ಸಿಎಂ ಯಡಿಯೂರಪ್ಪ ನಿವೃತ್ತಿ ವದಂತಿ: ಸ್ಪಷ್ಟನೆ ನೀಡಿದ ಬಿಜೆಪಿ ಹೈಕಮಾಂಡ್!‌

ಬಿಎಸ್‌ ಯಡಿಯೂರಪ್ಪ ಅವರು ಮುಖ್ಯಮಂತ್ರಿ ಸ್ಥಾನದಿಂದ ನಿವೃತ್ತರಾಗಲಿದ್ದಾರೆ ಎಂಬ ಊಹಾಪೋಹಗಳು ಹರಿದಾಡುತ್ತಿದ್ದವು. ಈ ಹಿನ್ನೆಲೆಯಲ್ಲಿ ವದಂತಿಗಳಿಗೆ ಫುಲ್‌ಸ್ಟಾಪ್‌ ಇಟ್ಟಿರುವ ಬಿಜೆಪಿ ಹೈಕಮಾಂಡ್‌ ಬಿಎಸ್‌ವೈ ಅವರೇ ಸರ್ಕಾರದ ಅವಧಿ ಮುಗಿಯುವವರೆಗೂ ಸಿಎಂ ಆಗಿರಲಿದ್ದಾರೆ ಎಂದು ಬಲವಾಗಿ ಹೇಳಿದೆ.

ಕರ್ನಾಟಕದಲ್ಲ ಪಕ್ಷವನ್ನು ಕಟ್ಟುವಲ್ಲಿ ಮತ್ತು ಲೋಕಸಭಾ ಚುನಾವಣೆಯಲ್ಲಿ ಅತೀ ಹೆಚ್ಚು ಸ್ಥಾನಗಳನ್ನು ಗೆಲ್ಲಲು ಶ್ರಮಿಸಿರುವ ಬಿಎಸ್‌ವೈ, ಪಕ್ಷದ ರಾಜ್ಯ ಘಟಕದ ನಾಯಕರಾಗಿಯೇ ಮುಂದುರೆಯಲಿದ್ದಾರೆ. ಅವರಿಗೆ ರಾಷ್ಟ್ರ ನಾಯಕತ್ವವು ಪೂರ್ಣ ಪ್ರಮಾಣದ ಬೆಂಬಲ ನೀಡಲಿದೆ ಎಂದು ಬಿಜೆಪಿ ಹೈಕಮಾಂಡ್‌ ಹೇಳಿದೆ.

“ಕರ್ನಾಟಕದಲ್ಲಿ ಕಳೆದ ಕೆಲವು ತಿಂಗಳುಗಳಲ್ಲಿ ಪಕ್ಷವು ಹಲವಾರು ಚುನಾವಣೆಗಳಲ್ಲಿ ಜಯಗಳಿಸಿದೆ. ಇದು ಯಡಿಯೂರಪ್ಪ ನೇತೃತ್ವದ ಸರ್ಕಾರವು ಉತ್ತಮವಾಗಿ ಕಾರ್ಯವನ್ನು ನಿರ್ವಹಿಸುತ್ತಿದೆ ಎಂಬುದನ್ನು ತೋರಿಸುತ್ತದೆ” ಎಂದು ಬಿಜೆಪಿಯ ಹಿರಿಯ ಕಾರ್ಯಕಾರಿಣಿ ಹೇಳಿದರು.

ಇದನ್ನೂ ಓದಿ: ಮಂತ್ರಿಗಿರಿಗಾಗಿ BJP ಶಾಸಕರ ಕಾಳಗ; ಬೆಳೆಯುತ್ತಲೇ ಇದೆ ಆಕಾಂಕ್ಷಿಗಳ ಪಟ್ಟಿ!

ಇತ್ತೀಚಿನ, ನವೆಂಬರ್‌ನಲ್ಲಿ ನಡೆದ ವಿಧಾನಸಭಾ ಉಪಚುನಾವಣೆಗಳಲ್ಲಿ ಬಿಜೆಪಿ ಎರಡನ್ನೂ ಗೆದ್ದಿದೆ. ಅಲ್ಲದೆ, ಕೆಲವು ತಿಂಗಳುಗಳ ಹಿಂದೆ ನಡೆದಿದ್ದ 15 ವಿಧಾನಸಭಾ ಉಪಚುನಾವಣೆಯಲ್ಲಿ ಪಕ್ಷವು 12 ಸ್ಥಾನಗಳನ್ನು ಗೆದ್ದಿದೆ. ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ 86,183ಗಳ ಪೈಕಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಸುಮಾರು 45,246 ಸ್ಥಾನಗಳಲ್ಲಿ ಗೆದ್ದಿದ್ದಾರೆ.  5760 ಗ್ರಾಮ ಪಂಚಾಯಿತಿಗಳಲ್ಲಿ 3142 ರಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಬಹುಮತ ಗಳಿಸಿದ್ದಾರೆ. 2015 ರಲ್ಲಿ ಬಿಜೆಪಿ 29,959 ಸ್ಥಾನಗಳನ್ನು ಗೆದ್ದಿತ್ತು.

ಈ ಗೆಲುವು ಯಡಿಯೂರಪ್ಪ ಪರವಾದ ಬಲವನ್ನು ತೋರಿಸಿದೆ. ಹಳೇ ಮೈಸೂರು ಭಾಗದಲ್ಲಿ ಕೇಸರಿಯ ಕಮಲ ಅರಳಲು ಬಿಎಸ್‌ವೈ ನೇತೃತ್ವ ಯಶಸ್ವಿಯಾಗಿದೆ ಎಂದು ಬಿಜೆಪಿ ನಾಯಕರು ಹೇಳಿದ್ದಾರೆ.

ಭಾನುವಾರ, ಪಕ್ಷದ ರಾಷ್ಟ್ರಾಧ್ಯಕ್ಷ ಜೆಪಿ ನಡ್ಡಾ, ಗೃಹ ಸಚಿವ ಅಮಿತ್‌ ಶಾ ಮತ್ತು ಪಕ್ಷದ ಕರ್ನಾಟಕದ ಉಸ್ತುವಾರಿ ಅರುಣ್‌ ಸಿಂಗ್‌ ಅವರೊಂದಿಗೆ ಬಿಎಸ್‌ವೈ ಸಭೆ ನಡೆಸಿದ್ದು, ನಾಳೆ (ಜ. 13), ಸಚಿವ ಸಂಪುಟ ವಿಸ್ತರಣೆಗೆ ನಿರ್ಧರಿಸಿದ್ದಾರೆ. ಪ್ರಸ್ತುತ 34 ಸಚಿವ ಸ್ಥಾನದ ಪೈಕಿ 27 ಸ್ಥಾನಗಳಿಗೆ ಸಚಿವರಿದ್ದು, 07 ಸ್ಥಾನಗಳಿಗೆ ನಾಳೆ ಆಯ್ಕೆ ನಡೆಯಲಿದೆ.


ಇದನ್ನೂ ಓದಿ: ಸಮಿತಿಗೆ BJP ಸದಸ್ಯರ ರಾಜೀನಾಮೆ; ಸತ್ಯ ತಿಳಿಯುವ ಮುನ್ನವೇ ಶಸ್ತ್ರತ್ಯಾಗ ಎಂದ ಕಾಂಗ್ರೆಸ್‌!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights