Fact Check: ಬಾಂಗ್ಲಾದೇಶದ ಮುಸ್ಲಿಮರು ನಡೆಸಿದ ಪ್ರತಿಭಟನೆಯನ್ನು ಪಶ್ಚಿಮ ಬಂಗಾಳದ್ದು ಎಂದು ಹಂಚಿಕೊಳ್ಳಲಾಗಿದೆ

ಪಶ್ಚಿಮ ಬಂಗಾಳದಲ್ಲಿ ಮುಸ್ಲಿಂ ಗುಂಪುಗಳು ನಡೆಸಿದ ಬೃಹತ್ ಪ್ರತಿಭಟನೆಯ ವಿಡಿಯೋ ಎಂಬ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದು ನಿಜವೇ ಪರಿಶೀಲಿಸೋಣ ಬನ್ನಿ.

ಈ ಪೋಸ್ಟ್ ಅನ್ನು ಆರ್ಕೈವ್ ಮಾಡಲಾಗಿರುವ ಆವೃತ್ತಿಯನ್ನು ಇಲ್ಲಿ ಕಾಣಬಹುದು

ಪ್ರತಿಪಾದನೆ: ಪಶ್ಚಿಮ ಬಂಗಾಳದಲ್ಲಿ ಮುಸ್ಲಿಂ ಗುಂಪುಗಳು ನಡೆಸಿದ ಬೃಹತ್ ಪ್ರಭಟನೆಯ ವಿಡಿಯೋ.

ನಿಜಾಂಶ: ಪೋಸ್ಟ್‌‌ ನಲ್ಲಿನ ವಿಡಿಯೋ ಬಾಂಗ್ಲಾದೇಶದ ಮುಸ್ಲಿಮರು ನಡೆಸಿದ ಬೃಹತ್ ಪ್ರತಿಭಟನೆಯಾಗಿದ್ದು, ಇದು 2017 ರಲ್ಲಿ ನಡೆದಿತ್ತು. ಬಾಂಗ್ಲಾ ದೇಶದ ಬಲಪಂಥೀಯ ಪಕ್ಷವಾದ ‘ಇಸ್ಲಾಮಿ ಆಂದೋಲನ್ ಬಾಂಗ್ಲಾದೇಶ’ವು ಮಯನ್ಮಾರ್ ನಲ್ಲಿ ರೋಹಿಂಗ್ಯಾ ಮುಸ್ಲಿಮರ ಮೇಲಿನ ದೌರ್ಜನ್ಯಕ್ಕೆ ಸಂಬಂಧಿಸಿದಂತೆ ಮಯನ್ಮಾರ್ ಸರ್ಕಾರದ ವಿರುದ್ಧ ನಡೆಸಿದ ಪ್ರತಿಭಟನೆಯಾಗಿದೆ. ಇದಕ್ಕೂ ಭಾರತದ ಪಶ್ಚಿಮ ಬಂಗಾಳದ ಪ್ರತಿಭಟನೆಗೂ ಯಾವುದೇ ಸಂಬಂಧವಿಲ್ಲ. ಆದ್ದರಿಂದ ಪೋಸ್ಟ್‌ ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ಪ್ರಸ್ತುತ ವಿಡಿಯೋವನ್ನು ಎಚ್ಚರಿಕೆಯಿಂದ ಗಮನಿಸಿದರೆ, ಈ ಪ್ರತಿಭಟನೆಯಲ್ಲಿ ಬಾಂಗ್ಲಾದೇಶದ ಧ್ವಜವನ್ನು ಹಿಡಿದಿರುವದೃಶ್ಯವು 0.37 ಸೆಕೆಂಡಿನ ಸಮಯದಲ್ಲಿ  ಕಾಣುತ್ತದೆ. ಅಷ್ಟೆ ಅಲ್ಲದೆ ಪ್ರತಿಭಟನಾಕಾರರು ಹಿಡಿದಿದ್ದ ಫಲಕಗಳನ್ನು ಗಮನಿಸಿದರೂ ಇದು ರೋಹಿಂಗ್ಯಾ ಮುಸ್ಲಿಮರ ಮೇಲಿನ ದೌರ್ಜನ್ಯದ ವಿರುದ್ಧದ ಪ್ರತಿಭಟನೆ ಎಂದು ಕಾಣಬಹುದಾಗಿದೆ. ಪ್ರತಿಭಟನಾಕಾರರು ಹಿಡಿದಿರುವ ಪ್ಲಕಾರ್ಡ್‌ ಗಳ ಮೇಲೆ ‘ಇಸ್ಲಾಮಿ ಜುಬೊ ಆಂದೋಲನ್’ ಮತ್ತು ‘ಇಸ್ಲಾಮಿ ಶಸಂತ್ರತಾ ಛಾತ್ರ ಆಂದೋಲನ್’ ನಂತಹ ಸಂಘಟನೆಗಳ ಹೆಸರುಗಳನ್ನು ನಾವು ನೋಡಬಹುದು. ಈ ಎರಡೂ ಸಂಘಟನೆಗಳು ಬಾಂಗ್ಲಾದೇಶದ ಸಂಘಟನೆಗಳಾಗಿವೆ ಎಂದು ನಾವು ಕಂಡುಕೊಂಡಿದ್ದೇವೆ.

ರಿವರ್ಸ್ ಇಮೇಜ್ ಮೂಲಕ ಹುಡುಕಾಡಿದಾಗ, ಯೂಟ್ಯೂಬ್‌ ನಲ್ಲಿ ‘ಸ್ಪೈಸ್ ಇನ್ಫೋ ಟ್ಯೂಬ್’ ಹೆಸರಿನ ಬಳಕೆದಾರರು ಪೋಸ್ಟ್ ಮಾಡಿದ ವಿಡಿಯೋದಲ್ಲಿ ಇದೇ ರೀತಿಯ ದೃಶ್ಯಗಳನ್ನು ಕಂಡುಕೊಂಡಿದ್ದೇವೆ. ‘ಇಸ್ಲಾಮಿ ಆಂದೋಲನ್ ಬಾಂಗ್ಲಾದೇಶವು ಮಯನ್ಮಾರ್ ರಾಯಭಾರ ಕಚೇರಿಯನ್ನು ಮುತ್ತಿಗೆ ಹಾಕಿದೆ’ ಎಂಬ ಶೀರ್ಷಿಕೆಯೊಂದಿಗೆ ಈ ವಿಡಿಯೋವನ್ನುಅಪ್‌ ಲೋಡ್ ಮಾಡಿದ್ದಾರೆ.

ಈ ಕೀವರ್ಡ್‌ ಗಳನ್ನು ಬಳಸಿಕೊಂಡು ನಾವು ಅಧಿಕೃತ ಮೂಲಗಳಿಗಾಗಿ ಹುಡುಕಿದಾಗ, ಬಾಂಗ್ಲಾದೇಶದ ರಾಷ್ಟ್ರೀಯ ಚಾನೆಲ್ ‘ಚಾನೆಲ್ ಐ ನ್ಯೂಸ್’ ಯೂಟ್ಯೂಬ್‌ ನಲ್ಲಿ ‘13 ಸೆಪ್ಟೆಂಬರ್ 2017’ರಲ್ಲಿ ಪೋಸ್ಟ್ ಮಾಡಿದ ವಿಡಿಯೋವನ್ನು ಕಂಡೆವು. ಈ ದೃಶ್ಯಗಳು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ ವಿಡಿಯೋಗೆ ನಿಖರವಾಗಿ ಹೋಲುವಂತಿಲ್ಲವಾದರೂ, ಈ ವಿಡಿಯೋದಲ್ಲಿ ಪ್ರತಿಭಟನಾಕಾರರು ಹಿಡಿದಿರುವ ಫಲಕಗಳು ಮತ್ತು ಧ್ವಜಗಳನ್ನು ನಾವು ಕಂಡುಕೊಂಡಿದ್ದೇವೆ. ವಿಡಿಯೋದಲ್ಲಿ, ಬಾಂಗ್ಲಾದೇಶದ ಢಾಕಾದ ಮಯನ್ಮಾರ್ ರಾಯಭಾರ ಕಚೇರಿ ಬಳಿ ಮುಸ್ಲಿಂ ಗುಂಪುಗಳು ನಡೆಸಿದ ಪ್ರತಿಭಟನೆಗೆ ಸಂಬಂಧಿಸಿದ ಘಟನೆ ಎಂದು ಉಲ್ಲೇಖಿಸಲಾಗಿದೆ. ಮಯನ್ಮಾರ್ ನಲ್ಲಿ ರೋಹಿಂಗ್ಯಾ ಮುಸ್ಲಿಮರ ವಿರುದ್ಧದ ದೌರ್ಜನ್ಯಕ್ಕಾಗಿ ಅವರು ಮಯನ್ಮಾರ್ ಸರ್ಕಾರದ ವಿರುದ್ಧ ಪ್ರತಿಭಟಿಸಿದ್ದರು.

ಈ ಪ್ರತಿಭಟನೆಯ ಬಗ್ಗೆ ‘ದಿ ನ್ಯೂ ಇಂಡಿಯನ್ ಎಕ್ಸ್‌ ಪ್ರೆಸ್’ ವೆಬ್‌ಸೈಟ್ ಪ್ರಕಟಿಸಿದ ವರದಿಯನ್ನು ಕೂಡಾ ನಾವು ಕಂಡುಕೊಂಡಿದ್ದೇವೆ. ಢಾಕಾದ ಮಯನ್ಮಾರ್ ರಾಯಭಾರ ಕಚೇರಿಯ ಬಳಿಯಲ್ಲಿ, ‘ಇಸ್ಲಾಮಿ ಆಂದೋಲನ್ ಬಾಂಗ್ಲಾದೇಶ’ ಪಕ್ಷದ ಕನಿಷ್ಠ 15 ಸಾವಿರ ಬೆಂಬಲಿಗರು ರೋಹಿಂಗ್ಯಾ ಮುಸ್ಲಿಮರ ಮೇಲಿನ ದೌರ್ಜನ್ಯದ ವಿರುದ್ಧ ಬೃಹತ್ ಪ್ರತಿಭಟನೆ ನಡೆಸಿದ್ದಾರೆ ಎಂದು ಲೇಖನದಲ್ಲಿ ಉಲ್ಲೇಖಿಸಲಾಗಿದೆ.

ಒಟ್ಟಾರೆಯಾಗಿ ಹೇಳುವುದಾದರೆ, ಬಾಂಗ್ಲಾದೇಶದಲ್ಲಿ ನಡೆಸಿದ ಬೃಹತ್ ಪ್ರತಿಭಟನೆಯ ವಿಡಿಯೋವನ್ನು ಪಶ್ಚಿಮಬಂಗಾಳದ್ದು ಎಂದು ತಪ್ಪಾಗಿ ಚಿತ್ರಿಸಲಾಗಿದೆ.

– ಅನಿಲ್ ಕುಮಾರ್ ಚಿಕ್ಕದಾಳವಟ್ಟ


ಇದನ್ನೂ ಓದಿ: ಮೋದಿ ಸರ್ಕಾರ ದೇಶವನ್ನು ಪಾತಾಳಕ್ಕೆ ದೂಡಿದೆ; ಮಾಧ್ಯಮಗಳು ಅದ್ಭುತ ಎನ್ನುತ್ತಿವೆ: ರಾಹುಲ್‌ ಗಾಂಧಿ

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights