧೀನದಲ್ಲಿಟ್ಟುಕೊಳ್ಳುವುದರಲ್ಲಿ ವೈವಾಹಿಕ ಸಂಸ್ಥೆಯು ಪ್ರಧಾನ ಅಸ್ತ್ರವಾಗಿದೆ. ಪುರುಷರ ಲೈಂಗಿಕ ಯಜಮಾನಿಕೆಯು ಮಹಿಳೆಯರ ದೇಹದ ಮೇಲೆ ಅಧಿಪತ್ಯವನ್ನು ಸಾಧಿಸುತ್ತದೆ. 3. ಸಾಮಾಜಿಕ ನಿಂದನೆಗಳು ಮಹಿಳೆಯ ಆಂತರಿಕ ಚೈತನ್ಯವನ್ನು ಕುಗ್ಗಿಸುತ್ತವೆ. ಇದರಿಂದಾಗುವ ಅವಮಾನವು ಮಹಿಳೆಯ ಸ್ವಾಭಿಮಾನಕ್ಕೆ ಧಕ್ಕೆಯಾಗುತ್ತದೆ. 4. ಧಾರ್ಮಿಕ ಕಟ್ಟುಪಾಡುಗಳು ಮಹಿಳೆಯನ್ನು ಯಥಾಸ್ಥಿತಿವಾದಕ್ಕೆ ಕಟ್ಟಿ ಹಾಕುತ್ತವೆ. ಇಂತಹ ಸ್ಥಾಪಿತ ಮೌಲ್ಯಗಳಿಂದ ಚಲನಶೀಲತೆ ಸಾಧ್ಯವಾಗುವುದಿಲ್ಲ. ಹೆಣ್ಣನ್ನು ‘ಅನ್ಯ’ಳನ್ನಾಗಿಯೇ ನೋಡುವುದರಿಂದ ಇಂತಹ ದಮನಗಳು ನಿರಂತರವಾಗಿರುತ್ತದೆ. ಸಮಾನತೆ, ಸ್ವಾತಂತ್ರ್ಯ, ಗೌರವಯುತ ಜೀವನ ನಡೆಸುವ ಹಕ್ಕುಗಳಿಂದಷ್ಟೇ ಮಹಿಳೆಯ ವ್ಯಕ್ತಿತ್ವ ಅರಳಬಲ್ಲದು.

ಸಾರಾ ನಾಲ್ಕಾರು ಸಲ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಳ್ಳಲು ಪ್ರಯತ್ನಿಸಿದ್ದಳು. ಆಕೆ ಮಾನಸಿಕ ಅಸ್ವಸ್ಥೆಯೆಂದು ಪದೇ ಪದೇ ಹುಚ್ಚಾಸ್ಪತ್ರೆಗೆ ಸೇರಿಸಲಾಗುತ್ತದೆ. ಇನ್ನೊಂದು ಮುಖ್ಯವಾದ ಸಂಗತಿಯೆಂದರೆ ಆಕೆ ಆಸ್ಪತ್ರೆಯಲ್ಲಿದ್ದಾಗ ಅಲ್ಲಿಯ ಮಹಿಳಾ ಒಳರೋಗಿಗಳ ಬಗ್ಗೆಯು ಅಂತಃಕರಣದಿಂದ ಬರೆದಿದ್ದಾಳೆ. ಸಾರಾಳ ಲೇಖನಿಯು ಸಾಯುವ ದಿನದವರೆಗೂ ದೀಪದಂತೆ ಬೆಳಗುತ್ತಲೇ ಇತ್ತು. ಆಕೆಯ ಆತ್ಮಹತ್ಯೆಯು ಬರಿ ಆಕೆಯಿಂದಷ್ಟೇ ಆಗಿದ್ದಲ್ಲ. ಅದರಲ್ಲಿ ಈ ಸಮಾಜದ ನೂರಾರು ಕೈಗಳ ಪಾಲಿದೆ. ಇದನ್ನು ಕುರಿತು ಅಮೃತಾ ಪ್ರೀತಂ “ಸಾರಾ ಜಾರಿ ಬಿದ್ದ ಒಂದು ವರ. ಆದರೆ ಅವಳು ಪುರುಷರ ಕೈಗಳಿಂದ ಬೀಳಿಸಲ್ಪಟ್ಟವಳು. ಅವಳು ಒಂದೋ ಅವಳ ಗಂಡಂದಿರು ಇಲ್ಲವೆ ಅವಳ ಕವನಗಳ ವಿಮರ್ಶಕರು. ಅವಳು ಅವರ ಕೈಗಳಿಂದ ಮಣ್ಣಗೂಡಿಸಲ್ಪಟ್ಟ ಪ್ರಾರ್ಥನೆ. ಯಾವುದಾದರೂ ಕಳಚಿ ಬಿದ್ದಿದ್ದರೆ ಅದು ದೇವರು ಮತ್ತು ಮನುಷ್ಯನ ನಡುವಿನ ಸಂಬಂಧ” ಎಂದಿದ್ದಾರೆ. ಸಾರಾಳ ಆತ್ಮಹತ್ಯೆಯ ನಂತರದಲ್ಲಿ ಆಕೆಯ ಸ್ನೇಹಿತರಾಗಿದ್ದ ಸೈಯದ್ ‘ಸಾರಾ ಅಕಾಡೆಮಿ’ಯನ್ನು ಸ್ಥಾಪಿಸಿದ್ದಾರೆ. ಇಂದು ಸಾರಾ ಇಲ್ಲದಿರಬಹದು; ಆದರೆ ಸಾರಾಳ ಕಾವ್ಯವು ಜೀವಂತವಾಗಿದೆ.

  • ಸುಭಾಷ್ ರಾಜಮಾನೆ, ಯಲಹಂಕ ಪದವಿ ಕಾಲೇಜಿನಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ  ಕೆಲಸ ನಿರ್ವಹಿಸುತ್ತಿರುವ ಸುಭಾಷ್ ಅವರು ಮೂಲತಃ ಬೆಳಗಾವಿಯವರು. ಹಂಪಿ ಕನ್ನಡ ವಿಶ್ವವಿದ್ಯಾಲಯದಿಂದ ರಹಮತ್ ತರೀಕೆರೆ ಅವರ ಮಾರ್ಗದರ್ಶನದಲ್ಲಿ ಕನ್ನಡ ವಿಮರ್ಶೆಯಲ್ಲಿ ಜಾತಿ ಆಯಾಮಗಳ ಕುರಿತು ಅಧ್ಯಯನ ನಡೆಸಿ ಪಿಎಚ್.ಡಿ.ಪದವಿ ಗಳಿಸಿದ್ದಾರೆ. ಕನ್ನಡ ಇಂಗ್ಲಿಷ್‌, ಮರಾಠಿ, ಹಿಂದಿ ಭಾಷೆಗಳನ್ನು ಬಲ್ಲ ಸುಭಾಷ್ ಅವರು ಸಿನೆಮಾ ವಿಮರ್ಶೆಗಳನ್ನು ಬರೆದಿದ್ದಾರೆ. ಅನುವಾದದಲ್ಲಿ ವಿಶೇಷ ಆಸಕ್ತಿ ಹೊಂದಿರುವ  ಅವರು ದಿ ಆರ್ಟಿಸ್ಟ್‌ ಸಿನಿಮಾದ ಚಿತ್ರಕತೆಯನ್ನು,  ವಿಕ್ಟರ್‌ ಫ್ರಾಂಕ್‌ಲ್ ನ ಮ್ಯಾನ್ ಸರ್ಚ್ ಫಾರ್ ಮೀನಿಂಗ್ ಕೃತಿಯನ್ನು ’ಬದುಕಿನ ಅರ್ಥವನು ಹುಡುಕುತ್ತ..’ಶೀರ್ಷಿಕೆಯ ಅಡಿಯಲ್ಲಿ, ಗ್ರೀಕ್ ಪಿಲಾಸಫರ್ ಎಪಿಕ್ಟೆಟಸ್ ಬರಹಗಳನ್ನು ಮತ್ತು ತಿಚ್ ನ್ಹಾತ್ ಹಾನ್ ನ ಬರಹಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ಹಳೆಯ, ಅಪರೂಪದ ಪುಸ್ತಕಗಳನ್ನು ಸಂಗ್ರಹಿಸಿ ಅವುಗಳ ಸಾಂಸ್ಕೃತಿಕ ಮಹತ್ವಗಳನ್ನು ಚರ್ಚಿಸುವುದು ಕೂಡ ಸುಭಾಷ್ ಅವರ ನೆಚ್ಚಿನ ಹವ್ಯಾಸ.
  • ನಿಮ್ಮ ಪ್ರತಿಕ್ರಿಯೆಗಳನ್ನು [email protected][email protected]ಇಲ್ಲಿಗೆ ಬರೆಯಿರಿ
ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights