ಹೆದ್ದಾರಿಯಲ್ಲಿ ಮಕ್ಕಳ ಮುಂದೆ ಮಹಿಳೆ ಮೇಲೆ ಗ್ಯಾಂಗ್ ರೇಪ್ : ಪಾಕಿಸ್ತಾನದಲ್ಲಿ ಪ್ರತಿಭಟನೆ
ಪುರುಷ ಸಹಚರರಿಲ್ಲದೆ ತಡರಾತ್ರಿ ಪ್ರಯಾಣಿಸುತ್ತಿದ್ದ ಸಂತ್ರಸ್ತೆಯ ಮೇಲೆ ಸಾಮೂಹಿಕ ಅತ್ಯಾಚಾರ ಖಂಡಿಸಿ ಪಾಕಿಸ್ತಾನದಾದ್ಯಂತದ ನಗರಗಳಲ್ಲಿ ಪ್ರತಿಭಟನೆಗಳು ಭುಗಿಲೆದ್ದಿವೆ. ಈ ಘಟನೆಗೆ ಸಂಬಂಧಿಸಿದಂತೆ ಈವರೆಗೆ ಪಾಕಿಸ್ತಾನ ಪೊಲೀಸರು 15 ಜನರನ್ನು ಬಂಧಿಸಿದ್ದಾರೆ ಎಂದು ಎಎಫ್‌ಪಿ ವರದಿ ಮಾಡಿದೆ.
ಪಾಕಿಸ್ತಾನದ ಲಾಹೋರ್-ಸಿಯಾಲ್ಕೋಟ್ ಮೋಟಾರು ಮಾರ್ಗದಲ್ಲಿ ಗುರುವಾರ ಮುಂಜಾನೆ ಸಂತ್ರಸ್ತೆ ಲಾಹೋರ್‌ನಿಂದ ಗುಜ್ರಾನ್‌ವಾಲಾಕ್ಕೆ ತನ್ನ ಇಬ್ಬರು ಮಕ್ಕಳೊಂದಿಗೆ ಕಾರು ಚಾಲನೆ ಮಾಡುತ್ತಿದ್ದಾಗ ಪ್ರಾಯಾಣಿಸುತ್ತಿದ್ದ ಕಾರು ಕೆಟ್ಟುಹೋಗಿದೆ. ಈ ವೇಳೆ ಗುಂಪೂಂದು ಸಂತ್ರಸ್ತೆಯ ಕಾರಿನ ಗಾಜು ಒಡೆದು ಕಾರಿನಿಂದ ಹೊರಗೆ ಎಳೆದೊಯ್ದಿದೆ. ಹತ್ತಿರದ ಹೊಲವೊಂದರಲ್ಲಿ ತನ್ನ ಮಕ್ಕಳ ಮುಂದೆ ಅತ್ಯಾಚಾರ ಮಾಡಿದ್ದಾರೆಂದು ಮಹಿಳೆ ಆರೋಪ ಮಾಡಿದ್ದಾಳೆ.
ಮಾತ್ರವಲ್ಲದೇ ಅತ್ಯಾಚಾರದ ಬಳಿಕ ದಾಳಿಕೋರರು ಆಭರಣಗಳು, ನಗದು ಮತ್ತು ಮೂರು ಎಟಿಎಂ ಕಾರ್ಡ್‌ಗಳನ್ನು ತೆಗೆದುಕೊಂಡು ಅಲ್ಲಿಂದ ಪರಾರಿಯಾಗಿದ್ದಾರೆ. ಪಾಕಿಸ್ತಾನ ಪೊಲೀಸರು ವಿಚಾರಣೆಗಾಗಿ 15 ಜನರನ್ನು ವಶಕ್ಕೆ ಪಡೆದಿದ್ದರೆ, ಬಂಧಿತರಲ್ಲಿ ಯಾರೊಬ್ಬರೂ ಆಕೆಯ ಮೇಲೆ ಹಲ್ಲೆ ನಡೆಸಿದ ಗುಂಪಿನ ಭಾಗವಾಗಿರಲಿಲ್ಲ ಎಂದು ಪೊಲೀಸರು ಅಸೋಸಿಯೇಟೆಡ್ ಪ್ರೆಸ್‌ಗೆ ತಿಳಿಸಿದ್ದಾರೆ.
ಪ್ರಕರಣದ ಬಗ್ಗೆ ತನಿಖೆ ನಡೆಸುತ್ತಿರುವಾಗಲೇ ನೂರಾರು ಜನರು ಆರೋಪಿಗಳ ಬಂಧನಕ್ಕೆ ಒತ್ತಾಯಿಸಿ ಬೀದಿಗಿಳಿದು ಪ್ರತಿಭಟನೆ ನಡೆಸಿದ್ದಾರೆ.