ಉಪಚುನಾವಣೆ ಉಸ್ತುವಾರಿ; ಬಿಎಸ್‌ವೈ ಪುತ್ರ ವಿಜಯೇಂದ್ರ ಹೆಸರು ಕೈಬಿಟ್ಟಿತ್ತು ಬಿಜೆಪಿ!

ರಾಜ್ಯದಲ್ಲಿ ಎರಡು ವಿಧಾನಸಭಾ ಕ್ಷೇತ್ರಗಳಿಗೆ ಅಕ್ಟೋಬರ್ 30 ರಂದು ಉಪಚುನಾವಣೆ ನಡೆಯಲಿದೆ. ಈ ಚುನಾವಣೆಗೆ ಬಿಜೆಪಿ ಚುನಾವಣಾ ಉಸ್ತುವಾರಿಗಳನ್ನು ನೇಮಕ ಮಾಡಿದ್ದು, ಉಸ್ತುವಾರಿಗಳ ಪಟ್ಟಿಯಲ್ಲಿ ಮಾಜಿ ಸಿಎಂ ಯಡಿಯೂರಪ್ಪ ಅವರ ಮಗ, ಕರ್ನಾಟಕ ಬಿಜೆಪಿ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರ ಹೆಸರನ್ನು ಬಿಜೆಪಿ ಕೈಬಿಟ್ಟಿತ್ತು. ಈ ಬಗ್ಗೆ ವಿಜಯೇಂದ್ರ ಅವರ ಅಭಿಮಾನಿಗಳು ಬಿಜೆಪಿ ನಾಯಕತ್ವದ ಬಗ್ಗೆ ಆಕ್ರೋಶ ವ್ಯಕ್ತಪಡಿಸುತ್ತಿದ್ದಂತೆ ಎಚ್ಚೆತ್ತ ಬಿಜೆಪಿ ಅವರನ್ನು ಉಸ್ತುವಾರಿಗಳ ಪಟ್ಟಿಗೆ ಅವರ ಹೆಸರನ್ನು ಸೋಮವಾರ ಸೇರಿಸಿದೆ.

ಸಿಂದಗಿ ಮತ್ತು ಹಾನಗಲ್‌ ವಿಧಾನಸಭಾ ಕ್ಷೇತ್ರಗಳಿಗೆ ಅಕ್ಟೋಬರ್ 30 ರಂದು ಉಪಚುನಾವಣೆ ನಡೆಯಲಿದ್ದು, ನವೆಂಬರ್ 2 ರಂದು ಮತ ಎಣಿಕೆ ನಡೆಯಲಿದೆ.

ವಿಜಯೇಂದ್ರ ಅವರ ಹೆಸರು ಬಿಜೆಪಿ ಕೈಬಿಟ್ಟ ಹಿನ್ನಲೆಯಲ್ಲಿ ಅವರ ಅಭಿಮಾನಿಗಳು ಪಕ್ಷದ ಉನ್ನತ ನಾಯಕತ್ವದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದರು. ಇದನ್ನು ಅವರು ಟ್ವಿಟರ್‌ನಲ್ಲಿ ಖಂಡಿಸಿದ್ದರು. “ಪಕ್ಷದ ತೀರ್ಮಾನದಂತೆ, ನಮ್ಮ ಎಲ್ಲ ನಾಯಕರ ಮಾರ್ಗದರ್ಶನದಲ್ಲಿ, ಬಿಜೆಪಿ ಅಭ್ಯರ್ಥಿಗಳ ಗೆಲುವಿಗಾಗಿ ನಾವು ಕಾರ್ಯನಿರ್ವಹಿಸೋಣ. ಪಕ್ಷಕ್ಕೆ ಮುಜುಗರ ತರುವ ಯಾವುದೇ ವಿಷಯಕ್ಕೂ ನನ್ನ ಸಮ್ಮತಿಯಿಲ್ಲ” ಎಂದು ಹೇಳಿದ್ದರು.

ಇದನ್ನೂ ಓದಿ: ಮೋದಿ ಸರ್ಕಾರಕ್ಕೆ ಅಮೆಜಾನ್ ಕಂಪನಿ 8,450 ಕೋಟಿ ರೂ ಲಂಚ ನೀಡಿದೆ: ಕಾಂಗ್ರೆಸ್‌ ನಾಯಕಿ ಆರೋಪ

ಪಕ್ಷವು ಅಕ್ಟೋಬರ್ 1 ರಂದು ಘೋಷಿಸಿದ್ದ ಉಸ್ತುವಾರಿಗಳ ಗುಂಪಿನಲ್ಲಿ ಬಿಜೆಪಿ ಉಪಾಧ್ಯಕ್ಷರಾಗಿದ್ದ ವಿಜಯೇಂದ್ರ ಅವರ ಹೆಸರು ಇರಲಿಲ್ಲ. ಅವರ ಅಭಿಮಾನಿಗಳ ಆಕ್ರೊಶ ವ್ಯಕ್ತವಾದ ನಂತರ, ಸೋಮವಾರ ಪಕ್ಷವು ಪರಿಷ್ಕೃತ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಈ ಪಟ್ಟಿಯಲ್ಲಿ ಹಾನಗಲ್‌ ಉಸ್ತುವಾರಿಯಾಗಿ ಅವರನ್ನು ಸೇರಿಸಿದ್ದಾರೆ. ಅವರ ಜೊತೆಗೆ ಸಚಿವರಾದ ಮುರುಗೇಶ್ ನಿರಾಣಿ, ಜೆ ಸಿ ಮಾಧುಸ್ವಾಮಿ, ಬಿ ಸಿ ಪಾಟೀಲ್, ಶಿವರಾಮ ಹೆಬ್ಬಾರ್ ಮತ್ತು ಸಂಸತ್ ಸದಸ್ಯ ಶಿವಕುಮಾರ ಉದಾಸಿ ಸೇರಿದಂತೆ ಒಟ್ಟು 13 ಉಸ್ತುವಾರಿಗಳನ್ನು ನೇಮಿಸಲಾಗಿದೆ.

ಸಿಂದಗಿ ಕ್ಷೇತ್ರದಲ್ಲಿ ಉಸ್ತುವಾರಿಯಾಗಿ, ಸಚಿವರಾದ ಗೋವಿಂದ್ ಕಾರಜೋ‌ಲ್, ವಿ ಸೋಮಣ್ಣ, ಸಿ ಸಿ ಪಾಟೀಲ್ ಮತ್ತು ಶಶಿಕಲಾ ಜೊಲ್ಲೆ ಪಟ್ಟಿಯಲ್ಲಿ ಇದ್ದಾರೆ.

ಸಿಂದಗಿಯಲ್ಲಿ ಜೆಡಿ(ಎಸ್) ಶಾಸಕರಾದ ಎಂ.ಸಿ. ಮನಗೂಳಿ ಮತ್ತು ಹಾನಗಲ್‌ನಲ್ಲಿ ಬಿಜೆಪಿಯ ಸಿ. ಎಂ. ಉದಾಸಿ ಅವರ ಮರಣದಿಂದಾಗಿ ಉಪಚುನಾವಣೆಗಳು ನಡೆಯುತ್ತಿದೆ.

ಕೆ.ಆರ್. ಪೇಟೆ ಮತ್ತು ಸಿರಾ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯಲ್ಲಿ ಬಿಜೆಪಿಯ ಗೆಲುವಿಗೆ ಪ್ರಮುಖ ಪಾತ್ರ ವಹಿಸಿದ್ದ ವಿಜಯೇಂದ್ರ ಅವರೇ ಹಾನಗಲ್ ಅಭ್ಯರ್ಥಿ ಎಂದು ಊಹಿಸಲಾಗಿತ್ತು.

ಇದನ್ನೂ ಓದಿ: ಟಿಕೆಟ್‌ ಇಲ್ಲದೆ ರೈಲಿನಲ್ಲಿ ಹಣ್ಣು ಮಾರುತ್ತಿದ್ದ ಕರ್ನಾಟಕದ ಮಹಿಳೆ ಮೇಲೆ RPF ಪೊಲೀಸರಿಂದ ಹಲ್ಲೆ!

ಮೂಲಗಳ ಪ್ರಕಾರ, ಹಾನಗಲ್‌‌ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಗಳ ಪಟ್ಟಿಯಲ್ಲಿ ದಿವಂಗತ ಮಾಜಿ ಶಾಸಕ ಸಿ.ಎಂ. ಉದಾಸಿಯವರ ಸೊಸೆ, ಹಾವೇರಿ-ಗದಗ ಸಂಸದ ಶಿವಕುಮಾರ ಉದಾಸಿ ಅವರ ಪತ್ನಿ ರೇವತಿ ಉದಾಸಿ, ಕಲ್ಯಾಣ್ ಕುಮಾರ್ ಶೆಟ್ಟರ್ ಮತ್ತು ಶಿವರಾಜ್ ಸಜ್ಜನರ್‌ ಬಿಜೆಪಿಯಿಂದ ಟಿಕೆಟ್ ಆಕಾಂಕ್ಷಿಗಳಾಗಿದ್ದಾರೆ.

ಸಿಂದಗಿಯಲ್ಲಿ, 2018 ರಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ್ದ ರಮೇಶ್ ಭೂಸನೂರ್, ಅಶೋಕ್ ಅಲ್ಲಾಪುರ, ಶಂಬುಲಿಂಗ ಕಕ್ಕಲಮೇಲಿ, ಸಿದ್ದು ಬಿರಾದಾರ್ ಮತ್ತು ಸಂಗನಗೌಡ ಪಾಟೀಲ್ ಅವರು ಬಿಜೆಪಿ ಟಿಕೆಟ್ ಆಕಾಂಕ್ಷಿಗಳಾಗಿದ್ದಾರೆ.

ಜೆಡಿ(ಎಸ್) ಈಗಾಗಲೇ ನಾಜಿಯಾ ಶಕೀಲಾ ಅಂಗಡಿ ಅವರನ್ನು ಸಿಂದಗಿಯಲ್ಲಿ ಮತ್ತು ನಿಯಾಜ್ ಶೇಖ್ ಅವರನ್ನು ಹಾನಗಲ್ ವಿಧಾನಸಭಾ ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನಾಗಿ ಹೆಸರಿಸಿದೆ.

ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದ ದಿವಂಗತ ಎಂ.ಸಿ. ಮನಗೂಳಿ ಅವರ ಮಗ ಅಶೋಕ್ ಮನಗೂಳಿ ಅವರನ್ನು ಸಿಂದಗಿಯಿಂದ ಅಭ್ಯರ್ಥಿಯಾಗಿ ಅಂತಿಮಗೊಳಿಸಿದೆ. ಹಾನಗಲ್‌ನಲ್ಲಿ ಮಾಜಿ ಎಂಎಲ್‌ಸಿ ಶ್ರೀನಿವಾಸ್ ಮಾನೆ ಅವರನ್ನು ಅಭ್ಯರ್ಥಿಯಾಗಿಸುವ ಸಾಧ್ಯತೆಯಿದೆ.

ಇದನ್ನೂ ಓದಿ: ರೈತರ ವಿರುದ್ದ ದೊಣ್ಣೆ ಎತ್ತಿಕೊಳ್ಳಲು ಕಾರ್ಯಕರ್ತರಿಗೆ ಕರೆ; ಹರ್ಯಾಣ ಸಿಎಂ ವಿಡಿಯೋ ವೈರಲ್!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights