ಮೋದಿ ಸರ್ಕಾರ ದೇಶವನ್ನು ಪಾತಾಳಕ್ಕೆ ದೂಡಿದೆ; ಮಾಧ್ಯಮಗಳು ಅದ್ಭುತ ಎನ್ನುತ್ತಿವೆ: ರಾಹುಲ್‌ ಗಾಂಧಿ

ಮೋದಿ ಸರ್ಕಾರವು ಆರ್ಥಿಕ ಕುಸಿತ, ಸಾಲ, ನಿರುದ್ಯೋಗ ಸೇರಿದಂತೆ ಹಲವಾರು ಸಮಸ್ಯೆಗಳಿಂದ ಭಾರತವನ್ನು ತೊಂದರೆಗಳ ಪ್ರಪಾತಕ್ಕೆ ತಳ್ಳಿದೆ. ಆದರೆ, ಮಾಧ್ಯಮಗಳು ’ಸಬ್‌ ಚಂಗಾಸಿ’ (ಎಲ್ಲವು ಅದ್ಭುತವಾಗಿವೆ) ಎಂದು ಹೇಳುತ್ತಿವೆ ಎಂದು ಕಾಂಗ್ರೆಸ್‌ ನಾಯಕ ರಾಹುಲ್ ಗಾಂಧಿ ವ್ಯಂಗ್ಯವಾಡಿದ್ದಾರೆ.

ಕೇಂದ್ರ ಸರ್ಕಾರದ ವಿರುದ್ದ ನಿರಂತರವಾಗಿ ಮಾತನಾಡುತ್ತಿರುವ ರಾಹುಲ್ ಗಾಂಧಿ ಇಂದು ವ್ಯಂಗ್ಯವಾಗಿ ಸರ್ಕಾರ ಮತ್ತು ಮಾಧ್ಯಮಗಳ ವಿರುದ್ದ ದಾಳಿಮಾಡಿದ್ದಾರೆ. “ಕೊರೊನಾ ವಿರುದ್ಧ ಮೋದಿ ಸರ್ಕಾರದ ‘ಯೋಜಿತ ಹೋರಾಟ’ವು ಭಾರತವನ್ನು ತೊಂದರೆಗಳ ಪ್ರಪಾತಕ್ಕೆ ತಳ್ಳಿತು” ಎಂದಿರುವ ರಾಹುಲ್ ಗಾಂಧಿ, ಸಮಸ್ಯೆಗಳನ್ನು ಪಟ್ಟಿ ಮಾಡಿದ್ದಾರೆ.

ಜಿಡಿಪಿಯಲ್ಲಿ 24% ಐತಿಹಾಸಿಕ ಇಳಿತ, 12 ಕೋಟಿ ಉದ್ಯೋಗಗಳ ನಷ್ಟ, 15.5 ಲಕ್ಷ ಕೋಟಿ ಹೆಚ್ಚುವರಿ ಸಾಲಗಳು, ಕೊರೊನಾ ಸೋಂಕಿನಿಂದ ವಿಶ್ವದಲ್ಲೇ ಅತ್ಯಂತ ಹೆಚ್ಚು ದೈನಂದಿನ ಸಾವುಗಳು ಎಂಬ ಅಂಶಗಳನ್ನು ಉಲ್ಲೇಖಿಸಿದ ಅವರು, “ಆದರೆ ಕೇಂದ್ರ ಸರ್ಕಾರ ಮತ್ತು ಮಾಧ್ಯಮಗಳು ಮಾತ್ರ ’ಸಬ್ ಚಂಗಾಸಿ’ ಎಂದು ಹೇಳುತ್ತಿದೆ” ಎಂದು ಹೇಳಿದ್ದಾರೆ.

ಕೇಂದ್ರ ಕೊರೊನಾ ಸೋಂಕನ್ನು ನಿರ್ವಹಿಸುತ್ತಿರುವ ರೀತಿಯನ್ನು ರಾಹುಲ್ ಗಾಂಧಿ ನಿರಂತರವಾಗಿ ಟೀಕಿಸುತ್ತಿದ್ದಾರೆ. ಎರಡು ದಿನಗಳ ಹಿಂದೆ, “ನಾನು ಫಬ್ರವರಿಯಲ್ಲೇ ಕೊರೊನಾ ಸುನಾಮಿ ರೀತಿ ಬರುತ್ತದೆ, ತಯಾರಾಗಿರಿ ಎಂದು ಹೇಳಿದ್ದೆ, ಆದರೆ ಸರ್ಕಾರ ನನ್ನನ್ನು ತಮಾಷೆ ಮಾಡಿತ್ತು” ಎಂದು ಹೇಳಿದ್ದರು.

ಅಷ್ಟೇ ಅಲ್ಲದೆ ಸೆಪ್ಟೆಂಬರ್‌ 6 ರಂದು ತನ್ನ ಸರಣಿ ವಿಡಿಯೋ ಕಾರ್ಯಕ್ರಮದಲ್ಲಿ ”ಜಿಎಸ್‌‌ಟಿಯ ದೋಷಪೂರಿತ ಅನುಷ್ಠಾನವು ಆರ್ಥಿಕತೆಯನ್ನು ನಾಶಪಡಿಸಿದೆ, ಇದು ಆರ್ಥಿಕತೆಯಲ್ಲಿರುವ ಅಸಂಘಟಿತ ವಲಯಕ್ಕೆ ಎರಡನೇ ದೊಡ್ಡ ಹೊಡೆತವಾಗಿದೆ” ಎಂದು ರಾಹುಲ್ ಆರೋಪಿಸಿದ್ದರು.


ಇದನ್ನೂ ಓದಿ: ಸಂವಿಧಾನದ 19ನೇ ವಿಧಿ ಅನ್ವಯ ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯವು ಪರಿಪೂರ್ಣ ಹಕ್ಕಲ್ಲ: ಬಾಂಬೆ ಹೈಕೋರ್ಟ್‌

Spread the love

Leave a Reply

Your email address will not be published. Required fields are marked *