ರೈತ ಮಹಿಳೆ ಮೇಲೆ ಅತ್ಯಾಚಾರ; ಪೊಲೀಸ್‌ ತನಿಖೆಗೆ NHRC ಆದೇಶ

ದೆಹಲಿಯ ಟಿಕ್ರಿ ಗಡಿಯಲ್ಲಿ ನಡೆಯುತ್ತಿರುವ ರೈತ ಪ್ರತಿಭಟನೆಯಲ್ಲಿದ್ದ ಪಶ್ಚಿಮ ಬಂಗಾಳದ ರೈತ ಮಹಿಳಾ ಕಾರ್ಯಕರ್ತೆಯೊಬ್ಬರ ಅತ್ಯಾಚಾರ ಮತ್ತು ಸಾವಿನ ಬಗ್ಗೆ ವಾಸ್ತವಿಕ ವರದಿ ಸಲ್ಲಿಸುವಂತೆ ಬುಧವಾರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ಹರಿಯಾಣದ ಪೊಲೀಸ್‌ ಅಧೀಕ್ಷಕರಿಗೆ ಆದೇಶಿಸಿದೆ.

ಆಯೋಗವು ಈ ಪ್ರಕರಣಕ್ಕೆ ಸಂಬಂಧಿಸಿದ ದೂರಿನ ಪ್ರತಿ, ಎಫ್‌ಐಆರ್‌, ಕೇಸ್‌ ಡೈರಿಗಳು, ವೈದ್ಯಕೀಯ ಚಿಕಿತ್ಸೆ, ಸಂತ್ರಸ್ಥೆಯ ದಾಖಲೆ ಮತ್ತು ತನಿಖೆಯ ಪ್ರಸ್ತುತ ಸ್ಥಿತಿ ಸೇರಿದಂತೆ ಎಲ್ಲಾ ದಾಖಲೆಗಳೊಂದಿಗೆ ವರದಿಯನ್ನು ನೀಡುವಂತೆ ಎಸ್‌ಪಿ ಅವರಿಗೆ ಸೂಚಿಸಿದೆ.

ರಾಜ್ಯದ ನೊಂದವರ ಪರಿಹಾರ ನಿಧಿ ಯೋಜನೆಯ ಪ್ರಕಾರ ಮೃತ ಮಹಿಳೆಯ ಕುಟುಂಬದ ಸದಸ್ಯರಿಗೆ ಪಾವತಿಸಿದ ಪರಿಹಾರ ಧನವೆಷ್ಟು ಎಂಬುದನ್ನು ನಾಲ್ಕು ವಾರಗಳೊಳಗೆ ಪುರಾವೆಗಳ ಮೂಲಕ ಸಲ್ಲಿಸುವಂತೆ ಜಜ್ಜಾರ್‌ ಜಿಲ್ಲಾ ನ್ಯಾಯಾಲಯಕ್ಕೆ ಎನ್‌ಎಚ್‌ಆರ್‌ಸಿ ನಿರ್ದೇಶನ ನೀಡಿದೆ.

ಖ್ಯಾತ ಮಾನವ ಹಕ್ಕುಗಳ ಕಾರ್ಯಕರ್ತ ಮತ್ತು ಸುಪ್ರೀಂ ಕೋರ್ಟ್‌ನ ಪರಿಚಿತ ಮಾನವ ಹಕ್ಕುಗಳ ವಕೀಲ ರಾಧಾಕಾಂತ ತ್ರಿಪಾಠಿ ಸಲ್ಲಿಸಿದ್ದ ಅರ್ಜಿಯ ಅನುಸಾರ ಎನ್‌ಎಚ್‌ಆರ್‌ಸಿ ತನಿಖಾ ವಿಭಾಗಕ್ಕೆ ಜಜ್ಜಾರ್‌ ಜಿಲ್ಲಾಡಳಿತ ಪ್ರತಿಕ್ರಿಯಿಸಿತು.

ಎನ್‌ಎಚ್‌ಆರ್‌ಸಿ ತನ್ನ ಆದೇಶದಲ್ಲಿ ‘ದೆಹಲಿ-ಹರಿಯಾಣದ ಗಡಿಯಾದ ಟಿಕ್ರಿಯಲ್ಲಿ ರೈತರ ಪ್ರತಿಭಟನೆಯಲ್ಲಿ ಭಾಗವಹಿಸಲು ಬಂದ ಪಶ್ಚಿಮ ಬಂಗಾಳ ಮೂಲದ ಮಹಿಳಾ ಕಾರ್ಯಕರ್ತೆಯೊಬ್ಬರ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ ಎಂಬ ಆರೋಪದ ಬಗ್ಗೆ ಪ್ರಸಿದ್ಧ ಮಾನವ ಹಕ್ಕುಗಳ ಕಾರ್ಯಕರ್ತರಿಂದ ದೂರುಗಳು ಬಂದಿವೆ. ಆರೋಪಿಗಳ ವಿರುದ್ಧ ಆಕೆಯ ತಂದೆ ಎಫ್‌ಐಆರ್‌ ದಾಖಲಿಸಿದ್ದಾರೆ. 2021 ಏಪ್ರಿಲ್‌ 30ರಂದು ಸಂತ್ರಸ್ತೆಗೆ ಕೋವಿಡ್‌ ರೋಗಲಕ್ಷಣಗಳು ಕಾಣಿಸಿಕೊಂಡಿದ್ದು ಸಂತ್ರಸ್ತೆ ಆಸ್ಪತ್ರೆಯಲ್ಲಿ ನಿಧನರಾದರು’ ಎಂದು ಹೇಳಲಾಗಿದೆ.

ಹರಿಯಾಣ ಸರ್ಕಾರದ ಪೊಲೀಸ್‌ ಹಾಗೂ ಆರೋಗ್ಯ ಇಲಾಖೆಯ ನಿರ್ಲಕ್ಷ್ಯ, ಆರೋಗ್ಯ ಮತ್ತು ನ್ಯಾಯ ಒದಗಿಸುವಲ್ಲಿನ ನಿಷ್ಕ್ರಿಯತೆ ಮತ್ತು ವೈಫಲ್ಯದಿಂದಾಗಿ ಈ ಘಟನೆ ನಡೆದಿದೆ ಎಂದು ತ್ರಿಪಾಠಿ ಆರೋಪಿಸಿದ್ದಾರೆ. ಸಂತ್ರಸ್ತೆಯ ತಂದೆ ನ್ಯಾಯಕ್ಕಾಗಿ ಕಚೇರಿಯಿಂದ ಕಚೇರಿಗೆ ಅಲೆದಾಡುತ್ತಿದ್ದಾರೆಂದು ಹೇಳಲಾಗಿದೆ.

ಮೃತ ಮಹಿಳೆಯ ಕುಟುಂಬದ ಸದಸ್ಯರಿಗೆ ಅಧಿಕ ಮೊತ್ತದ ಪರಿಹಾರ, ನ್ಯಾಯಯುತ, ಸ್ವತಂತ್ರ, ನಿಷ್ಪಕ್ಷಪಾತ ತನಿಖೆ ಹಾಗೂ ಆರೋಪಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸುವಂತೆ ತ್ರಿಪಾಠಿ ಮನವಿ ಮಾಡಿದ್ದಾರೆ.

ಪೊಲೀಸರ ಪ್ರಕಾರ, ಪಶ್ಚಿಮ ಬಂಗಾಳದ ಹೂಗ್ಲಿ ನಿವಾಸಿ ಸಂತ್ರಸ್ತೆಯ ತಂದೆ ಮೇ 9, 2021ರಂದು ತನ್ನ ತನ್ನ ಮಗಳ ಮೇಲೆ ಅತ್ಯಾಚಾರವೆಸಗಿದ್ದಾರೆ ಎಂದು ಆರೋಪಿಸಿ ದೂರು ಸಲ್ಲಿಸಿದ್ದಾರೆ ಎಂದು ಎನ್‌ಎಚ್‌ಆರ್‌ಸಿ ತನಿಖಾ ವಿಭಾಗ ತಿಳಿಸಿದೆ. ಈ ನಿಟ್ಟಿನಲ್ಲಿ ಬಹದ್ದೂರ್‌ಗರ್‌ ಪೊಲೀಸ್ ಠಾಣೆಯಲ್ಲಿ ಅದೇ ದಿನ ಆರೋಪಿಗಳ ವಿರುದ್ಧ ಭಾರತೀಯ ದಂಡ ಸಂಹಿತೆ ಸೆಕ್ಷನ್‌ 120-ಬಿ, 354, 506 ಸೇರಿದಂತೆ ವಿವಿಧ ವಿಭಾಗಗಳ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

ಈ ಪ್ರಕರಣವನ್ನು ಇತ್ಯರ್ಥಗೊಳಿಸಲು ವಿಶೇಷ ತನಿಖಾ ತಂಡವನ್ನು ರಚಿಸಲಾಗಿದೆ. ದೂರಿನಲ್ಲಿ ದಾಖಲಾಗಿರುವ ಇಬ್ಬರು ಆರೋಪಿಗಳು ಹಣವುಳ್ಳವರಾಗಿದ್ದು ಅವರನ್ನು ಬಂಧಿಸಲು ಪ್ರಯತ್ನಗಳು ನಡೆಯುತ್ತಿವೆ. ಅಪರಾಧ ಸಂಭವಿಸಿದ ಬಗ್ಗೆ ತಿಳಿದಿದೆ ಎಂದು ನಂಬಲಾದ ಏಳು ವ್ಯಕ್ತಿಗಳ ಹೇಳಿಕೆಯನ್ನು ದಾಖಲಿಸಲು ಮತ್ತು ಇತರ ಸಂಗತಿಗಳನ್ನು ಕಂಡುಹಿಡಿಯಲು ಅವರಿಗೂ ನೋಟಿಸ್‌ ಕಳುಹಿಸಲಾಗಿದೆ.

ಕೋವಿಡ್‌ ಕಾರಣದಿಂದಾಗಿ ಏಪ್ರಿಲ್‌ 25 ರಂದು ಬಹದ್ದೂರ್‌ಗರ್‌ನ ಖಾಸಗಿ ಆಸ್ಪತ್ರೆಗೆ ಸೇರಿಸಲಾಗಿದ್ದ ಮಹಿಳೆ ಏಪ್ರಿಲ್ 30ರಂದು ನಿಧನರಾದರು ಎಂದು ಬಹದ್ದೂರ್‌ಗರ್‌ನ ಉಪ ಪೊಲೀಸ್‌ ವರಿಷ್ಠಾಧಿಕಾರಿ ಮಾಹಿತಿ ನೀಡಿದ್ದಾರೆ. ಮೃತ ದೇಹವನ್ನು ಅವರ ಕುಟುಂಬದವರ ಸಮ್ಮುಖದಲ್ಲಿಯೇ ಅಂತ್ಯಸಂಸ್ಕಾರ ಮಾಡಲಾಗಿದೆ. ಆದರೆ ಆ ಸಮಯದಲ್ಲಿ ಮಹಿಳೆಯ ತಂದೆ ಪೊಲೀಸರಿಗೆ ಯಾವುದೇ ದೂರು ನೀಡಿಲ್ಲ. ಯಾವುದೇ ದೂರು ಇಲ್ಲದಿರುವುದರಿಂದ, ಸಂತ್ರಸ್ತೆಯನ್ನು ಯಾವುದೇ ವಿಚಾರಣೆ ಅಥವಾ ಶವಪರೀಕ್ಷೆ ನಡೆಸಲಾಗಿಲ್ಲ ಎಂದು ತ್ರಿಪಾಠಿ ತಿಳಿಸಿದ್ದಾರೆ.

ಆದರೂ, ಈ ಕುರಿತು ತನಿಖೆ ನಡೆಯುತ್ತಿದ್ದು, ಪೊಲೀಸರು ಸಾಕ್ಷ್ಯಗಳನ್ನು ಸಂಗ್ರಹಿಸಲು ಪ್ರಯತ್ನ ಮಾಡುತ್ತಿದ್ದಾರೆ ಎಂದು ಡಿಎಸ್‌ಪಿ ತಿಳಿಸಿದ್ದಾರೆ. ಸಂತ್ರಸ್ತೆಯ ತಂದೆ ಮೇ 10 ರಂದು ಪಶ್ಚಿಮ ಬಂಗಾಳಕ್ಕೆ ತೆರಳಿದ್ದು, ಸಂತ್ರಸ್ತ ಪರಿಹಾರ ನಿಧಿ ಯೋಜನೆಯಡಿ ಯಾವುದೇ ಪರಿಹಾರ ಧನ ನೀಡಿಲ್ಲ ಎನ್ನಲಾಗಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights